ಮೈಸೂರು: ಈಗಾಗಲೇ ಒಂದು ಓಮಿಕ್ರಾನ್ ಪ್ರಕರಣ ಪತ್ತೆಯಾಗುವುದರೊಂದಿಗೆ ಮೈಸೂರಿನಲ್ಲಿ ಆತಂಕವುಂಟಾಗಿತ್ತು. ಇದೀಗ ವಿದೇಶದಿಂದ ವಾಪಸ್ಸಾದ ವಿದ್ಯಾರ್ಥಿನಿಯಲ್ಲಿ ಕೊರೊನಾ ರೂಪಾಂತರಿ ವೈರಸ್ ಓಮಿಕ್ರಾನ್ ದೃಢಪಟ್ಟಿದ್ದು, ಮೈಸೂರಿನಲ್ಲಿ ಓಮಿಕ್ರಾನ್ ಸಂಖ್ಯೆ ಎರಡಕ್ಕೇರಿದಂತಾಗಿದೆ.
ಕಳೆದ ಐದು ದಿನಗಳ ಹಿಂದೆಯಷ್ಟೇ 9 ವರ್ಷದ ಮಗುವಿಗೆ ಓಮಿಕ್ರಾನ್ ದೃಢವಾದ ಬೆನ್ನಲ್ಲೇ ಈಗ ಎರಡನೇ ಪ್ರಕರಣ ದಾಖಲಾಗಿದೆ. ಆಫ್ರಿಕಾದ ತಾಂಜೇನಿಯಾದಿಂದ ಬಂದ ಮೈಸೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿನಿಯೊಬ್ಬಳಲ್ಲಿ ಸೋಂಕು ದೃಢಪಟ್ಟಿದೆ. ತಾಂಜೇನಿಯಾದಿಂದ ಬೆಂಗಳೂರು ಅಂತಾರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ಡಿ.20ರಂದು ಬಂದಿಳಿದಿದ್ದ ವಿದ್ಯಾರ್ಥಿನಿಯನ್ನು ಜಿನೋಮ್ ಸ್ವಿಕೇನ್ಸ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈಗ ಆ ಯುವತಿಯಲ್ಲಿ ಓಮಿಕ್ರಾನ್ ದೃಢವಾಗಿರುವುದು ಖಚಿತವಾಗುತ್ತಿದ್ದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯವರು ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೊಣೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡುತ್ತಿದ್ದಾರೆ. ವಿವಿಯ ವಿದೇಶಿ ವಿದ್ಯಾರ್ಥಿನಿಲಯದಿಂದ ಈಕೆಯನ್ನು ಕರೆತಂದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಂದುವರಿಸಲಾಗಿದ್ದು, ಸಂಪರ್ಕದಲ್ಲಿರುವವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತದೆ.
ವಿದ್ಯಾರ್ಥಿನಿ ಮೈಸೂರು ನಗರಕ್ಕೆ ಬಂದ ಮೇಲೆ ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂಪರ್ಕಿತರನ್ನು ಪತ್ತೆ ಮಾಡುವ ಕೆಲಸ ಮಾಡಲಾಗುತ್ತಿದೆ. ಜಿಲ್ಲಾಡಳಿತದ ಸೂಚನೆ ಮೇರೆಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನಗರಪಾಲಿಕೆ ಅಧಿಕಾರಿಗಳು ಜಂಟಿಯಾಗಿ ಸಂಪರ್ಕಿತರನ್ನು ಗುರುತಿಸಿ, ಅವರಿಗೆ ಹೋಂ ಕ್ವಾರಂಟೈನ್ನಲ್ಲಿ ಇರಿಸಿದ ಮೇಲೆ ಕೋವಿಡ್ ಟೆಸ್ಟ್ಗೆ ಒಳಪಡಿಸಲಾಗುತ್ತದೆ. ವಿಮಾನ ನಿಲ್ದಾಣದಲ್ಲಿ ವಿದೇಶದಿಂದ ಬಂದಿಳಿದವರನ್ನು ಜಿನೋಮ್ ಸ್ವಿಕೇನ್ಸ್ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಪಾಸಿಟಿವ್ ಬಂದವರಿಗೆ ತಕ್ಷಣವೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಕೆ.ಎಚ್. ಪ್ರಸಾದ್ ತಿಳಿಸಿದ್ದಾರೆ