News Karnataka Kannada
Monday, April 29 2024
ಮಡಿಕೇರಿ

ಕೊಡಗು: ಚುನಾವಣೆಗೆ ಐದು ದಿನ ಬಾಕಿ, ಇನ್ನು ನೋಟಿನ ನೋಟ

ಸಕ್ಕರೆ ನಾಡು ಮಂಡ್ಯ ಲೋಕಸಭಾ ಕ್ಷೇತ್ರದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮಣಿಸಲು ಕಾಂಗ್ರೆಸ್ ನಾಯಕರು ಸಜ್ಜಾಗಿದ್ದಾರೆ.
Photo Credit : By Author

ಕೊಡಗು: ಕೊಡಗಿನ ಎರಡು ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಇನ್ನು ಐದು ದಿನಗಳು ಉಳಿದಿವೆ. ಈಗ ಆರಂಭ ರಿಯಲ್ ಪೊಲಿಟಿಕ್ಸ್. ಇದುವರೆಗೆ ಪಕ್ಷ, ವ್ಯಕ್ತಿ, ಹಾಲಿ, ಆಮದು, ವಲಸೆಬಂದ ಅಭ್ಯರ್ಥಿ ಎಂಬ ಮಾತುಗಳ ನಾಡುತ್ತಾ ಮತದಾರರನ್ನು ಒಲಿಸಿಕೊಳ್ಳಲು ಆಯಾಯ ಪಕ್ಷದವರು ಮೊದಲ ಸುತ್ತಿನ ಪ್ರಯತ್ನವನ್ನು ಮಾಡಿದ್ದರು.

ಇದೀಗ ಒಂದು ಹಂತದಲ್ಲಿ ಕೊನೆ ಘಟ್ಟ ತಲುಪಿರುವ ಚುನಾವಣೆ ಪ್ರಚಾರ ಪಕ್ಷದ ಪ್ರಣಾಳಿಕೆ, ಪಕ್ಷಾಂತರಿಗಳ ಹೇಳಿಕೆ, ಅವರುಗಳ ಸೇರ್ಪಡೆ ಎಲ್ಲವೂ ಮುಗಿದಿದೆ, ಇದುವರೆಗೆ ಭಾವನಾತ್ಮಕ ಸಂಬಂಧಗಳ ಲೆಕ್ಕಚಾರ, ಅಭ್ಯರ್ಥಿಗಳ ವಿರುದ್ಧ ಪಕ್ಷದ ವಿರುದ್ಧ, ಮತಗಳ ಭೇಟಿ ನಡೆದರೆ ಇನ್ನು ಚುನಾವಣೆ ಅಧಿಕಾರಿಗಳ ಹದ್ದಿನ ಕಣ್ಣು ಪ್ರದರ್ಶನಗೊಳ್ಳುವ ಸಮಯ.

ಯಾವ ಪಕ್ಷ ಏನೇನೋ ಆಮಿಷಗಳನ್ನು ಮತದಾರ ಮುಂದಿಟ್ಟು ಗೌಪ್ಯವಾಗಿ ಮನೆ ಮನೆಗೆ ತೆರಳಿ ಅವರನ್ನು ಒಲಿಸಿಕೊಳ್ಳಲು ಪ್ರಯತ್ನಪಡುವ ಕಾಲ. ಇದುವರೆಗೆ ಪಕ್ಷದ ಬಲ ಜನಬಲ, ವ್ಯಕ್ತಿಗಳ ಬಲ ಪ್ರದರ್ಶನ ಗೊಂಡರೆ, ಇನ್ನು ಮುಂದೆ ಹಣಬಲದ ಪ್ರದರ್ಶನಕ್ಕೆ ಹಲವು ಮತದಾರರು ಕೂಡ ಸ್ವಾಗತ ಬಯಸಿ, ಬರುವಿಕೆಗಾಗಿ ಕಾದು ಕುಳಿತುಕೊಳ್ಳುವ ಸಮಯವಾಗಿದೆ. ಇದು ಕೇವಲ ನಮ್ಮ ಜಿಲ್ಲೆಯಲ್ಲಿ ಮಾತ್ರವಲ್ಲ ಇಡೀ ರಾಜ್ಯದಲ್ಲಿ ಇನ್ನು ಮುಂದೆ ನಡೆಯುವ ಪ್ರಕ್ರಿಯೆ. ಅದರಂತೆ ಕೊಡಗು ಜಿಲ್ಲೆಯಲ್ಲೂ ಕೂಡ ಎರಡು ಕ್ಷೇತ್ರದಲ್ಲಿ ಈ ಪ್ರಕ್ರಿಯೆಗೆ ತಾಲಿಮು ಕೂಡ ನಡೆದಿದೆ. ತನ್ನ ಎದುರಾಳಿ ಎಷ್ಟು ಹಣ ನೀಡುತ್ತಾರೆ ಎಂದು ಆಡಳಿತ ನಡೆಸಿದ ಅಭ್ಯರ್ಥಿ ಕಾಯುತ್ತಾ ಕುಳಿತರೆ, ಇದುವರೆಗೆ ಆಡಳಿತ ನಡೆಸಿದವರು ಎಷ್ಟು ಕೊಡುತ್ತಾರೆ ಅದಕ್ಕಿಂತ ಒಂದಿಷ್ಟು ಜಾಸ್ತಿ ನಾವು ಕೊಡೋಣ ಎಂಬ ತೀರ್ಮಾನ ಪ್ರತಿಸ್ಪರ್ಧಿಯದ್ದು ಎಂದು ಹೇಳಲಾಗುತ್ತಿದೆ.

ಜಿಲ್ಲೆಯ ಎರಡು ಕ್ಷೇತ್ರದಲ್ಲೂ ಕೂಡ ಹಾಲಿಗಳು ಕನಿಷ್ಠ ಒಂದು ಬೂತಿನಲ್ಲೇ ನೂರು ಮತವನ್ನಾದ್ರೂ ಖರೀದಿ ಮಾಡಲು ಈಗಾಗಲೇ ಪಟ್ಟಿ ಮಾಡಿಕೊಂಡಿವೆಯಂತೆ ಹಣ ತಲುಪಿಸುವ ವ್ಯವಸ್ಥೆ ಕೂಡ ಮಾಡಿಕೊಂಡಿದೆ. ಆದರೆ ಇದುವರೆಗೂ ಕೂಡ ಯಾರ ಬಾಗಿಲು ಕೂಡ ತಟ್ಟಿಲ್ಲ ಎಂಬುದು ಸತ್ಯ. ಎರಡು ರಾಷ್ಟ್ರೀಯ ಪಕ್ಷಗಳು ಖರೀದಿಗೆ ಇಳಿದಿದ್ದಾಗ ನಾವು ಸ್ವಲ್ಪ ಹಣ ಚೆಲ್ಲದಿದ್ದರೆ ಹೇಗೆ ಎಂದು ಪ್ರಾದೇಶಿಕ ಪಕ್ಷದ ಅಭ್ಯರ್ಥಿಯು ಕೂಡ ಹಣ ಒಟ್ಟು ಮಾಡಿ ಈಗಾಗಲೇ ಕೆಲವೊಂದು ಮತದಾರರಿಗೆ ತಲುಪಿಸುವ ವ್ಯವಸ್ಥೆಯನ್ನು ಮಾಡಿದೆ ಎಂದು ಹಲವರು ಹೇಳುತ್ತಿದ್ದಾರೆ.

ಇನ್ನು ಜಿಲ್ಲೆಯಲ್ಲಿ ಸ್ಪರ್ಧಿಸಿರುವ ಹಲವು ಪಕ್ಷೇತರಗಳ ಪೈಕಿ ಕೆಲವರು ಗೆಲ್ಲುವವರನ್ನು ಸೋಲಿಸಲು ಸಹಕಾರ ನೀಡಲು ಕೆಲವು ಅಭ್ಯರ್ಥಿಗಳ ಏಜೆಂಟಾಗಿ ಕಾರ್ಯನಿರ್ವಹಿಸಿ ಒಂದಿಷ್ಟು ಹಣವನ್ನು ಗಿಟ್ಟಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಜಿಲ್ಲೆಯಲ್ಲಿ ಪ್ರತಿ ಬಾರಿ ಚುನಾವಣೆ ನಡೆದಾಗಲೂ ಕಾಯಂ ಪಕ್ಷೇತರ ಸ್ಪರ್ಧಿಗಳು ಕೂಡ ಈ ಜಿಲ್ಲೆಯಲ್ಲಿ ಕಾಣಸಿಗುತ್ತಾರೆ. ಈ ಬಾರಿ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಅಮ್ ಆದ್ಮಿ ಪಾರ್ಟಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಕಾವೇರಿ ಮಣ್ಣಿಗೆ ಹೆಜ್ಜೆಯನ್ನು ಇಟ್ಟಿದೆ. ಮಡಿಕೇರಿಯಲ್ಲಿ ಹಿಂದೂ ಮಹಾಸಭಾದಿಂದ ಕಳೆದ ಬಾರಿಯಂತೆ ಈ ಬಾರಿ ಅಭ್ಯರ್ಥಿ ಒಬ್ಬರು ಕಣಕ್ಕಿಳಿದಿದ್ದಾರೆ. ಒಟ್ಟಿನಲ್ಲಿ ಇನ್ನು ಐದು ದಿನಗಳಲ್ಲಿ ನಡೆಯುವ ಎಲ್ಲಾ ರೀತಿಯ ತಂತ್ರಗಾರಿಕೆಯಿಂದ 13 ರ ಫಲಿತಾಂಶ ನಿಂತಿದೆ.

ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಸುತ್ತು ಮತ್ತೆ ಪುನಹ ತಿರುಗಿಕೊಂಡು ಬಂದಾಗ ಸಿಕ್ಕಿದ ಮಾಹಿತಿ ಅನ್ವಯ ಬಿಜೆಪಿಯ ಹಲವು ಕಾರ್ಯಕರ್ತರುಗಳಿಗೆ ಹಾಲಿ ಶಾಸಕರ ಮೇಲೆ ಅಸಮಾಧಾನವಿದ್ದರೂ ಪಕ್ಷದ ತತ್ವ ಸಿದ್ಧಾಂತ ಮತ್ತು ಮೋದಿ ಅವರ ಕೈ ಬಲಪಡಿಸಲು ಹಾಗೂ ಹಿಂದೂ ಧರ್ಮದ ಉಳಿವಿಗಾಗಿ ಅಪ್ಪಚು ರಂಜನ್ ಅವರಿಗೆ ಸಹಕಾರ ನೀಡಲು ತೀರ್ಮಾನಿಸಿದ್ದಾರೆ. ಇದರಿಂದ ಅಪ್ಪಚ್ಚು ರಂಜನ್ ಅವರಿಗೆ ಲಾಭವಾಗುವುದಂತೂ ಖಂಡಿತ.ಈ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ಅವರು ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ, ಕಾಂಗ್ರೆಸ್ ಅಭ್ಯರ್ಥಿ ಮಂತರ್ ಗೌಡ ಪರ ಜನರ ಒಲವು ಮೊದಲ ಹಂತದಲ್ಲಿ ಕಾಣಿಸಿಕೊಂಡಷ್ಟು ಈಗ ಕಾಣುತ್ತಿಲ್ಲ. ಈ ಕ್ಷೇತ್ರದಲ್ಲಿ ಅರೆ ಭಾಷೆ ಗೌಡರು ಸಂಪೂರ್ಣವಾಗಿ ಮಂತರ್ ಗೌಡರ ಕೈ ಹಿಡಿದರು ಕೂಡ ಗೆಲುವು ಸುಲಭ ಸಾಧ್ಯವಲ್ಲ, ಕ್ಷೇತ್ರದಲ್ಲಿ ಕಾರ್ಯಕರ್ತರನ್ನು ಚೆನ್ನಾಗಿ ಇಟ್ಟುಕೊಂಡ ಅಪ್ಪಚು ರಂಜನ್ ಗೆಲುವಿನ ನೆಗೆ ಬೀರುವ ಸಾಧ್ಯತೆಗಳು ಕಾಣುತ್ತಿವೆ. ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಮಂತರ್ ಗೌಡ ಜಿಲ್ಲಾ ಪಂಚಾಯತ್ ಸದಸ್ಯನಾಗಿ ಅರಕಲಗೂಡು ಭಾಗದಲ್ಲಿ ಏನು ಅಭಿವೃದ್ಧಿ ಕೆಲಸ ಮಾಡಿಲ್ಲ ಎಂಬ ಆರೋಪಗಳು ಕೇಳಿ ಬರುತ್ತಿವೆ. ರಾಜಕೀಯದಲ್ಲಿ ಅಪ್ಪಚ್ಚು ರಂಜನ್ ರಷ್ಟು ಅನುಭವವಿಲ್ಲದ ಮಂತರ್ ಗೌಡ ರವರಿಗೆ ಕಾಂಗ್ರೆಸಿನ ಹಲವು ಪ್ರಭಾವಿ ನಾಯಕರು ಕೈಕೊಟ್ಟಿದ್ದರಿಂದ ಹಾಗೂ ತಾನು ಸ್ಥಳೀಯರಲ್ಲ ಎಂಬ ಕಾರಣದಿಂದ ಮತದಾರರು ಕೂಡ ಈಗ ಅವರನ್ನು ಕೈಬಿಟ್ಟ ಲಕ್ಷಣಗಳು ಕಾಣುತ್ತಿವೆ. ಕ್ಷೇತ್ರದಲ್ಲಿ ಅಪ್ಪಚ್ಚು ರಂಜನ್ ಅವರ ಜೊತೆ ಇದ್ದು ದೂರವಾಗಿದ್ದ ಹಲವರು ಮತ್ತೆ ಪುನ ಅವರ ಗೂಡಿಗೆ ಸೇರಿಕೊಂಡಿದ್ದಾರೆ. ವಾಡಿಕೆಯಂತೆ ಅಪ್ಪಟ ಕಾಂಗ್ರೆಸ್ ಮತಗಳು ಮಾತ್ರ ಮಂತರ್ ಗೌಡರ ಪಾಲಾಗುತ್ತದೆ.

ಇಲ್ಲಿ ಗೆಲ್ಲುವ ಅಭ್ಯರ್ಥಿಯ ಜಯದ ಸಂಖ್ಯೆ ಮಾತ್ರ ಕಳೆದ ಬಾರಿಗಿಂತ ಕಡಿಮೆ ಇರಲಿದೆ. ಈ ಕ್ಷೇತ್ರದಲ್ಲಿ ಎಸ್‌ ಡಿ ಪಿ ಐ ಅಭ್ಯರ್ಥಿ ತನ್ನ ಸಾಂಪ್ರದಾಯಕ ಮತಗಳನ್ನು ಮಾತ್ರ ಪಡೆಯಲು ಶಕ್ತರಾಗಿದ್ದಾರೆ. ಜೆಡಿಎಸ್ ಅಭ್ಯರ್ಥಿ ನಾಪಂಡ ಮುತ್ತಪ್ಪ ರವರಿಗೆ ಮೊದಲೇ ಪಕ್ಷವು ಟಿಕೆಟನ್ನು ಘೋಷಿಸಿದ್ದರೆ ಈ ಬಾರಿ ಮಡಿಕೇರಿ ಕ್ಷೇತ್ರದಲ್ಲಿ ಅವರೊಂದು ಕಮಲ್ ಮಾಡುತ್ತಿದ್ದರು ಎಂಬ ಅಭಿಪ್ರಾಯ ಸತ್ಯಕ್ಕೆ ಹತ್ತಿರವಾಗಿದೆ. ಈ ಬಾರಿ ಎಲ್ಲಾ ಪಕ್ಷಗಳು ಕೂಡ ಇನ್ನೇನು ಚುನಾವಣೆಗೆ 20 ದಿನ ಇದೆ ಅಂದಾಗ ಅಭ್ಯರ್ಥಿಯ ಪಟ್ಟಿಯನ್ನು ಘೋಷಣೆ ಮಾಡಿ ಹೊಸಬರಿಗೆ ಕ್ಷೇತ್ರದಲ್ಲಿ ಚುನಾವಣೆ ಕೆಲಸ ನಿರ್ವಹಿಸಲು ಸಾಧ್ಯವಾಗದ ಪರಿಸ್ಥಿತಿಯನ್ನು ನಿರ್ಮಾಣ ಮಾಡಿಕೊಟ್ಟಿದೆ . ಪ್ರತಿ ಬಾರಿಯೂ ಕೂಡ ಬಿಜೆಪಿ ಕೊನೆಯ ಐದು ದಿನದಲ್ಲಿ ನಡೆಸುವ ಕಸರತ್ತು ನಿಂದ ಎದುರಾಳಿಯನ್ನು ಮಣಿಸುತ್ತಾ ಬರುತ್ತಿದೆ. ಈ ಬಾರಿಯೂ ಕೂಡ ಅದೇ ರೀತಿ ಆಗೋದರಲ್ಲಿ ಸಂಶಯವಿಲ್ಲ.

ವಿರಾಜಪೇಟೆ ವಿಧಾನಸಭಾ ಕ್ಷೇತ್ರ… ಈ ಕ್ಷೇತ್ರದಲ್ಲಿ ಹೊಸ ಮುಖದತ್ತ ಚಿತ್ತಹರಿಸಿದ್ದ ಬಹುತೇಕ ಮತದಾರರು ಇದೀಗ ಸ್ವಲ್ಪಮಟ್ಟಿಗೆ ಹಿಂದುತ್ವದ ಭಾವನಾತ್ಮಕ ವಿಚಾರದಲ್ಲಿ ಮತ್ತೆ ಪುನಹ ಬಿಜೆಪಿಯನ್ನು ಕೈಹಿಡಿಯಲು ಹೊರಟಿದ್ದಾರೆ. ಈ ಕ್ಷೇತ್ರದಲ್ಲಿ ಹಾಲಿ ಶಾಸಕರ ಪರ ಮತ ಬೀಳುವುದಕ್ಕಿಂತ ಹಿಂದುತ್ವದ ನೆಲಗಟ್ಟಿನಲ್ಲಿ ಪಕ್ಷದ ಅಭ್ಯರ್ಥಿಯ ಪರ ಹೆಚ್ಚು ಮತ ಬೀಳುವ ಸಾಧ್ಯತೆ ಇದೆ. ಇದಕ್ಕೆ ಪುಷ್ಟಿ ನೀಡಿದ್ದು ನಿನ್ನೆ ಮೊನ್ನೆ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ ಬಜರಂಗದಳವನ್ನು ನಿಷೇಧಿಸುವ ಇಂಗಿತ ವನ್ನು ಈ ಕ್ಷೇತ್ರದಲ್ಲಿ ತೀವ್ರವಾಗಿ ಹಲವು ಮತದಾರರು ವಿರೋಧಿಸಿದ್ದಾರೆ. ಪ್ರಬಲ ಪೈಪೋಟಿ ನೀಡುತ್ತಿದ್ದ ಕಾಂಗ್ರೆಸ್ಸಿನ ಎಸ್ ಪೊನ್ನಣ್ಣನವರಿಗೆ ಈ ಪ್ರಣಾಳಿಕೆಯಲ್ಲಿ ಬಂದ ಕೆಲವು ಅಂಶಗಳು ಹೊಡೆತ ಬೀಳುವುದರಲ್ಲಿ ಸಂಶಯವಿಲ್ಲ. ಇದೀಗ ಈ ಕ್ಷೇತ್ರದಲ್ಲಿ ಅಭಿವೃದ್ಧಿಯ ಮಂತ್ರಕ್ಕಿಂತ ಧರ್ಮದ ಪರ ಬಿಜೆಪಿ ತನ್ನ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುತ್ತಿದೆ.

ರಂಗಾಯಣ ನಿರ್ದೇಶಕರಂತೂ ನೇರವಾಗಿ ಸಾರ್ವಜನಿಕ ಸಭೆಗಳಲ್ಲಿ ಧರ್ಮದ ಆಧಾರದಲ್ಲಿ ಪೊನ್ನಣ್ಣನವರನ್ನು ಹಿಗ್ಗ ಮೊಗ್ಗ ಟೀಕಿಸುತ್ತಿದ್ದಾರೆ. ಅವರ ಮಾತುಗಳಿಂದ ಸ್ವಲ್ಪಮಟ್ಟಿಗೆ ಬದಲಾವಣೆ ಆಗುವ ಸಾಧ್ಯತೆ ಇದೆ. ಆದರೆ ಈ ಬಾರಿ ಪೊನ್ನಣ್ಣನವರು ಕಾಂಗ್ರೆಸ್ಸಿಗೆ ಹಾಗೂ ಅದರ ಕಾರ್ಯಕರ್ತರಿಗೆ ಹೊಸ ಚೈತನ್ಯವನ್ನು ಮೂಡಿಸಿದ್ದಾರೆ. ಕ್ಷೇತ್ರದಲ್ಲಿ ಅವರ ಬಗ್ಗೆ ಒಳ್ಳೆಯ ಅಭಿಪ್ರಾಯಗಳು ಹಿಂದಿನಂತೆ ಮುಂದುವರೆದಿದೆ ಆದರೆ ಮತವಾಗಿ ಪರಿವರ್ತನೆಗೊಳ್ಳುವುದೊಂದೇ ಬಾಕಿ. ಈಗಿರುವ ಲೆಕ್ಕಾಚಾರದಲ್ಲಿ ಬಿ.ಜೆ. ಪಿ ಮತಗಳ ಸಂಖ್ಯೆಯಲ್ಲಿ ಮುಂದಿದ್ದಾರೆ. ಇನ್ನು ಐದು ದಿನದಲ್ಲಿ ಏನೆಲ್ಲ ಬದಲಾವಣೆ ಆಗುತ್ತದೋ ಕಾದು ನೋಡಬೇಕಾಗಿದೆ. ಇಲ್ಲಿಯೂ ಕೂಡ ಹಣಬಲದ್ದೆ ಆಟ ನಡೆಯಲಿದೆ. ಈಗಾಗಲೇ ಆಡಳಿತ ಪಕ್ಷದವರು ಪ್ರತಿ ಬೂತಿನಲ್ಲಿ 100 ಮತದಾರರನ್ನು ಖರೀದಿಸಲು ಎಲ್ಲ ರೂಪುರೇಷೆಗಳು ಸಿದ್ಧಪಡಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ ಆದರೆ ಇದುವರೆಗೂ ಕೂಡ ಯಾವೊಬ್ಬ ಮತದಾರರಿಗೆ ಏನು ತಲುಪಿಲ್ಲ. ಕೊನೆಯ ಮೂರು ದಿನದಲ್ಲಿ ಎಲ್ಲ ತಂತ್ರಗಾರಿಕೆಗಳು ನಡೆದು ತಕ್ಕಡಿಯಲ್ಲಿ ಇಡುವ ತೂಕದ ಕಲ್ಲಿನ ಮೇಲೆ ಮತದಾರ ತೂಗುತ್ತಾನೆ ಎಂಬುದು ಕಟು ಸತ್ಯ. ಈ ಕ್ಷೇತ್ರದಲ್ಲಿ ರೈತ ಸಂಘದ ಅಭ್ಯರ್ಥಿ ಪರ ಹೆಚ್ಚಿನ ಒಲವು ಕಂಡು ಬರುತ್ತಿಲ್ಲ, ಇನ್ನು ಜೆಡಿಎಸ್ ಅಭ್ಯರ್ಥಿ ಅದಕ್ಕಿಂತ ಒಂದು ಹೆಜ್ಜೆ ಹಿಂದೆ ಇದ್ದಾರೆ.

ಪಕ್ಷೇತರಗಳಲ್ಲಿ ಬಹುತೇಕರು ಪ್ರಬಲ ಅಭ್ಯರ್ಥಿಗಳ ಪರವಾಗಿ ಚುನಾವಣೆಗೆ ನಿಂತವರು ಎಂಬುದು ಎಲ್ಲರಿಗೂ ತಿಳಿದಿರುವ ಅಂಶವಾಗಿದೆ. ಈ ಕ್ಷೇತ್ರದಲ್ಲಿ ಜಾತಿಯ ಲೆಕ್ಕಾಚಾರಕ್ಕಿಂತ ಧರ್ಮದ ಲೆಕ್ಕಾಚಾರದಲ್ಲಿ ಚುನಾವಣೆ ನಡೆಯುತ್ತಿದೆ. ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಬಹುತೇಕ ಮತದಾರರಿಗೆ ಚಿಂತೆ ಇಲ್ಲ ತಮ್ಮ ಅಸ್ತಿತ್ವ ಮತ್ತು ಧರ್ಮ ಹಾಗೂ ನರೇಂದ್ರ ಮೋದಿಯವರ ಮೇಲಿನ ಪ್ರೀತಿ ಮಾತ್ರ ಇಲ್ಲಿ ಮಾನದಂಡವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಪೊನ್ನಣ್ಣ ನವರ ಮೇಲೆ ಕ್ಷೇತ್ರದ ಬಹುತೇಕ ಜನಸಾಮಾನ್ಯರಿಗೆ ಒಲವಿದ್ದರೂ ಕೆಲವೊಂದು ಕಟ್ಟುಪಾಡುಗಳಿಂದ ಮತದ ಮೂಲಕ ಅವರ ಪ್ರೀತಿ ಗಳಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಕಂಡುಬರುತ್ತಿದೆ.. ಎ.ಎಸ್ ಪೊನ್ನಣ್ಣ v/s ಬಿ.ಜೆ.ಪಿ ನಡುವೆ ನೇರ ಪೈಪೋಟಿ ಕಂಡುಬರುತ್ತಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಕೊಡಗಿನ ಎರಡು ಕ್ಷೇತ್ರಗಳಲ್ಲೂ ಕೂಡ ಕಳೆದ ಬಾರಿಗಿಂತ ನೋಟಕ್ಕೆ ಹೆಚ್ಚು ಮತ ಬೀಳುವ ಸಾಧ್ಯತೆ ಇದೆ ಎಂಬುದನ್ನು ತಳ್ಳಿ ಹಾಕುವಂತಿಲ್ಲ. ಇದರಿಂದ ಯಾರಿಗೆ ಹೊಡೆತ ಯಾರಿಗೆ ಲಾಭ ಹೇಳಲು ಸಾಧ್ಯವಿಲ್ಲ.

ಈ ಬಾರಿಯಂತೂ ಕಾಂಗ್ರೆಸ್ಸಿನ ಕಾರ್ಯಕರ್ತರು ಎಲ್ಲಾ ಕಡೆ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ, ಮನೆಮನೆಗೆ ತೆರಳಿ ಮತದಾರರನ್ನು ಓಲೈಸುವ ಪ್ರಯತ್ನದಲ್ಲಿದ್ದಾರೆ. ಈ ಹಿಂದೆ ಬಿ.ಟಿ.ಪ್ರದೀಪ್ ಚುನಾವಣೆಗೆ ನಿಂತಾಗ ಇದ್ದ ಉತ್ಸಾಹ ಮತ್ತೆ ಕಾಣುತ್ತಿದೆ. ಮಾಜಿ ಶಾಸಕ ಅರುಣ್ ಮಾಚಯ್ಯ, ಸಂಕೇತ್ ಪೂವಯ್ಯ, ಶಿವು ಮಾದಪ್ಪ ರಂಥ ನಾಯಕರುಗಳು ಪೊನ್ನಣ್ಣನವರ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಇನ್ನು ಮಾಜಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಈ ಬಾರಿ ಒಳಗೊಳಗೆ ಯಾವುದೇ ತಂತ್ರಗಾರಿಕೆಯನ್ನು ಮಾಡದೆ ಅಭ್ಯರ್ಥಿಯ ಪರ ಗಟ್ಟಿಯಾಗಿ ನಿಂತಿದ್ದಾರೆ. ಸಂಘಟಿತ ಶಕ್ತಿ ಯಶಸ್ವಿಗೆ ನಾಂದಿ ಆಗಬಹುದು. ಈ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದ್ದರು ಬಿಜೆಪಿಯನ್ನು ಮಣಿಸುವುದು ಅಷ್ಟು ಸುಲಭ ಸಾಧ್ಯವಲ್ಲ ಎಂಬುದು ಅವರಿಗೂ ತಿಳಿದಿದೆ.

ಒಟ್ಟಿನಲ್ಲಿ ಇನ್ನು ಐದು ದಿನಗಳಲ್ಲಿ ನಡೆಯುವ ಚುನಾವಣಾ ಕಸರತ್ತಿನಿಂದ ಲಕ್ಷ್ಮಿ ಯಾರಿಗೆ ಒಲಿಯುತ್ತಾಳೆ ಎಂಬುದನ್ನು ಕಾದು ನೋಡಬೇಕಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು