Categories: ಮಡಿಕೇರಿ

ಮಡಿಕೇರಿ: ಕೊಡವ ಮಕ್ಕಡ ಕೂಟದಿಂದ 58 ನೇ ಪುಸ್ತಕ ಬಿಡುಗಡೆ

ಮಡಿಕೇರಿ, ಆ.17: ಅಕ್ಷರಗಳು ಕಾಗದ ಮತ್ತು ಲೇಖನಿಯಿಂದ ದೂರವಾಗಿ ಸಾಮಾಜಿಕ ಜಾಲತಾಣಗಳನ್ನು ಆವರಿಸಿಕೊಳ್ಳುತ್ತಿರುವುದರಿಂದ ಭಾಷೆಯ ಮೌಲ್ಯ ಹಾಗೂ ಶುದ್ಧತೆ ಮರೆಯಾಗುತ್ತಿದೆ ಎಂದು ಬ್ರಹ್ಮಗಿರಿ ವಾರಪತ್ರಿಕೆಯ ಸಂಪಾದಕ ಹಾಗೂ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಡಾ.ಉಳ್ಳಿಯಡ ಎಂ.ಪೂವಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಕೊಡವ ಮಕ್ಕಡ ಕೂಟ ಪ್ರಕಟಿಸಿರುವ 58 ನೇ ಪುಸ್ತಕ, ಬರಹಗಾರ ಉಡುವೆರ ರಾಜೇಶ್ ಉತ್ತಪ್ಪ ಅವರು ಬರೆದಿರುವ “ಕೋಲೆಲ್ಲಿಯಾ…” ವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು. ಇಂದು ಸಾಹಿತ್ಯ ಪುಸ್ತಕಗಳ ರೂಪವನ್ನು ಪಡೆದುಕೊಳ್ಳದೆ ಸಾಮಾಜಿಕ ಜಾಲತಾಣಗಳಿಗೆ ಸೀಮಿತವಾಗುತ್ತಿರುವುದರಿಂದ ಇತಿಮಿತಿ ಇಲ್ಲದ ಅಕ್ಷರಗಳ ಬಳಕೆಯಿಂದ ಭಾಷೆ ಕಲುಷಿತಗೊಳ್ಳುತ್ತಿದೆ. ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ಭಾಷೆಯ ಮೌಲ್ಯ ಸಂಪೂರ್ಣವಾಗಿ ಕ್ಷೀಣಗೊಳ್ಳಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಅನ್ನದಾನ, ವಿದ್ಯಾ ದಾನದಂತೆ ಪುಸ್ತಕಗಳ ಪ್ರಕಟಣೆಯೂ ಜ್ಞಾನ ದಾನವಾಗಿದೆ. ಸುಮಾರು 122 ವರ್ಷಗಳ ಸಾಹಿತ್ಯ ಇತಿಹಾಸವನ್ನು ಹೊಂದಿರುವ ಕೊಡವ ಸಾಹಿತ್ಯ ಕ್ಷೇತ್ರ ಇಲ್ಲಿಯವರೆಗೆ ಕೇವಲ 500 ರಿಂದ 600 ಪುಸ್ತಕಗಳನ್ನಷ್ಟೇ ಹೊರ ತರಲು ಸಾಧ್ಯವಾಗಿದೆ. 1900 ರಲ್ಲಿ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಅವರು ನಾಟಕ ರಚನೆಯ ಮೂಲಕ ಕೊಡವ ಸಾಹಿತ್ಯಕ್ಕೆ ನಾಂದಿ ಹಾಡಿದರು. 1978 ರ ನಂತರ ಕೊಡವ ಭಾಷೆ ಹಾಗೂ ಸಾಹಿತ್ಯದ ಕುರಿತು ಜಾಗೃತಿ ಹೆಚ್ಚಾಯಿತು ಎಂದು ಪೂವಯ್ಯ ತಿಳಿಸಿದರು.

2500 ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಲೋಕದಲ್ಲಿ ಲಕ್ಷಾಂತರ ಪುಸ್ತಕಗಳು ಪ್ರಕಟಗೊಂಡಿವೆ. ಕೊಡವ ಭಾಷೆಯ ಮೌಲ್ಯಯುತ ಪುಸ್ತಕಗಳು ಮತ್ತಷ್ಟು ಬಿಡುಗಡೆಯಾಗಬೇಕು, ಇದು ನಿರಂತರ ಭಾಷೆ ಬಳಕೆಯಿಂದ ಮಾತ್ರ ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕೊಡವ ಪುಸ್ತಕೋದ್ಯಮ ಲಾಭವಿಲ್ಲದ ಒಂದು ಕ್ಷೇತ್ರವಾಗಿದೆ. ಆದರೂ ದಾನಿಗಳ ನೆರವಿನೊಂದಿಗೆ ಜ್ಞಾನ ದಾನದಲ್ಲಿ ಸಕ್ರಿಯವಾಗಿರುವ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಿಜಿರ ಬಿ.ಅಯ್ಯಪ್ಪ ಅವರ ಕಾರ್ಯ ಶ್ಲಾಘನೀಯವೆಂದು ಪೂವಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.

ಉತ್ಸಾಹಿ ಬರಹಗಾರ ರಾಜೇಶ್ ಉತ್ತಪ್ಪ ಅವರು ರಚಿಸಿರುವ ಕೊಡವ ಭಾಷೆಯ ಪುಸ್ತಕ “ಕೋಲೆಲ್ಲಿಯಾ” ದಲ್ಲಿ ಹಾಸ್ಯ, ಐಲಾಟ, ಕಾರ್ಯ, ಸಂದೇಶ, ಉಪದೇಶ, ಮುನ್ನೆಚ್ಚರಿಕೆ, ಅನುಭವ ಮತ್ತಿತರ 68 ವಿಚಾರಧಾರೆಗಳನ್ನು ಅಳವಡಿಸಲಾಗಿದೆ ಎಂದರು.
ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರು ಹಾಗೂ ತಿರಿ ಬೊಳ್ಚ ಕೊಡವ ಸಂಘದ ಅಧ್ಯಕ್ಷರಾದ ಉಳ್ಳಿಯಡ ಡಾಟಿ ಪೂವಯ್ಯ ಮಾತನಾಡಿ ಜನರಿಗೆ ಉಪಯೋಗವಾಗುವಂತಹ ಸತ್ವಯುತ ಮತ್ತು ಮೌಲ್ಯಯುತ ಪುಸ್ತಕಗಳನ್ನು ಸಾಹಿತ್ಯಾಸಕ್ತರು ಕೇಳಿ ಪಡೆಯುತ್ತಾರೆ. ಈ ರೀತಿಯ ಪುಸ್ತಕಗಳು ಹೊರ ಬರಬೇಕೆ ಹೊರತು ಕೇವಲ ಸಂಖ್ಯಾಬಲ ಮತ್ತು ಸನ್ಮಾನಕ್ಕಾಗಿ ಬಿಡುಗಡೆಗೊಳಿಸಬಾರದು ಎಂದು ತಿಳಿಸಿದರು.

ಅನೇಕರ ಮನೆಗಳಲ್ಲಿ ಪುಸ್ತಕಗಳಿರುತ್ತವೆ, ಆದರೆ ಓದುವ ಹವ್ಯಾಸ ಇರುವುದಿಲ್ಲ. ಸಾಹಿತ್ಯಕ್ಕೆ ಎಂದಿಗೂ ಸಾವಿಲ್ಲ, ಇತ್ತೀಚಿನ ದಿನಗಳಲ್ಲಿ ಚರಿತ್ರೆಯನ್ನು ತಿರುಚುವ ಕಾರ್ಯವಾಗುತ್ತಿದೆ. ಕೊಡಗಿನವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರೂ ಇವರುಗಳ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಾಹೀರಾತಿನಲ್ಲಿ ಉಲ್ಲೇಖವಿಲ್ಲ. ಇದಕ್ಕೆ ಪ್ರಮುಖ ಕಾರಣ ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಸಾಹಿತ್ಯ ರಚನೆಯಾಗದೆ ಇರುವುದು ಎಂದು ಅಭಿಪ್ರಾಯಪಟ್ಟರು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಜಿಲ್ಲೆಯ ಉತ್ಸಾಹಿ ಬರಹಗಾರರಿಗೆ ವರದಾನವಿದ್ದಂತೆ ಎಂದು ಡಾಟಿ ಕೊಂಡಾಡಿದರು.

ಸಮಾಜ ಸೇವಕ ಚೆರುಮಾಡಂಡ ಸತೀಶ್ ಸೋಮಣ್ಣ ಮಾತನಾಡಿ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಪುಸ್ತಕಗಳನ್ನು ಓದುವವರ ಸಂಖ್ಯೆ ಕಡಿಮೆಯಾಗಿದೆ. ಪ್ರತಿಯೊಬ್ಬರು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು, ಆ ಮೂಲಕ ಬರಹಗಾರರಿಗೆ ಪ್ರೋತ್ಸಾಹ ನೀಡಬೇಕೆಂದು ಕರೆ ನೀಡಿದರು.

ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ ಉತ್ಸಾಹಿ ಬರಹಗಾರರಿಗೆ ಪ್ರೋತ್ಸಾಹ ನೀಡುತ್ತಾ ಬರುತ್ತಿರುವ ಕೂಟ ಇಲ್ಲಿಯವರೆಗೆ 58 ಪುಸ್ತಕಗಳನ್ನು ಹೊರ ತಂದಿದೆ ಎಂದರು.

ಕೊಡವ ಜಾನಪದ ಕಲಾ ಪ್ರಕಾರಗಳು, ತರಬೇತಿ ಕಾರ್ಯಕ್ರಮವನ್ನು ನಡೆಸಿ ಯುವ ಜನರಿಗೆ ಕಲಿಸುತ್ತಾ ಬರುತ್ತಿದೆ. ಎಲ್ಲಾ ಕಾರ್ಯಕ್ರಮಗಳಲ್ಲಿ ದಕ್ಷಿಣ ಭಾರತದ ಮೊದಲ ಜಾನಪದ ಕೃತಿಯಾಗಿರುವ “ಪಟ್ಟೋಲೆ ಪಳಮೆ”ಯನ್ನು ಹಂಚುತ್ತಿದೆ. ಆ ಮೂಲಕ ಕೊಡವ ಸಂಸ್ಕೃತಿಯ ಬೆಳವಣಿಗೆಗೂ ಕಾರಣವಾಗಿದೆ. ಹಲವು ರಸ್ತೆಗಳಿಗೆ ಕೊಂಗಂಡ ಗಣಪತಿ, ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ, ಕೊರವಂಡ ನಂಜಪ್ಪ, ಪಂದ್ಯಂಡ ಬೆಳ್ಯಪ್ಪ ಅವರ ಹೆಸರುಗಳನ್ನು ಮರು ನಾಮಕರಣ ಮಾಡಲಾಗಿದೆ.

ಕೊಡವ ಸಾಹಿತ್ಯ ಅಕಾಡೆಮಿಯ ಸಹಯೋಗದಲ್ಲಿ ಕಳೆದ ಐದು ವರ್ಷಗಳಿಂದ “ಕುಂಞಯಡ ನಮ್ಮೆ”ಯನ್ನು ನಡೆಸಿಕೊಂಡು ಬರುತ್ತಿದ್ದು, ಕಳೆದ 8 ವರ್ಷಗಳಿಂದ ಎಳೆಯ ಮಕ್ಕಳಿಗೆ ಕೊಡವ ಸಂಸ್ಕೃತಿ, ಸಾಹಿತ್ಯದ ಬಗ್ಗೆ ಅಭಿರುಚಿ ಮೂಡಿಸುವ ಸಲುವಾಗಿ ವರ್ಷಂಪ್ರತಿ ಮಕ್ಕಳಿಗೆ ಆಟ್-ಪಾಟ್ ಪಡಿಪು ಕಾರ್ಯಕ್ರಮ ನಡೆಸುತ್ತಿದೆ. 4,000 ಆಟ್-ಪಾಟ್ ಪಡಿಪು ಪುಸ್ತಕವನ್ನು ಮುದ್ರಿಸಿ ಉಚಿತವಾಗಿ ಶಾಲಾ ಕಾಲೇಜು ಸೇರಿದಂತೆ ಹಲವು ಮಕ್ಕಳಿಗೆ ನೀಡಲಾಗಿದೆ.

ಕೊಡವ ಸಾಧಕ ಯುವಕ-ಯುವತಿಯರನ್ನು ಸೇರಿದಂತೆ ಹಲವು ಸಾಧಕರನ್ನು ಗುರುತಿಸಿ, ಅವರನ್ನು ಸನ್ಮಾನಿಸಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದೆ. ಇದರೊಂದಿಗೆ ಸಾಹಿತ್ಯಕ್ಕೆ ಸಾಕಷ್ಟು ಇಂಬು ನೀಡುತ್ತಿದೆ. ಹೆಚ್ಚು ಕೃತಿಗಳನ್ನು ರಚಿಸಿದ ಲೇಖಕರನ್ನು ಗುರುತಿಸಿ ಅವರನ್ನು ಗೌರವಿಸುತ್ತಿದೆ.

ಅಜ್ಜಮಾಡ ಕುಟುಂಬಸ್ಥರ ಪೂರ್ಣ ಸಹಕಾರದೊಂದಿಗೆ ಸ್ಕಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಪ್ರತಿಮೆ ಅನಾವರಣಗೊಳಿಸಲಾಗಿದೆ. ಅಜ್ಜಮಾಡ ದೇವಯ್ಯ ಅವರು ಹುತಾತ್ಮರಾದ ಸೆ.7 ರಂದು ಪ್ರತಿವರ್ಷ ಅವರ ಸ್ಮರಣೆಗಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ಅಯ್ಯಪ್ಪ ತಿಳಿಸಿದರು.

ಬರಹಗಾರ ಉಡುವೆರ ರಾಜೇಶ್ ಉತ್ತಪ್ಪ “ಕೋಲೆಲ್ಲಿಯಾ” ಪುಸ್ತಕದ ಕುರಿತು ಮಾತನಾಡಿದರು.

ಸಮಾಜ ಸೇವಕರಾದ ಮುಕ್ಕಟಿರ ಅಂಜು ಸುಬ್ರಮಣಿ ಉಪಸ್ಥಿತರಿದ್ದರು.

ಉಡುವೆರ ರಾಜೇಶ್ ಉತ್ತಪ್ಪ ಪರಿಚಯ 
ಸೋಮವಾರಪೇಟೆ ತಾಲ್ಲೂಕಿನ ಶಿರಂಗಳ್ಳಿ ಗ್ರಾಮದ ಉಡುವೆರ ಎನ್.ನಂಜುಂಡ ಹಾಗೂ ಡಾಟಿ ಪೂವಮ್ಮ (ತಾಮನೆ ಮೈತಾಡಿ ಮುಂಡಚಾಡಿರ) ದಂಪತಿಗಳ 4 ನೇ ಪುತ್ರ ಉಡುವೆರ ರಾಜೇಶ್ ಉತ್ತಪ್ಪ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಹವ್ಯಾಸಿ ಬರಹಗಾರರಾಗಿರುವ ಇವರು ಕನ್ನಡ ಮತ್ತು ಕೊಡವ ಭಾಷೆಯಲ್ಲಿ ಲೇಖನಗಳನ್ನು ಬರೆದಿದ್ದಾರೆ. ಕೊಡವ ವಾರಪತ್ರಿಕೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಬರಹಗಳ ಮೂಲಕ ಗಮನ ಸೆಳೆದಿದ್ದಾರೆ.

“ನೆಪ್ಪ್ರ ನಳ” ಕೊಡವ ಕಿರುಚಿತ್ರದಲ್ಲಿ ನಟನೆಯನ್ನು ಕೂಡ ಮಾಡಿದ್ದಾರೆ. ಇವರು ಒಳ್ಳೆಯ ಹಾಡುಗಾರರೂ ಹೌದು. ಬಿರುನಾಣಿ ಗ್ರಾಮದ ನೆಲ್ಲೀರ ಅಪ್ಪಯ್ಯ ಹಾಗೂ ಸುಶೀಲ ದಂಪತಿಗಳ ದ್ವಿತೀಯ ಪುತ್ರಿ ಸರಿತಾ ಅಪ್ಪಯ್ಯ ಅವರನ್ನು ವಿವಾಹವಾಗಿದ್ದು, ಆನ್ವಿ ಉತ್ತಪ್ಪ ಹೆಸರಿನ ಓರ್ವ ಪುತ್ರಿ ಇದ್ದಾಳೆ.

Gayathri SG

Recent Posts

ಬೀದರ್: ಸಂಭ್ರಮದಿಂದ ವಿಶ್ವಗುರು ಬಸವಣ್ಣನವರ ಜಯಂತಿ‌ ಆಚರಣೆ

ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ‌ ನಗರದಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

23 mins ago

ಡಿ ಬಾಸ್ ದರ್ಶನ್ ಬಹು ನಿರೀಕ್ಷಿತ ಡೆವಿಲ್ ಚಿತ್ರದ ಮೇಕಿಂಗ್ ಔಟ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹು ನಿರೀಕ್ಷಿತ ಡೆವಿಲ್ ಚಿತ್ರದ ಮೇಕಿಂಗ್‌ ರಿಲೀಸ್ ಆಗಿದೆ. ಸಿನಿಮಾದ ತೆರೆ ಹಿಂದಿನ ಗ್ಲಿಂಪ್ಸ್ ಇದಾಗಿದೆ.…

31 mins ago

ಧಾರವಾಡದ ಪೇಡಾ ಈ ಬಾರಿ ಯಾರ ಬಾಯಿಗೆ ಬೀಳಲಿದೆ?; ಜೋಶಿ ವಿರುದ್ಧ ವಿನ್ ಆಗ್ತಾರಾ ವಿನೋದ್

ಕರ್ನಾಟಕದ ವಾಣಿಜ್ಯ ನಗರಿ ಎಂದೇ ಪ್ರಸಿದ್ಧಿ ಪಡೆದ ಜಿಲ್ಲೆ ಧಾರವಾಡ. ಬಾಯಿ ನೀರೂರಿಸುವ ಧಾರವಾಡ ಪೇಡಾಕ್ಕೆ ಧಾರವಾಡವಲ್ಲದೆ ಬೇರೆ ಸಾಟಿಯಿಲ್ಲ,…

33 mins ago

ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ 3 ವಾರಸುದಾರರಿಲ್ಲದ ಶವಗಳ ಅಂತ್ಯಸಂಸ್ಕಾರ

ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದ ಮೂರು ಅಪರಿಚಿತ ವ್ಯಕ್ತಿಗಳ ಶವದ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆಯ ಹಿಂದು ರುದ್ರಭೂಮಿಯಲ್ಲಿ ಗೌರಯುತವಾಗಿ ನಡೆಸಲಾಯಿತು.

53 mins ago

ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಮಹಾಲಕ್ಷ್ಮಿ ಯೋಜನೆಯಡಿ 1 ಲಕ್ಷ ರೂ. ಜಮಾ

ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಇಬ್ಬರು ಹೆಂತಿಯರು ಇರುವವರಿಗೆ 2 ಲಕ್ಷ ರೂ. ಆರ್ಥಿಕ ನೆರವು…

1 hour ago

ಕಿಂಗ್ಸ್‌-ರಾಯಲ್ಸ್‌ ಕದನದಲ್ಲಿ ಕಲಾಶ್‌ನಿಕಾವೋ: ಕೊಹ್ಲಿ ಕೆಣಕಿ ಉಳಿದವರುಂಟೇ

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಆರ್‌ ಸಿ ಬಿ ತಂಡ ಪಂಜಾಬ್ ಕಿಂಗ್ಸ್ ಅನ್ನು 60 ರನ್‌ಗಳಿಂದ…

1 hour ago