ಮೈಸೂರು: ಸಾಲ ತೀರಿಸಲಾಗದೆ ವ್ಯಕ್ತಿಯೊಬ್ಬ ಸೆಲ್ಫಿ ವಿಡಿಯೋ ಮಾಡಿ ಮರಕ್ಕೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು ತಾಲ್ಲೂಕಿನ ದಂಡಿಕೆರೆ ಗ್ರಾಮದಲ್ಲಿ ನಡೆದಿದೆ.
ನಂಜನಗೂಡು ತಾಲ್ಲೂಕಿನ ಮಲ್ಲೂಪುರ ಗ್ರಾಮದ ಸಿದ್ದೇಶ್ 40 ಮೃತ ವ್ಯಕ್ತಿಯಾಗಿದ್ದಾನೆ. ಆತ್ಮಹತ್ಯೆಗೂ ಮುನ್ನ ಸೆಲ್ಫಿ ವಿಡಿಯೋ ತೆಗೆದು ಸಿಎಂ ಸಿದ್ದರಾಮಯ್ಯಗೆ ಸಿದ್ದೇಶ್ ಮನವಿ ಮಾಡಿದ್ದಾನೆ. ಪತ್ನಿ, ಮಕ್ಕಳು, ತಂದೆ, ತಾಯಿ ಸಹೋದರನಿಗೆ ಕ್ಷಮೆ ಯಾಚಿಸಿದ್ದಾನೆ.
ತನ್ನ ಹೆಸರಿನಲ್ಲಿ ಸ್ನೇಹಿತನಿಗೆ ಬ್ಯಾಂಕ್ ಸಾಲ ನೀಡಿದ್ದಾನೆ. ಸಾಲ ತೀರಿಸದ ಸ್ನೇಹಿತನಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ. ಸ್ನೇಹಿತ ಮಣಿಕಂಠ ಎಂಬಾತನಿಗೆ ಖಾಸಗಿ ಬ್ಯಾಂಕ್ ನಲ್ಲಿ ಕಾರು ಸಾಲ ಕೊಡಿಸಿದ್ದನು. ಜೊತೆಗೆ ತನ್ನ ಹೆಸರಿನಲ್ಲಿ ಎರಡು ಲಕ್ಷ ರೂ. ನಗದು ಸಾಲವನ್ನು ಕೂಡ ಕೊಡಿಸಿದ್ದ.
ಕೇವಲ ಎರಡು ಕಂತು ಕಟ್ಟಿ ಸುಮ್ಮನಾಗಿದ್ದ ಸ್ನೇಹಿತ ಮಣಿಕಂಠ. ನಂತರ ಸಾಲ ತೀರಿಸದ ಕಾರಣ ಖಾಸಗಿ ಬ್ಯಾಂಕ್ ಸಿಬ್ಬಂದಿಗಳಿಂದ ಸಿದ್ದೇಶ್ ಗೆ ಸಾಲ ಕಟ್ಟುವಂತೆ ದೂರವಾಣಿ ಮೂಲಕ ಕರೆ ಮಾಡಿದ್ದರು. ಇದರಿಂದ ಮನನೊಂದು ಸಿದ್ದೇಶ್ ದಂಡಿಕೆರೆ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ವರುಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮೈಸೂರಿನ ಕೆ.ಆರ್ ಆಸ್ಪತ್ರೆಗೆ ರವಾನಿಸಿ ಪ್ರಕರಣವನ್ನು ದಾಖಲು ಮಾಡಿಕೊಂಡಿದ್ದಾರೆ.