ಮೈಸೂರು: ಇಂದಿರಾ ಕ್ಯಾಂಟೀನ್ ನೌಕರರನ್ನು ಕಾಯಂಗೊಳಿಸಬೇಕು, ಸಂಬಳ ನೀಡದೇ ಇರುವ ಕಂಪನಿಯನ್ನು ವಜಾ ಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಮಹಾನಗರ ಪಾಲಿಕೆ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಬಡವರಿಗೆ ಅನ್ನ ನೀಡುತ್ತಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಸುಮಾರು 6 ವರ್ಷಗಳಿಂದ ಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿರುವವರು ಕಡು ಬಡವರಾಗಿದ್ದಾರೆ. ಈ ಹಿಂದೆ ಗುತ್ತಿಗೆ ಪಡೆದ ಸಂಸ್ಥೆ ಸಂಬಳವನ್ನು ತಡವಾದರೂ ಬ್ಯಾಂಕ್ ಖಾತೆಗೆ ಹಾಕುತ್ತಿದ್ದರು. ಆದರೆ, ಈಗಿನ ಟೆಂಡರ್ ಗುತ್ತಿಗೆದಾರ ನಂದಿ ಎಂಟರ್‌ಪ್ರೈಸಸ್‌ನ ಅಶ್ವಿನಿಕುಮಾರ್ ಸುಮಾರು 8ತಿಂಗಳಿನಿಂದ ವೇತನ ನೀಡಿಲ್ಲ.
ಈ ಕುರಿತು ಆರೋಗ್ಯಾಧಿಕಾರಿ, ಆಯುಕ್ತರು, ಜಿಲ್ಲಾಧಿಕಾರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಎಷ್ಟೇ ಮನವಿ ಮಾಡಿದರೂ ಸುಮಾರು 4ತಿಂಗಳಿನಿಂದ ಸರಿಯಾಗಿ ವೇತನ ನೀಡದ ಕಾರಣ ನೌಕರರು ಕುಟುಂಬ ನಿರ್ವಹಣೆ ಮಾಡುವುದು ತುಂಬಾ ಕಷ್ಟವಾಗಿದೆ. ಮನೆಯಲ್ಲಿ ಹೆಂಡತಿ ಮಕ್ಕಳು ಊಟಕ್ಕೂ ತೊಂದರೆ ಪಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನೌಕರರು ಸಂಬಳ ನೀಡಿ ಎಂದು ಕೇಳಿಕೊಂಡಾಗ ಅಲ್ಪಸ್ವಲ್ಪ ಹಣ ನೀಡಿ ಸಮಾಧಾನಪಡಿಸುತ್ತಿದ್ದರು. ಊಟದ ಟೋಕನ್‌ಗಳನ್ನೂ ಸರ್ಕಾರ ನಿಗದಿಪಡಿಸಿರುವಂತೆ ಸಾರ್ವಜನಿಕರಿಗೆ ವಿತರಿಸದೇ, ಸರಿಯಾಗಿ ಊಟ ಕೊಡದೇ ಅಲ್ಲಿಯೂ ಮೋಸ ಮಾಡುತ್ತಿದ್ದಾರೆ. ಹೀಗಾಗಿ ಕೂಡಲೇ ಗುತ್ತಿಗೆದಾರ ಅಶ್ವಿನಿಕುಮಾರ್ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಂದಿರಾ ಕ್ಯಾಂಟೀನ್ ನೌಕರರಿಗೆ ಸರ್ಕಾರದ ನಿಯಮಾನುಸಾರ ಪ್ರತಿ ತಿಂಗಳು ವೇತನ ನೀಡಬೇಕು.
ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಪಾಲಿಕೆಯ ಮುಂದೆ ಹಗಲು-ರಾತ್ರಿ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಶಂಕರ್, ವೆಂಕಟೇಶ್, ರಮೇಶ್, ಮಹದೇವ, ರವಿ, ಸ್ವಾಮಿ, ಶಿವಣ್ಣ, ರೇಷ್ಮಾ ಬಾನು, ಶಮಾ ಕೌಷರ್, ಅಸ್ಮತ್, ಮುಜಿದಾ, ಶೇಖರ್, ರಾಮು ಸೇರಿದಂತೆ ಹಲವರು ಭಾಗವಹಿಸಿದ್ದರು.