ಮೈಸೂರು: ಹುಣಸೂರು ತಾಲೂಕು ಇಲವಾಲ ಅಂಚೆಯ ಗೊಮ್ಮಟಗಿರಿ ಸೇವಾ ಸಮಿತಿ ವತಿಯಿಂದ ಡಿ.12 ರಿಂದ 15ರವರೆಗೆ ಗೊಮ್ಮಟಗಿರಿ ಕ್ಷೇತ್ರದಲ್ಲಿ ಭಗವಾನ್ ಬಾಹು ಬಲಿಯ 75ನೇ ಮಹಾ ಮಸ್ತಕಾಭಿಷೇಕ ಅಮೃತ ಮಹೋತ್ಸವ ಹಾಗೂ ಜಾತ್ರೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಮನ್ಮಥ್‌ರಾಜ್ ತಿಳಿಸಿದರು.
ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ.12ರಂದು ಪೂರ್ವಭಾವಿ ಸಭೆ ನಡೆಯಲಿದೆ. ವಾಸ್ತವವಾಗಿ ಡಿ.13, 14, 15ರ ಮೂರೂ ದಿನ ಬೆಳಗ್ಗೆ 11ಕ್ಕೆ ಮಹಾ ಮಸ್ತಕಾಭಿಷೇಕ ಜರುಗಲಿದೆ.
ಡಿ.13ರಂದು ಬೆಳಗ್ಗೆ 10.30ಕ್ಕೆ, ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ, ಡಾ.ದೇವೇಂದ್ರ ಕೀರ್ತಿ ಭಟ್ಟಾರಕ ಸ್ವಾಮೀಜಿ, ಅಭಿನವ ಚಾರುಕೀರ್ತಿ ಸ್ವಾಮೀಜಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ. ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸ್ಮರಣ ಸಂಚಿಕೆ ಬಿಡುಗಡೆಗೊಳಿಸುವರು. ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಕಾರ್ಯಕ್ರಮ ಉದ್ಘಾಟಿಸುವರು. ಡಾ.ಡಿ. ವೀರೇಂದ್ರ ಹೆಗ್ಗಡೆ, ಡಿ.ಸುಧಾಕರ್ ಇನ್ನಿತರರು ಹಾಜರಿರುವರು. ಶಾಸಕ ಜಿ.ಡಿ.ಹರೀಶ್‌ಗೌಡ ಅಧ್ಯಕ್ಷತೆ ವಹಿಸುವರು ಎಂದರು.
ಡಿ.14ರAದು ಮಧ್ಯಾಹ್ನ ಅಮೃತ ಕುಟೀರವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಉದ್ಘಾಟಿಸುವರು, ಡಿ.ಸುಧಾಕರ್ ಅಧ್ಯಕ್ಷತೆ ವಹಿಸುವರು. ಡಿ.15ರಂದು ಬೃಹತ್ ಸಭಾಂಗಣ ನಿರ್ಮಾಣದ ಭೂಮಿಪೂಜೆ ನೆರವೇರಲಿದೆ. ತಾವು ಅಧ್ಯಕ್ಷತೆ ವಹಿಸುವುದಾಗಿ ತಿಳಿಸಿದರು.
ಎಳನೀರು, ಕಬ್ಬಿನಹಾಲು, ಹಾಲು, ಮೊಸರು, ಶ್ರೀಗಂಧ, ಕಷಾಯ, ಅರಿಶಿಣ ಮೊದಲಾದ ದ್ರವ್ಯಗಳಿಂದ ಮಹಾ ಮಸ್ತಕಾಭಿಷೇಕ ಜರುಗಲಿದೆ. ಸಾರಿಗೆ ಸಂಸ್ಥೆ ವತಿಯಿಂದ ಈ ದಿನಗಳಂದು ವಿಶೇಷ ಬಸ್ ವ್ಯವಸ್ಥೆಗೆ ಕೋರಲಾಗಿದೆ ಎಂದು ತಿಳಿಸಿದರು.ಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಎಸ್.ಎಂ.ಪ್ರಕಾಶ್‌ಬಾಬು, ಧರಣೇಂದ್ರನ್, ಪ್ರಭಾಕರ್, ಸಂತೋಷ್‌ಕುಮಾರ್ ಹಾಜರಿದ್ದರು.