ಮೈಸೂರು: ಪಿರಿಯಾಪಟ್ಟಣ ತಾಲೂಕಿನ ಬನ್ನಿಕುಪ್ಪೆ ಗೇಟ್ ಬಳಿ ಅಂಗನವಾಡಿ ಸಹಾಯಕಿಯ ಶವ ಪತ್ತೆಯಾಗಿದೆ. ಮೃತರನ್ನು ಹುಣಸೂರು ತಾಲೂಕಿನ ಕಟ್ಟಮಳವಾಡಿಯ ಅಂಗನವಾಡಿ ಸಹಾಯಕಿ ಮಲ್ಲಿಗೆ ಮಂಜುನಾಥ್ (36) ಎಂದು ಗುರುತಿಸಲಾಗಿದೆ. ಅವರು ಪತಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಮಲ್ಲಿಗೆಯನ್ನು ಕಟ್ಟಮಳವಾಡಿಯ ಕಟ್ಟಡ ಕಾರ್ಮಿಕ ಮಂಜುನಾಥ್ ಎಂಬುವವರಿಗೆ ವಿವಾಹ ಮಾಡಿಕೊಡಲಾಗಿದ್ದು, ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಪತಿ ಕೂಲಿ ಮಾಡಿ, ಮಲ್ಲಿಗೆ ಅಂಗನವಾಡಿ ಸಹಾಯಕಿಯಾಗಿ ಜೀವನ ಸಾಗಿಸುತ್ತಿದ್ದರು.
ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯ ಬನ್ನಿಕುಪ್ಪೆ ಗೇಟ್ ಬಳಿ ರಸ್ತೆಬದಿಯಲ್ಲಿ ಶವ ಪತ್ತೆಯಾಗಿದ್ದು, ಮಹಿಳೆ ಕ್ರಿಮಿನಾಶಕ ಸೇವಿಸಿರುವಂತೆ ಕಂಡುಬಂದಿದೆ. ಮಹಿಳೆಯ ಶವ ಪತ್ತೆಯಾದ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ತನಿಖೆಯಿಂದ ಸತ್ಯಾಂಶ ಹೊರಬರಬೇಕಿದೆ.