ನಂಜನಗೂಡು: ಮೈಸೂರಿನಿಂದ ಗುಂಡ್ಲುಪೇಟೆಗೆ ತೆರಳುತ್ತಿದ್ದ ಸಾರಿಗೆ ಬಸ್ ಮತ್ತು ಟಿಪ್ಪರ್ ನಡುವಿನ ಓವರ್ ಟೆಕ್ ಗೆ ಸಾರಿಗೆ ಬಸ್ಸಿನಲ್ಲಿ ಕುಳಿತಿದ್ದ ಮಹಿಳೆಯ ಕುತ್ತಿಗೆ ಮತ್ತು ಕೈ ಕಟ್ ಆಗಿ ಸ್ಥಳದಲ್ಲಿಯೇ ಮಹಿಳೆ ಸಾವನ್ನಪ್ಪಿರುವ ದಾರುಣ ಘಟನೆ ನಂಜನಗೂಡು ತಾಲ್ಲೂಕಿನ ಸಿಂಧುವಳ್ಳಿ ಗ್ರಾಮದ ಬಳಿ ನಡೆದಿದೆ.
ಬೇಗೂರು ಸಮೀಪದ ಆಲಹಳ್ಳಿ ಗ್ರಾಮದ ಶಿವಲಿಂಗಮ್ಮ 43 ವರ್ಷದ ಮೃತ ಮಹಿಳೆ ಎಂದು ತಿಳಿದು ಬಂದಿದೆ. ಮೈಸೂರು ಗುಂಡ್ಲುಪೇಟೆಗೆ ನಂಜನಗೂಡು ಮಾರ್ಗವಾಗಿ ತೆರಳುತ್ತಿದ್ದ ಸಾರಿಗೆ ಬಸ್ಸಿನಲ್ಲಿ ಮೃತ ಮಹಿಳೆ ಶಿವಲಿಂಗಮ್ಮ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಸಿಂಧುವಳ್ಳಿ ಗ್ರಾಮದ ಬಳಿ ಬಸ್ಸಿನ ಕಿಟಕಿಯಿಂದ ಮಹಿಳೆ ಕತ್ತನ್ನು ಹೊರ ತೆಗೆದ ಹಿನ್ನೆಲೆ,
ಟಿಪ್ಪರ್ ವಾಹನ ಮತ್ತು ಸಾರಿಗೆ ಬಸ್ ನಡುವೆ ಕ್ಷಣಾರ್ಧದಲ್ಲಿ ಅಪಘಾತವಾದ ಪರಿಣಾಮ ಬಸ್ಸಿನಲ್ಲಿ ಕುಳಿತಿದ್ದ ಶಿವಲಿಂಗಮ್ಮ ಎಂಬುವರ ಕುತ್ತಿಗೆ ಮತ್ತು ಕೈ ಕಟ್ ಆಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಅಪಘಾತ ನಡೆದ ಸ್ಥಳದಲ್ಲಿ ಟಿಪ್ಪರ್ ವಾಹನ ನಾಪತ್ತೆಯಾಗಿದೆ.
ನಂಜನಗೂಡು ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ಸಿದ್ದರಾಜು ಮತ್ತು ಸಿಬ್ಬಂದಿಗಳಾದ ಮಹೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಾರಿಗೆ ಬಸ್ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ನಾಪತ್ತೆಯಾಗಿರುವ ಟಿಪ್ಪರ್ ವಾಹನವನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ. ಮೃತ ಮಹಿಳೆಯ ಶವವನ್ನು ಮೈಸೂರಿನ ಕೆಆರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಈ ಸಂಬಂಧ ನಂಜನಗೂಡು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.