News Karnataka Kannada
Monday, April 29 2024
ಮೈಸೂರು

ಲೋಕಸಭೆಯಲ್ಲಿ 28 ಸ್ಥಾನಗಳನ್ನೂ ಗೆಲ್ಲಲೇ ಬೇಕು: ವಿಜಯೇಂದ್ರ

We must win all 28 seats in Lok Sabha: Vijayendra
Photo Credit : By Author

ಮೈಸೂರು: ಅಧಿಕಾರಕ್ಕೆ ಬಂದ 6  ತಿಂಗಳಿಗೆ ಕಾಂಗ್ರೆಸ್ ಸರ್ಕಾರದ ಆಡಳಿತದಿಂದ ರಾಜ್ಯದ ಜನರು ಬೇಸತ್ತಿದ್ದಾರೆ, ಬದಲಾವಣೆ ಬಯಸುತ್ತಿದ್ದಾರೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ 28ಸ್ಥಾನಗಳನ್ನೂ ಗೆಲ್ಲುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಬಿಜೆಪಿ ಕಚೇರಿಯಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದಗ್ಯಾರಂಟಿ ಯೋಜನೆಗಳ ಗಾಡಿ ಪಂಚ ರಾಜ್ಯಗಳ ಚುನಾವಣೆ ಫಲಿತಾಂಶದ ಬಳಿಕ ಪಂಕ್ಚರ್ ಆಗಿದೆ. ಸಚಿವ ಸತೀಶ್ ಜಾರಕಿಹೊಳಿಯವರಿಗೆ ತಮ್ಮ ಸರ್ಕಾರದ ಆಡಳಿತ ವೈಖರಿಯಿಂದಾಗಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟವೆನಿಸಿದೆ. ಹಾಗಾಗಿಯೇ ಅವರು ಜಾತಿವಾರು ಉಪಮುಖ್ಯಮಂತ್ರಿಗಳನ್ನು ಮಾಡಬೇಕೆಂಬ ಬೇಡಿಕೆ ಇಟ್ಟಿದ್ದಾರೆ. ಇದನ್ನೆಲ್ಲಾ ಗಮನಿಸಿದರೆ ಅಧಿಕಾರಕ್ಕೆ ಬಂದ 7 ತಿಂಗಳಿಗೆ ದೇಶದಲ್ಲಿ ಯಾವುದಾದರೂ ಸರ್ಕಾರ ಜನರ ನಂಬಿಕೆ, ವಿಶ್ವಾಸ ಕಳೆದುಕೊಂಡಿದ್ದರೆ ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮಾತ್ರ ಎಂದು ಲೇವಡಿ ಮಾಡಿದರು.

ದೇಶದ ಜನತೆಗೆ ಮತ್ತೆ ನರೇಂದ್ರ ಮೋದಿ ಪ್ರಧಾನಿಯಾಗಬೇಕೆಂದು ಬಯಸಿದ್ದಾರೆ. ಉತ್ತುಂಗಕ್ಕೇರಿರುವ ಮೋದಿಯವರ  ಜನಪ್ರಿಯತೆಯನ್ನು ಪಕ್ಷದ ಕಾರ್ಯಕರ್ತರು, ಮುಖಂಡರು ಮತಗಳನ್ನಾಗಿ ಪರಿವರ್ತಿಸಬೇಕು. ವೀರ ಸೇನಾನಿಗಳಂತೆ ಹೋರಾಟ ನಡೆಸಿ ರಾಜ್ಯದ 28ಸ್ಥಾನಗಳಲ್ಲೂ ಬಿಜೆಪಿಯನ್ನು ಭರ್ಜರಿ ಬಹುಮತದಿಂದ ಗೆಲ್ಲಿಸಿ ಸುವರ್ಣಾಕ್ಷರಗಳಿಂದ ಬರೆದಿಡುವಂತೆ ಮಾಡಬೇಕು ಎಂದು ತಿಳಿಸಿದರು.

ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಗುರಿ ತಲುಪಲು ಮುಖಂಡರ ಮಾನಸಿಕ ಸ್ಥಿತಿ ಬದಲಾಗಬೇಕು. ಜಾತಿ, ವರ್ಗಗಳಿಗೆ  ಸೀಮಿತವಾಗಿ ಯೋಚನೆ ಮಾಡದೆ, ಪಕ್ಷದ ಗೆಲುವಿಗಾಗಿ ಶಾಸಕರಂತೆ, ವೀರ ಸೇನಾನಿಗಳಂತೆ ಕೆಲಸ ಮಾಡಬೇಕು. ಪಕ್ಷದ ಬೇರನ್ನು ಗಟ್ಟಿ ಮಾಡಬೇಕು ಆಗ ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲುವುದಕ್ಕೆ ಸಹಾಯವಾಗುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ, ಮಾಜಿ ಸಚಿವರಾದ ಎಸ್.ಎ.ರಾಮದಾಸ್, ಎನ್.ಮಹೇಶ್, ಸಿ.ಹೆಚ್.ವಿಜಯಶಂಕರ್,  ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷ ಕೌಟಿಲ್ಯ ಆರ್.ರಘು, ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಅನಿಲ್ ಥಾಮಸ್, ಮಾಜಿ ಮೇಯರ್ ಶಿವಕುಮಾರ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ರಾಜೇಂದ್ರ ಮತ್ತಿತರರು ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು