Bengaluru 26°C

ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಇಬ್ಬರು ಬಲಿ; ರೈತ ದಲಿತ ಸಂಘಟನೆಗಳಿಂದ ದಿಢೀರ್ ಪ್ರತಿಭಟನೆ

ನಂಜನಗೂಡು: ಮುಖ್ಯಮಂತ್ರಿ ತವರು ಕ್ಷೇತ್ರದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳಕ್ಕೆ ಬೇಸತ್ತು ಇಬ್ಬರು ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ನಂಜನಗೂಡಿನಲ್ಲಿ ರೈತ ದಲಿತ ಸಂಘಟನೆಗಳಿಂದ ದಿಢೀರ್ ಪ್ರತಿಭಟನೆ ನಡೆಸಲಾಯಿತು.


ಸಿಎಂ ಕ್ಷೇತ್ರದಿಂದ ಮೈಕ್ರೋ ಫೈನಾನ್ಸ್ ಗಳನ್ನು ತೊಲಗಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಿದರು. ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಯ ಶವಗಾರದ ಮುಂದೆ ರೈತ ಸಂಘ ಮತ್ತು ದಲಿತ ಸಂಘಟನೆಗಳು ಪ್ರಗತಿಪರ ಸಂಘಟಕರು ಆಕ್ರೋಶ ವ್ಯಕ್ತಪಡಿಸಿದರು.


ನಂಜನಗೂಡಿನಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳ ಕಿರುಕುಳಕ್ಕೆ ನರ ಬಲಿಗಳು ನಡೆಯುತ್ತಿವೆ. ಮುಖ್ಯಮಂತ್ರಿ ತವರು ಕ್ಷೇತ್ರ ಎಂದು ಲೆಕ್ಕಿಸದೆ ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ಕಿರುಕುಳ ನೀಡುತ್ತಿದ್ದಾರೆ. ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳು ನೀಡಿರುವ ಕಿರುಕುಳ ಹಾಗೂ ಮಾನಕ್ಕೆ ಬೆದರಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಅಂಬಳೆ ಮತ್ತು ಮಲ್ಕುಂಡಿ ಗ್ರಾಮಗಳಲ್ಲಿ ಒಂದೇ ರಾತ್ರಿ ಇಬ್ಬರೂ ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬಲಿಯಾಗಿದ್ದಾರೆ.


ಈಗಾಗಲೇ ನಂಜನಗೂಡಿನ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ಮೈಕ್ರೋ ಫೈನಾನ್ಸ್ ಮಾಲೀಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಸಿಎಂ ಕ್ಷೇತ್ರ ಮತ್ತು ತಹಶೀಲ್ದಾರ್ ಮಾತಿಗೂ ಕಿಮ್ಮತ್ತು ನೀಡದ ಮೈಕ್ರೋಫೈನಾನ್ಸ್ ಹಾವಳಿ ಸಾಲ ಪಡೆದವರನ್ನು ಬಲಿ ಪಡೆಯುತ್ತಿವೆ. ಕೂಡಲೇ ನಂಜನಗೂಡಿನಲ್ಲಿ ಮೈಕ್ರೋ ಫೈನಾನ್ಸ್ ಮಾಲೀಕರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕು.


ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಜೀವ ಕಳೆದುಕೊಂಡಿರುವ ಕುಟುಂಬಗಳಿಗೆ ಸರ್ಕಾರ 25 ಲಕ್ಷ ರೂ.ಗಳ ಪರಿಹಾರ ನೀಡಬೇಕು. ಇಲ್ಲದಿದ್ದಲ್ಲಿ ರಾಜ್ಯ ಸರ್ಕಾರದ ವಿರುದ್ಧ ದೊಡ್ಡ ಮಟ್ಟದಲ್ಲಿ ಬೃಹತ್ ಪ್ರತಿಭಟನೆಗೆ ಸಜ್ಜಾಗುತ್ತೇವೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್ ದಸಂಸ ಮುಖಂಡರಾದ ಮಲ್ಲಹಳ್ಳಿ ನಾರಾಯಣ್, ಕಾರ್ಯ ಬಸವಣ್ಣ ಎಚ್ಚರಿಕೆ ನೀಡಿದ್ದಾರೆ.


Nk Channel Final 21 09 2023