ನಂಜನಗೂಡು: ಹೆತ್ತು ಹೊತ್ತು ಸಾಕಿದ ಮಕ್ಕಳನ್ನು ಬಿಟ್ಟು ಗಂಡ ಹೆಂಡತಿಯರು ಮನೆಯನ್ನೇ ಬಿಟ್ಟಿದ್ದಾರೆ. ಅದೆಷ್ಟು ಮನೆಗಳಲ್ಲಿ ಗಂಡ ಇದ್ದರೆ ಹೆಂಡತಿ ಇಲ್ಲ ಹೆಂಡತಿ ಇದ್ದರೆ ಗಂಡ ಇಲ್ಲದೆ ಕಣ್ಣೀರಿಡುತ್ತಿದ್ದಾರೆ.
ಹೌದು… ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಮತ್ತು ನಂಜನಗೂಡು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮೈಕ್ರೋ ಫೈನಾನ್ಸ್ ಗಳ ಕಿರುಕುಳಕ್ಕೆ ಬೇಸತ್ತು ಸಾಲಗಾರರು ಗ್ರಾಮವನ್ನೇ ತೊರೆಯುತ್ತಿರುವ ಪ್ರಕರಣ ನಂಜನಗೂಡಿನಲ್ಲಿ ಬೆಳಕಿಗೆ ಬಂದಿದೆ.
ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ, ರಾಂಪುರ, ಕುರಿಹುಂಡಿ, ಶಿರಮಳ್ಳಿ, ಕಗ್ಗಲೂರು ಹೆಗ್ಗಡಹಳ್ಳಿ, ಮುದ್ದಹಳ್ಳಿ ಸೇರಿದಂತೆ ಸಾಕಷ್ಟು ಗ್ರಾಮಗಳಲ್ಲಿ ಕುಟುಂಬಗಳು ಗ್ರಾಮ ತೊರೆಯುತ್ತಿವೆ. ಕುಟುಂಬಗಳ ಮನೆಗಳ ಮುಂಭಾಗದಲ್ಲಿ ನಾಮಫಲಕಗಳನ್ನ ಅಳವಡಿಸಿ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿದೆ.
ಕೆಲ ಮನೆಗಳಿಗೆ ಬೀಗವನ್ನು ಹಾಕಿಕೊಂಡು ಕುಟುಂಬದವರನ್ನು ಹೊರದಬ್ಬಿರುವ ಘಟನೆ ಸಹ ಸಂಭವಿಸಿದೆ ಎನ್ನಲಾಗಿದೆ. ಮೈಕ್ರೋ ಫೈನಾನ್ಸ್ ನಲ್ಲಿ ಸಾಲ ಪಡೆದ ಪರಿಣಾಮ ಕೆಲವು ಕುಟುಂಬಸ್ಥರು ಸಾವು ನೋವು ಸಂಭವಿಸಿದ್ದಲ್ಲಿ ಭಾಗವಹಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದಲ್ಲೆಡೆ ಗ್ರಾಮೀಣ ಪ್ರದೇಶದ ಜನತೆ ಸಂಕ್ರಾಂತಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿದ್ದಾರೆ. ಆದರೆ, ಈ ಗ್ರಾಮಗಳ ಕೆಲವು ಕುಟುಂಬಗಳು ಮೈಕ್ರೋ ಫೈನಾನ್ಸ್ ಹಾವಳಿಗೆ ಬೆದರಿ ಗ್ರಾಮದತ್ತ ಮುಖ ತೋರಿಸಲು ಸಾಧ್ಯವಾಗದಂತಾಗಿದೆ. ಆಮಿಷಗಳನ್ನು ಒಡ್ಡಿ ಬಲವಂತವಾಗಿ ಸಾಲ ಕೊಡುತ್ತಿರುವ ಮೈಕ್ರೋ ಫೈನಾನ್ಸ್ ಗಳು ನಂತರ ವಸೂಲಿಗೆ ಅನ್ಯ ಮಾರ್ಗಗಳನ್ನ ಹಿಡಿದು ಕಿರುಕುಳ ಕೊಡುತ್ತಿವೆ ಎಂದು ಆರೋಪಿಸುತ್ತಿರುವ ಸ್ಥಳೀಯರು ಇಂತಹ ಬೆಳವಣಿಗೆಗಳಿಗೆ ಮೂಗುದಾರ ಹಾಕುವಂತೆ ಒತ್ತಾಯಿಸಿದ್ದಾರೆ.