ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೂ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರಿಗೂ ಒಂದು ಬಲವಾದ ನಂಟಿದೆ. ಅವರು ಶಿಕ್ಷಣದ ಮೂಲಕ ಬದುಕು ರೂಪಿಸಿಕೊಂಡಿದ್ದೇ ಮೈಸೂರಿನಲ್ಲಿ ಎಂಬುದೇ ವಿಶೇಷ. ಮಂಡ್ಯ ಜಿಲ್ಲೆಯ ಮದ್ದೂರಿನ ಸೋಮನಹಳ್ಳಿಯಲ್ಲಿ ಹುಟ್ಟಿದ್ದರೂ ಅವರ ಪ್ರಾಥಮಿಕ ಶಿಕ್ಷಣದಿಂದ ಪದವಿ ತನಕ ಶಿಕ್ಷಣವನ್ನು ಪಡೆದಿದ್ದು ಇಲ್ಲಿಯೇ. ಹೀಗಾಗಿ ಮೈಸೂರು ಅವರಿಗೆ ಅಚ್ಚುಮೆಚ್ಚಿನ ಸ್ಥಳವಾಗಿತ್ತು. 2021ರ ಮೈಸೂರು ದಸರಾಕ್ಕೆ ಉದ್ಘಾಟಕರಾಗಿ ಆಹ್ವಾನಿಸಿದಾಗ ಅವರು ಆನಂದದಿಂದ ಒಪ್ಪಿಕೊಂಡಿದ್ದರು.
ಮೈಸೂರಿನಲ್ಲಿ ಶಿಕ್ಷಣ ಪಡೆದ ಕಾರಣದಿಂದಾಗಿ ಅವರಿಗೆ ಆಶ್ರಮ, ಮಠಗಳ ಪರಿಚಯವಾಗಿತ್ತು. ವಿದ್ಯಾಭ್ಯಾಸದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಹಕಾರಿಯಾಗಿತ್ತು. ಮೈಸೂರಿನ ಒಂಟಿಕೊಪ್ಪಲಿನ ಮಹಾಜನ ಪ್ರಾಥಮಿಕ ಶಾಲೆಯಲ್ಲಿ ಮೂರನೇ ತರಗತಿಗೆ ಸೇರ್ಪಡೆಗೊಂಡ ಅವರು, ನಂತರ ರಾಮಕೃಷ್ಣ ಆಶ್ರಮದ ಸಖ್ಯಕ್ಕೆ ಬಂದರು. ಆಶ್ರಮದ ವಿದ್ಯಾರ್ಥಿನಿಲಯದಲ್ಲಿ, ವೇದಾನಂದ-ಶಾಂಭವಾನಂದ ಮಹಾರಾಜರ ಮಾರ್ಗದರ್ಶನದಲ್ಲಿ ಶಿಸ್ತುಬದ್ಧ ಜೀವನ ರೂಡಿಸಿಕೊಂಡರು.
ಬಾಲ್ಯದಲ್ಲೇ ಉತ್ತಮ ವಾಗ್ಮಿಯಾಗಿದ್ದ ಅವರು, ಸಂಗೀತ, ಯೋಗಾಭ್ಯಾಸದಂತಹ ಚಟುವಟಿಕೆಗಳಲ್ಲೂ ಮುಂದಿದ್ದರು. ಆಶ್ರಮದ ಭಜನಾ ತಂಡದೊಂದಿಗೆ ತಬಲಾ ನುಡಿಸುತ್ತ ಆಕಾಶವಾಣಿಯಲ್ಲಿ ಕಾರ್ಯಕ್ರಮ ಸಹ ಕೊಟ್ಟಿದ್ದರು. ತಮಗೆ ಕೆಂಪೇಗೌಡ ಅಂತರರಾಷ್ಟ್ರೀಯ ಪ್ರಶಸ್ತಿ ಜೊತೆ ದೊರೆತ 5 ಲಕ್ಷ ಹಾಗೂ ವೈಯಕ್ತಿಕ ದೇಣಿಗೆಯಾಗಿ 2 ಲಕ್ಷವನ್ನು ಆಶ್ರಮಕ್ಕೆ ನೀಡಿದ್ದು ಆಶ್ರಮದ ಮೇಲಿನ ಅವರ ಪ್ರೀತಿಗೆ ಸಾಕ್ಷಿಯಾಗಿದೆ.
1948ರಲ್ಲಿ ಮಹಾಜನ ಪ್ರೌಢಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪೂರ್ಣಗೊಳಿಸಿದ ಅವರು ನಂತರ ಯುವರಾಜ ಕಾಲೇಜಿನಲ್ಲಿ ಇಂಟರ್ ಮೀಡಿಯಟ್ ಓದಿದರು. ಮಹಾರಾಜ ಕಾಲೇಜಿನಲ್ಲಿ ಬಿ.ಎ.ಪದವಿಯಲ್ಲಿ ಇತಿಹಾಸ, ಅರ್ಥಶಾಸ್ತ್ರ ಹಾಗೂ ರಾಜ್ಯಶಾಸ್ತ್ರ ವಿಷಯ ಆಯ್ದುಕೊಂಡ ಅವರಿಗೆ ರಾಷ್ಟ್ರಕವಿ ಕುವೆಂಪು, ಎಂ.ಎ.ಗೋಪಾಲಸ್ವಾಮಿ, ಟಿ.ಎ. ಪುರುಷೋತ್ತಮ್, ದೇಜಗೌ, ಸಿ.ಡಿ.ನರಸಿಂಹಯ್ಯರಂತಹ ಗುರುಗಳ ಮಾರ್ಗದರ್ಶನ ಸಿಕ್ಕಿತು. ಕಾಲೇಜಿನಲ್ಲಿದ್ದಾಗ ವಾಲಿಬಾಲ್ ಮತ್ತು ಟೆನಿಸ್ ಅವರ ಇಷ್ಟದ ಆಟಗಳು. ನಂತರದಲ್ಲೂ ಟೆನಿಸ್ ಅವರ ನೆಚ್ಚಿನ ಆಟವಾಗಿತ್ತು. ಮೈಸೂರು ವಿಶ್ವವಿದ್ಯಾಲಯ ಇದೇ ವರ್ಷ ಮಾರ್ಚ್‌ನಲ್ಲಿ ನಡೆದ 104ನೇ ಘಟಿಕೋತ್ಸವದಲ್ಲಿ ಎಸ್.ಎಂ.ಕೃಷ್ಣ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದ್ದನ್ನು ಸ್ಮರಿಸಬಹುದಾಗಿದೆ.
ಎಸ್.ಎಂ.ಕೃಷ್ಣ ಅವರ ತಂದೆ ಮಲ್ಲಯ್ಯನವರು ಮೈಸೂರು ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿದ್ದು, ಅರಮನೆ ಹಾಗೂ ಮೈಸೂರಿನೊಡನೆ ನಂಟು ಹೊಂದಿದ್ದರು. ಕೃಷ್ಣ ಅವರೂ ಮೈಸೂರು ರಾಜವಂಶಸ್ಥರೊಂದಿಗೆ ಉತ್ತಮ ಒಡನಾಟ ಹೊಂದಿದ್ದು, ಶ್ರೀಕಂಠದತ್ತ ಒಡೆಯರ್ ಸ್ನೇಹಿತರಾಗಿದ್ದರು. ತಮ್ಮ ರಾಜಕೀಯ ಸಂಧ್ಯಾಕಾಲದಲ್ಲಿದ್ದ ಕೃಷ್ಣ ಅವರು ಬಿಜೆಪಿ ಸೇರಿದ್ದಲ್ಲದೇ ಮೈಸೂರು ಭಾಗದ ಪ್ರಭಾವಿ ರಾಜಕಾರಣಿ, ದಲಿತ ನಾಯಕ ವಿ.ಶ್ರೀನಿವಾಸ್ ಪ್ರಸಾದ್ ಅವರನ್ನು ಬಿಜೆಪಿಗೆ ಕರೆತರುವಲ್ಲಿ ಯಶಸ್ವಿಯಾಗಿದ್ದರು.
ಇವರ ಜತೆಗೆ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಅವರು ಬಿಜೆಪಿ ಸೇರ್ಪಡೆಗೊಂಡು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಹಾಗೆಯೇ ಮಾಜಿ ಸಚಿವ ಅಜೀಜ್ ಸೇಠ್, ಮಾಜಿ ಸಂಸದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ ಅವರುಗಳು ಒಡನಾಡಿಯಾಗಿದ್ದರು. ಎಚ್.ವಿಶ್ವನಾಥ್, ಕೋಟೆ ಶಿವಣ್ಣ, ಬೆಂಕಿ ಮಹದೇವು ಕೃಷ್ಣ ಮುಖ್ಯಮಂತ್ರಿಯಾಗಿದ್ದ ವೇಳೆ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.
ಮೈಸೂರು-ಬೆಂಗಳೂರು ರಸ್ತೆ ಚತುಷ್ಪಥ ಹೆದ್ದಾರಿಯಾಗಿ ಪರಿವರ್ತನೆ ಆಗಿದ್ದು ಕೃಷ್ಣರ ಕಾಲದಲ್ಲಿ. ಮೈಸೂರು ಹೊರವರ್ತುಲ ರಸ್ತೆ ಅಭಿವೃದ್ಧಿ ಆಗಿದ್ದೂ ಅವರು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ. ಸುತ್ತೂರು ಮಠ ರಾಜೇಂದ್ರ-ದೇಶಿಕೇಂದ್ರ ಸ್ವಾಮೀಜಿ ಸೇರಿದಂತೆ ಈ ಭಾಗದ ಮಠಗಳು, ಸ್ವಾಮೀಜಿಗಳ ಜೊತೆಗೂ ಕೃಷ್ಣ ಉತ್ತಮ ಬಾಂಧವ್ಯ ಹೊಂದಿದ್ದರು. ಮಾಜಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರೊಂದಿಗೂ ಉತ್ತಮ ಒಡನಾಟ ಹೊಂದಿದ್ದರು.
2021ರ ಅಕ್ಟೋಬರ್ 7ರಂದು ಚಾಮುಂಡಿ ಬೆಟ್ಟದಲ್ಲಿ ನಾಡ ಅದಿದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಉದ್ಘಾಟಿಸಿದ್ದ ಕೃಷ್ಣ ಅವರು, ಮೈಸೂರಿನಲ್ಲಿ ವಿದ್ಯಾಭ್ಯಾಸದ ದಿನಗಳ ನೆನಪುಗಳನ್ನು ಮೆಲುಕು ಹಾಕುವುದರ ಜತೆಗೆ ಪ್ರವಾಸೋದ್ಯಮವನ್ನೇ ಆಧರಿಸಿರುವ ಮೈಸೂರು, ಅಭಿವೃದ್ಧಿಯತ್ತ ಮುನ್ನುಗ್ಗುವ ಮಾರ್ಗಗಳ ಬಗ್ಗೆ ತಿಳಿಸಿದ್ದರು. ಮೈಸೂರು ಪ್ರಮುಖ ಪ್ರವಾಸಿ ಕೇಂದ್ರವಾಗಿದೆ ಎಂದು ಹೇಳಿದ್ದರು.
ಮೈಸೂರು ಸುತ್ತಮುತ್ತ ಸೋಮನಾಥಪುರ, ನಂಜನಗೂಡು ದೇವಾಲಯ, ಚಾಮರಾಜನಗರ ಜಿಲ್ಲೆಯ ಮಹದೇಶ್ವರ ಬೆಟ್ಟ, ಬಿಳಿಗಿರಿರಂಗನಬೆಟ್ಟ, ಗೋಪಲಸ್ವಾಮಿ ಬೆಟ್ಟ, ಬಂಡೀಪುರ ಮತ್ತು ನಾಗರಹೊಳೆ ಹುಲಿಸಂರಕ್ಷಿತಾರಣ್ಯ ಪ್ರದೇಶ, ಮಂಡ್ಯ ಜಿಲ್ಲೆಯ ರಂಗನತಿಟ್ಟು ಪಕ್ಷಿದಾಮ, ಕೆ.ಆರ್.ಎಸ್., ಕೊಡಗು, ಹಾಸನ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳ ಪ್ರಮುಖ ಪ್ರವಾಸಿ ತಾಣ, ಐತಿಹಾಸಿಕ ಸ್ಥಳಗಳನ್ನು ಗುರುತಿಸಿ ಮೈಸೂರನ್ನು ಕೇಂದ್ರ ಬಿಂದುವಾಗಿ ಮಾಡಿಕೊಂಡು ಮಂಡ್ಯ, ಚಾಮರಾಜನಗರ, ಹಾಸನ ಮತ್ತು ಕೊಡಗು ಜಿಲ್ಲೆ ಸೇರಿಸಿ ಟೂರಿಸಂ ಸರ್ಕಿಟ್ ಮಾಡುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದರಲ್ಲದೆ ಇದರಿಂದ ದೇಶ, ವಿದೇಶಗಳಿಂದ ಪ್ರವಾಸಿಗರನ್ನು ಸೆಳೆಯಬೇಕು ಎಂದು ಹೇಳಿದ್ದನ್ನು ನಾವು ಸ್ಮರಿಸಬಹುದಾಗಿದೆ.