News Karnataka Kannada
Sunday, April 28 2024
ಮೈಸೂರು

ಶಿಕ್ಷಕರು ಜೀವನದಿ ಕಾವೇರಿಯಂತೆ ಶಾಶ್ವತ: ಬನ್ನೂರು ರಾಜು

Mysore
Photo Credit :

ಮೈಸೂರು: ಶಿಕ್ಷಕರಿಗೆ ಇರುವ ಘನತೆ ಮತ್ತು ಗೌರವ ಯಾವ ರಾಷ್ಟ್ರಪತಿಗೂ ಇಲ್ಲವೆಂದೂ, ಶ್ರೇಷ್ಠ ಶಿಕ್ಷಕರು ಎಲ್ಲರನ್ನೂ ಪಾವನಗೊಳಿಸುವ ಜೀವನದಿ ಕಾವೇರಿಯಂತೆ ಶಾಶ್ವತರೆಂದು ಖ್ಯಾತ ಸಾಹಿತಿ ಬನ್ನೂರು ಕೆ. ರಾಜು ಅವರು ಅಭಿಪ್ರಾಯಪಟ್ಟಿದ್ದಾರೆ.

ನಗರದ ಕೃಷ್ಣ ಮೂರ್ತಿ ಪುರಂನಲ್ಲಿರುವ ನಮನ ಕಲಾ  ಮಂಟಪದಲ್ಲಿ ಕಾವೇರಿ ಬಳಗ ಮತ್ತು ಹಿರಣ್ಮಯಿ ಪ್ರತಿಷ್ಠಾನದ ವತಿಯಿಂದ ವಿವಿಧ ಸರ್ಕಾರಿ ಪ್ರಾಥಮಿಕ ಶಾಲೆಗಳ ಶ್ರೇಷ್ಠ  ಶಿಕ್ಷಕರಿಗಾಗಿ ಆಯೋಜಿಸಿದ್ದ ಜೀವನದಿ ಕಾವೇರಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಎಲ್ಲಾ ವೃತ್ತಿಗಳಿಗಿಂತ ಶಿಕ್ಷಕರ ವೃತ್ತಿ ಶ್ರೇಷ್ಠವಾದದ್ದು.ಕಾವೇರಿ ನದಿ ಹೇಗೆ ಶಾಶ್ವತವಾಗಿ ಹರಿಯುತ್ತಾ ಇಡೀ ನಾಡಿಗೆ ಜೀವ  ತುಂಬುತ್ತಾಳೋ ಹಾಗೆ ಶ್ರೇಷ್ಠ ಶಿಕ್ಷಕರು ಸಹ ತಮ್ಮ ವಿದ್ಯಾರ್ಥಿ ಸಮೂಹಕ್ಕೆ ಜೀವನ ಕಟ್ಟಿಕೊಟ್ಟು ಅಮರರಾಗಿ ಉಳಿದುಕೊಳ್ಳುತ್ತಾರೆ.

ಏಕೆಂದರೆ ಜೀವನದಿ ಕಾವೇರಿಯೂ ನೀರಿನ ಮೂಲಕ ಹೇಗೆ ಎಲ್ಲರಿಗೂ ಜೀವಧಾತು ಆಗುತ್ತಾಳೊ ಹಾಗೆ ಶಿಕ್ಷಕರು ಪಾಠಗಳನ್ನು ಮಾಡಿ ಅವರ ಜ್ಞಾನ ಹೆಚ್ಚಿಸುತ್ತಾರೆ. ಸಾಮಾನ್ಯ ವ್ಯಕ್ತಿಗಳಿಂದ ಹಿಡಿದು ಅಸಾಮಾನ್ಯ ವ್ಯಕ್ತಿಗಳ ತನಕ ಪ್ರತಿಯೊಂದು ಕ್ಷೇತ್ರದಲ್ಲಿಯೂ ಅವರ ವಿದ್ಯಾರ್ಥಿಗಳು ಇದ್ದೇ ಇರುತ್ತಾರೆ. ಸತ್ತರೂ ಕೂಡ ಅವರ ಜ್ಞಾನದಾನದ ಮೂಲಕ ಶಿಕ್ಷಕರು ಒಂದಲ್ಲಾ ಒಂದು ರೀತಿಯಲ್ಲಿ ಅವರ ಶಿಷ್ಯ ಸಮೂಹದ ಮೂಲಕ ಬದುಕಿರುತ್ತಾರೆ. ಸಮಾಜದಲ್ಲಿ ಶಾಶ್ವತವಾಗಿ ಉಳಿಯುತ್ತಾರೆ. ಸತ್ತರೂ ಬದುಕುವವೃತ್ತಿ ಎಂದರೆ ಅದು ಶಿಕ್ಷಕ ವೃತ್ತಿ ಮಾತ್ರ ಎಂದರು.

ವಿಶೇಷವಾಗಿ ಸರ್ಕಾರಿ ಪ್ರಾಥಮಿಕ ಶಾಲೆಗಳ ಶಿಕ್ಷಕರನ್ನು ಸಮಾಜ ಸದಾ ಸ್ಮರಿಸ ಬೇಕು. ಉನ್ನತ ಶಿಕ್ಷಣ ವ್ಯಾಸಂಗ ಮಾಡುವವರಿಗೆ  ಯಾರು ಬೇಕಾದರೂ ಪಾಠ ಮಾಡಬಹುದು.ಆದರೆ ಪ್ರಾಥಮಿಕ ಶಿಕ್ಷಣ ಹಾಗಲ್ಲ. ಇಲ್ಲಿನ ಶಿಕ್ಷಕರಿಗೆ ಬಹಳ ತಾಳ್ಮೆ, ಸಹನೆ, ತುಂಬಾ ಶ್ರಮ ಇರಬೇಕಾಗುತ್ತದೆ. ಪೋಷಕರು ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಮಕ್ಕಳನ್ನು ದಾಖಲಾತಿ ಮಾಡುವುದಷ್ಟೇ ಅವರ ಕೆಲಸ. ನಂತರ ಇಲ್ಲಿನ ಶಿಕ್ಷಕರು ಅವರಿಗೆ ಅಕ್ಷರ ಅಭ್ಯಾಸ ಮಾಡಿಸಿ ಖಾಲಿ ಮಡಕೆಗಳಂತಿದ್ದ  ಅವರ ತಲೆಯಲ್ಲಿ ಅಕ್ಷರ ಜ್ಞಾನಾಮೃತವನ್ನು  ತುಂಬಿ ಅವರನ್ನು ಸುಶಿಕ್ಷಿತರನ್ನಾಗಿಸುತ್ತಾರೆ. ಆದರೆ ಖಾಸಗಿ ಶಾಲೆಗಳಲ್ಲಿ ಹಾಗಲ್ಲ. ಮಕ್ಕಳಿಗೆ ಹೋಂವರ್ಕ್ ಹೆಸರಿನಲ್ಲಿ ಬಹುಪಾಲು ಎಲ್ಲವನ್ನೂ ಮನೆಗೆ ನೀಡುತ್ತಾರೆ.

ಅದನ್ನು ಮಕ್ಕಳ ಪೋಷಕರು ರಾತ್ರಿ ಪೂರ್ತಿ ಮಾಡಿಸಿ ಮಕ್ಕಳನ್ನು ತಯಾರು ಮಾಡಿ ಶಾಲೆಗೆ ಕಳಿಸುತ್ತಾರೆ. ಖಾಸಗಿ ಶಾಲೆಗಳಲ್ಲಿ ಶಿಕ್ಷಕರು ಮಾಡಬೇಕಾದ ಕೆಲಸವನ್ನು ಪೋಷಕರೇ ಮಾಡಬೇಕಾಗುತ್ತದೆ.  ಯಾವುದೇ ಸರ್ಕಾರಗಳು ಬಂದರೂ ಶಿಕ್ಷಕರನ್ನು ಶಿಕ್ಷಣದ ವಿಚಾರಗಳಿಗೆ ಬಿಟ್ಟು ಅನ್ಯ ಕಾರ್ಯಗಳಿಗೆ ನಿಯೋಜಿಸಿ ಯಾವುದೇ ರೀತಿಯ ಹೆಚ್ಚಿನ ಹೊರೆ ನೀಡಬಾರದು. ಚುನಾವಣಾ ಕರ್ತವ್ಯಕ್ಕೆ ಸರ್ಕಾರ ಶಿಕ್ಷಕರನ್ನು ನೇಮಿಸುವುದು ವಾಡಿಕೆಯಾಗಿದ್ದು ಅದು ನಿಲ್ಲಬೇಕು ಎಂದು ತಿಳಿಸಿದರು.

ಇದೇ ವೇಳೆ ಸಾರ್ವಜನಿಕ ಶಿಕ್ಷಣ ಇಲಾಖೆ ವಿಶ್ರಾಂತ ಉಪನಿರ್ದೇಶಕಿ ಮಂಜುಳಾ ಮಿರ್ಲೆ ಮಾತನಾಡಿ, ಇತ್ತೀಚಿನ ನಮ್ಮ ಶಿಕ್ಷಣ  ಕ್ಷೇತ್ರದ ವ್ಯವಸ್ಥೆಯಲ್ಲಿ ಅಂಕಗಳಿಕೆ ಸ್ಪರ್ಧೆಯಲ್ಲಿ ಮಾನವೀಯ ಮೌಲ್ಯಗಳನ್ನು ಕಲಿಸಲಾಗುತ್ತಿಲ್ಲ. ಅಂಕಗಳಿಕೆಯೇ ಬೇರೆ ಮಾನವೀಯ ಮೌಲ್ಯವೇ ಬೇರೆ. ಈ ನಿಟ್ಟಿನಲ್ಲಿ ನಾವು ಎಂಥಾ ಶಿಕ್ಷಣ ನೀಡುತ್ತಿದ್ದೇವೆಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಾಗಿದೆ.

ಶಿಕ್ಷಕ ವೃತ್ತಿ ಸವಾಲುಗಳ ನಡುವೆ  ಮಾಡುವಂತಾಗಿದ್ದು. ಬಹಳ ಕಡೆ ಎರಡು ಮೂರು ತರಗತಿಗಳನ್ನು ಒಟ್ಟಿಗೆ ಸೇರಿಸಿಕೊಂಡು ಪಾಠ ಮಾಡುವಂತಹ ಪರಿಸ್ಥಿತಿಯನ್ನು ಶಿಕ್ಷಕರು ಎದುರಿಸಬೇಕಾಗಿದೆ. ಇವತ್ತಿಗೂ ವಿಷಯಕ್ಕೊಬ್ಬರಿರಲಿ ಕನಿಷ್ಠ ಪ್ರತಿ ತರಗತಿಗೆ  ಒಬ್ಬ ಶಿಕ್ಷಕರನ್ನು ಸರ್ಕಾರ ಕೊಡಲಾಗುತ್ತಿಲ್ಲ. ಇದು ಪಾಠದ ವಿಷಯವಾದರೆ ಇನ್ನು ಶಾಲೆಗೆ ಬಾರದ ಮಕ್ಕಳನ್ನು ಕರೆತರುವ ಕೆಲಸವನ್ನೂ ಶಿಕ್ಷಕರೇ ಮಾಡಬೇಕು ಹಾಗಾಗಿ ಸರ್ಕಾರಿ ಶಾಲೆಗಳು ನಿರೀಕ್ಷಿತ ಮಟ್ಟದಲ್ಲಿ ಸಾಧಿಸಲಾಗುತ್ತಿಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ  ಹೆಚ್.ಡಿ. ಕೋಟೆ ತಾಲ್ಲೂಕಿನ ಜಿ.ಬಿ. ಸರಗೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ  ಸಿ.ಪಿ. ಸುಧಾಮಣಿ, ಬಾಚೇಗೌಡನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮರಿಕಾಳಯ್ಯ, ಮೈಸೂರು ತಾಲ್ಲೂಕಿನ ದೇವಯ್ಯನಹುಂಡಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಎಂ.ಕೆ. ಪೂವಮ್ಮ, ಹುಣಸೂರು ತಾಲ್ಲೂಕಿನ ಹಳ್ಳದಕೊಪ್ಪಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಎಂ.ಎಂ. ಲತಾ, ಅರಸು ಕಲ್ಲಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಎಂ.ಕೆ. ಕಾವೇರಮ್ಮ , ನಂಜನಗೂಡು ತಾಲ್ಲೂಕಿನ ತಾಯೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಎಂ. ಕಲ್ಪನಾ, ಮೈಸೂರು ನಗರದ ತೊಣಚಿಕೊಪ್ಪಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ಎ. ಸಬಿತಾಬಾಯಿ, ಹಳೆಕೆಸರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಸಿ. ಸೋಮಶೇಖರ್ ಅವರುಗಳಿಗೆ  ‘ಜೀವನದಿ ಕಾವೇರಿ ಪ್ರಶಸ್ತಿ’ ಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ವಿಶ್ರಾಂತ ಉಪನಿರ್ದೇಶಕಿ ಮಂಜುಳಾ ಮಿರ್ಲೆ ಅವರು ಪ್ರದಾನ ಮಾಡಿ ಗೌರವಿಸಿದರು.

ಕಲಾವಿದೆ ಡಾ. ಜಮುನಾರಾಣಿ ಮಿರ್ಲೆ ಅಧ್ಯಕ್ಷತೆ ವಹಿಸಿದ್ದರು ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷರೂ ಆದ ಶಿಕ್ಷಣತಜ್ಞ  ಎ.ಸಂಗಪ್ಪ , ಕಾವೇರಿ ಬಳಗದ ಅಧ್ಯಕ್ಷೆ ವಿಶ್ರಾಂತ ಶಿಕ್ಷಕಿ ಎನ್.ಕೆ.ಕಾವೇರಿಯಮ್ಮ,  ಸಮಾಜಸೇವಕಿ ಮಾಲಿನಿ ಆರ್. ಪಾಲಾಕ್ಷ , ಶಿಕ್ಷಕಿ ಅನುಪಮಾ, ಕಲಾ ಶಿಕ್ಷಕ ಮನೋಹರ್ ಮುಂತಾದವರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು