ಮೈಸೂರು: ಬಿ.ವೈ.ವಿಜಯೇಂದ್ರ ತಾತ್ಕಾಲಿಕ ಅಧ್ಯಕ್ಷ, ಜೂನ್ ನಂತರ ಅಧಿಕಾರದಲ್ಲಿ ಉಳಿಯಲ್ಲ. ಲಿಂಗಾಯತರು ಬಿಜೆಪಿ ಬಿಟ್ಟಿದ್ದಾರೆಂದು ಪ್ರಧಾನಿ ಮೋದಿ, ಅಮಿತ್ ಶಾ ಮಾಡಿರುವ ನಾಟಕ. ನಾಟಕದ ಸ್ಕ್ರಿಪ್ಟ್ ರಚನೆ ಮಾಡಿ ಬಿವೈ ವಿಜಯೇಂದ್ರ ಅವರಿಗೆ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ ಎಂದು ಕೆ.ಪಿ.ಸಿ.ಸಿ ವಕ್ತಾರ ಎಂ ಲಕ್ಷ್ಮಣ್ ಹೇಳಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮೈಸೂರಿನಲ್ಲಿ ಮಾತನಾಡಿದ ಅವರು ಜೂನ್ ನಂತರ ಬಿವೈ ವಿಜಯೇಂದ್ರ ಅಧ್ಯಕ್ಷರಾಗಿ ಉಳಿಯಲ್ಲ. ಜೂನ್ ನಂತರ ಬಿಜೆಪಿ ಅಧ್ಯಕ್ಷರಾಗಲು ಬಿಡಲ್ಲ. ಬಿವೈ ವಿಜಯೇಂದ್ರ ತಾತ್ಕಾಲಿಕ ಅಧ್ಯಕ್ಷ ಅಷ್ಟೇ ಎಂದರು. ಲಿಂಗಾಯತ ಸಮುದಾಯವನ್ನು ಸಮಾಧಾನ ಮಾಡಲು ಆಡಿರುವ ನಾಟಕ. ನಾಟಕವನ್ನ ನಂಬಿ ಲಿಂಗಾಯತರು ಯಾಮಾರಬೇಡಿ ಎಂದು ಹೇಳಿದ್ದಾರೆ.
ಈಗಾಗಲೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಿ.ಸಿ.ಪಾಟೀಲ್, ನಿರಾಣಿ, ಬಸವರಾಜ ಬೊಮ್ಮಾಯಿಗೆ ಪರ್ಮನೆಂಟ್ ರೆಸ್ಟ್ ಕೊಟ್ಟಿದ್ದಾರೆ. ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿಯನ್ನು ಹೊರಗೆ ಕಳಿಸಿದರು. ಸಿ.ಸಿ.ಪಾಟೀಲ್ ಕಥೆ ಮುಗಿಸಿದ್ದಾರೆ. ಈಗ ಬಿವೈ ವಿಜಯೇಂದ್ರ ಅವರನ್ನು ಮುಗಿಸಲು ತಾತ್ಕಾಲಿಕ ಅಧ್ಯಕ್ಷ ಸ್ಥಾನ ಕೊಟ್ಟಿದ್ದಾರೆ ಎಂದು ಹೇಳಿದರು.