News Karnataka Kannada
Saturday, April 20 2024
Cricket
ಮೈಸೂರು

ಮೈಸೂರಿನ ವೀಳ್ಯದೆಲೆ, ಮಲ್ಲಿಗೆ, ರಸಬಾಳೆ ಬೆಳೆಯಲು ಉತ್ತೇಜನ

Encouragement to grow betel leaves, jasmine, rasabale in Mysore
Photo Credit : By Author

ಮೈಸೂರು: ಮೈಸೂರು ವೀಳ್ಯದೆಲೆ, ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ ಮೈಸೂರಿನ ಭೌಗೋಳಿಕ ವಿಶೇಷತೆಯ ಹೆಗ್ಗುರುತುಗಳಾಗಿದ್ದು, ವಿಶ್ವದೆಲ್ಲೆಡೆ ಮೈಸೂರು ಕಂಪು ಸೂಸಿವೆ. ಮುಂದಿನ ಪೀಳಿಗೆಗೂ ಇವುಗಳ ಸಂರಕ್ಷಣೆ ಮಾಡುವ ಉದ್ದೇಶದಿಂದ ರೈತರು ಇವುಗಳನ್ನು ಹೆಚ್ಚಾಗಿ ಬೆಳೆಯುವಂತೆ ಪ್ರೇರೇಪಿಸಲು ರಾಜ್ಯ ಸರ್ಕಾರ ಹಾಗೂ ತೋಟಗಾರಿಕೆ ಇಲಾಖೆ ಮುಂದಾಗಿದೆ.

ಮೈಸೂರು ವೀಳ್ಯದೆಲೆ, ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ ಕೇವಲ ನಮ್ಮ ಭೌಗೋಳಿಕ ಹೆಗ್ಗುರುತುಗಳು ಮಾತ್ರವಲ್ಲ, ನಮ್ಮ ಪರಂಪರೆಯೂ ಹೌದು. ಕರ್ನಾಟಕದ 42 ವಿಶೇಷತೆಗಳಿಗೆ ಜಿಐ (ಜಿಯಾಗ್ರಫಿಕಲ್ ಇಂಡಿಕೇಷನ್) ಟ್ಯಾಗ್ ಸಿಕ್ಕಿದ್ದು, ಅದರಲ್ಲಿ ಮೈಸೂರಿನ 18 ಉತ್ಪನ್ನಗಳು ಸ್ಥಾನ ಪಡೆದಿರುವುದು ವಿಶೇಷ. ಈ ಪೈಕಿ ಒಂದು ಕಾಲದಲ್ಲಿ ಮೈಸೂರಿನ ಅಸ್ಮಿತೆಯಾಗಿ ಜನಮಾನಸದಲ್ಲಿ ನೆಲೆಯೂರಿದ್ದ ಜನಪ್ರಿಯ ಉತ್ಪನ್ನಗಳಾದ ಮೈಸೂರು ಮಲ್ಲಿಗೆ, ನಂಜನಗೂಡು ರಸಬಾಳೆ ಹಾಗೂ ಮೈಸೂರು ವೀಳ್ಯದೆಲೆ ಪರಂಪರೆ ಕಣ್ಮರೆಯಾಗುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ಮತ್ತು ತೋಟಗಾರಿಕೆ ಇಲಾಖೆ ಮುಂದಾಗಿದೆ.

ಈ ವಿಶೇಷಗಳನ್ನು ಮುಂದಿನ ತಲೆಮಾರಿನವರೆಗೂ ಕಾಪಾಡುವ, ಇದರ ಬಗ್ಗೆ ಯುವಜನರಿಗೆ ತಿಳಿಸುವ, ಸಂಬಂಧಿಸಿದ ರೈತರು, ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆ ಇವುಗಳಿಗೆ ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಬೆಳೆಯುವಂತೆ ರೈತರಲ್ಲಿ ಉತ್ತೇಜನ ನೀಡುತ್ತಿದೆ.

ನಂಜನಗೂಡು ತಾಲೂಕಿನ ದೇವರಸನಹಳ್ಳಿ ಭಾಗದಲ್ಲಿ 15 ಎಕರೆ ಜಾಗದಲ್ಲಿ 10 ರೈತರು ರಸಬಾಳೆ ಬೆಳೆಯುತ್ತಿದ್ದಾರೆ. ಬೇರೆ ಕಡೆ ಈ ರಸಬಾಳೆ ಬೆಳೆದರೆ ತಿರುಳು ಗಂಟಾಗುತ್ತದೆ. ಜತೆಗೆ ಅಷ್ಟು ರುಚಿ ಇರುವುದಿಲ್ಲ. ಕಪ್ಪು, ಮೆಕ್ಕಲು ಹಾಗೂ ಲವಣಯುಕ್ತ ಮಣ್ಣು ಈ ತಳಿಗೆ ತುಂಬಾ ಮುಖ್ಯ. ಹೀಗಾಗಿ ಇದೇ ಭಾಗದಲ್ಲಿ 5 ಎಕರೆಯಲ್ಲಿ ಇಲಾಖೆಯಿಂದ ನಂಜನಗೂಡು ರಸಬಾಳೆ ಬೆಳೆಸಲಾಗುತ್ತಿದೆ. ಸದ್ಯ ತೋಟಗಾರಿಕೆ ಇಲಾಖೆಯಿಂದ ಇನ್ನೂ ಹೆಚ್ಚುವರಿ 20 ರೈತರಿಗೆ ತಲಾ 500 ರಸಬಾಳೆಯ ಗಿಡಗಳನ್ನು ವಿತರಣೆ ಮಾಡಲಾಗಿದೆ.

ಸದ್ಯ ಮೈಸೂರು ತಾಲೂಕಿನ ಇಲವಾಲದ ಸಮೀಪದಲ್ಲಿ ಮಾತ್ರ ಮೈಸೂರು ಮಲ್ಲಿಗೆ ಬೆಳೆಯುತ್ತಿದ್ದಾರೆ. ಆದರೆ, ಮಲ್ಲಿಗೆ ತಳಿ ಬಿತ್ತನೆ ದುಬಾರಿಯಾಗಿದೆ. ಬೆಳೆ ನಿರ್ವಹಣೆಗೂ ಹೆಚ್ಚು ಹಣ ಖರ್ಚಾಗುತ್ತದೆ. ಹೀಗಾಗಿ ರೈತರು ಮೈಸೂರು ಮಲ್ಲಿಗೆಯಿಂದ ವಿಮುಖರಾಗಿದ್ದಾರೆ. ಕೇವಲ ಒಂದು ಎಕರೆ ಜಾಗದಲಿ ಒಬ್ಬ ರೈತರು ಬೆಳೆಯುತ್ತಿದ್ದರು. ಹೀಗಾಗಿ ಹುಣಸೂರು ತಾಲೂಕು ಬಿಳಿಕೆರೆ ಹೋಬಳಿ ಬಳಿ ನಾಲ್ಕು ಎಕರೆ ಜಾಗದಲ್ಲಿ ಮೈಸೂರು ಮಲ್ಲಿಗೆ ಬೆಳೆಸಲಾಗುತ್ತಿದೆ. ತೋಟಗಾರಿಕೆ ಇಲಾಖೆಯಿಂದ 15 ರೈತರಿಗೆ ಮಲ್ಲಿಗೆ ಗಿಡ ನೀಡಲಾಗಿದೆ.

ಮೈಸೂರು ವೀಳ್ಯದೆಲೆಗೆ ದೇಶ ಹಾಗೂ ರಾಜ್ಯದಲ್ಲಿ ತನ್ನದೇ ಆದ ವೈಶಿಷ್ಟೃವಿದೆ. ಜಿಲ್ಲೆಯಲ್ಲಿ ವೀಳ್ಯದೆಲೆ ಬೆಳೆಗೆ ಪೂರಕ ವಾತಾವರಣ, ನೀರು, ಭೂಮಿ ಎಲ್ಲವೂ ಇದೆ. ಆದರೆ, ಬೆಲೆ ಮತ್ತು ಮಾರುಕಟ್ಟೆ ಸಮಸ್ಯೆ ಎದುರಾಗಿದೆ. ಜಿಲ್ಲೆಯಲ್ಲಿ ಹೆಚ್ಚಾಗಿ ಮೈಸೂರು ತಾಲೂಕಿನ ಜಯಪುರ ಹೋಬಳಿಯ ಉದ್ಬೂರು, ಮಾರ್ಬಳ್ಳಿ, ಟಿ.ಕಾಟೂರು, ಗುಮಚನಹಳ್ಳಿ, ಕೆಲ್ಲಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ವೀಳ್ಯದೆಲೆ ಬೆಳೆಯಲಾಗುತ್ತಿದೆ. ಉದ್ಬೂರು ಗ್ರಾಮದಲ್ಲಿ ವೀಳ್ಯದೆಲೆ ಮಾರುಕಟ್ಟೆ ಇದ್ದು, ಪ್ರತಿ ದಿನ ಸಂಜೆ ವ್ಯಾಪಾರ ನಡೆಯುತ್ತದೆ. ಮೈಸೂರು ವೀಳ್ಯದೆಲೆ ತನ್ನ ವಿಶಿಷ್ಟ ರುಚಿಯಿಂದಾಗಿ ರಾಜ್ಯದೆಡೆ ಹೆಸರು ಪಡೆದಿದೆ. ನಗರೀಕರಣದ ಪರಿಣಾಮ ಮೈಸೂರಿನಲ್ಲಿ ವೀಳ್ಯದೆಲೆ ಬೆಳೆಯಲು ಜಾಗದ ಕೊರತೆ ಉಂಟಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು