ಮೈಸೂರು: ನಗರದ ಹೊರವಲಯದಲ್ಲಿ ಅನುಮತಿ ಪಡೆಯದೇ ಪಾರ್ಟಿ ನಡೆಸಿದ್ದ ಅಲ್ಲದೇ 64 ಮಂದಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಿಎನ್‌ಎಸ್ ಕಲಂ 221, 223, 121(2), 15(A), 32, 34, 38(A) KE ಅನ್ವಯ ಪ್ರಕರಣ ದಾಖಲಾಗಿದೆ. ಬಂಧಿತರು ಮೈಸೂರು, ಮಡಿಕೇರಿ, ಬೆಂಗಳೂರು ಹಾಗೂ ತಮಿಳುನಾಡು ಮೂಲದವರು ಎಂದು ತಿಳಿದುಬಂದಿದೆ.
ಕೆಆರ್‌ಎಸ್ ಹಿನ್ನೀರಿನ ಬಳಿಯಿರುವ ಎಡಹಳ್ಳಿ ಗ್ರಾಮದಲ್ಲಿ ಮಧು ಎಂಬಾತನಿಗೆ ಸೇರಿದ ಜಮೀನಿನಲ್ಲಿ ಕೆ.ಆರ್.ನಗರ ತಾಲೂಕಿನ ಮೂಲೆಪೆಟ್ಲು ಗ್ರಾಮದ ಸಂತೋಷ್ ಅಂಬಾತ ಪಾರ್ಟಿ ಆಯೋಜನೆ ಮಾಡಿದ್ದ. ಅಧಿಕೃತವಾಗಿ ಪಾರ್ಟಿಗೆ ಅನುಮತಿ ಪಡೆಯಲಾಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿಯೂ ಬರೆದುಕೊಂಡಿದ್ದ. ಈ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕ-ಯುವತಿಯರು ನೋಂದಣಿ ಮಾಡಿಕೊಂಡಿದ್ದರು.
ಡಿಜೆ ಮೂಲಕ ಅಬ್ಬರದ ಮ್ಯೂಸಿಕ್ ಹಾಕಿದ್ದ ಕಾರಣ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರಿಗೆ ಮಾಹಿತಿ ನೀಡಲಾಗಿತ್ತು. ಎಸ್ಪಿ ಆದೇಶದಂತೆ ಹೆಚ್ಚುವರಿ ಎಸ್ಪಿ ನಾಗೇಶ್ ಹಾಗೂ ಡಿವೈಎಸ್‌ಪಿ ಕರೀಂ ರಾವತರ್ ದಾಳಿ ನಡೆಸಿ ಸಾಕಷ್ಟು ಯುವಕ-ಯುವತಿಯರನ್ನ ವಶಕ್ಕೆ ಪಡೆದುಕೊಂಡಿದ್ದರು. ಕಾರ್ಯಾಚರಣೆ ವೇಳೆ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪವೂ ವ್ಯಕ್ತವಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಎಸ್‌ಪಿ ವಿಷ್ಣುವರ್ಧನ್ ಮಾತನಾಡಿ, ಪಾರ್ಟಿಯಲ್ಲಿ ಯಾವುದೇ ಮಾದಕ ವಸ್ತು, ಮಾದಕ ದ್ರವ್ಯ ಸಿಕ್ಕಿಲ್ಲ. ಆದರೆ ಸ್ಥಳದಲ್ಲಿ ಮದ್ಯ ಹಾಗೂ ಸಿಗರೇಟ್ ದೊರೆತಿದೆ. ಎಫ್‌ಎಸ್‌ಎಲ್ ತಂಡ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಜೊತೆಗೆ ಪಾರ್ಟಿಯಲ್ಲಿದ್ದ ಎಲ್ಲರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುವುದು ಹಾಗೂ ವರದಿ ಬಂದ ನಂತರ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಒಟ್ಟು 150ಕ್ಕೂ ಹೆಚ್ಚು ಯುವಕ-ಯುವತಿಯರು ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಜೊತೆಗೆ ಪಾರ್ಟಿಯಲ್ಲಿ ಇಸ್ರೇಲ್‌ನಿಂದ ರ‍್ಯಾಪರ್ ಗ್ರೇನ್ ರಿಪ್ಪರ್ ಬಂದಿದ್ದನು. ಆಯೋಜಕರಿಂದ ಪಾರ್ಟಿಗೆ ಬರಲು ತಲಾ 2000 ರೂ. ಹಣವನ್ನು ನಿಗದಿ ಮಾಡಿದ್ದರು.