News Karnataka Kannada
Wednesday, May 01 2024
ಮೈಸೂರು

ಮೈಸೂರು: ಕಪಿಲ ನದಿ ಪ್ರವಾಹಕ್ಕೆ ದಕ್ಷಿಣಕಾಶಿ ನಂಜನಗೂಡು ತತ್ತರ

Mysuru: Nanjangud in Dakshinakashi is reeling under the flood waters of Kapila river.
Photo Credit : By Author

ಮೈಸೂರು: ಕೇರಳದ ವೈನಾಡು ವ್ಯಾಪ್ತಿಯಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿರುವ ಪರಿಣಾಮ ನೀರು ಹರಿದು ಬಂದು ಕಬಿನಿ ಜಲಾಶಯವನ್ನು ಸೇರುತ್ತಿದ್ದು, ಜಲಾಶಯದ ಸುರಕ್ಷೆಯ ಕಾರಣದಿಂದಾಗಿ ಸುಮಾರು 40 ಸಾವಿರ ಕ್ಯುಸೆಕ್ ಗೂ ಹೆಚ್ಚಿನ ನೀರನ್ನು ನದಿಗೆ ಬಿಡಲಾಗುತ್ತಿರುವುದರಿಂದ ದಕ್ಷಿಣಕಾಶಿ ನಂಜನಗೂಡು ಪಟ್ಟಣದ ನದಿಗೆ ಹೊಂದಿಕೊಂಡಂತಿರುವ ಪ್ರದೇಶಗಳು ಮುಳುಗಡೆಯಾಗಿವೆ.

ನಂಜನಗೂಡಿನ ಪರಶುರಾಮ ದೇವಾಲಯ ಜಲಾವೃತಗೊಂಡಿದ್ದರೆ ನಂಜುಂಡೇಶ್ವರ ದೇವಾಲಯದ ಬಳಿಯಲ್ಲಿರುವ ಕಪಿಲಾ ನದಿಯ ದಡದ ಸ್ನಾನಘಟ್ಟ, ಮುಡಿಕಟ್ಟೆ, ಅಯ್ಯಪ್ಪ ಸ್ವಾಮಿ ದೇವಾಲಯ ಕೂಡ ಮುಳುಗಡೆಯಾಗಿದೆ. ಇಷ್ಟೇ ಅಲ್ಲದೆ ಹಳ್ಳದ ಕೇರಿ ಬಡಾವಣೆ, ತೋಪಿನ ಬೀದಿ, ಹಳ್ಳದಕೇರಿ, ಒಕ್ಕಲಗೇರಿ ಬಡಾವಣೆಗಳಿಗೆ ಪ್ರವಾಹದ ಬಿಸಿ ತಟ್ಟಿದೆ. ಹೀಗಾಗಿ ಸುರಕ್ಷಿತ ಪ್ರದೇಶಗಳಿಗೆ ಜನರನ್ನು ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ. ಸ್ನಾನ ಘಟ್ಟ ಮುಳುಗಡೆಯಾಗಿರುವ ಕಾರಣ ಸ್ನಾನಘಟ್ಟ, ಮುಡಿಕಟ್ಟೆ ಹಾಗೂ ಪರಿಶ್ರಮ ದೇವಾಲಯಕ್ಕೆ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದೆ.

ಇದೆಲ್ಲದರ ನಡುವೆ ಕಪಿಲ ನದಿಯ ಸುತ್ತಮುತ್ತಲಿನ ಅಂಗಡಿ ಮಳಿಗೆಗಳನ್ನು ನಂಜನಗೂಡು ತಾಲ್ಲೂಕು ತಹಸೀಲ್ದಾರ್ ಆದೇಶದ ಮೇರೆಗೆ ತೆರವುಗೊಳಿಸಿದೆ. ಇನ್ನು ಮೈಸೂರು- ನಂಜನಗೂಡು ಮುಖ್ಯ ರಸ್ತೆಯಲ್ಲಿರುವ ನೂರಾರು ವರ್ಷಗಳ ಇತಿಹಾಸದ ಪುರಾತನ ದಳವಾಯಿ ಸೇತುವೆಯ ಮುಕ್ಕಾಲು ಭಾಗಕ್ಕೆ  ನೀರು ಬಂದಿದ್ದರೆ, ಕಪಿಲ ನದಿಯ   ಹದಿನಾರು ಕಾಲು ಮಂಟಪ ಮುಳುಗಡೆಯಾಗಿದೆ.

ಹಾಗೆನೋಡಿದರೆ ಪ್ರವಾಹ ಬಂದಾಗಲೆಲ್ಲ ಕಪಿಲಾ ನದಿ ದಡದ ಸಮೀಪದಲ್ಲಿರುವ ನಂಜನಗೂಡಿನ ಸ್ನಾನಘಟ್ಟ, ಮುಡಿಕಟ್ಟೆ, ಅಯ್ಯಪ್ಪ ಸ್ವಾಮಿ ದೇವಸ್ಥಾನ, ಕುರುಬರಗೇರಿ, ಗೌರಿಗಟ್ಟೆ, ಹಳ್ಳದಕೇರಿ, ರಾಜಾಜಿ ಕಾಲೋನಿ, ಕುಲಾಕ್ ನ ಹುಂಡಿ ಮುಳುಗಡೆಯಾಗುವುದು ಮಾಮೂಲಿ. ಈ ಬಾರಿಯೂ  ಅದೇ ಆಗಿದೆ.

ಈ ಹಿಂದೆ ಒಂದು ಲಕ್ಷ ಕ್ಯುಸೆಕ್ ಗಿಂತಲೂ ಹೆಚ್ಚು  ನೀರನ್ನು ಹೊರಕ್ಕೆ ಬಿಡಲಾಗಿತ್ತು. ಆಗ ಪ್ರವಾಹ ಸೃಷ್ಟಿಯಾಗಿ ತಳಭಾಗದಲ್ಲಿ ವಾಸಿಸುತ್ತಿದ್ದ ಜನರ ಮನೆಗೆ  ನೀರು ನುಗ್ಗಿದ್ದರಿಂದ ಗಂಜಿ ಕೇಂದ್ರದಲ್ಲಿ ಆಶ್ರಯ ಪಡುವಂತಾಗಿತ್ತು. ಈ ಬಾರಿಯೂ ಅಂತಹದ್ದೇ ಪರಿಸ್ಥಿತಿ ನಿರ್ಮಾಣವಾಗುವ ಎಲ್ಲ ಸಾಧ್ಯತೆಗಳು ಇವೆ.

ಮಳೆಗಾಲದ ಆರಂಭದ ದಿನವೇ ಹೀಗಾದರೆ ಮುಂದಿನ ದಿನಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಕಪಿಲ ನದಿಯ ಪಾತ್ರದಲ್ಲಿರುವ ಮತ್ತು ನದಿಯ ಎರಡೂ ದಂಡೆಯಲ್ಲಿ ವಾಸಿಸುತ್ತಿರುವ ಜನರು ತಮ್ಮ ಆಸ್ತಿ, ಪಾಸ್ತಿ ಹಾಗೂ ಜಾನುವಾರು ರಕ್ಷಣೆಗಳ ಬಗ್ಗೆ ಮುನ್ನೆಚ್ಚರಿಕೆ ವಹಿಸಿ, ಸುರಕ್ಷಿತ ಸ್ಥಳಗಳಿಗೆ ತೆರಳುವುದು ಅನಿವಾರ್ಯವಾಗಿದೆ.

ಜಲಾಶಯದಿಂದ ಇನ್ನಷ್ಟು ನೀರು ಹರಿದು ಬಂದಿದ್ದೇ ಆದರೆ, ಮೈಸೂರು-ನಂಜನಗೂಡು ರಾಷ್ಟ್ರೀಯ ಹೆದ್ದಾರಿ ಮಲ್ಲನಮೂಲೆ ರಸ್ತೆ ಸಂಪೂರ್ಣ ಜಲಾವೃತವಾಗಲಿದ್ದು, ನಂಜನಗೂಡು ತಾಲೂಕಿನ ಕಣೆನೂರು, ಹುಲ್ಲಹಳ್ಳಿ, ರಾಂಪುರ, ಹಂಡುವಿನಹಳ್ಳಿ, ದೇಬೂರು, ನಂಜನಗೂಡು, ಸುತ್ತೂರು, ವರುಣ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳ ಜಮೀನುಗಳು ಮುಳುಗಡೆಯಾಗಲಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು