News Karnataka Kannada
Monday, April 29 2024
ಮಂಡ್ಯ

ಬಿಜೆಪಿ, ಜೆಡಿಎಸ್ ಪಕ್ಷ ರಾಜ್ಯ ಹಾಗೂ ಮಂಡ್ಯದ ರೈತರಿಗೆ ದ್ರೋಹ ಬಗೆದಿದೆ- ರಣದೀಪ್ ಸಿಂಗ್ ಸುರ್ಜೆವಾಲ

Randeep Surjewala insulted ST community: Siddaraju
Photo Credit : Twitter

ಮಂಡ್ಯ: ಈ ರೈತ ಭೂಮಿಗೆ, ಮಂಡ್ಯದ ಜನತೆಗೆ ನಮನಗಳು. ನಾನು ಕೂಡ ಕಬ್ಬು ಬೆಳೆಯುವ ಭೂಮಿಯಿಂದ ಬಂದಿದ್ದೇನೆ. ಬಿಜೆಪಿ ಹಾಗೂ ಜೆಡಿಎಸ್ ಪಕ್ಷವು ರಾಜ್ಯ ಹಾಗೂ ಮಂಡ್ಯದ ರೈತರಿಗೆ ದ್ರೋಹ ಬಗೆದಿದೆ. ದೇಶದ ಬೆನ್ನೆಲುಬಾಗಿರು ಹಾಗೂ ದೇಶದ ಶೇ.72ರಷ್ಟು ಜನಸಂಖ್ಯೆ ಇರುವ ರೈತಾಪಿ ವರ್ಗದ ಆದಾಯ 2022ರ ವೇಳೆಗೆ ಡಬಲ್ ಮಾಡುತ್ತೇವೆ ಎಂದ ಬಿಜೆಪಿ ಸರ್ಕಾರ, ಮಂಡ್ಯ ಕಬ್ಬು, ಭತ್ತ, ರಾಗಿ ಬೆಳೆಗಾರರ ಆದಾಯ ಡಬಲ್ ಮಾಡಿದೆಯೇ? ಆದಾಯ ಡಬಲ್ ಮಾಡುವ ಬದಲು ದೇಶದಲ್ಲಿ ಮೊದಲ ಬಾರಿಗೆ ಕೃಷಿಯ ಮೇಲೆ ತೆರಿಗೆ ವಿಧಿಸಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಹೇಳಿದರು.

ಕೀಟನಾಶಕದ ಮೇಲೆ ಶೇ.18, ಟ್ರ್ಯಾಕ್ಟರ್ ಹಾಗೂ ಯಂತ್ರೋಪಕರಣಗಳ ಮೇಲೆ ಶೇ.12ರಷ್ಟು ಜಿಎಸ್ಟಿ ವಿಧಿಸಿದೆ. ಡೀಸೆಲ್ ಬೆಲೆ ಕಾಂಗ್ರೆಸ್ ಅವಧಿಯಲ್ಲಿ 56 ರೂ. ಇತ್ತು, ಬಿಜೆಪಿ ಆಡಳಿತದಲ್ಲಿ ಇಂದು 92 ರೂ. ಆಗಿದೆ. ಡೀಸೆಲ್ ಹಾಗೂ ಪೆಟ್ರೋಲ್ ಮೇಲಿನ ತೆರಿಗೆ ಮೂಲಕ ಕಳೆದ 8 ವರ್ಷಗಳಲ್ಲಿ ಮೋದಿ ಸರ್ಕಾರ 25 ಲಕ್ಷ ಕೋಟಿ ಆದಾಯ ಮಾಡಿದೆ. ಪ್ರಧಾನಮಂತ್ರಿ ಫಸಲ್ ವಿಮಾ ಯೋಜನೆ ಖಾಸಗಿ ವಿಮಾ ಕಂಪನಿಗಳ ಲಾಭದ ಯೋಜನೆಯಾಗಿದೆ. ಖಾಸಗಿ ವಿಮಾ ಕಂಪನಿ 30 ಲಕ್ಷ ಕೋಟಿ ಲೂಟಿ ಮಾಡಿವೆ.

ನೀವು ಜಿಲ್ಲೆಯಲ್ಲಿ 7ಕ್ಕೆ 7ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಿದ್ದೀರಿ. ಆದರೆ ಅವರು ರೈತ ವಿರೋಧಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಜೆಡಿಎಸ್ ಬೆಂಬಲ ನೀಡಿದೆ. ಜೆಡಿಎಸ್ ಹಾಗೂ ಬಿಜೆಪಿ ಕಬ್ಬು ಬೆಳೆಗಾರರ ಬಗ್ಗೆ ಕಾಳಜಿ ವಹಿಸಿದ್ದಾರಾ? ಕಬ್ಬಿಗೆ ಎಫ್ಆರ್ ಪಿ ಮೊತ್ತ 4ರಿಂದ 4.5 ಸಾವಿರ ಬೇಕು ಎಂದು ರೈತರು ಆಗ್ರಹಿಸುತ್ತಿದ್ದು, ಈ ಸರ್ಕಾರ ಕೇವಲ 3050 ಮಾತ್ರ ನೀಡುತ್ತಿದೆ. ಸಕ್ಕರೆಗೆ ಬೆಲೆ ನಿಗದಿ ಮಾಡಿರುವಾಗ ರೈತರು ಬೆಳೆಯುವ ಕಬ್ಬಿಗೆ ಬೆಲೆ ನಿಗದಿ ಮಾಡಲಾಗುತ್ತಿಲ್ಲ ಯಾಕೆ? ಮಂಡ್ಯದ ಶಾಸಕರುಗಳಲ್ಲಿ ಒಬ್ಬರು ಅಕ್ರಮ ಗಣಿಗಾರಿಕೆಯಲ್ಲಿ, ಮತ್ತೊಬ್ಬರು ಐಟಿಐ ಪ್ರಾಂಶುಪಾಲರ ಮೇಲೆ ಹಲ್ಲೆ ಮಾಡುತ್ತಿದ್ದಾರೆ. ದುರಾದೃಷ್ಟವಶಾತ್ ಮಂತ್ರಿಯೊಬ್ಬರಿಗೆ ಕನ್ನಡದಲ್ಲಿ ಭಾ,ಣ ಮಾಡಲು ಬರುವುದಿಲ್ಲ.

ಮಂಡ್ಯದ ಸೋದರ ಸೋದರಿಯರೇ, ಬದಲಾವಣೆಯ ದಿನ ಹತ್ತಿರ ಬಂದಿದೆ. ಈ ಬದಲಾವಣೆ ನಿಮ್ಮ ಕಾಂಗ್ರೆಸ್ ಪಕ್ಷ. ನಮ್ಮ ಪಕ್ಷ ನಿಮಗಾಗಿ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದೆ. ನಾವು ಪರಿಶಿಷ್ಟರ ಕಲ್ಯಾಣಕ್ಕೆ ವಿಶೇಷ ನೀತಿ ಸಿದ್ಧಪಡಿಸಿದ್ದೇವೆ. ಹಿಂದುಳಿದವರು, ದಲಿತರ ಮೇಲೆ ದೌರ್ಜನ್ಯವನ್ನು ನಾವು ಸಹಿಸುವುದಿಲ್ಲ. ಇದು ಪ್ರಜಾಧ್ವನಿ ಯಾತ್ರೆಯ ಅಜೆಂಡಾ. ಹೀಗಾಗಿ ನಾನು ನಿಮ್ಮಲ್ಲಿ ಮುಂದಿನ ದಿನಗಳಲ್ಲಿ ನೀವು ಕಾಂಗ್ರೆಸ್ ಬಾವುಟ ಹಾರಿಸಿ ಎಂದು ಮನವಿ ಮಾಡಿಕೊಳ್ಳುತ್ತೇನೆ. ನಂತರ ನಾವು ಮಂಡ್ಯ ಹಾಗೂ ರಾಜ್ಯದ ಜನರ ಬದುಕನ್ನು ಬದಲಿಸುತ್ತೇವೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮಾತುಗಳು

ಪ್ರಜಾಧ್ವನಿ ಎಂದರೆ ಈ ನಾಡಿದ 5 ಕೋಟಿ ಮತದಾರರ ಧ್ವನಿ. 2013ರಲ್ಲಿ ರಾಜ್ಯದ ಜನ ಕಾಂಗ್ರೆಸ್‌ ಪಕ್ಷಕ್ಕೆ ಆಶೀರ್ವಾದ ಮಾಡಿದ್ದರು, 2013 ರ ಮೇ 13ರಂದು ಬಸವಜಯಂತಿ ದಿನದಂದು ಪ್ರಮಾಣ ವಚನ ಸ್ವೀಕಾರ ಮಾಡಿದ್ದೆ, ಇದಕ್ಕೆ ಕಾರಣ ಬಸವಾದಿ ಶರಣರು ಹೇಗೆ ನುಡಿದಂತೆ ನಡೆದಿದ್ದರೋ ಹಾಗೆ ನಮ್ಮ ಸರ್ಕಾರವೂ ನುಡಿದಂತೆ ನಡೆಯಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಕಂಠೀರವ ಕ್ರೀಡಾಂಗಣದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿ ನೇರವಾಗಿ ಕ್ಯಾಬಿನೆಟ್‌ ಹಾಲ್‌ ಗೆ ಹೋಗಿ ನಮ್ಮ 5 ಭರವಸೆಗಳನ್ನು ಈಡೇರಿಸಿ, ಆದೇಶ ಹೊರಡಿಸುವ ಕೆಲಸ ಮಾಡಿದೆ. ನಾವು ಜನರಿಗೆ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೆವು.

ನಾವು ಈ ಬಾರಿ ಕೂಡ ಪ್ರತೀ ಮನೆಗೆ 200 ಯುನಿಟ್‌ ವಿದ್ಯುತ್‌ ಅನ್ನು ಉಚಿತವಾಗಿ ನೀಡುತ್ತೇವೆ, ಪ್ರತೀ ಮನೆಯ ಯಜಮಾನಿಗೆ ತಿಂಗಳಿಗೆ 2000 ದಂತೆ ವರ್ಷಕ್ಕೆ 24,000 ರೂ. ನೀಡುತ್ತೇವೆ ಎಂಬ ಭರವಸೆ ನೀಡಿದ್ದೇವೆ. ಮುಂದೆ ನಾವು ಅಧಿಕಾರಕ್ಕೆ ಬಂದ ಮೇಲೆ ಪ್ರತೀ ಬಡವನಿಗೆ ತಲಾ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತೇವೆ. ಇವುಗಳ ಜೊತೆ ಇನ್ನು ಕೆಲವು ಭರವಸೆಗಳನ್ನು ನೀಡುತ್ತೇವೆ ಮತ್ತು ಅವೆಲ್ಲವನ್ನು ಈಡೇರಿಸುವ ಕೆಲಸ ಮಾಡುತ್ತೇವೆ. ಇದನ್ನು ನೋಡಿದ ಮೇಲೆ ಬಿಜೆಪಿ ಮತ್ತು ಜೆಡಿಎಸ್‌ ಗೆ ಸೋಲಿನ ಭಯ ಶುರುವಾಗಿದೆ. ನಮ್ಮ ಮೇಲಿನ ಭಯದಿಂದ ಈ ಯೋಜನೆಗಳಿಗೆ ಹಣ ಎಲ್ಲಿಂದ ತರ್ತೀರ ಎಂದು ಕೇಳುತ್ತಿದ್ದಾರೆ. ಹಿಂದೆ 7 ಕೆ.ಜಿ ಅಕ್ಕಿ ನೀಡಿದಾಗಲೂ ಇದೇ ರೀತಿ ಹೇಳಿ ಉಚಿತವಾಗಿ ಅಕ್ಕಿ ನೀಡಿ ದುಡಿಯುವ ಬಡಜನರನ್ನು ಸೋಮಾರಿ ಮಾಡುತ್ತಿದ್ದೀರಿ ಎಂದು ಹೇಳಿದ್ದರು.

ಗುರುಪಾದಪ್ಪ ನಾಗಮಾರಪಲ್ಲಿ ಎಂಬ ಶಾಸಕ ನಾನು ಬಡವರಿಗೆ ಉಚಿತವಾಗಿ ಅಕ್ಕಿ ಕೊಟ್ಟಾಗ ಕೂಲಿ ಕೆಲಸಗಳಿಗೆ ಬಡವರು ಸಿಗೋದಿಲ್ಲ, ಯಾಕ್ರೀ ಸಿದ್ದರಾಮಯ್ಯ ಬಡವರಿಗೆ ಉಚಿತವಾಗಿ ಅಕ್ಕಿ ಕೊಟ್ರೀ ಎಂದು ಕೇಳಿದ್ರು, ಅದಕ್ಕೆ ನಾನು “ಇಷ್ಟು ದಿನ ಬಡವರು ಗೆಯ್ದು ಗೆಯ್ದು ಸುಸ್ತಾಗಿದ್ದಾರೆ, ಅವರೊಂದಷ್ಟು ದಿನ ವಿಶ್ರಾಂತಿ ತೆಗೆದುಕೊಳ್ಳಲಿ, ನೀವು ಈಗ ಸ್ವಲ್ಪ ಹೊಲ ಗದ್ದೆಗಳಲ್ಲಿ ಹೋಗಿ ಕೆಲಸ ಮಾಡಿ” ಎಂದು ಹೇಳಿದ್ದೆ. ಬಡವರಾಗಿ ಹುಟ್ಟಿದ್ದಕ್ಕೆ ಜೀವನ ಪೂರ್ತಿ ಕೂಲಿ ಮಾಡಬೇಕ? ಅವರಿಗೂ ವಿಶ್ರಾಂತಿ ಬೇಡ್ವಾ? ಬಸವಾದಿ ಶರಣರು ಕಾಯಕ ಮತ್ತು ದಾಸೋಹದ ಕಲ್ಪನೆಯನ್ನು ನೀಡಿದ್ದಾರೆ. ದೇಶದಲ್ಲಿ ಎಲ್ಲರೂ ಕ್ರಿಯಾಶೀಲರಾಗಿ ಉತ್ಪಾದನೆ ಮಾಡಬೇಕು ಮತ್ತು ಉತ್ಪಾದನೆಯಾದ ಸಂಪತ್ತನ್ನು ಎಲ್ಲರೂ ಹಂಚಿಕೊಳ್ಳಬೇಕು, ಬಸವಣ್ಣನವರ ಪೂಜೆ ಮಾಡುವ ನಿಮಗೆ ಬಸವಣ್ಣನ ಆದರ್ಶವೇ ಗೊತ್ತಿಲ್ಲದಿದ್ದರೆ ಹೇಗಪ್ಪಾ? ಎಂದು ನಾಗಮಾರಪಲ್ಲಿ ಅವರನ್ನು ಪ್ರಶ್ನೆ ಕೇಳಿದ್ದೆ.

ಮುಂದೆ ನಾವು ಅಧಿಕಾರಕ್ಕೆ ಬಂದ ಮೊದಲ ದಿನವೇ, ಸಂಪುಟ ಸಭೆ ಮಾಡಿ ಉಚಿತ ಅಕ್ಕಿ, 200 ಯುನಿಟ್‌ ವಿದ್ಯುತ್‌ ಮತ್ತು ತಿಂಗಳಿಗೆ 2000 ರೂ. ನೀಡುವ ಆದೇಶ ಹೊರಡಿಸುತ್ತೇವೆ. ಒಂದು ವೇಳೆ ನಾವು ಕೊಟ್ಟ ಮಾತಿಗೆ ತಪ್ಪಿದರೆ ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳುತ್ತೇವೆ. ರಾಜಕಾರಣ ಮಾಡುವುದು ಜನರಿಗೆ ಟೋಪಿ ಹಾಕುವುದಕ್ಕಲ್ಲ.

ಮಂಡ್ಯದ ಸಕ್ಕರೆ ಕಾರ್ಖಾನೆಗೆ ನಾನು ಮುಖ್ಯಮಂತ್ರಿಯಾಗಿರುವಾಗ ಸರ್ಕಾರದಿಂದ ಹಣ ನೀಡಿ ಪ್ರತೀ ವರ್ಷ ಕಾರ್ಖಾನೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದೆ. ಕುಮಾರಸ್ವಾಮಿ ಬಂದ ಮೇಲೆ ಅನುದಾನ ನೀಡದೆ ನಿಂತುಹೋಗಿತ್ತು, ಈ ಬಿಜೆಪಿಯವರು ಅತ್ತು ಕರೆದು ಈಗ ಆರಂಭ ಮಾಡಿದ್ದಾರೆ ಆದರೆ ಈ ವರೆಗೆ ಕಬ್ಬು ಅರೆದಿರುವುದು 9000 ಮೆಟ್ರಿಕ್‌ ಟನ್‌ ಮಾತ್ರ. ಈ ಭಾಗದಲ್ಲಿ ಮೂರುವರೆ ಲಕ್ಷ ಮೆಟ್ರಿಕ್ ಟನ್‌ ಕಬ್ಬನ್ನು ಬೆಳೆಯುತ್ತಾರೆ, ಇಲ್ಲಿ ಕಬ್ಬು ಅರೆಯಲಾಗದೆ ಬೇರೆ ಕಡೆಗಳಲ್ಲಿರುವ ಖಾಸಗಿ ಸಕ್ಕರೆ ಕಾರ್ಖಾನೆಗಳಿಗೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ಯಾವುದೇ ಕಾರಣಕ್ಕೂ ಮೈಶುಗರ್‌ ಸಕ್ಕರೆ ಕಾರ್ಖಾನೆಯನ್ನು ಖಾಸಗೀಕರಣ ಮಾಡಬಾರದು, ಈ ಕಾರ್ಖಾನೆಯನ್ನು ಆಧುನೀಕರಣ ಮಾಡಿ ಇಲ್ಲಿನ ರೈತರ ಕಬ್ಬನ್ನು ಕೊಂಡು ಇಲ್ಲಿಯೇ ಅರೆಯುವ ಕೆಲಸ ಆಗಬೇಕು ಎಂದು‌ ಬೊಮ್ಮಾಯಿ ಅವರ ಬಳಿ ನಾವು ಒತ್ತಾಯ ಮಾಡಿದ ಮೇಲೆ, ರೈತ ಸಂಘಗಳು ಪ್ರತಿಭಟನೆ ಮಾಡಿದ ಮೇಲೆ, ನಾವು ಈ ಕಾರ್ಖಾನೆಯನ್ನು ಮಾರಲ್ಲ ಎಂದು ಬೊಮ್ಮಾಯಿ ಹೇಳಿದ್ರು. ಮುರುಗೇಶ್‌ ನಿರಾಣಿ ಈ ಕಾರ್ಖಾನೆಯನ್ನು ಖರೀದಿ ಮಾಡಲು ಕಾಯುತ್ತಾ ಕೂತಿದ್ದರು. ಸರಿಯಾದ ಕ್ರಮದಲ್ಲಿ ಈ ಕಾರ್ಖಾನೆಯನ್ನು ನಡೆಸಿದ್ರೆ ಎಂದಿಗೂ ನಷ್ಟವಾಗಲ್ಲ. ಕೋ ಜನರೇಷನ್‌ ಮಾಡಬೇಕು, ಲಿಕ್ಕರ್‌ ಮತ್ತು ಎಥೆನಾಲ್‌ ತಯಾರು ಮಾಡಿದಾಗ ಮಾತ್ರ ಸಕ್ಕರೆ ಕಾರ್ಖಾನೆ ಲಾಭದಲ್ಲಿ ನಡೆಯಲು ಸಾಧ್ಯವಾಗುತ್ತದೆ.

ಬೊಮ್ಮಾಯಿ ಅವರು ಕಳೆದ ವರ್ಷ ಮೈಶುಗರ್‌ ಸಕ್ಕರೆ ಕಾರ್ಖಾನೆಗೆ 50 ಕೋಟಿ ರೂ. ಅನುದಾನ ನೀಡುವುದಾಗಿ ಹೇಳಿದ್ದರು, ಆದರೆ ಈ ವರೆಗೆ ನೀಡಿರುವುದು ಕೇವಲ 30 ಕೋಟಿ ರೂ. ಮಾತ್ರ. ಉಳಿದ 20 ಕೋಟಿ ರೂ. ಕೊಡಿ ಎಂದು ಕೇಳಿದರೆ ಸಾಲ ತೆಗೆದುಕೊಳ್ಳಲು ಹೇಳಿದ್ದಾರಂತೆ. ಅವರೇ ಸಾಲ ಮಾಡುವುದಾದರೆ ಬೊಮ್ಮಾಯಿ ಯಾಕಿದ್ದಾರೆ? ನಾವು ಅಧಿಕಾರಕ್ಕೆ ಬಂದ ಮೇಲೆ ಈ ಕಾರ್ಖಾನೆಯನ್ನು ಆಧುನೀಕರಣಗೊಳಿಸಿ, ಈ ಭಾಗದ ಎಲ್ಲಾ ರೈತರ ಕಬ್ಬನ್ನು ಅರೆಯಲು ಎಷ್ಟೇ ಹಣ ಖರ್ಚಾದರೂ ನಾವು ಈ ಕೆಲಸ ಮಾಡುತ್ತೇವೆ.

ಮಂಡ್ಯದಲ್ಲಿ ರಾಜಕೀಯ ಬದಲಾವಣೆ ಆದರೆ ಇಡೀ ರಾಜ್ಯದಲ್ಲಿ ಬದಲಾವಣೆ ಆಗುತ್ತದೆ. ಕಳೆದ ಬಾರಿ 7 ಸ್ಥಾನಗಳಲ್ಲಿ ನಮಗೆ ಒಂದೂ ಸ್ಥಾನ ಸಿಗಲಿಲ್ಲ, ಈ ಬಾರಿ 7 ಸ್ಥಾನಗಳಲ್ಲಿ ಕನಿಷ್ಠ 5 ರಿಂದ 6 ಸ್ಥಾನಗಳನ್ನು ಗೆಲ್ಲಿಸಿಕೊಡುವ ಕೆಲಸ ಮಾಡಿ. ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ, ನಾವು ಅಧಿಕಾರಕ್ಕೆ ಬರುವುದು ಅಷ್ಟೇ ಸತ್ಯ, ಇದನ್ನು ನಾನು ನಾಡಿನ ಜನರ ನಾಡಿ ಮಿಡಿತವನ್ನು ನೋಡಿ ಹೇಳುತ್ತಿದ್ದೇನೆ. ನಾವು ಅಧಿಕಾರಕ್ಕೆ ಬಂದ ವೇಳೆ ಈ ಭಾಗದಿಂದಲೂ ಶಾಸಕರು ನಮ್ಮ ಜೊತೆ ಇರಬೇಕು, ನಿಮಗೆ ಯಾವುದೇ ಕಷ್ಟ ಬಂದರೂ ನಾವು ನಿಮ್ಮ ಜೊತೆ ಇರುತ್ತೇವೆ.

ಜೆಡಿಎಸ್‌ ನ ನಂಬಬೇಡಿ, ಇಲ್ಲಿ ನಮಗೆ ಮತ್ತು ಜೆಡಿಎಸ್‌ ಗೆ ಹೋರಾಟ ಇದೆ. ನಾವು ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದ್ದೆವು, ಅವರಿಂದ ಶಾಸಕರನ್ನು ಸರಿಯಾಗಿ ನೋಡಿಕೊಳ್ಳಲು ಆಗದೆ ಹೋಗಿದ್ದಕ್ಕೆ 17 ಜನ ಬಿಜೆಪಿಗೆ ಹೋದರು. ಕುಮಾರಸ್ವಾಮಿ ಅವರು ಸಮ್ಮಿಶ್ರ ಸರ್ಕಾರ ಬೀಳಲು ನಾನು ಕಾರಣ ಎಂದು ಹೇಳುತ್ತಿದ್ದಾರೆ, ನಮ್ಮ ಶಾಸಕರನ್ನು ನಾನು ಕಳಿಸಿದ್ದಾದರೆ, ಜೆಡಿಎಸ್‌ ಶಾಸಕರನ್ನು ಕಳಿಸಿದ್ದು ಯಾರಪ್ಪ? ನೀವೆ ಕಳಿಸಿದ್ರಾ? ನೀವು ವೆಸ್ಟೆಂಡ್‌ ಹೋಟೆಲ್‌ ನಲ್ಲಿ ಉಳಿದುಕೊಂಡು ಅಧಿಕಾರ ಮಾಡಲು ಆಗುತ್ತಾ? ಜನರು, ಮಂತ್ರಿಗಳು, ಅಧಿಕಾರಿಗಳು, ಶಾಸಕರನ್ನು ಭೇಟಿ ಮಾಡಿದರೆ ಮಾತ್ರ ಒಳ್ಳೆ ಅಧಿಕಾರ ನೀಡಲು ಸಾಧ್ಯವಾಗುತ್ತದೆ. ಗಾಜಿನ ಮನೆಯಲ್ಲಿ ಕೂತು ಅಧಿಕಾರ ನಡೆಸಲು ಹೊರಟದ್ದೆ ಕುಮಾರಸ್ವಾಮಿ ತಪ್ಪು.

ನಮ್ಮ ಪಕ್ಷದಿಂದ 80 ಶಾಸಕರು ಆಯ್ಕೆಯಾಗಿದ್ದರೂ, 37 ಜನ ಶಾಸಕರು ಇದ್ದ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿ ಮಾಡಿದೆವು, ಇದಕ್ಕೆ ಕಾರಣ ಕೋಮುವಾದಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಬಾರದು ಎಂಬುದು. ಆದರೆ ಕುಮಾರಸ್ವಾಮಿ ಕೈಲಿ ಅಧಿಕಾರ ಉಳಿಸಿಕೊಳ್ಳಲು ಆಗಲಿಲ್ಲ. ಕೊಟ್ಟ ಕುದುರೆ ಏರಲಾರದವ ವೀರನೂ ಅಲ್ಲ, ಶೂರನೂ ಅಲ್ಲ ಎಂಬ ಅಲ್ಲಮಪ್ರಭುಗಳ ಮಾತುಗಳು ಅವರಿಗೆ ಹೊಂದಿಕೆಯಾಗುತ್ತದೆ.

ಮಾತೆತ್ತಿದರೆ ನಾವು 123 ಸ್ಥಾನಗಳಲ್ಲಿ ಗೆಲ್ಲುತ್ತೇವೆ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಜೆಡಿಎಸ್‌ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ಸಾಧ್ಯವೇ ಇಲ್ಲ. ನಾವಿದ್ದಾಗಲೇ 59 ಸ್ಥಾನ ಗೆದ್ದಿತ್ತು, ನಾವು ಬಿಟ್ಟ ಮೇಲೆ 29 ಸ್ಥಾನ ಬಂದಿತ್ತು. ಈ ಬಾರಿ 20 ರಿಂದ 22 ಜನ ಗೆದ್ದರೆ ಅದೇ ಹೆಚ್ಚು. ಇಂಥವರ ಕೈಗೆ ಅಧಿಕಾರ ಕೊಡುತ್ತೀರ?

ಬಿಜೆಪಿ ಒಂದು ಕೋಮುವಾದಿ ಪಕ್ಷ. ಧರ್ಮ ಧರ್ಮಗಳ ನಡುವೆ ಸಂಘರ್ಷ ಉಂಟುಮಾಡಿ, ಸಮಾಜ ಒಡೆಯುವ ಕೆಲಸ ಮಾಡಿದ್ದಾರೆ. ಹಿಜಾಬ್‌, ಹಲಾಲ್‌, ಜಾತ್ರೆಗಳಲ್ಲಿ ವ್ಯಾಪಾರ ನಿರ್ಬಂಧ ಮಾಡಿ ಯುವಜನರ ಮನಸುಗಳನ್ನು ಒಡೆದಿದ್ದಾರೆ, ಹಾಗಾಗಿಯೇ ರಾಹುಲ್‌ ಗಾಂಧಿ ಅವರು ಒಡೆದ ಸಮಾಜವನ್ನು ಜೋಡಿಸಬೇಕು ಎಂದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3570 ಕಿ.ಮೀ ಉದ್ದದ ಭಾರತ್‌ ಜೋಡೋ ಯಾತ್ರೆ ಮೂಲಕ ನಡಿಗೆ ಕೈಗೊಂಡಿದ್ದಾರೆ. ದೇಶದಲ್ಲಿ ಸಹೋದರತ್ವ, ಸಾಮರಸ್ಯ ಮೂಡಬೇಕು ಎಂಬುದು ರಾಹುಲ್‌ ಗಾಂಧಿ ಅವರ ಉದ್ದೇಶ.

ಮಂಡ್ಯದಲ್ಲಿ 4 ಲಕ್ಷದ 80 ಸಾವಿರ ಜಾನುವಾರುಗಳಿವೆ. ಚರ್ಮಗಂಟು ರೋಗದಿಂದ ಮಂಡ್ಯದಲ್ಲಿ ಸುಮಾರು 5000 ಜಾನುವಾರುಗಳು ನರಳುತ್ತಿವೆ. ವೈದ್ಯರು, ಔಷಧಿ, ಲಸಿಕೆ ಈ ಯಾವುದೂ ಇಲ್ಲದೆ ಹಾಲಿನ ಉತ್ಪಾದನೆಯ ಪ್ರಮಾಣ ಕಡಿಮೆಯಾಗಿದೆ. ಜೂನ್‌ ನಲ್ಲಿ ರಾಜ್ಯದಲ್ಲಿ ನಿತ್ಯ ಉತ್ಪಾದನೆಯಾಗುತ್ತಿದ್ದ ಹಾಲು 94 ಲಕ್ಷ ಲೀಟರ್‌, ಈಗ ಅದು 76 ಲಕ್ಷ ಲೀಟರ್‌ ಗೆ ಇಳಿಕೆ ಕಂಡಿದೆ. ಮಂಡ್ಯ ಜಿಲ್ಲೆಯೊಂದರಲ್ಲೇ ಒಂದು ಲಕ್ಷ ಲೀಟರ್‌ ಹಾಲಿನ ಉತ್ಪಾದನೆ ಕಡಿಮೆಯಾಗಿದೆ. ಬೊಮ್ಮಾಯಿ ಸರ್ಕಾರದ ಪಶುಸಂಗೋಪನಾ ಸಚಿವರಿಗೆ ಈ ಯಾವ ಲೆಕ್ಕವೂ ಗೊತ್ತಿಲ್ಲ. ಸದನದಲ್ಲಿ ಪ್ರಶ್ನೆ ಕೇಳಿದ್ರೆ ಉತ್ತರ ಕೊಡದೆ ತಪ್ಪಿಸಿಕೊಂಡು ಓಡಿಹೋದರು. ಹಿಂದೆ ನಾವು ಅಧಿಕಾರದಲ್ಲಿದ್ದಾಗ ಒಂದು ಲೀಟರ್‌ ಹಾಲಿಗೆ 5 ರೂ. ಪ್ರೋತ್ಸಾಹಧನವನ್ನು ನೀಡುತ್ತಿದ್ದೆವು, ಕುಮಾರಸ್ವಾಮಿ ಬಂದಮೇಲೆ ಇದನ್ನು ಹೆಚ್ಚು ಮಾಡಿಲ್ಲ, ಮತ್ತೆ ನಾವು ಅಧಿಕಾರಕ್ಕೆ ಬಂದ ಮೇಲೆ 6ರೂ. ಗೆ ಹೆಚ್ಚು ಮಾಡುತ್ತೇವೆ.

ಹಾಲು ಉತ್ಪಾದನಾ ಘಟಕದಲ್ಲೇ ಲಂಚದ ಹಾವಳಿ ಇದೆ. ಬಡವರ ರಕ್ತವನ್ನು ಹೀರಿ ಸರ್ಕಾರ ನಡೆಸುತ್ತಿದ್ದಾರೆ. ಹಾಲು, ಮೊಸರು, ಮಜ್ಜಿಗೆ, ಪೆನ್ನು, ಪುಸ್ತಕ, ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌, ಗೊಬ್ಬರ, ಸಿಮೆಂಟ್‌, ಅಡುಗೆ ಎಣ್ಣೆ ಮೇಲೆ ಅತ್ಯಧಿಕ ಜಿಎಸ್‌ಟಿ ಹಾಕಿ ಜನರ ಲೂಟಿ ಮಾಡುತ್ತಿದ್ದಾರೆ. ಮನಮೋಹನ್‌ ಸಿಂಗ್‌ ಅವರ ಸರ್ಕಾರ ಇದ್ದಾಗ 414 ರೂ. ಇದ್ದ ಗ್ಯಾಸ್‌ ಬೆಲೆ ಇಂದು 1,150 ರೂ. ಆಗಿದೆ. ನಾಡಿನ ಮಹಿಳೆಯರಿಗೆ ಇಷ್ಟು ಹಣ ಕೊಡಲು ಹೊಟ್ಟೆ ಉರಿಯುವುದಿಲ್ವಾ? ತಿಗಣೆಗಳ ರೀತಿ ಜನರ ರಕ್ತ ಕುಡಿಯುತ್ತಿದ್ದಾರೆ. ಈ ಸರ್ಕಾರ ಅಲಿಬಾಬಾ ಮತ್ತು 40 ಮಂದಿ ಕಳ್ಳರ ಗುಂಪು.

ಈ ಭ್ರಷ್ಟ, ರೈತ ವಿರೋಧಿ, ಜನವಿರೋಧಿ ಸರ್ಕಾರವನ್ನು ಕಿತ್ತುಹಾಕಿ, ಕಾಂಗ್ರೆಸ್‌ ಪಕ್ಷಕ್ಕೆ ಅಧಿಕಾರ ನೀಡುವ ಕೆಲಸ ಮಾಡಬೇಕು ಎಂದು ಮನವಿ ಮಾಡುತ್ತೇನೆ.

ವಿಧಾನ ಪರಿಷತ್ ವಿರೋಧ ಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಅವರ ಮಾತುಗಳು

25 ವರ್ಷಗಳ ಹಿಂದೆ ಎಸ್.ಎಂ ಕೃಷ್ಣ ಅವರ ನೇತೃತ್ವದಲ್ಲಿ ಪಾಂಚಜನ್ಯ ಯಾತ್ರೆ ಮಾಡಿದ್ದೆವು. ಆಗ 1999ರಲ್ಲಿ ನಡೆದ ಚುನಾವಣೆಯಲ್ಲಿ ಜಿಲ್ಲೆಯ 9 ಕ್ಷೇತ್ರಗಳ ಪೈಕಿ 7 ಕ್ಷೇತ್ರವನ್ನು ಗೆದ್ದಿದ್ದೆವು. ಈಗ ಮತ್ತೆ ಈ ಭಾಗದ ನಾಯಕರಾದ ಶಿವಕುಮಾರ್ ಅವರಿಗೆ ನಾಯಕತ್ವ ಸಿಕ್ಕಿದೆ. ನೀವೆಲ್ಲರೂ ಅವರ ಶಕ್ತಿ ಹೆಚ್ಚಿಸಬೇಕು.

ಬಿಜೆಪಿ ಜನರಿಗೆ ಕೃಷಿ ಆಧಾರಿತ ಕಾರ್ಯಕ್ರಮವನ್ನು ನೀಡಿಲ್ಲ. ರೈತಾಪಿ ವರ್ಗದ ಜನರ ಜೀವನದ ಬಗ್ಗೆ ಅವರು ಮಾತನಾಡುವುದಿಲ್ಲ. ಅವರು ಕೇವಲ ಭಾವನಾತ್ಮಕ ವಿಚಾರಗಳನ್ನು ನಿಮ್ಮ ಮುಂದೆ ತರುತ್ತಾರೆ. ಇದುವರೆಗೂ ನೀವು ಅವರನ್ನು ಮಂಡ್ಯದೊಳಗೆ ಸೇರಿಸಿಕೊಂಡಿರಲಿಲ್ಲ. ಈಗ ರಾಜ್ಯದಲ್ಲಿ ಪ್ರವೇಶ ಮಾಡಲು ಸುಪ್ರೀಂ ಕೋರ್ಟ್ ನಲ್ಲಿ ಗಡಿಪಾರ್ ಆಗಿದ್ದ ಅಮಿತ್ ಶಾ ಮಂಡ್ಯಗೆ ಬಂದು ನಮ್ಮ ಸ್ವಾಭಿಮಾನದ ದೊಡ್ಡ ಗುರುತು ನಂದಿನಿಯನ್ನು ಅಮೂಲ ಜತೆ ವಿಲೀನ ಮಾಡುವುದಾಗಿ ಹೇಳಿದ್ದಾರೆ. ಆ ಮೂಲಕ ನಿಮ್ಮ ಸ್ವಾಭಿಮಾನಕ್ಕೆ ದೊಡ್ಡ ಪೆಟ್ಟು ನೀಡಿದ್ದಾರೆ. ಸ್ವಾಭೀಮಾನಕ್ಕೆ ಧಕ್ಕೆ ತಂದ, ರೈತ ಚಳುವಳಿ ಹತ್ತಿಕ್ಕಿರುವ, ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ತಂದಿರುವ, ಕಾರ್ಮಿಕ ವಿರೋಧಿ ನೀತಿ ಅನುಸರಿಸಿರುವ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು. ಬಿಜೆಪಿ ರೈತ ವಿರೋಧಿ, ಕಾರ್ಮಿಕ ವಿರೋಧಿ, ಕರ್ನಾಟಕದ ಸ್ವಾಭಿಮಾನದ ವಿರೋಧಿ, ಮಹಿಳಾ ವಿರೋಧಿಗಳಾಗಿದ್ದಾರೆ. ಇದರ ಜತೆಗೆ ಜೆಡಿಎಸ್ ನಾಯಕರು ನಿಮ್ಮ ಜಿಲ್ಲೆಗೆ ಏನು ಮಾಡಿದ್ದಾರೆ ಎಂದು ಆಲೋಚಿಸಿ. ನಿಮ್ಮ ಭವಿಷ್ಯ ಉಜ್ವಲವಾಗಲು, ಮಕ್ಕಳಿಗೆ ಉದ್ಯೋಗ ಸಿಗಬೇಕಾದರೆ, ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ.

ಬಿಜೆಪಿ ಮಂಡ್ಯದ ಐತಿಹಾಸಿಕ ಸಕ್ಕರೆ ಕಾರ್ಖಾನೆಯನ್ನು ಮಾರಲು ಹೋಗುತ್ತಿದ್ದಾರೆ. ಇದೇ ರೀತಿ ದೇಶದಲ್ಲಿ ಕಾಂಗ್ರೆಸ್ ಪಕ್ಷ ಕಟ್ಟಿರುವ ಎಲ್ಲ ಸರ್ಕಾರಿ ಸಂಸ್ಥೆಗಳನ್ನು ಮಾರುತ್ತಿದ್ದಾರೆ. ಹೀಗಾಗಿ ಕರ್ನಾಟಕ, ಮಂಡ್ಯದ ಸ್ವಾಭಿಮಾನವಾಗಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದು ಮನವಿ ಮಾಡುತ್ತೇನೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು