News Karnataka Kannada
Friday, April 19 2024
Cricket
ಮೈಸೂರು

ಜಗಮೆಚ್ಚಿದ ಮಗ ಪುನೀತ್ ರಾಜಕುಮಾರ್ ಲೋಕದಲ್ಲಿ ಚಿರಸ್ಥಾಯಿ

Mysore
Photo Credit :

ಮೈಸೂರು: ಪ್ರತಿಯೊಬ್ಬರ ಹೃದಯದಲ್ಲೂ ನೆಲೆನಿಂತು ಜಗಮೆಚ್ಚಿದ ಮಗನಾಗಿ ತಮ್ಮ ಬಣ್ಣದ ಬದುಕಿನ  ಮೂಲಕ ಕನ್ನಡವನ್ನು  ಶ್ರೀಮಂತಗೊಳಿಸಿ ಕನ್ನಡ ಚಿತ್ರರಂಗಕ್ಕೊಂದು ಹೊಸ ಭಾಷ್ಯ ಬರೆದು  ಹೋಗಿರುವ ಖ್ಯಾತ ಚಲನಚಿತ್ರ ಯುವನಟ  ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಕನ್ನಡವಿರುವ ತನಕವೂ ಶಾಶ್ವತವಾಗಿ ಕನ್ನಡಿಗರೆದೆಯಲ್ಲಿ ಇದ್ದೇ ಇರುತ್ತಾರೆಂದು ಸಾಹಿತಿ ಬನ್ನೂರು ಕೆ.ರಾಜು ಅಭಿಪ್ರಾಯಪಟ್ಟರು.

ನಗರದ ಪಿ.ಆರ್.ಕೆ.ಡ್ಯಾನ್ಸ್ ಸ್ಟುಡಿಯೋ ಮತ್ತು ಅರಿವಿನ ಮನೆ ಮಹಿಳಾ ಬಳಗದ ಸಂಯುಕ್ತ ಆಶ್ರಯದಲ್ಲಿ ಕುವೆಂಪು ನಗರದ  ಜ್ಞಾನಭಾರತಿ ಸಭಾಂಗಣದಲ್ಲಿ ಆಯೋಜಿಸಿದ್ದ ‘ಅಪ್ಪು ನೆನಪುಗಳ ಜೊತೆ ಕರ್ನಾಟಕ ರತ್ನ ಡಾ.ಪುನೀತ್ ರಾಜಕುಮಾರ್ ಡ್ಯಾನ್ಸ್ ಶೋ’ ಎಂಬ ವಿಶಿಷ್ಟ ವರ್ಣರಂಜಿತ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಪದ್ಮಭೂಷಣ ಡಾ.ರಾಜಕುಮಾರ್ ಅವರು ಕನ್ನಡಕ್ಕೊಬ್ಬರೇ ರಾಜಕುಮಾರ್ ಆಗಿದ್ದರೆ ಅವರ ಸುಪುತ್ರ ಪುನೀತ್ ರಾಜಕುಮಾರ್  ತಂದೆಯನ್ನೂ ಮೀರಿಸಿ ಜಗತ್ತಿಗೊಬ್ಬರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಆಗಿದ್ದಾರೆಂದರು.

ಅಕ್ಷರಶಃ ತಂದೆಗೆ ತಕ್ಕ ಮಗನಾಗಿ, ತಂದೆಯನ್ನೂ ಮೀರಿಸಿದ ಅಪ್ರತಿಮ ಪ್ರತಿಭಾವಂತ ಸುಪುತ್ರನಾಗಿ ಕರ್ನಾಟಕ ಮಾತ್ರವಲ್ಲದೆ ಭಾರತದಿಂದಾಚೆಗೂ ಸಮಾಜಮುಖಿ ಕಲಾವಿದನಾಗಿ ವಿಶ್ವವ್ಯಾಪಿ ಕೀರ್ತಿಗಳಿಸಿದ್ದ ಪುನೀತ್ ರಾಜಕುಮಾರ್ ತನ್ಮೂಲಕ  ಕನ್ನಡದ ಹಿರಿಮೆಯನ್ನು ವಿಶ್ವದೆತ್ತರಕ್ಕೂ  ಕೊಂಡೊಯ್ದಿದ್ದರು. ಕೇವಲ ಅವರೊಬ್ಬ ಚಿತ್ರನಟನಾಗಿರದೆ ಸಮಾಜದ ಸಂಕಷ್ಟಗಳಿಗೆ  ಸ್ಪಂದಿಸುವ ಉದಾರಶೀಲ  ಹೃದಯವಂತರಾಗಿದ್ದರು. ಮೈಸೂರು ನಗರದ ಮಹಿಳೆಯರ ಪುನರ್ವಸತಿ ಕೇಂದ್ರ ಶಕ್ತಿಧಾಮ ಸೇರಿದಂತೆ  ನೂರಾರು ಸೇವಾ ಸಂಸ್ಥೆಗಳಿಗೆ ಜೀವಧಾತುವಾಗಿದ್ದ ಅವರು ಸಾವಿರಾರು ಮಂದಿಯ ಜೀವನಕ್ಕೆ, ನೂರಾರು ಮಂದಿ ಕುಟುಂಬಕ್ಕೆ ನೆರವಾಗಿದ್ದರು.  ದೊಡ್ಮನೆ ಹುಡುಗನಾಗಿ ಚಿಕ್ಕವಯಸ್ಸಿನಲ್ಲೇ ದೊಡ್ಡ ಕೊಡುಗೈಗುಣವನ್ನು ಮೈಗೂಡಿಸಿಕೊಂಡಿದ್ದ ಪುನೀತ್ ರಾಜಕುಮಾರ್ ಅವರು ಅಲ್ಪಾಯುಷ್ಯದಲ್ಲೇ ಕನ್ನಡ ನಾಡು ಕಂಡರಿಯದಂತಹ ಅಪಾರ ಸಾಧನೆ ಮಾಡಿ ಹೋಗಿದ್ದಾರೆ. ಅಷ್ಟೇ ಅಲ್ಲ, ಗ್ಲಾಮರ್ ಲೋಕದ ಚಲನಚಿತ್ರ ನಟನೊಬ್ಬ ಅದ್ಭುತ ಅಭಿನಯ ದೊಡ್ಮನೆ ಅಷ್ಟೇ ಅದ್ಭುತವಾಗಿ ದಾಖಲೆ ಪ್ರಮಾಣದಲ್ಲಿ ಸಮಾಜ ಸೇವಾ ಕೈಂಕರ್ಯಗಳನ್ನು ಮಾಡಿ ಜನ ಮೆಚ್ಚುಗೆ ಗಳಿಸಿದ ಚರಿತ್ರೆಯನ್ನು ಪುನೀತ್ ರಾಜಕುಮಾರ್ ನಿರ್ಮಿಸಿದ್ದಾರೆಂದು ಹೇಳಿದರು.

ರಾಜ್ ನಟನೆಯ ‘ಬಂಗಾರದ ಮನುಷ್ಯ’ ಚಿತ್ರ ನೋಡಿ ಎಷ್ಟೋ  ಮಂದಿ ರೈತರು ತಮ್ಮ ಬದುಕನ್ನು ಕಟ್ಟಿಕೊಂಡಂತೆಯೇ ಡಾ.ಪುನೀತ್ ನಟನೆಯ ‘ರಾಜಕುಮಾರ’ ಚಿತ್ರ ನೋಡಿ ಎಷ್ಟೋ ಮಂದಿ ಮಕ್ಕಳು ಪರಿವರ್ತನೆಗೊಂಡು ವೃದ್ಧಾಶ್ರಮಕ್ಕೆ ಸೇರಿಸಿದ್ದ ತಮ್ಮ ತಂದೆ – ತಾಯಿಗಳನ್ನು ವಾಪಸ್ಸು ಮನೆಗೆ ಕರೆತಂದು ವೃದ್ಧಾಶ್ರಮ ಸಂಸ್ಕೃತಿಗೆ ತಿಲಾಂಜಲಿ ಹೇಳಿದ್ದಾರೆ. ಇಂತಹ ಅನೇಕ ಸಮಾಜ ಪರಿವರ್ತನಾ ಚಿತ್ರಗಳನ್ನು ಡಾ.ರಾಜ್ ಮತ್ತು ಡಾ.ಪುನೀತ್, ತಂದೆ -ಮಕ್ಕಳಿಬ್ಬರೂ ಸಮಾಜಕ್ಕೆ ನೀಡಿ ಸಿನಿಮಾ ಮೂಲಕ ಒಂದು ಸಾಮಾಜಿಕ ಕ್ರಾಂತಿಯನ್ನೇ ಮಾಡಿದ್ದಾರೆಂದು  ತಿಳಿಸಿದರು.

ಜೆ. ಪಿ. ನಗರದ ಅರಿವಿನ ಮನೆ ಮಹಿಳಾ ಬಳಗದ ಧನ್ಯಾ ಸತ್ಯೇಂದ್ರ ಮೂರ್ತಿ ಮಾತನಾಡಿ,  ವರನಟ ಪದ್ಮಭೂಷಣ  ಡಾ.ರಾಜಕುಮಾರ್ ಅವರು ನಾಡಿಗೆ ಕೊಟ್ಟ ಬಹುದೊಡ್ಡ ಕೊಡುಗೆ ಪುನೀತ್ ರಾಜಕುಮಾರ್  ಎಂದು ಹೇಳಿದರು.

ಬಿಜೆಪಿ ಮುಖಂಡ ಆರ್.ಸೋಮಶೇಖರ್, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್.ಬಾಲಕೃಷ್ಣ ಅವರುಗಳು ಮಾತನಾಡಿ  ಪುನೀತ್ ರಾಜಕುಮಾರ್ ರಂಥ ಮೇರು ವ್ಯಕ್ತಿತ್ವದ ಹೆಸರಿನಲ್ಲಿ ಇಂತಹ ಅದ್ಭುತವಾದ ಕಾರ್ಯಕ್ರಮ ಆಯೋಜಿಸಿರುವುದು ಅತ್ಯಂತ ಸಾರ್ಥಕವೆಂದು ಶ್ಲಾಘಿಸಿದರು.

ಡ್ಯಾನ್ಸ್ ಕೊರಿಯೋಗ್ರಾಫರ್ ಸಂತೋಷ್ ಸಾರಥ್ಯದಲ್ಲಿ ಪಿ.ಆರ್.ಕೆ. ಡ್ಯಾನ್ಸ್ ಸ್ಟುಡಿಯೋ ಸಂಸ್ಥೆಯ ಮಕ್ಕಳು  ಪುನೀತ್ ರಾಜ್ ಕುಮಾರ್ ಚಿತ್ರಗಳ ಹಾಡುಗಳಿಗೆ ಹೆಜ್ಜೆ ಹಾಕಿ ನರ್ತಿಸುವುದರ ಮೂಲಕ ನೆರೆದಿದ್ದವರನ್ನು ರಂಜಿಸಿದರು.

ಜೆ.ಪಿ. ನಗರದ ಬಸವ ಫೌಂಡೇಶನ್ ನ ಅಧ್ಯಕ್ಷ ಯಡಹಳ್ಳಿ ಶಿವಪಾದಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.

ಸಮಾಜ ಸೇವಕ ರವಿ,ಸಚ್ಚಿದಾನಂದ ಯಡಹಳ್ಳಿ,ಅರಿವಿನಮನೆ ಮಹಿಳಾ ಬಳಗದ ಮಂಜುಳಾ ರವಿ, ಕೊರಿಯೋಗ್ರಾಫರ್  ಸಂತೋಷ್,ಫೋಟೋಗ್ರಾಫರ್ ಮಂಜು, ಆನಂದ ಅರಸನಕೆರೆ, ಬೆಂಗಳೂರಿನ ಸ್ಟೆಪ್ ಅಪ್  ಡ್ಯಾನ್ಸ್  ಫಿಟ್ನೆಸ್ ಅಕಾಡೆಮಿಯ ವರ್ಷಿತಾ (ವರ್ಷ) ಮುಂತಾದವರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು