ಮೈಸೂರು: ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ಆಗಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಅಧಿವೇಶನದಲ್ಲಿ ಒಪ್ಪಿಕೊಂಡಿದ್ದಾರೆ. ಅವರೇ ಹಣಕಾಸು ಸಚಿವರಾಗಿರುವುದರಿಂದ ಹಗರಣದ ಜವಾಬ್ದಾರಿ ಹೊರಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.
ಮೈಸೂರಿನ ಚಾಮುಂಡೇಶ್ವರಿಯ ದರ್ಶನ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಣ ತೆಲಂಗಾಣದ ಚುನಾವಣೆಗೆ ಹೋಗಿದೆ. ತೆಲಂಗಾಣದ ಚುನಾವಣೆಗೆ ಹಣ ಕೊಡಲು ಸಿದ್ದರಾಮಯ್ಯ ಅವರಿಗೆ ಜವಾಬ್ದಾರಿ ನೀಡಿ ಹೈಕಮಾಂಡ್ ಸೂಚನೆ ನೀಡಿತ್ತು.
ಇದು ರಾಜ್ಯದ ಬಡವರ, ತೆರಿಗೆ ಹಣ. ಇದರ ನೇರ ಹೊಣೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಬೇಕು. ಅವರೇ ಹಣಕಾಸು ಸಚಿವರು, ನಾಗೇಂದ್ರ ನೆಪ ಮಾತ್ರ. ನಾಗೇಂದ್ರ ಹಿಂದಿರುವ ಶಕ್ತಿ ಸಿದ್ದರಾಮಯ್ಯ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಜನಾಂದೋಲನದ ಕುರಿತು ಪ್ರತಿಕ್ರಿಯಿಸಿದ ಅವರು, ಕೇಂದ್ರ ಬಜೆಟ್ ನಲ್ಲಿ ಬಿಜೆಪಿ ಸರ್ಕಾರ ಇಲ್ಲದ ರಾಜ್ಯಗಳಿಗೂ ಅನುದಾನ ನೀಡಿದೆ. ಹಾಗೆಯೇ ಕರ್ನಾಟಕದಲ್ಲಿ ರೈಲ್ವೆ, ಹೈವೇಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸಾಕಷ್ಟು ಅನುದಾನ ನೀಡಿದೆ. ಅವರು ಅಂಕಿ ಅಂಶ ಇಟ್ಟುಕೊಂಡು ಮಾತನಾಡಲಿ. ನಾನು ಕೂಡ ಅಂಕಿ ಅಂಶಗಳ ಜೊತೆಗೆ ಉತ್ತರ ನೀಡುತ್ತೇನೆ ಎಂದು ತಿಳಿಸಿದರು.
ಎಂಡಿಎ ಹಗರಣದ ವಿರುದ್ಧ ಬಿಜೆಪಿ ಪಾದಯಾತ್ರೆ ಉದ್ಘಾಟನೆಯಲ್ಲಿ ಭಾಗಿಯಾಗಲಿದ್ದೇನೆ. ಜೊತೆಗೆ ಅಧಿವೇಶನ ಇರುವ ಕಾರಣ ಹಲವು ಬಿಲ್ ಗಳ ಮಂಡನೆ ಆಗಬೇಕಿದೆ. ಹೀಗಾಗಿ, ಪಾದಯಾತ್ರೆ ಸಮಾವೇಶದಲ್ಲಿ ಭಾಗಿಯಾಗುತ್ತೇವೆ ಎಂದು ಅವರು ಹೇಳಿದರು.