ನಂಜನಗೂಡು: ಮಾರಿ ಹಬ್ಬದ ಜಾತ್ರೆ ವೇಳೆ ಜಗಳವಾಡುತ್ತಿದ್ದ ಎರಡು ಗುಂಪುಗಳ ಯುವಕರನ್ನು ಸಮಾಧಾನ ಪಡಿಸಲು ಹೋದ ಪೊಲೀಸ್ ಪೇದೆ ಮೇಲೆ ಇಬ್ಬರು ಯುವಕರು ಹಲ್ಲೆ ನಡೆಸಿದ ಘಟನೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಹೋಬಳಿಯ ಹಾಡ್ಯ ಗ್ರಾಮದಲ್ಲಿ ನಡೆದಿದೆ.
ಘಟನೆ ಸಂಬಂಧ ಹಲ್ಲೆ ನಡೆಸಿದ ಸಂತೋಷ್ ಹಾಗೂ ಆನಂದ ಎಂಬ ಯುವಕರನ್ನು ಹುಲ್ಲಹಳ್ಳಿ ಠಾಣೆಯ ಪೊಲೀಸರು ಇಂದು ಬುಧವಾರ ಮಧ್ಯಾಹ್ನ 1 ಗಂಟೆಯ ಸಮಯದಲ್ಲಿ ಬಂಧಿಸಿದ್ದಾರೆ.
ಹಲ್ಲೆಗೆ ಕುಮ್ಮಕ್ಕು ನೀಡಿದ ಇತರರ ಮೇಲೂ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗ್ರಾಮದಲ್ಲಿ ಸಡಗರ ಮತ್ತು ಸಂಭ್ರಮದಿಂದ ನಡೆಯುತ್ತಿದ್ದ ಮಾರಿ ಹಬ್ಬದ ಜಾತ್ರೆ ವೇಳೆ ಕಾಲಭೈರವೇಶ್ವರ ದೇವಸ್ಥಾನದ ಮುಂದೆ ಹುಲ್ಲಹಳ್ಳಿ ಠಾಣೆ ಪೇದೆ ಕುಮಾರ್ ಎಂಬುವರು ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಎರಡು ಗುಂಪುಗಳ ಯುವಕರು ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ.
ವಿಚಾರ ಆಲಿಸಿದ ಪೊಲೀಸರು ಜಗಳ ಬಿಡಿಸಲು ಪೇದೆ ಕುಮಾರ್ ತೆರಳಿದ್ದಾರೆ. ಈ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಸಂತೋಷ್ ಹಾಗೂ ಆನಂದ್ ಮತ್ತು ಇತರರು ಪೊಲೀಸ್ ಪೇದೆ ಕುಮಾರ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಸಿಬ್ಬಂದಿಗಳು ಕುಮಾರ್ ನೆರವಿಗೆ ಬಂದಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಪೇದೆ ಕುಮಾರ್ ಗೆ ಹುಲ್ಲಹಳ್ಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.