Bengaluru 18°C

ಮೈಸೂರಿನಲ್ಲಿ ಡಿ.23 ರಂದು ರೈತರ ರಾಜ್ಯಮಟ್ಟದ ಸಮಾವೇಶ

ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಡಿ.23ರಂದು ರೈತರ ರಾಜ್ಯಮಟ್ಟದ ಸಮಾವೇಶ ಮೈಸೂರಿನ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ನಡೆಯಲಿದೆ

ಮೈಸೂರು: ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಆಶ್ರಯದಲ್ಲಿ ಡಿ.23ರಂದು ರೈತರ ರಾಜ್ಯಮಟ್ಟದ ಸಮಾವೇಶ ಮೈಸೂರಿನ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ನಡೆಯಲಿದೆ ಎಂದು ಒಕ್ಕೂಟದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈವರಗೆ ಪೂರ್ವಭಾವಿಯಾಗಿ ನಡೆದ ಸಭೆಗಳಲ್ಲಿ ಒಂದಷ್ಟು ಗಂಭೀರ ವಿಚಾರಗಳನ್ನು ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಸಮಾವೇಶದಲ್ಲಿ ಮಂಡಿಸಲು ನಿರ್ಧರಿಸಲಾಗಿದೆ. ಮಾತ್ರವಲ್ಲ ಈ ಕುರಿತು ತಾರ್ಕಿಕ ಹೋರಾಟ ರೂಪಿಸಲಾಗುವುದು. ರೈತರು ಸ್ವಾಭಿಮಾನಿಗಳಾಗಿ ಸ್ವಯಂ ಪ್ರೇರಿತರಾಗಿ ರೈತರ ಹಬ್ಬ ಆಚರಿಸಲು ಮೈಸೂರಿಗೆ ಬರಬೇಕು. ರೈತರ ಕೂಗು ಸರ್ಕಾರಕ್ಕೆ ಮುಟ್ಟಿಸಲು ಇದು ಸರಿಯಾದ ಸಮಯ ಆಗಿದೆ ಎಂದು ಹೇಳಿದರು.


ಕೃಷಿ ಸಾಲ ನೀತಿ ಬದಲಾಗಿ ಭೂಮಿ ಮೌಲ್ಯಕ್ಕೆ ಅನುಗುಣವಾಗಿ ಸಾಲ ನೀಡುವಂತಾಗಬೇಕು. ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್, ಸರ್ಪೆ್ರöÊಸಿ ಕಾಯ್ದೆ ರದ್ದಾಗಬೇಕು. ಕೃಷಿ ಪಂಪ್ ಸೆಟ್ ಗಳಿಗೆ ಹಗಲು ವೇಳೆ ಸಮರ್ಪಕ ವಿದ್ಯುತ್ ನೀಡಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತರಿ ಕಾನೂನು ಜಾರಿಯಾಗಬೇಕು. ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ ಆಗಬೇಕು. ಕೃಷಿ ಉಪಕರಣಗಳು, ರಸಗೊಬ್ಬರ ಕೀಟನಾಶಕ, ಮೊಸರು, ಮಜ್ಜಿಗೆ ಇತರೆ ಉತ್ಪನ್ನಗಳ ಮೇಲೆ ವಿಧಿಸಿರುವ ಜಿ ಎಸ್ ಟಿ ಸುಂಕ ರದ್ದಾಗಬೇಕು. ಮಹಿಳಾ ಸಂಘಗಳಿಗೆ ಸಾಲ ನೀಡುವ ಮೈಕ್ರೋ ಫೈನಾನ್ಸ್ ಕಿರುಕುಳ ನಿಲ್ಲಿಸಲು ಕಠಿಣ ಕಾನೂನು ಜಾರಿಯಾಗಬೇಕು.


ಕೃಷಿ ಮೇಳಗಳ ಬದಲು ರೈತರ ನೆನಪಿನ ಹಬ್ಬದ ದಿನಾಚರಣೆ ಆಗಬೇಕು. ಕೃಷಿ ಭೂಮಿ, ನೀರು ಅರಣ್ಯ, ಪರಿಸರ ರಕ್ಷಿಸಲು ಜಲಾಶಯಗಳ, ಕೆರೆ ಕಟ್ಟೆಗಳ ಹೂಳು ತೆಗೆಸಲು ಕಾರ್ಯ ಯೋಜನೆ ಜಾರಿಯಾಗಬೇಕು. ಪರಿಸರ ಸಂರಕ್ಷಿಸಲು ಸಾವಿರಾರು ಮರ ಬೆಳೆಸಿದ ಕಂಪನಿ, ಸಂಸ್ಥೆಗಳಿಗೆ ಶೇ.25 ತೆರಿಗೆ ವಿನಾಯಿತಿ ನೀಡುವಂತಾಗಬೇಕು. ಕಬ್ಬಿನ ಎಫ್‌ಆರ್‌ಪಿ ದರ ರೈತರ ಹೊಲದಲ್ಲಿನ ದರ ಎಂದು ನಿಗದಿ ಮಾಡುವ ಮಾನದಂಡ ಜಾರಿಯಾಗಬೇಕು.


ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಕಡಿಮೆ ತೋರಿಸುವ ಸಕ್ಕರೆ ಕಾರ್ಖಾನೆಗಳ ಮೋಸ ತಪ್ಪಿಸಲು ಕಠಿಣ ಶಿಕ್ಷೆ ವಿಧಿಸುವ ಕಾನೂನು ಜಾರಿಗೆ ಬರಬೇಕು. ಫಸಲ್ ಭೀಮಾ ಬೆಳೆ ವಿಮಾ ಪದ್ಧತಿ ನೀತಿ ಬದಲಾಗಿ ಪ್ರತಿ ರೈತನ ಹೊಲದ ಬೆಳೆ ವಿಮೆ ನಷ್ಟ ಪರಿಹಾರ ಸಿಗುವಂತಾಗಬೇಕು. ಎಪಿಎಂಸಿಗಳಲ್ಲಿ ದಲ್ಲಾಳಿಗಳು ರೈತರಿಂದ ಶೇ.10ರಷ್ಟು ಕಮಿಷನ್ ವಸೂಲಿ ನಿಲ್ಲಿಸಲು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಎನ್‌ಡಿಆರ್‌ಎಫ್ ಮಾನದಂಡ ಬದಲಾಗಬೇಕು. ಅತಿವೃಷ್ಟಿ, ಮಳೆಹಾನಿ, ಬರ ಪರಿಹಾರ, ಪ್ರಕೃತಿ ವಿಕೋಪ ಪರಿಹಾರಗಳ ಮಾನದಂಡ ಬದಲಾಯಿಸಿ ಸಂಪೂರ್ಣ ನಷ್ಟ ಪರಿಹಾರ ನೀಡಬೇಕು.


ರೈತರ ಮಗನ ಮದುವೆ ಆಗುವ ಹೆಣ್ಣು ಮಕ್ಕಳಿಗೆ ಸರ್ಕಾರಿ ಕೆಲಸದಲ್ಲಿ ಶೇ.20ರಷ್ಟು ಮೀಸಲಾತಿ ನೀಡುವ ನೀತಿ ಜಾರಿಗೆ ಬರಬೇಕು. ತೆಲಂಗಾಣ ಮಾದರಿಯಲ್ಲಿ 60 ವರ್ಷ ತುಂಬಿದ ರೈತರಿಗೆ 10,000 ಪಿಂಚಣಿ ನೀಡುವ ಯೋಜನೆ ಜಾರಿಯಾಗಬೇಕು.ರಾಜ್ಯದಲ್ಲಿ 10 ಲಕ್ಷ ರೈತರು ಬಗರ್ ಹುಕುಂ ಸಾಗುವಳಿ ಮಾಡುತ್ತಿದ್ದಾರೆ ಕೂಡಲೇ ಬೇಷರತ್ತಾಗಿ ಸಾಗುವಳಿ ಪತ್ರ ನೀಡಬೇಕು. ಯುವಕರ ಭವಿಷ್ಯ ಹಾಳು ಮಾಡುತ್ತಿರುವ ಆನ್ಲೆöÊನ್ ಗೇಮ್, ಜೂಜು ರಾಜ್ಯದಲ್ಲಿ ನಿಷೇಧ ಮಾಡಬೇಕು ಎಂದು ಆಗ್ರಹಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಮಹಿ ಮಹೇಶ್, ಎಂ.ಬಿ.ಚೇತನ್, ಮಹದೇವಯ್ಯ, ವಸಂತಕುಮಾರ್. ಅತ್ತಹಳ್ಳಿ ದೇವರಾಜ್, ನಾಗಾರ್ಜುನ, ಕಿರಗಸೂರ್ ಶಂಕರ, ಬರಡನಪುರ ನಾಗರಾಜ್, ನೀಲಕಂಠಪ್ಪ, ರೇವಣ್ಣ, ಮಹದೇವಸ್ವಾಮಿ, ಸಿದ್ದೇಶ್, ವೆಂಕಟೇಶ್, ವಿಜಯೇಂದ್ರ, ರಾಜೇಶ್ ಪರಶಿವಮೂರ್ತಿ, ಮಂಜುನಾಥ್, ಸುನಿಲ್ ಮುಂತಾದವರಿದ್ದರು.


Nk Channel Final 21 09 2023