News Karnataka Kannada
Thursday, April 18 2024
Cricket
ಮೈಸೂರು

ಮೈಸೂರು: ಮಹಾಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸಿದ ಚಾಮುಂಡೇಶ್ವರಿ

Chamundeshwari adorned with Mahalakshmi decorations
Photo Credit : News Kannada

ಮೈಸೂರು: ಚಾಮುಂಡಿಬೆಟ್ಟಕ್ಕೆ 3ನೇ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಆಗಮಿಸಿದ ಸಹಸ್ರಾರು ಭಕ್ತರು ಮಹಾಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದು ಪುನೀತರಾದರು.

ಜಿಲ್ಲೆ, ರಾಜ್ಯ, ಹೊರರಾಜ್ಯದ ಭಕ್ತರು ಮುಂಜಾನೆಯಿಂದಲೇ ಬೆಟ್ಟಕ್ಕೆ ಬಂದು ಸರತಿ ಸಾಲಿನಲ್ಲಿ ನಿಂತಿದ್ದರು. ಕೆಲವರು, ಮೆಟ್ಟಿಲುಗಳ ಮೂಲಕ ಬಂದರೆ ಇನ್ನು ಕೆಲವರು ಸಾರಿಗೆ ಬಸ್‌ನಲ್ಲಿ ಬೆಟ್ಟಕ್ಕೆ ಆಗಮಿಸಿದರು. ಉಚಿತ ಪ್ರವೇಶ, 50 ರೂ, 100 ರೂ, 300ರೂಗಳ ಸರತಿ ಸಾಲಿನಲ್ಲಿ ನಿಂತು ಸಾವದಾನವಾಗಿ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆದರು. ಸರತಿ ಸಾಲಿನುದ್ದಕ್ಕೂ ಚಾಮುಂಡೇಶ್ವರಿಯ ಜಯಘೋಷಗಳು ಮೊಳಗಿದವು.

ಮುಂಜಾನೆ ಮೂರು ಗಂಟೆಯಿಂದಲೇ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾದವು. ಮೊದಲು ಚಾಮುಂಡೇಶ್ವರಿ ವಿಗ್ರಹವನ್ನು ಶುದ್ಧಗೊಳಿಸಿ, ಬಳಿಕ ವಿಶೇಷವಾಗಿ ಅಲಂಕಾರ ಮಾಡಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ದೇವಾಲಯದ ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ಏಕದಶ ಪುಷ್ಪಾರ್ಚನೆ, ಸಹಸ್ರನಾಮಾರ್ಚನೆ ಸೇರಿ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು. ಬಳಿಕ 5.30ರಿಂದ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು. ಈ ಮಧ್ಯೆ ಬೆಳಗ್ಗೆ 9.30ಕ್ಕೆ ಮಹಾಮಂಗಳಾರತಿ, ಸಂಜೆ 6.30ರಿಂದ 7ರವರೆಗೆ ಅಭಿಷೇಕ ನೆರವೇರಿಸಲಾಯಿತು. ರಾತ್ರಿ 9 ಗಂಟೆವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ದರ್ಶನದ ವೇಳೆ ಯಾವುದೇ ನೂಕು ನುಗ್ಗಲಿಗೆ ಅವಕಾಶವಾಗದಂತೆ ಸೂಕ್ತ ವ್ಯವಸ್ಥೆ ಮಾಡಲಾಗಿತ್ತು.

ಎಂದಿನಂತೆ ಮೂರನೇ ಆಷಾಢ ಶುಕ್ರವಾರವೂ ದೇವಾಲಯದ ಆವರಣವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ತಾಯಿ ಚಾಮುಂಡೇಶ್ವರಿ ವಿಶೇಷ ಮಹಾಲಕ್ಷ್ಮಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದಳು. ನೀಲಿ ಬಾಡರಿನ ಹಸಿರು ಸೀರೆಯುಟ್ಟ ಚಾಮುಂಡಿಯನ್ನು ನೋಡಲು ಭಕ್ತರು ಮುಗಿಬಿದ್ದರು. ದೇವಾಲಯದ ಇಡೀ ಆವರಣ ವಿಶೇಷ ಹೂಗಳಿಂದ ಕಂಗೊಳಿಸುತ್ತಿತ್ತು. ಪ್ರವೇಶ ದ್ವಾರದಿಂದ ದೇವಸ್ಥಾನದ ಗರ್ಭಗುಡಿವರೆಗೆ ಹೂವುಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ಆರ್ಕಿಡ್ ಹೂ, ಗುಲಾಬಿ, ಸೇವಂತಿಗೆ, ಚೆಂಡು ಹೂ ಸೇರಿದಂತೆ ನಾನಾ ಬಗೆಯ ಹೂಗಳಿಂದ ದೇವಸ್ಥಾನದ ಆವರಣ ಕಂಗೊಳಿಸುತ್ತಿತ್ತು. ಹೂವಿನಿಂದ ಚಾಮುಂಡೇಶ್ವರಿ ಅಮ್ಮ ಎಂದು ಅಲಂಕಾರ ಮಾಡಲಾಗಿತ್ತು. ಸಾರ್ವಜನಿಕರು ತಮ್ಮ ಮೊಬೈಲ್‌ಗಳಲ್ಲಿ ಫೋಟೋ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಕಳೆದ ಎರಡು ವಾರಗಳಿಗೆ ಹೋಲಿಸಿದರೆ 3ನೇ ವಾರದ ಹೂವಿನ ಅಲಂಕಾರ ಅತ್ಯಂತ ಸುಂದರವಾಗಿತ್ತು.

ಬೆಟ್ಟಕ್ಕೆ ಆಗಮಿಸಿದ ಭಕ್ತರಿಗೆ ಮಲ್ಟಿ ಲೆವೆಲ್ ಪಾರ್ಕಿಂಗ್ ಸ್ಥಳದಲ್ಲಿ ದೇವುಬಾಯಿ ರಾಜಾ ವೈದ್ಯಪಂಡಿತ್ ಪಿ.ಹೆಚ್.ಚಂದ್ರಬಾನ್ ಸಿಂಗ್ ಮೆಮೋರಿಯಲ್ ಹರ್ಬಲ್ ಗಾರ್ಡನ್ ಮತ್ತು ಹೋಲಿಸ್ಟಿಕ್ ಹಾಸ್ಪಿಟಲ್ ಕಾಂಪ್ಲೆಕ್ಸ್ ಟ್ರಸ್ಟ್ ವತಿಯಿಂದ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಕೇಸರಿಬಾತ್, ಬಾತ್, ಅಲಸಂದೆ ಹುಳಿ, ಅನ್ನ ಸಾಂಬಾರ್, ಮೊಸರು ವಿತರಿಸಲಾಯಿತು. ಬೆಳಗ್ಗೆ 8ರಿಂದ ರಾತ್ರಿ 7 ಗಂಟೆಯವರೆಗೂ ಪ್ರಸಾದ ನೀಡಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು