ಮೈಸೂರು: ಬಿಜೆಪಿಯವರು ಹಿಂದೂ ಮುಸ್ಲಿಂ ಸಮುದಾಯಗಳ ನಡುವೆ ಸಂಘರ್ಷ ಹುಟ್ಟು ಹಾಕುತ್ತಾರೆ. ಕಾಂಗ್ರೆಸ್ ಪಕ್ಷದವರು ಸೌಹಾರ್ದತೆಯ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಈ ಎರಡು ವ್ಯತ್ಯಾಸ ಹೊರತುಪಡಿಸಿ ಉಳಿದೆಲ್ಲಾ ವಿಚಾರಗಳಲ್ಲಿ ಒಂದೇ ನಿಲುವಿಗೆ ಬದ್ಧವಾಗಿವೆ ಎಂದು ಎಂದು ಚಿಂತಕ ಡಾ.ಸಿದ್ದನಗೌಡ ಪಾಟೀಲ್ ತಿಳಿಸಿದರು.
ಎಐಟಿಯುಸಿ ಕಾರ್ಮಿಕ ಸಂಘಟನೆ ವತಿಯಿಂದ ಇನ್‌ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ಆಯೋಜಿಸಿದ್ದ ಎಐಟಿಯುಸಿ ಕಾರ್ಮಿಕ ಸಂಘಟನೆಯ 105ನೇ ಸಂಸ್ಥಾಪನಾ ದಿನಾಚಾರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದರೋಡೆಕೋರರು ಎಲ್ಲರೂ ಮನೆಯಲ್ಲಿ ಇರುವಾಗಲೇ ಬಾಗಿಲು ಮುರಿದು ಮನೆ ಒಳಗೆ ನುಗ್ಗಿ ಕೈಕಾಲು ಕಟ್ಟಿಹಾಕಿ ತಲೆ ಹೊಡೆದು ಲೂಟಿಮಾಡಿ ಹೋಗುತ್ತಾರೆ.
ಕಳ್ಳರು ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ಗೌಪ್ಯವಾಗಿ ಕಳ್ಳತನ ಮಾಡುತ್ತಾರೆ. ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಯವರು ದರೋಡೆಕೋರರಾದರೆ, ಕಾಂಗ್ರೆಸ್‌ನವರು ಕಳ್ಳರು. ಇವರಿಬ್ಬರ ನಡುವೆ ಜೆಡಿಎಸ್ ಪಕ್ಷದವರು ಪಿಕ್ ಪ್ಯಾಕೆಟರ್ಸ್ ಇದ್ದಂತೆ. ದರೋಡೆಕೋರರಿಗಿಂತ ಕಳ್ಳರು ಎಷ್ಟೋ ಪರವಾಗಿಲ್ಲ. ಏಕೆಂದರೆ ಕಳ್ಳರಿಂದ ಜೀವಹಾನಿ ಸಂಭವಿಸುವುದಿಲ್ಲ ಎಂದು ವಿವರಿಸಿದರು.
ಪ್ರಧಾನಿ ನರೇಂದ್ರ ಮೋದಿ ಕಾರ್ಮಿಕ ವಿರೋಧಿ ಮಸೂದೆಗಳನ್ನು ಜಾರಿಗೆ ತಂದು ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಬಂಡವಾಳಶಾಹಿಗಳಿಗೆ ಲಕ್ಷಾಂತರ ಕೋಟಿ ರೂಪಾಯಿ ಸಾಲ ನೀಡುತ್ತಿದ್ದಾರೆ. ಸಾರ್ವಜನಿಕ ಉದ್ದಿಮೆಗಳನ್ನು ಅಂಬಾನಿ, ಅದಾನಿಯಂತಹ ಬಂಡಾವಾಳ ಶಾಹಿಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇಷ್ಟೆಲ್ಲಾ ಅನಾಹುತ ಮಾಡಿದರೂ ಕೆಲವರು ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಬೇಡಿ ಎಂದು ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು.
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾಗ ಕಾರ್ಮಿಕರ ದುಡಿಯುವ ಸಮಯವನ್ನು 8 ಗಂಟೆಯಿಂದ `12 ಗಂಟೆಗೆ ಏರಿಸಿದ್ದಾರೆ. ಇಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ನಿಯಮವನ್ನು ರದ್ದು ಪಡಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಈ ಧೋರಣೆ ಕಾಂಗ್ರೆಸ್-ಬಿಜೆಪಿ ಎರಡೂ ಪಕ್ಷಗಳು ಬಂಡವಾಳಶಾಹಿಗಳ ಪರವಾದ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿರುವುದರ ನಿದರ್ಶನವಾಗಿದೆ ಎಂದು ಕಿಡಿ ಕಾರಿದರು. ಭಾರತದ ಕೇಸರಿ, ಬಿಳಿ, ಹಸಿರು ಬಣ್ಣದ ತ್ರಿವರ್ಣ ಧ್ವಜ ಉಳಿಯಬೇಕಾದರೆ ಕೆಂಪು-ನೀಲಿ-ಹಸಿರು ಅಂದರೆ ಕಾರ್ಮಿಕರು, ದಲಿತರು, ರೈತರು ರಾಜಕೀಯವಾಗಿ ಒಂದಾಗಬೇಕು ಎಂದು ಸಲಹೆ ನೀಡಿದರು.
ಇಂದಿನ ಯುವ ಜನತೆ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್, ಭಗತ್‌ಸಿಂಗ್ ಮುಂತಾದ ಮಹನೀಯರ ಜಂಯತಿ ಆಚರಿಸುವ ಬದಲು ಯಾವುದೋ ಸಿನಿಮಾ ನಟ-ನಟಿಯರು ಮತ್ತು ರಾಜಕಾರಣಿಗಳ ಜಯಂತಿ ಆಚರಿಸುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಎಐಟಿಯುಸಿ ರಾಷ್ಟ್ರೀಯ ಉಪಾಧ್ಯಕ್ಷ ಎಚ್.ಆರ್.ಶೇಷಾದ್ರಿ ಮಾತನಾಡಿ, ಬಂಡವಾಳ ಶಾಹಿಗಳನ್ನು ಪ್ರೊತ್ಸಾಹಿಸುವುದು ಎಲ್ಲಾ ರಾಜಕೀಯ ಪಕ್ಷಗಳ ಸಿದ್ದಾಂತ ಮತ್ತು ತೀರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರೆಲ್ಲರೂ ಒಂದಾಗಿ ಐಕ್ಯತಾ ಹೋರಾಟ ರೂಪಿಸದೇ ಹೋದರೆ ಸರ್ಕಾರದ ಕಣ್ಣು ತೆರೆಸಲು ಸಾಧ್ಯವಿಲ್ಲ. ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸಿದ ಹೋರಾಟ ನಮ್ಮ ಕಾರ್ಮಿಕರಿಗೆ ಸ್ಫೂರ್ತಿಯಾಗಬೇಕು ಎಂದು ತಿಳಿಸಿದರು.
ರಂಗಕರ್ಮಿ ಎಚ್.ಜನಾರ್ದನ್ ಜನ್ನಿ ಮಾತನಾಡಿ, ಜಾತಿಯತೆ, ಸ್ತ್ರೀ ಶೋಷಣೆ, ದುಡಿಯುವ ವರ್ಗಗಳ ಮೇಲಿನ ದಬ್ಬಾಳಿಕೆ ಒಂದು ವಿಷವಾಗಿದೆ. ಆ ವಿಷವನ್ನೇ ಅಮೃತ ಎಂದು ಪಟ್ಟಭದ್ರ ಹಿತಾಸಕ್ತಿಗಳು ಜನರಿಗೆ ಉಣಬಡಿಸುತ್ತಿದ್ದಾರೆ. ಈ ವಿಕೃತಿ ಕೊನೆಗಾಣಿಸುವ ಅರಿವು ನಮ್ಮ ಜನರಲ್ಲಿ ಬರಬೇಕು. ಅರಿವು ಸಾಗರವಾದಾಗ ಶೋಷಣೆ ಮುಳುಗಿ ಹೋಗುತ್ತದೆ ಎಂದು ಎಚ್ಚರಿಸಿದರು. ಇದೇ ವೇಳೆ ರಂಗಕರ್ಮಿ ಎಚ್.ಜನಾರ್ದನ್ ಅವರನ್ನು ಸನ್ಮಾನಿಸಲಾಯಿತು. ಎಐಟಿಯುಸಿ ಜಿಲ್ಲಾಧ್ಯಕ್ಷ ದೇವದಾಸ್, ಎಐಟಿಯುಸಿ ರಾಜ್ಯ ಕಾರ್ಯದರ್ಶಿ ರಾಮಕೃಷ್ಣ, ಎಐಟಿಯುಸಿ ಜಿಲ್ಲಾ ಕಾರ್ಯಾಧ್ಯಕ್ಷ ರೇವಣ್ಣ, ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಶಿವಣ್ಣ ಉಪಸ್ಥಿತರಿದ್ದರು.