News Karnataka Kannada
Saturday, April 20 2024
Cricket
ಮಂಡ್ಯ

ಮಂಡ್ಯದ ಹೇಮಾವತಿ ನದಿ ಒಡಲಿನಿಂದ ಮರಳು ಮಾಯ!

Sand disappears from Hemavathi river in Mandya
Photo Credit : By Author

ಮಂಡ್ಯ: ಈ ಬಾರಿ ಬೇಸಿಗೆಯಲ್ಲಿ ಸಮರ್ಪಕವಾಗಿ ಮಳೆ ಸುರಿಯದ ಕಾರಣದಿಂದಾಗಿ ನದಿಗಳು ಬತ್ತಿಹೋಗಿದ್ದವು. ಇದರಿಂದ ರೈತರು ಸೇರಿದಂತೆ ಜನತೆ ಕಂಗಾಲಾಗಿದ್ದಾರೆ. ಅಕ್ರಮ ಮರಳು ಕಳ್ಳರಿಗೆ ಮಾತ್ರ ಸುಗ್ಗಿಯಾಗಿತ್ತು. ಇದಕ್ಕೆ ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹೋಬಳಿಯ ಕಟ್ಟಹಳ್ಳಿ-ಕಟ್ಟೆಕ್ಯಾತನಹಳ್ಳಿಯ ಹೇಮಾವತಿ ನದಿಯ ಸೇತುವೆ ಬಳಿ ನಡೆದಿರುವ ಅಕ್ರಮ ಮರಳು ಗಣಿಗಾರಿಕೆ ಸಾಕ್ಷಿಯಾಗಿದೆ.

ನದಿಗಳಿಂದ ಮರಳನ್ನು ತೆಗೆಯದಂತೆ ನಿರ್ಬಂಧವಿದ್ದರೂ ಅದಕ್ಕೆ ಸೊಪ್ಪು ಹಾಕದೆ ರಾಜಾರೋಷವಾಗಿ ಅಕ್ರಮ ಮರಳು ದಂಧೆ ನಡೆದಿದ್ದಾದರೂ ಹೇಗೆ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಮಳೆ ಬಂದು ಹೇಮಾವತಿ ನದಿ ಉಕ್ಕಿ ಹರಿಯುವ ತನಕ ಕದ್ದು ಮುಚ್ಚಿ ನಡೆಯುವ ಮರಳು ಗಣಿಗಾರಿಕೆ ನಿಲ್ಲುವ ಲಕ್ಷಣಗಳು ಕಾಣುವುದಿಲ್ಲ. ಹಾಗಾದರೆ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬುದು ಮಾತ್ರ ಪ್ರಶ್ನೆಯಾಗಿ ಉಳಿದಿದೆ.

ಕೆ.ಆರ್.ಪೇಟೆ ತಾಲೂಕಿನ ಬೂಕನಕೆರೆ ಹಾಗೂ ಅಕ್ಕಿಹೆಬ್ಬಾಳು ಹೋಬಳಿಯ ಮೂಲಕ ಮೈಸೂರು-ಹಾಸನ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಸಲುವಾಗಿ ಕಟ್ಟಹಳ್ಳಿ-ಕಟ್ಟೆಕ್ಯಾತನಹಳ್ಳಿಯಲ್ಲಿ ಹೇಮಾವತಿ ನದಿಗೆ ಅಡ್ಡಲಾಗಿ ಬೃಹತ್ ಸೇತುವೆ ನಿರ್ಮಿಸಲಾಗಿದೆ. ಆದರೆ ಈ ಸೇತುವೆಯ ಕೆಳಭಾಗದಲ್ಲಿ ಅಂದರೆ ಸೇತುವೆಯ ಫಿಲ್ಲರ್ ಬಳಿಯೇ ಅಕ್ರಮ ಮರಳು ಗಣಿಗಾರಿಕೆ ನಡೆಸಲಾಗುತ್ತಿದ್ದು, ನದಿಯನ್ನು ಬಗೆದು ಮರಳನ್ನು ತೆಗೆಯಲಾಗಿದೆ. ಇದರಿಂದ ಸೇತುವೆಗೆ ಧಕ್ಕೆಯಾಗುವ ಸಾಧ್ಯತೆ ಹೆಚ್ಚಾಗಿದೆ.

ಇಷ್ಟಕ್ಕೂ ಇಲ್ಲಿಗೆ ಮರಳು ದಂಧೆಕೋರರು ಏಕೆ ಕಣ್ಣು ಹಾಕಿದ್ದಾರೆ ಎನ್ನುವುದನ್ನು ನೋಡುತ್ತಾ ಹೋದರೆ ಸೇತುವೆ ಇರುವ ಜಾಗ ಅಕ್ರಮ ಮರಳುಗಣಿಗಾರಿಕೆಗೆ ಹೇಳಿ ಮಾಡಿಸಿದ ಜಾಗವಾಗಿದೆ. ಇದು ಕೆ.ಆರ್.ಪೇಟೆ ಗ್ರಾಮಾಂತರ ಪೋಲಿಸ್ ಠಾಣೆಯ ವ್ಯಾಪ್ತಿಗೆ ಒಳಪಡುತ್ತಿದ್ದು, ಕೆಆರ್ ಎಸ್ ಜಲಾಶಯದ ಹಿನ್ನೀರು ಪ್ರದೇಶವಾಗಿರುವುದರಿಂದ ಸಮತಟ್ಟಾದ ಪ್ರದೇಶಕ್ಕೆ ನೀರು ಮರಳನ್ನು ತಂದು ಹಾಕುತ್ತಿದೆ. ಹೀಗಾಗಿ ಇಲ್ಲಿ ಮರಳು ಸಮೃದ್ಧವಾಗಿದೆ. ಇದು ಬೇಸಿಗೆಯಲ್ಲಿ ನೀರು ಕಡಿಮೆಯಾದಾಗ ಮರಳು ಅಕ್ರಮ ದಂಧೆಕೋರರ ಕಣ್ಣಿಗೆ ರಾಚುತ್ತಿದ್ದು, ಅದಕ್ಕೆ ಕನ್ನ ಹಾಕುವ ಕೆಲಸ ಎಗ್ಗಿಲ್ಲದೆ ನಡೆದಿದೆ.

ಈಗಾಗಲೇ ಇಲ್ಲಿಂದ ಕೊಪ್ಪರಿಕೆ, ಎತ್ತಿನಗಾಡಿಗಳು ಹಾಗೂ ಟ್ರ್ಯಾಕ್ಟರ್ಗಳ ಮೂಲಕ ನದಿಯ ಮರಳನ್ನು ತೆಗೆದು ಅದನ್ನು ಒಂದು ಕಡೆ ಸಂಗ್ರಹಿಸಿ ಅಲ್ಲಿಂದ ಮಧ್ಯರಾತ್ರಿಯ ವೇಳೆಯಲ್ಲಿ ಟಿಪ್ಪರ್ಗಳ ಮೂಲಕ ಸಾಗಾಟ ಮಾಡಲಾಗುತ್ತದೆ. ಸದ್ಯ ಒಂದು ಲೋಡ್ ಮರಳು 40 ರಿಂದ 50ಸಾವಿರ ರೂಪಾಯಿಗಳಿಗೆ ಬಿಕರಿಯಾಗುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇನ್ನು ಹೇಮಾವತಿ ನದಿಯ ನೀರಿಗೆ ಮೋಟಾರು ಬೋಟ್‌ಗಳು, ಹಿಟಾಚಿ, ಜೆಸಿಬಿ ಸೇರಿದಂತೆ ಬೃಹತ್ ಯಂತ್ರೋಪಕರಣಗಳನ್ನು ಬಳಸಿ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಸುತ್ತಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಸ್ಥಳೀಯರೇ ಇದನ್ನು ರಾತ್ರಿಯಿಡೀ ಮಾಡುತ್ತಿದ್ದಾರೆ ಎಂಬ ಆರೋಪವಿದೆ. ಇಲ್ಲಿನ ಹೇಮಾವತಿ ನದಿಯ ಮಧ್ಯೆ ಗುಂಡಿ ತೆಗೆದು ಅಲ್ಲಿಂದ ಮರಳು ತೆಗೆಯಲಾಗುತ್ತಿದೆ. ಇಲ್ಲಿ ಯಂತ್ರಗಳನ್ನು ಬಳಸುತ್ತಿರುವುದರಿಂದ ಜಲಚರಗಳ ಜೀವಕ್ಕೆ ತೊಂದರೆಯಾಗುತ್ತಿದೆ ಎಂಬ ದೂರುಗಳಿವೆ.

ನದಿಯಲ್ಲಿ ಮರಳುಗಣಿಗಾರಿಕೆ ನಡೆಯುತ್ತಿರುವುದರಿಂದ ಮತ್ತು ರಾತ್ರಿ ಪೂರ್ತಿ ಟಿಪ್ಪರ್ ಗಳು ಓಡಾಡುವುದರಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ಗ್ರಾಮದ ಕಡೆಯಿಂದ ಹೇಮಾವತಿ ನದಿಯೊಳಗೆ ಇಳಿಯಲು ಕಚ್ಚಾ ರಸ್ತೆಯನ್ನು ನಿರ್ಮಿಸಿಕೊಂಡಿರುವ ಅಕ್ರಮ ಮರಳು ದಂಧೆಕೋರರು ರಾತ್ರಿವೇಳೆಯಲ್ಲಿಯೇ ಮರಳುಗಣಿಗಾರಿಕೆ ನಡೆಸುತ್ತಿದ್ದಾರೆ.

ಇಷ್ಟೆಲ್ಲ ಆಗುತ್ತಿದ್ದರೂ ಕೃಷ್ಣರಾಜಪೇಟೆ ತಾಲೂಕು ಆಡಳಿತ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಪೋಲಿಸರು ಇದುವರೆಗೆ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಏಕೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಇನ್ನು ಮುಂದೆಯಾದರೂ ಹೇಮಾವತಿ ನದಿಯ ಒಡಲಿನಲ್ಲಿ ಅಕ್ರಮವಾಗಿ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕ ಬೇಕಾಗಿದೆ. ಇಲ್ಲದೆ ಹೋದರೆ ಹೇಮಾವತಿಯ ಒಡಲು ಬರಿದಾಗುವುದಲ್ಲದೆ, ಸೇತುವೆಗೂ ಅಪಾಯ ತಂದೊಡ್ಡುವ ಸಾಧ್ಯತೆ ಹೆಚ್ಚಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
177
Lava Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು