ಮೈಸೂರು

ಮೈಸೂರು: ಗಜಪಯಣಕ್ಕೆ ಹುಣಸೂರಿನ ವೀರನಹೊಸಹಳ್ಳಿಯಲ್ಲಿ ಸಕಲ ಸಿದ್ಧತೆ

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಮುನ್ನುಡಿ ಬರೆಯುವ ಗಜಪಯಣಕ್ಕೆ ಭಾನುವಾರ ವೀರನಹೊಸಹಳ್ಳಿಯಲ್ಲಿ ಚಾಲನೆ ದೊರೆಯಲಿದ್ದು, ಜಂಬೂಸವಾರಿಯ ರೂವಾರಿಗಳು ಕಾಡಿನಿಂದ ನಾಡಿನತ್ತ ಹೆಜ್ಜೆ  ಹಾಕಲಿವೆ ಹೀಗಾಗಿ ಹುಣಸೂರು ತಾಲೂಕಿನ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ವೀರನಹೊಸಳ್ಳಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ.

ಈಗಾಗಲೇ ಗಜಪಯಣಕ್ಕೆ ವೀರನಹೊಸಳ್ಳಿ ಮಧುವಣಗಿತ್ತಿಯಂತೆ ಸಜ್ಜಾಗಿದ್ದು, ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗಾಗಲೇ ತಳಿರು ತೋರಣಗಳನ್ನು ಕಟ್ಟಿ ಸಿಂಗರಿಸಲಾಗಿದೆ. ಗಿರಿಜನರು ಸಾಂಪ್ರದಾಯಿಕ ಉಡುಗೆ ತೊಡುಗೆ ತೊಟ್ಟು ತಮ್ಮ ಸಂಪ್ರದಾಯ  ಪ್ರದರ್ಶಿಸಲಿದ್ದಾರೆ. ಚಿಣ್ಣರು ತಮ್ಮ ಕೌಶಲ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.

ವೀರನಹೊಸಳ್ಳಿಯ ಮುಖ್ಯ ದ್ವಾರದ ಮುಂಭಾಗ ಬೆಳಗ್ಗೆ 9.01ರಿಂದ 9.30ರವರೆಗೆ ಸಲ್ಲುವ ಶುಭ ಮುಹೂರ್ತದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಗಜಪೂಜೆ ನೆರವೇರಿಸಿ ಗಜಪಯಣಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ.

ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಮೊದಲ ತಂಡದ 9 ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆಗೈದು, ಕಬ್ಬು, ಬೆಲ್ಲ ತಿನ್ನಿಸಿ ನಾಡಿಗೆ ಬರಮಾಡಿಕೊಳ್ಳಲಾಗುತ್ತದೆ. ನಂತರ ಅಲ್ಲಿಂದ ಹೊರಟ ಗಜಪಡೆ ಅರಣ್ಯ ಭವನಕ್ಕೆ ತಲುಪಿ ವಿಶ್ರಾಂತಿ ಪಡೆಯುತ್ತದೆ. ಆ.10ರಂದು ಅರಮನೆ ಅಂಗಳ ಪ್ರವೇಶಿಸಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗಾಗಿ  ಜಿಲ್ಲಾಡಳಿತ, ಅರಣ್ಯ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಈ ಬಾರಿಯ ದಸರಾ ಮಹೋತ್ಸವದಲ್ಲಿ 14 ಆನೆಗಳು ಭಾಗವಹಿಸುತ್ತಿದ್ದು, ಮೊದಲ ತಂಡದಲ್ಲಿ ಚಿನ್ನದ ಅಂಬಾರಿ ಹೊರುವ  ಕ್ಯಾಪ್ಟನ್ ಅಭಿಮನ್ಯು, ಅರ್ಜುನ, ಧನಂಜಯ, ಮಹೇಂದ್ರ, ಭೀಮ, ಗೋಪಾಲಸ್ವಾಮಿ, ಚೈತ್ರ, ಕಾವೇರಿ ಹಾಗೂ ಲಕ್ಷ್ಮಿ ಆನೆಗಳು ಆಗಮಿಸಲಿವೆ. ಉಳಿದ 5 ಆನೆಗಳಾದ ವಿಕ್ರಮ, ಗೋಪಿ, ವಿಜಯ, ಶ್ರೀರಾಮ, ಪಾರ್ಥಸಾರಥಿ ಆನೆಗಳು 2ನೇ ತಂಡದಲ್ಲಿ ಆಗಮಿಸಲಿವೆ.

ಈ ಬಾರಿಯ ದಸರಾ ಮಹೋತ್ಸವವನ್ನು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದ್ದು, ಗಜಪಯಣ ಕಾರ್ಯಕ್ರಮಕ್ಕೆ ಸುಮಾರು 5 ಸಾವಿರ ಜನರನ್ನು ಸೇರಿಸಲು ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿದೆ. ಕಳೆದೆರಡು ವರ್ಷಗಳಿಂದ ಕೊರೊನಾ  ಸೋಂಕಿನಿಂದಾಗಿ ಪ್ರಚಾರವಿಲ್ಲದೆ ಆಗಮಿಸುತ್ತಿದ್ದ ಗಜಪಡೆಗೆ ಅಭೂತಪೂರ್ವ ಸ್ವಾಗತದೊಂದಿಗೆ ಬರಮಾಡಿಕೊಳ್ಳಲು ತಯಾರಿ ನಡೆದಿದೆ.

ಕೊರೊನಾ ಸಮಯದಲ್ಲಿ ಗಜ ಪಯಣವನ್ನು ಕೇವಲ ಅಧಿಕಾರಿಗಳೇ ಸೇರಿ ಮಾಡುತ್ತಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಿಂದ ಪೂಜೆ ನೆರವೇರಿಸಿ ಮೈಸೂರಿಗೆ ಆನೆಗಳನ್ನು ಕರೆತರಲಾಗುತ್ತಿತ್ತು. ಆದರೆ, ಈ ಬಾರಿ ಸುಮಾರು 5 ಸಾವಿರ ಜನರನ್ನು ಸೇರಿಸಿ ಆನೆಗಳಿಗೆ ಸ್ವಾಗತ ಕೋರಿ ಬರಮಾಡಿಕೊಳ್ಳಲಾಗುತ್ತಿದೆ. ಈಗಾಗಲೇ ಪ್ರವಾಸೋದ್ಯಮ ಇಲಾಖೆ, ಶಾಲಾ ಕಾಲೇಜುಗಳು, ಮಹಿಳಾ ಸಂಘಗಳಿಗೂ ಮಾಹಿತಿ ನೀಡಿ, ಗಜಪಯಣ ಕಾರ್ಯಕ್ರಮಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲಾಗಿದೆ. ಮೈಸೂರಿನ ವಿವಿಧೆಡೆ ಹಾಗೂ  ಹುಣಸೂರು ಮುಖ್ಯರಸ್ತೆಯಲ್ಲಿ ಸುಮಾರು 20 ಸ್ಥಳಗಳಲ್ಲಿ ದೊಡ್ಡ ದೊಡ್ಡ ಫಲಕಗಳನ್ನು ಪ್ರದರ್ಶಿಸಿ ಗಜಪಯಣಕ್ಕೆ ಸರ್ವರಿಗೂ ಸ್ವಾಗತ ಕೋರಲು ಅರಣ್ಯ ಇಲಾಖೆ ಕಾರ್ಯಕ್ರಮ ರೂಪಿಸಿದೆ.

ಡಿಸಿಎಫ್ ಕರಿಕಾಳನ್ ಮಾತನಾಡಿ ಈ ಬಾರಿಯ ದಸರಾ ಮಹೋತ್ಸವದಲ್ಲಿ 14 ಆನೆಗಳು ಭಾಗವಹಿಸುತ್ತಿದ್ದು, 3 ಹೊಸ ಆನೆಗಳನ್ನು ಮೊದಲ ಬಾರಿಗೆ ಕರೆತರಲಾಗುತ್ತಿದೆ. ಮೊದಲ ತಂಡದಲ್ಲಿ 9 ಆನೆಗಳು ಆಗಮಿಸಲಿದ್ದು, ಉಳಿದ 5 ಆನೆಗಳು 2ನೇ ತಂಡದಲ್ಲಿ ಬರಲಿವೆ. ಎಲ್ಲಾ ಆನೆಗಳ ಆರೋಗ್ಯ ಸ್ಥಿರವಾಗಿದೆ. ಮಾವುತರು, ಕಾವಾಡಿಗರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲಾಗಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದ್ದಾರೆ.

ಈ ಬಾರಿ ದಸರಾದಲ್ಲಿ ಅಭಿಮನ್ಯು  –  57 ವರ್ಷ- ಮತ್ತಿಗೋಡು ಆನೆ ಶಿಬಿರ, ಭೀಮ – 22-ವರ್ಷ-ಮತ್ತಿಗೋಡು ಆನೆ ಶಿಬಿರ, ಮಹೇಂದ್ರ – 39 ವರ್ಷ-ಮತ್ತಿಗೋಡು ಆನೆ ಶಿಬಿರ, ಗೋಪಾಲಸ್ವಾಮಿ  – 39 ವರ್ಷ-ಮತ್ತಿಗೋಡು ಆನೆ ಶಿಬಿರ, ಅರ್ಜುನ – 63 ವರ್ಷ- ಬಳ್ಳೆ ಆನೆ ಶಿಬಿರ, ವಿಕ್ರಮ – 59 ವರ್ಷ – ದುಬಾರೆ ಆನೆ ಶಿಬಿರ, ಧನಂಜಯ – 44 ವರ್ಷ – ದುಬಾರೆ ಆನೆ ಶಿಬಿರ, ಕಾವೇರಿ – 45 ವರ್ಷ – ದುಬಾರೆ ಆನೆ ಶಿಬಿರ, ಗೋಪಿ – 41 ವರ್ಷ – ದುಬಾರೆ ಆನೆ ಶಿಬಿರ, ಶ್ರೀರಾಮ – 40 ವರ್ಷ – ದುಬಾರೆ ಆನೆ ಶಿಬಿರ, ವಿಜಯ – 63 ವರ್ಷ – ದುಬಾರೆ ಆನೆ ಶಿಬಿರ, ಚೈತ್ರ – 49 ವರ್ಷ – ರಾಮಾಪುರ ಆನೆ ಶಿಬಿರ, ಲಕ್ಷ್ಮಿ – 21 ವರ್ಷ – ರಾಮಾಪುರ ಆನೆ ಶಿಬಿರ, ಪಾರ್ಥಸಾರಥಿ 18 ವರ್ಷ – ರಾಮಾಪುರ ಆನೆ ಶಿಬಿರ ಭಾಗವಹಿಸಲಿವೆ.

ಗಜಪಯಣ ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಅರಣ್ಯ ಸಚಿವ ಉಮೇಶ್ ಕತ್ತಿ, ಮೇಯರ್  ಸುನಂದಾ ಪಾಲನೇತ್ರ, ಶಾಸಕ ಎಚ್.ಪಿ.ಮಂಜುನಾಥ್, ಸಂಸದ ಪ್ರತಾಪಸಿಂಹ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.

Sneha Gowda

Recent Posts

ತೀರ್ಥಯಾತ್ರೆಗೆ ಬಂದ ನಾಲ್ವರು ನದಿಯಲ್ಲಿ ಮುಳುಗಿ ದಾರುಣ ಸಾವು

ತೀರ್ಥಯಾತ್ರೆಗೆಂದು ಅತಿಥಿ ಗೃಹಕ್ಕೆ ಬಂದಿದ್ದವರು ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಲ್ಲಾಪುರದ ಕಾಗಲ್ ತಾಲೂಕಿನ…

18 mins ago

ಪ್ರಾಚೀನರ ಕಲಾ ಕೊಡುಗೆಗಳ ಸಂರಕ್ಷಣೆ ಅಗತ್ಯ: ನೇಮಿರಾಜ ಶೆಟ್ಟಿ

ಇತಿಹಾಸವನ್ನು ಚಿತ್ರಗಳ ಮೂಲಕ ಜೋಪಾಸನೆ ಮಾಡುವ ಕಾಯಕವೂ ಅತ್ಯಂತ ಶ್ರೇಷ್ಠ. ಮುಂದಿನ ಪೀಳಿಗೆಗೆ ಪ್ರಾಚೀನರ ಕಲಾ ಕೊಡುಗೆಯನ್ನು ಸಂರಕ್ಷಣೆ ಮಾಡುವುದು…

23 mins ago

ಮತ್ತೆ ವಿವಾದಕ್ಕೆ ಸಿಲುಕಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ

ಒಂದು ವರ್ಷದ ಸಾಧನೆಯ ರಿಪೋರ್ಟ್ ಕಾರ್ಡ್ ಹಿಡಿದು ಹಿರಿಯ ಬಿಜೆಪಿ ಮುಖಂಡರ ಬಳಿ ಶಾಸಕ ಅಶೋಕ್ ಕುಮಾರ್ ರೈ ತೆರಳಿದ್ದು, ಶಾಸಕ…

33 mins ago

ಚಾಮರಾಜನಗರ: ಹಾಸನೂರು ಘಾಟ್ ಬಳಿ ಕಾರು ಪಲ್ಟಿ

ಜಿಲ್ಲೆಗೆ ಹೊಂದಿಕೊಂಡಿರುವ ತಮಿಳುನಾಡಿನ ಹಾಸನೂರು ಘಾಟ್ ಬಳಿ ಕಾರೊಂದು ಪಲ್ಟಿಯಾದ ಘಟನೆ ನಡೆದಿದೆ.

53 mins ago

ಫ್ಲಾಟ್‌ಗಳನ್ನು ನಿರ್ಮಿಸಲು 8 ಮರಗಳನ್ನು ಕಡಿದ ಬಿಲ್ಡರ್ ವಿರುದ್ಧ ಎಫ್‌ಐಆರ್

ಫ್ಲಾಟ್‌ಗಳನ್ನು ನಿರ್ಮಿಸಲು ಎಂಟು ಮರಗಳನ್ನು ಕಡಿದ ಆರೋಪದ ಮೇಲೆ ಆಂಧ್ರಪ್ರದೇಶ ಮೂಲದ ಬಿಲ್ಡರ್ ವಿರುದ್ಧ ಬಿಬಿಎಂಪಿ ಅರಣ್ಯ ವಿಭಾಗವು ಎಫ್‌ಐಆರ್…

1 hour ago

ಸಾರಿಗೆ ಬಸ್‌, ಬೊಲೆರೋ ಗೂಡ್ಸ್‌ ವಾಹನ ಮಧ್ಯೆ ಅಪಘಾತ: ಇಬ್ಬರಿಗೆ ಗಾಯ

ಪಟ್ಟಣದ ಬೈಪಾಸ್‌ ಬಳಿ ಅಣ್ಣಿಗೇರಿಯಿಂದ ಹುಬ್ಬಳ್ಳಿ ರಸ್ತೆಗೆ ಸೇರುವ ರಸ್ತೆ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಸಾರಿಗೆ ಬಸ್‌ ಮತ್ತು ತರಕಾರಿ…

2 hours ago