Bengaluru 30°C

ಅದ್ದೂರಿ ಹಾಗೂ ಶ್ರದ್ಧಾಭಕ್ತಿಯಿಂದ ನಡೆದ ಸುತ್ತೂರು ಜಾತ್ರಾ ರಥೋತ್ಸವ

ತಾಲೂಕಿನ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಆರು ದಿನಗಳ ಕಾಲ ನಡೆಯುತ್ತಿರುವ ಅದ್ದೂರಿ ಜಾತ್ರಾ ಮಹೋತ್ಸವದ ಮೂರನೇ ದಿನವಾದ ನಿನ್ನೆ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ರಥೋತ್ಸವವು ಸಡಗರ ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ನಂಜನಗೂಡು : ತಾಲೂಕಿನ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಆರು ದಿನಗಳ ಕಾಲ ನಡೆಯುತ್ತಿರುವ ಅದ್ದೂರಿ ಜಾತ್ರಾ ಮಹೋತ್ಸವದ ಮೂರನೇ ದಿನವಾದ ನಿನ್ನೆ ಆದಿ ಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ರಥೋತ್ಸವವು ಸಡಗರ ಸಂಭ್ರಮ ಹಾಗೂ ಶ್ರದ್ಧಾ ಭಕ್ತಿಯಿಂದ ನೆರವೇರಿತು.


ಹಲವು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಹಾಗೂ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಶ್ರೀ ಗದ್ದುಗೆಯಿಂದ ತಂದ ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳವರ ಅಲಂಕೃತ ಉತ್ಸವ ಮೂರ್ತಿಯನ್ನು ಬಣ್ಣ ಬಣ್ಣದ ಬಾವುಟ,ಬಂಟಿಂಗ್ಸ್, ಹೂ ಗಳಿಂದ ಅಲಂಕರಿಸಲಾದ ಬೃಹತ್ ರಥದಲ್ಲಿ ಕೂರಿಸಲಾಯಿತು.


ನಂತರ ಪರಮಪೂಜ್ಯ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ವಿವಿಧ ಮಠಾಧೀಶರು ಹಾಗೂ ಗಣ್ಯರು ರಥಕ್ಕೆ ಪೂಜೆ ಸಲ್ಲಿಸಿ ಹಣ್ಣು ಜವನ, ಎಸೆದು ಪುಷ್ಪಾರ್ಚನೆ ಮಾಡುವ ಮೂಲಕ ಸಾವಿರಾರು ಭಕ್ತರ ಹರ್ಷೋದ್ಗಾರದೊಂದಿಗೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.


ನಂದಿಧ್ವಜ, ವೀರಗಾಸೆ, ಮಂಗಳವಾದ್ಯ, ಮಹಿಳೆಯರ ಚಂಡೆ ವಾದ್ಯ, ಪೂಜಾ ಕುಣಿತ, ಡೊಳ್ಳು ಕುಣಿತ, ತಮಟೆ ವಾದ್ಯ, ಗಾರುಡಿ ಗೊಂಬೆ, ಹುಲಿ ವೇಷ ಗೊರವರ ಕುಣಿತ ಸೇರಿದಂತೆ 40ಕ್ಕೂ ಹೆಚ್ಚು ವಿವಿಧ ಜಾನಪದ ಕಲಾತಂಡಗಳು ರಥೋತ್ಸವದಲ್ಲಿ ಪಾಲ್ಗೊಂಡು ಜಾತ್ರೆಗೆ ಮೆರುಗು ತಂದವು.


ರಾಜ್ಯದ ನಾನಾ ಮೂಲೆಗಳಿಂದ ಲಕ್ಷಾಂತರ ಭಕ್ತರು ಜಾತ್ರೆ ಹಾಗೂ ರಥೋತ್ಸವದಲ್ಲಿ ಪಾಲ್ಗೊಂಡು ಶ್ರೀ ಅವರ ರಥಕ್ಕೆ ಹಣ್ಣು ಜವನ ಎಸೆಯುವ ಮೂಲಕ ತಮ್ಮ ಭಕ್ತಿ ನಮನ ಸಲ್ಲಿಸಿದರು. ಜಾತ್ರೆಗೆ ಬಂದ ಲಕ್ಷಾಂತರ ಭಕ್ತರಿಗೆ ಮಹಾದಾಸೋಹದ ವ್ಯವಸ್ಥೆ ಕಲ್ಪಿಸಿ ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕ ಕೌಂಟರ್ ಗಳನ್ನು ನಿರ್ಮಿಸಿ ಭರ್ಜರಿ ಸಿಹಿ ಊಟ ನೀಡಲಾಯಿತು. ಹತ್ತೂರ ಜಾತ್ರೆಗೆ ಸುತ್ತೂರು ಜಾತ್ರೆ ಸಮ ಎಂಬ ನಾಣ್ಣುಡಿಯಂತೆ ಸುತ್ತೂರು ಜಾತ್ರೆಗೆ ಭಕ್ತರ ಮಹಾಪೂರವೇ ಹರಿದು ಬಂದು ಎಲ್ಲಿ ನೋಡಿದರಲ್ಲಿ ಜನಸಾಗರವೇ ಎದ್ದು ಕಾಣುತ್ತಿತ್ತು.


Nk Channel Final 21 09 2023