News Karnataka Kannada
Wednesday, April 24 2024
Cricket
ಮೈಸೂರು

ಮೈಸೂರು: ಆಷಾಢ ಶುಕ್ರವಾರಕ್ಕೆ ಚಾಮುಂಡಿಬೆಟ್ಟ ಸಜ್ಜು

Chamundi Hill gears up for Ashadha Friday, free bus
Photo Credit : By Author

ಮೈಸೂರು: ಪ್ರತಿ ವರ್ಷದಂತೆ ಈ ಬಾರಿಯೂ ಆಷಾಢ ಮಾಸದ ಮೊದಲ ಶುಕ್ರವಾರದ ಕಾರ್ಯಕ್ರಮಕ್ಕೆ ಚಾಮುಂಡಿಬೆಟ್ಟ ಸರ್ವ ರೀತಿಯಲ್ಲಿಯೂ ಸಜ್ಜಾಗುತ್ತಿದ್ದು, ದೇವಿ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ನಗರದ ಲಲಿತಮಹಲ್‌ನಿಂದ ಬೆಟ್ಟಕ್ಕೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಗುರುವಾರ ಸಂಜೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಆಷಾಢ ಮಾಸದ ಪ್ರತಿ ಶುಕ್ರವಾರ ಹಾಗೂ ವರ್ಧಂತ್ಯುತ್ಸವದಂದು ಬೆಟ್ಟದಲ್ಲಿ ದೇವಿಗೆ ವಿಶೇಷ ಪೂಜೆ ನೆರವೇರುವ ಹಿನ್ನೆಲೆ ರಾಜ್ಯದ ವಿವಿಧ ಭಾಗಗಳಿಂದ ಹಾಗೂ ಹೊರ ರಾಜ್ಯಗಳಿಂದ ಲಕ್ಷಾಂತರ ಮಂದಿ ಭಕ್ತರದಂಡು ಚಾಮುಂಡಿ ಬೆಟ್ಟಕ್ಕೆ ಹರಿದು ಬರಲಿದೆ. ಈ ಹಿನ್ನೆಲೆ ಭಕ್ತರು ಸುಗಮವಾಗಿ ದೇವಿ ದರ್ಶನ ಪಡೆಯಲು ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಪಾಲಿಕೆ ಸೇರಿದಂತೆ ಎಲ್ಲಾ ಇಲಾಖೆಗಳು ಸರ್ವ ಸಿದ್ಧತೆಯನ್ನು ಮಾಡಿಕೊಂಡಿವೆ ಎಂದು ಹೇಳಿದರು.

ಆಷಾಢ ಶುಕ್ರವಾರಗಳಂದು ಬೆಟ್ಟಕ್ಕೆ ಲಕ್ಷಾಂತರ ಮಂದಿ ಭಕ್ತರು ಭೇಟಿ ನೀಡುವ ಹಿನ್ನೆಲೆ ವಾಹನ ದಟ್ಟಣೆಯಾಗುವುದರಿಂದ ಅದನ್ನು ತಡೆಯುವ ಸಲುವಾಗಿ ಚಾಮುಂಡಿ ಬೆಟ್ಟಕ್ಕೆ ಖಾಸಗಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ. ಹಾಗೆಯೇ ಲಲಿತ ಮಹಲ್ ಅರಮನೆ ಬಳಿಯಿಂದ 40 ಬಸ್‌ಗಳು ಬೆಟ್ಟಕ್ಕೆ ಉಚಿತ ಸೇವೆ ಕಲ್ಪಿಸಲಿವೆ. ಲಲಿತ್ ಮಹಲ್‌ನಿಂದ ಬೆಳಗ್ಗೆ 5ರಿಂದ 8ಗಂಟೆಯವರೆಗೆ ಸಾರಿಗೆ ಬಸ್‌ಗಳು ಭಕ್ತರನ್ನು ಉಚಿತವಾಗಿ ಬೆಟ್ಟಕ್ಕೆ ಕರೆದೊಯ್ಯಲಿವೆ. ಬೆಟ್ಟದಲ್ಲಿ ಜನದಟ್ಟಣೆ ನಿಯಂತ್ರಿಸುವ ಸಲುವಾಗಿ 8 ಗಂಟೆಯ ನಂತರ ಉಚಿತ ಬಸ್ ಸೇವೆ ಬಂದ್ ಆಗಲಿದೆ. ಸಾರ್ವಜನಿಕರು ತಮ್ಮ ವಾಹನಗಳನ್ನು ಲಲಿತ್ ಮಹಲ್ ಬಳಿ ನಿಲುಗಡೆ ಮಾಡಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

ಈ ಬಾರಿಯೂ ಭಕ್ತರುಚಾಮುಂಡಿ ಬೆಟ್ಟಕ್ಕೆ ಮೆಟ್ಟಿಲು ಮೂಲಕ ತೆರಳಲು ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಮುಂಜಾನೆ 3 ಗಂಟೆಯ ನಂತರ ಮೆಟ್ಟಿಲುಗಳ ಮೂಲಕ ಬೆಟ್ಟ ಏರಲು ಅವಕಾಶ ಕಲ್ಪಿಸಲಾಗಿದೆ. ಮೆಟ್ಟಿಲು ಮಾರ್ಗದಲ್ಲಿ ಜನದಟ್ಟಣೆ ಹೆಚ್ಚುವ ಕಾರಣ ಮೆಟ್ಟಿಲು ಮೂಲಕ ಬೆಟ್ಟ ಏರಿದವರು ವಾಪಾಸ್ ಅದೇ ಮಾರ್ಗದಲ್ಲಿ ಬಾರದೇ, ಬಸ್ ಮೂಲಕ ಕೆಳಕ್ಕೆ ಬರುವಂತೆ ಭಕ್ತರಲ್ಲಿ ಮನವಿ ಮಾಡಿದರು.

ಆಷಾಢ ಶುಕ್ರವಾರದಂದು ವಿಶೇಷ ದರ್ಶನ ಪಡೆಯಲು 50 ಮತ್ತು 300 ರೂ. ದರ ನಿಗದಿಪಡಿಸಲಾಗಿದೆ. 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ 50 ರೂ. ಕೌಂಟರ್‌ನಲ್ಲಿ ಯಾವುದೇ ಉಚಿತವಾಗಿ ದೇವಿ ದರ್ಶನ ಪಡೆಯುವ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ ಅನ್ನಸಂತರ್ಪಣೆ ಮಾಡುವ ದಾನಿಗಳಿಗೆ ಮಲ್ಟಿಲೆವಲ್ ವಾಹನ ಪಾರ್ಕಿಂಗ್ ಸ್ಥಳ ಹಾಗೂ ಮಹಿಷಾಸುರ ಪ್ರತಿಮೆ ಎದುರಿನ ಖಾಲಿ ಜಾಗದಲ್ಲಿ ವ್ಯವಸ್ಥೆ ಮಾಡಲಾಗಿದೆ ಎಂದರು.

ಬೆಟ್ಟದ ಪರಿಸರವನ್ನು ನೈರ್ಮಲ್ಯದಿಂದ ಇಟ್ಟುಕೊಳ್ಳುವ ಸಲುವಾಗಿ ಈ ಬಾರಿ ಪ್ಲಾಸ್ಟಿಕ್ ಮುಕ್ತ ಆಷಾಢ ಆಚರಣೆಗೆ ಒತ್ತು ನೀಡಲಾಗಿದೆ. ಬೆಟ್ಟಕ್ಕೆ ಬರುವ ಭಕ್ತರು ಪ್ಲಾಸ್ಟಿಕ್ ಮತ್ತು ಇತರೆ ಕಸವನ್ನು ಎಲ್ಲೆಂದರಲ್ಲಿ ಎಸೆಯದೇ ನಿಗದಿಪಡಿಸಿದ ಸ್ಥಳದಲ್ಲಿ ಹಾಕಬೇಕು. ಇದಕ್ಕಾಗಿ ಗ್ರೀನ್ ವಾರಿಯರ್ಸ್‌ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಜತೆಗೆ ಹೆಚ್ಚುವರಿ ಶೌಚಾಲಯ ವ್ಯವಸ್ಥೆ ಸೇರಿದಂತೆ ಸ್ವಚ್ಛತೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಈ ಬಾರಿ ಬೆಟ್ಟಕ್ಕೆ ತೆರಳುವ ಸಾರಿಗೆ ಬಸ್‌ಗಳು ಕುರುಬಾರಳ್ಳಿ ಸರ್ಕಲ್ ಮೂಲಕ ಹಾದು ಹೋಗುವ ಮುಖ್ಯ ರಸ್ತೆಯಲ್ಲೇ ಸಾಗಬೇಕು. ಇದರ ಹೊರತಾಗಿ ಬೇರೆ ಖಾಸಗಿ ವಾಹನಗಳ ಪ್ರವೆಶವನ್ನು ನಿಷೇಧಿಸಲಾಗಿದೆ. ಗಣ್ಯರು, ಜನಪ್ರತಿನಿಧಿಗಳು, ವಿವಿಐಪಿಗಳು ತೆರಳಲು ಬೆಟ್ಟದ ಮೊದಲ ಗೇಟ್‌ನಲ್ಲಿ ಪೊಲೀಸ್ ಅಧಿಕಾರಿಗಳು ಪಾಸ್ ನೀಡಲಿದ್ದಾರೆ. ಇದನ್ನು ಪಡೆದು ದೇವಿ ದರ್ಶನ ಪಡೆಯಬಹುದಾಗಿದೆ ಎಂದು ತಿಳಿಸಿದರು.

ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಮಾತನಾಡಿ, ಆಷಾಢ ಮಾಸದ ಶುಕ್ರವಾರಗಳಂದು ಲಕ್ಷಾಂತರ ಮಂದಿ ಭಕ್ತರು ಬೆಟ್ಟಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಯಾವುದೇ ಸಮಸ್ಯೆಯಾಗದಂತೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ. ಇದಕ್ಕಾಗಿ 1200 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಬಳಕೆ ಮಾಡಿಕೊಳ್ಳಲಾಗಿದೆ. ಅಶ್ವದಳ, ನಗರ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ಇರಲಿದ್ದಾರೆ. ಜತೆಗೆ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುವವರ ಹಾಗೂ ಪಿಕ್‌ಪಾಕೆಟ್ ರವರ ಮೇಲೆ ನಿಗಾ ಇಡುವ ಸಲುವಾಗಿ ಹಲವು ಸಿಬ್ಬಂದಿ ಮಫ್ತಿಯಲ್ಲಿ ಇರಲಿದ್ದಾರೆ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು