ಮೈಸೂರು: ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆ ಆಶಾದಾಯಕವಾಗಿ ಸುರಿದ ಪರಿಣಾಮ ಅರಣ್ಯ ಪ್ರದೇಶಗಳು ಹಸಿರಿನಿಂದ ಕಂಗೊಳಿಸುತ್ತಿದ್ದು, ಆ ಸುಂದರ ದೃಶ್ಯಗಳನ್ನು ನೋಡುವುದೇ ಮನಕ್ಕೊಂದು ಉಲ್ಲಾಸ. ಹೀಗಿರುವಾಗಲೇ ಹಲವು ಅರಣ್ಯಗಳು ತನ್ನದೇ ಸೌಂದರ್ಯ ಮತ್ತು ಖ್ಯಾತಿಯಿಂದ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಸಾಮಾನ್ಯವಾಗಿ ಮೈಸೂರಿನತ್ತ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆಯಾದರೂ ಕೆಲವೇ ಕೆಲವು ಪ್ರವಾಸಿ ತಾಣಗಳನ್ನು ನೋಡಿಕೊಂಡು ಹಿಂತಿರುಗುತ್ತಾರೆ.
ಈ ನಡುವೆ ಹೆಚ್.ಡಿ.ಕೋಟೆಯತ್ತ ತೆರಳಿದವರು ನಾಗರಹೊಳೆ ಅಭಯಾರಣ್ಯವನ್ನು ನೋಡುತ್ತಾರೆ ವಿನಃ ಸಮೀಪದ ನುಗು ವನ್ಯಧಾಮದತ್ತ ಹೆಜ್ಜೆ ಹಾಕುವುದಿಲ್ಲ. ನುಗುವನ್ಯಧಾಮವು ಬಂಡೀಪುರ ಅಭಯಾರಣ್ಯ ವ್ಯಾಪ್ತಿಯ ಹೆಡಿಯಾಲ ಉಪವಿಭಾಗಕ್ಕೆ ಸೇರಿದ್ದು, ನುಗು ಜಲಾಶಯದ ಹಿನ್ನೀರು ಮತ್ತು ಅರಣ್ಯದ ನಡುವಿನ ವನ್ಯಪ್ರಾಣಿಗಳ ಸ್ವಚ್ಛಂದ ವಿಹಾರ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುತ್ತದೆ.
ಈ ವನ್ಯಧಾಮವು 30.32 ಚದರ ಕಿಲೋ ಮೀಟರ್ ಇದ್ದು, ಇಲ್ಲಿ ಎರಡು ಕರಿ ಚಿರತೆಗಳಿದ್ದು ಅವು ಪ್ರಮುಖ ಆಕರ್ಷಣೆಗಳಾಗಿವೆ. ಈಗಾಗಲೇ ಹಲವು ಬಾರಿ ಜನರಿಗೆ ಕಾಣಿಸಿಕೊಂಡು ಮೈರೋಮಾಂಚನ ಗೊಳಿಸಿವೆ. ಇಷ್ಟೇ ಅಲ್ಲದೆ ಸದಾ ಅಲೆಯಾಡುವ ಹಿನ್ನೀರು ಇದನ್ನು ಕುಡಿಯಲು ಬರುವ ಕಾಡಾನೆ, ಹುಲಿ, ಚಿರತೆ, ಕರಡಿ. ಕಾಡೆಮ್ಮೆ, ಕಾಡುಹಂದಿ, ಜಿಂಕೆ, ಸೀಳುನಾಯಿ, ನೀರುನಾಯಿ, ವಿವಿಧ ಬಗೆಯ ಪಕ್ಷಿಗಳು ಆಕರ್ಷಣೆಯಾಗಿವೆ.
ಹಾಗೆನೋಡಿದರೆ ನುಗು ಮತ್ತು ಗುಂಡ್ರೆಯಲ್ಲಿ ಈ ಹಿಂದೆಯೇ ಸಫಾರಿಯಿತ್ತು. ಈ ಪ್ರದೇಶಗಳು ಮೈಸೂರು ಜಿಲ್ಲೆಗೆ ಸೇರಿದ್ದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುತ್ತವೆ. 1994ರ ತನಕವೂ ಇಲ್ಲಿ ಸಫಾರಿ ನಡೆಯುತ್ತಿತ್ತಾದರೂ ಆ ನಂತರ ಕಾರಣಾಂತರಿದಿಂದ ಅರಣ್ಯ ಇಲಾಖೆ ಈ ಎರಡು ಸಫಾರಿ ವಲಯವನ್ನು ಹಿಂಪಡೆದಿದ್ದು ಇತಿಹಾಸ. ಕಳೆದ ವರ್ಷವಷ್ಟೆ ನುಗು ವನ್ಯಧಾಮದಲ್ಲಿ ಸಫಾರಿ ಆರಂಭಿಸುವ ಚಿಂತನೆ ಮಾಡಲಾಗಿತ್ತು. ಆದರೆ ವಿರೋಧಗಳು ವ್ಯಕ್ತವಾಗಿದ್ದರಿಂದ ಆರಂಭಿಸಲಿಲ್ಲ.
ನುಗು ವನ್ಯಧಾಮವು ನಾಗರಹೊಳೆ ಮತ್ತು ಬಂಡೀಪುರ ಅರಣ್ಯಕ್ಕೆ ಹೊಂದಿಕೊಂಡಂತಿರುವುದರಿಂದ ಸುತ್ತಮುತ್ತ ಪ್ರವಾಸಿ ತಾಣಗಳಾದ ಚಿಕ್ಕದೇವಮ್ಮನ ಬೆಟ್ಟ, ಕಬಿನಿ ಜಲಾಶಯವಿದೆ. ಹೀಗಾಗಿ ಪ್ರವಾಸಿಗರು ಇಲ್ಲಿಗೆ ತೆರಳಿದರೆ ಹಲವಾರು ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಅವಕಾಶವಿದೆ. ಈ ಸಮಯದಲ್ಲಿ ಮಳೆಗೆ ಚಿಗುರಿ ಕಂಗೊಳಿಸುವ ಅರಣ್ಯವನ್ನು ನೋಡುವುದೇ ಚೆಂದ. ಹೀಗಿರುವಾಗ ಬೆಟ್ಟಗುಡ್ಡಗಳನ್ನೊಳಗೊಂಡು ಹಿನ್ನೀರಿನಿಂದ ಕೂಡಿದ ನುಗು ಚೆಲುವನ್ನು ಬಣ್ಣಿಸುವುದಕ್ಕಿಂತ ಹತ್ತಿರದಿಂದ ನೋಡುವುದೇ ಮಜಾ