News Karnataka Kannada
Monday, April 29 2024
ಮೈಸೂರು

ಶೋಷಣೆಯ ಅಗ್ನಿಕುಂಡದಲ್ಲಿ ಅರಳಿದ ಹೂವು ಸಾವಿತ್ರಿಬಾಪುಲೆ; ಸಾಹಿತಿ ಬನ್ನೂರು ಕೆ.ರಾಜು

School Program
Photo Credit :

ಮೈಸೂರು : ಶತಮಾನಗಳ ಹಿಂದೆ ಜಾತಿ, ಮತ, ಧರ್ಮ ಹಾಗೂ ಅಸಮಾನತೆಯ ಪುರುಷ ಪ್ರಧಾನ ಸಮಾಜದಲ್ಲಿ ತಾನು ಶೋಷಣೆಯ ಅಗ್ನಿಕುಂಡದಲ್ಲಿ ಉರಿದು ಬೆಂದರೂ ಅನಕ್ಷರಸ್ಥರ ಎದೆಯಲ್ಲಿ ಅಕ್ಷರದ ಬೀಜ ಬಿತ್ತಿ ಶೋಷಿತರ ಮತ್ತು ಮಹಿಳೆಯರ ಶಿಕ್ಷಣಕ್ಕೆ ಮುನ್ನುಡಿ ಬರೆದವರು ಅಕ್ಷರದ ಜಗಜ್ಜನನಿ ಸಾವಿತ್ರಿಬಾಯಿಪುಲೆ ಎಂದು ಸಾಹಿತಿ ಬನ್ನೂರು ಕೆ.ರಾಜು ಹೇಳಿದರು.

ನಗರದ ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬಳಗದ ಸಂಯುಕ್ತ ಆಶ್ರಯದಲ್ಲಿ ಚಾಮುಂಡಿಬೆಟ್ಟದಲ್ಲಿನ ಟಿ. ಎಸ್. ಸುಬ್ಬಣ್ಣ ಸಾರ್ವಜನಿಕ ಬಾಲಕಿಯರ ವಸತಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಮತ್ತು ರಾಷ್ಟ್ರಕವಿ ಕುವೆಂಪು ಜಯಂತಿ ಕಾರ್ಯಕ್ರಮವನ್ನು ಸಾವಿತ್ರಿ ಬಾಪುಲೆ ಹಾಗೂ ಕುವೆಂಪು ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಮೇಲ್ಜಾತಿ-ಕೆಳಜಾತಿ ಗಂಡು-ಹೆಣ್ಣು ಎಂಬ ತಾರತಮ್ಯಗಳ ನಡುವೆ ಅರಿವು – ಅಕ್ಷರಗಳಿಲ್ಲದೆ ಮನುಷ್ಯರು ಪ್ರಾಣಿಗಳಿಗಿಂತ ಕಡೆಯಾಗಿ ಬದುಕುತ್ತಿದ್ದ ಕಾಲಘಟ್ಟದಲ್ಲಿ ಇಂಥಾ ಸಮಾಜದ ಪ್ರಬಲ ವಿರೋಧದಲ್ಲೂ ಸಾವಿತ್ರಿ ಬಾಪುಲೆ ತಮ್ಮ ಪತಿ ಜ್ಯೋತಿ ಬಾಪುಲೆ ಮಾರ್ಗದರ್ಶನದಲ್ಲಿ ಅಕ್ಷರ ಕಲಿತು ಭಾರತದ ಮೊದಲ ಶಿಕ್ಷಕಿ ಎನಿಸಿ ಇತರ ಅನಕ್ಷರಸ್ಥರಿಗೂ ಅದರಲ್ಲೂ ವಿಶೇಷವಾಗಿ ಸ್ತ್ರೀಯರಿಗೆ ಶಿಕ್ಷಣ ನೀಡಲು ಮುಂದಾದದ್ದು ಅವತ್ತಿನ ಕಾಲದಲ್ಲಿ ಬಹುದೊಡ್ಡ ಕ್ರಾಂತಿಕಾರಿ ನಡೆಯಾಗಿತ್ತೆಂದರು.

ಸತ್ಯಕ್ಕೆ, ಪ್ರಾಮಾಣಿಕ ಹೋರಾಟಕ್ಕೆ, ಒಳಿತಿಗೆ, ತಕ್ಷಣಕ್ಕೆ ಫಲ ಸಿಗದಿದ್ದರೂ ನಿಧಾನವಾಗಿಯಾದರೂ ಯಾವತ್ತಿದ್ದರೂ ಇದಕ್ಕೆ ಬೆಲೆ ಸಿಕ್ಕೇ ಸಿಗುತ್ತದೆಂಬುದಕ್ಕೆ ಸಾವಿತ್ರಿ ಬಾಪುಲೆ ಹೋರಾಟದ ಸಾರ್ಥಕ ಬದುಕೇ ಸಾಕ್ಷಿಯಾಗಿದೆ. ಅಂದು ಅವರು ಬಿತ್ತಿದ ಅಕ್ಷರ ಬೀಜ ಕಾಲಾನಂತರದಲ್ಲಿ ಮೊಳಕೆಯೊಡೆದು, ಸಸಿಯಾಗಿ, ಗಿಡವಾಗಿ, ಮರವಾಗಿ, ಇಂದು ಹೆಮ್ಮರವಾಗಿ ಅಕ್ಷರಸ್ಥರ ಕಂಗಳಲ್ಲಿ ಶಿಕ್ಷಣದ ಮಹಾಬೆಳಕಾಗಿ ಪ್ರಜ್ವಲಿಸುತ್ತಾ ಇದಕ್ಕೆ ಕಾರಣೀಭೂತರಾದ ಪುಲೆ ದಂಪತಿಯನ್ನು ಸ್ಮರಿಸುತ್ತಿದೆಯೆಂದರು.

ಅಕ್ಷರಾಯುಧವನ್ನು ಝಳಪಿಸುತ್ತಾ ಅಕ್ಷರಧಾತೆಯಾಗಿ ನೂರ ಐವತ್ತು ವರ್ಷಗಳ ಹಿಂದೆಯೇ ಭಾರತದ ಯುವಜನರ ಐಕಾನ್ ಆಗಿದ್ದ ಸಾವಿತ್ರಿ ಬಾಪುಲೆ ಅವರು, ಅಕ್ಷರ ವಂಚಿತರು, ಶೋಷಿತರು,ದಮನಿತರು, ಮಹಿಳೆಯರು ಅಕ್ಷರ ಕಲಿತರೆ ಮಾತ್ರ ಸಾಲದು. ಅದರೊಡನೆ ಅರಿವನ್ನೂ ಬೆಳೆಸಿಕೊಳ್ಳಬೇಕೆಂದು ಹೇಳುತ್ತಲೇ ಜನರನ್ನು ಜಾಗೃತಿಗೊಳಿಸಿ ಶಿಕ್ಷಣ ಕ್ರಾಂತಿಯ ಜೊತೆಜೊತೆಯಲ್ಲೇ ವಿಧವಾ ವಿವಾಹ,ಬಾಲ್ಯ ವಿವಾಹ, ಹೆಣ್ಣುಭ್ರೂಣಹತ್ಯೆ, ಸತಿ ಪದ್ಧತಿ, ವರದಕ್ಷಿಣೆ, ದೇವದಾಸಿ ಸಮಸ್ಯೆ ಮುಂತಾದ ಸಾಮಾಜಿಕ ಅನಿಷ್ಟಗಳ ಹಾಗೂ ಅತ್ಯಾಚಾರ-ಅನಾಚಾರ, ಭ್ರಷ್ಟಾಚಾರಗಳ ವಿರುದ್ಧ ದನಿಯೆತ್ತಿ ಜನಜಾಗೃತಿ ಮೂಡಿಸಿ ಸಾಕಷ್ಟು ಯಶಸ್ಸಿನ ಮಾರ್ಗ ನಿರ್ಮಿಸಿದ್ದರು ಎಂದು ಹೇಳಿದರು.

ಖ್ಯಾತ ಚಿತ್ರಕಲಾವಿದೆ ಲೇಖಕಿ ಡಾ.ಜಮುನಾರಾಣಿ ಮಿರ್ಲೆ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲೂ ತಮ್ಮನ್ನು ತೊಡಗಿಸಿಕೊಂಡು ಸಾಹಿತ್ಯ- ಸಂಗೀತ, ಚಿತ್ರಕಲೆ, ನೃತ್ಯ,ನಾಟಕ ಮುಂತಾದ ಲಲಿತಕಲಾ ಕ್ಷೇತ್ರಗಳಲ್ಲೂ ಸಾಧಕರಾಗಿ ಭವಿಷ್ಯವನ್ನು ರೂಪಿಸಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.

ಅಧ್ಯಕ್ಷೆ ಎನ್. ಕೆ. ಕಾವೇರಿಯಮ್ಮ , ಯೂತ್ ಫಾರ್ ಸರ್ವಿಸ್ ಸಂಸ್ಥೆಯ ಜೀವ ಹಾಗೂ ಶಿಕ್ಷಕರಾದ ಎಸ್. ಪಿ.ಪ್ರಭುಲಿಂಗ ಸ್ವಾಮಿ, ಬಸವಣ್ಣ, ಶಿಕ್ಷಕಿಯರಾದ ಎಂ. ಎಲ್. ಶಶಿಕಲಾ, ವೈಶಾಲಿ ಇನ್ನಿತರರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು