ನಂಜನಗೂಡು: ಪ್ರತಿಷ್ಠಿತ ಫೈನಾನ್ಸ್ ಗಳಲ್ಲಿ ಹಾಗೂ ಬ್ಯಾಂಕ್ ಗಳಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ಅಮಾಯಕರಿಗೆ ಲಕ್ಷಾಂತರ ರೂ ವಂಚಿಸಿದ ಐನಾತಿಯನ್ನ ಹುಲ್ಲಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಾದನಹಳ್ಳಿ ಗ್ರಾಮದ ಸುನಿಲ್ ಎಂಬಾತನೇ ಬಂಧಿತ ಆರೋಪಿ.ಆಕಳ ಗ್ರಾಮದ ಮಹಿಳೆಯೋರ್ವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಸುನಿಲ್ ನ್ನ ವಶಕ್ಕೆ ಪಡೆದಿದ್ದಾರೆ.ಕಲ್ಯಾಣಿ ಮೋಟಾರ್ಸ್ ನಲ್ಲಿ ಎಕ್ಸಿಕ್ಯುಟಿವ್ ಸೇಲ್ಸ್ ಮೆನ್ ಆಗಿ ಕೆಲಸ ಮಾಡುತ್ತಿದ್ದ ಸುನಿಲ್ ತನಗೆ ಪ್ರತಿಷ್ಠಿತ ಫೈನಾನ್ಸ್ ಗಳ ವ್ಯವಸ್ಥಾಪಕರು ಪರಿಚಯ ಲಕ್ಷಾಂತರ ರೂಪಾಯಿಗಳನ್ನ ಕಡಿಮೆ ಬಡ್ಡಿ ದರದಲ್ಲಿ ಕೊಡಿಸುವುದಾಗಿ ನಂಬಿಸಿದ್ದಾನೆ. ಇದಕ್ಕಾಗಿ ಕಮೀಷನ್ ಕೊಡಬೇಕೆಂದು ಹೇಳಿದ್ದಾನೆ.
ಈತನ ಮಾತನ್ನ ನಂಬಿದ ಅಮಾಯಕ ಜನ ಹಣ ನೀಡಿದ್ದಾರೆ. ಸಾಕಷ್ಟು ಜನರಿಂದ ಹಣ ಪಡೆದಿದ್ದರೂ ಯಾವುದೇ ಸಾಲ ಕೊಡಿಸಿಲ್ಲವೆಂದು ಹೇಳಲಾಗಿದೆ. ಅಲ್ಲದೆ ಕಮೀಷನ್ ಹೆಸರಲ್ಲಿ ಸುಮಾರು 20 ಕ್ಕೂ ಹೆಚ್ಚು ಮಂದಿಗೆ ವಂಚಿಸಿದ್ದಾನೆಂದು ತಿಳಿದು ಬಂದಿದೆ. ಮೈಕ್ರೋ ಫೈನಾನ್ಸ್ ಗಳ ಹಾವಳಿಯ ಶಾಕ್ ನಿಂದ ನಲುಗಿದ ಜನರಿಗೆ ಐನಾತಿಯ ವಂಚನೆ ಮತ್ತಷ್ಟು ಚಿಂತೆಗೀಡು ಮಾಡಿದೆ.