Categories: ಮಡಿಕೇರಿ

ಹಾಕಿಗೆ ವಿದಾಯ ಹೇಳಿದ ಸುನೀಲ್ ಕ್ರೀಡಾಬದುಕು ರೋಚಕ!

ಹಾಕಿಯನ್ನೇ ಉಸಿರಾಗಿಸಿಕೊಂಡು ಭಾರತದ ಹಾಕಿತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡು ದೇಶಕ್ಕಾಗಿ ಸುಮಾರು ಹದಿನಾಲ್ಕು ವರ್ಷಗಳ ಕಾಲ ಅಂತರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಭಾಗವಹಿಸಿ ಭಾರತದ ಪತಾಕೆಯನ್ನು ಹಾರಿಸಿದ್ದ ಕೊಡಗಿನ ಆಟಗಾರ ಸುನೀಲ್ ನಿವೃತ್ತಿ ಘೋಷಿಸಿದ್ದಾರೆ.

2014ರಲ್ಲಿ ನಡೆದ ಏಷ್ಯಾನ್ ಗೇಮ್ಸ್‍ನಲ್ಲಿ ಭಾರತ ಹಾಕಿ ತಂಡವು ಚಿನ್ನದ ಪದಕ ಗೆಲ್ಲುವಲ್ಲಿ ಸುನೀಲ್ ಮಹತ್ತರ ಪಾತ್ರ ವಹಿಸಿದ್ದರು. ಕರ್ನಾಟಕ ಹೆಮ್ಮೆಯಾಗಿದ್ದ ಸುನೀಲ್ ಅವರು ತಮ್ಮ ಹಾಕಿ ಜೀವನದಲ್ಲಿ 264 ಪಂದ್ಯಗಳನ್ನು ಭಾರತದ ಪರ ಆಡಿ 72 ಗೋಲುಗಳನ್ನು ಬಾರಿಸಿದ್ದರು.

ಸುನೀಲ್ ಅವರು 2014ರಲ್ಲಿ ನಡೆದ ಕಾಮನ್‍ವೆಲ್ತ್‍ನಲ್ಲಿ ಬೆಳ್ಳಿ ಪದಕ, 2014ರ ಏಷ್ಯಾನ್ ಗೇಮ್ಸ್‍ನಲ್ಲಿ ಕಂಚು ಹಾಗೂ 2017ರಲ್ಲಿ ಚಿನ್ನದ ಪದಕವನ್ನು ಕೊರಳಿಗೇರಿಸಿಕೊಂಡಿದ್ದರು. ಇನ್ನು ಸುನಿಲ್ ನ ಹುಟ್ಟು, ಬಾಲ್ಯ ಮತ್ತು ಹಾಕಿ ಜಗತ್ತಿಗೆ ಕಾಲಿಟ್ಟ ಆ ಕ್ಷಣಗಳೆಲ್ಲವೂ ರೋಚಕವೇ ಅದನ್ನು ನೋಡುತ್ತಾ ಹೋದರೆ ಹಳ್ಳಿ ಹುಡುಗ ಹಾಕಿಯನ್ನು ಉಸಿರಾಗಿಸಿಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದು ನಿಂತಿದ್ದು ರೋಚಕವೇ.. ಅಷ್ಟೇ ಅಲ್ಲ ಯುವ ಆಟಗಾರರಿಗೊಂದು ಸ್ಪೂರ್ತಿಯೂ ಹೌದು.

ಹಾಕಿ ಸ್ಟಿಕ್ ತೆಗೆಯಲು ಕಾಸಿಲ್ಲದ ಕಾಲದಲ್ಲಿ ಮನೆಯ ಸುತ್ತ ಬೆಳೆದ ಮರದ ರೆಂಬೆಯನ್ನು ಕತ್ತರಿಸಿ ಬಳಿಕ ಅದನ್ನು ಹಾಕಿಸ್ಟಿಕ್‌ ನಂತೆ ಕೆತ್ತಿ ಅದರಿಂದ ಆಟ ಆಡಲು ಆರಂಭಿಸಿದಾಗ ಯಾರು ಕೂಡ ಈತ ಮುಂದೊಂದು ದಿನ ಅಂತರರಾಷ್ಟ್ರೀಯ ಹಾಕಿಪಟುವಾಗುತ್ತಾನೆ ಎಂದು ಯೋಚಿಸಿರಲಿಲ್ಲ. ಅವರ ಬಗ್ಗೆ ಹೇಳುವುದಾದರೆ..

ದಿ. ವಿಠಲಾಚರ್ ಮತ್ತು ದಿ. ಶಾಂತಮ್ಮ ದಂಪತಿಗಳ ಕೊನೆಯ ಪುತ್ರನೇ ಎಸ್.ವಿ.ಸುನಿಲ್.  ತಂದೆ ದಿ. ವಿಠಲಾಚಾರ್ ಮೂಲತಃ ದಕ್ಷಿಣಕನ್ನಡದವರು. ಬಡಗಿಯಾಗಿದ್ದ ಅವರು ತುಂಬು ಕುಟುಂಬದ ನಿರ್ವಹಣೆಗಾಗಿ  ಉದ್ಯೋಗ ಅರಸಿಕೊಂಡು ಕುಟುಂಬ ಸಮೇತ ಕೊಡಗು ಜಿಲ್ಲೆಯ ಸೋಮವಾರಪೇಟೆಗೆ ಆರೇಳು ದಶಕಗ ಹಿಂದೆ ಬಂದು ನೆಲೆವೂರಿದ್ದರು.

ಸೋಮವಾರಪೇಟೆ ನಗರದ ತಿಮ್ಮಮ್ಮನ ಬಡಾವಣೆಯ ಬಾಡಿಗೆ ಮನೆಯೊಂದರಲ್ಲಿ ಶಾಂತಮ್ಮ ಸುನೀಲ್‌ಗೆ ಜನ್ಮ ನೀಡಿದ್ದರು. ಮಗ ಬೆಳೆದು ದೊಡ್ಡವನಾದಾಗ  ಹೇಗೋ ಕಷ್ಟಪಟ್ಟು ಅವನ್ನು ಶಾಲೆಗೆ ಸೇರಿಸಿದ್ದರು. ಬರಿಗಾಲಿನಲ್ಲಿ ಶಾಲೆಗೆ ತೆರಳುತ್ತಿದ್ದ ಈತನಿಗೆ ಬಾಲ್ಯದಿಂದಲೇ ಕ್ರೀಡೆಯಲ್ಲಿ ವಿಶೇಷ ಆಸಕ್ತಿಯಿತ್ತು. ಮೈದಾನದಲ್ಲಿ ಕೆಲವರು ಹಾಕಿ ಸ್ಟಿಕ್ ಹಿಡಿದು ಆಡುತ್ತಿದ್ದರೆ ಅದನ್ನು ನೋಡಿದ ಬಾಲಕ ಸುನಿಲ್‌ಗೆ ತಾನು ಕೂಡ ಅವರಂತೆ ಆಡಬೇಕೆಂಬ ಬಯಕೆ ಉಂಟಾಗುತ್ತಿತ್ತು.

ಆಗ ಮನೆಯ ಪಕ್ಕದಲ್ಲೇ ಇದ್ದ ಮ್ಯಾಗಿಗದ್ದೆ ಎಂದೇ ಚಿರಪರಿಚಿತವಾಗಿರುವ ಭತ್ತದ ಗದ್ದೆಯನ್ನೇ  ಮೈದಾನವನ್ನಾಗಿ ಮಾಡಿಕೊಂಡು ತಾನೇ ಕೈಯ್ಯಾರೆ ಮಾಡಿದ ಹಾಕಿಸ್ಟಿಕ್ ಆಕೃತಿಯ ಕೋಲಿನಲ್ಲಿ ಮನೆ ಬಳಿ ಸಿಗುತ್ತಿದ್ದ ಚಕ್ಕೋತ ಮಿಡಿಯನ್ನೇ ಚೆಂಡಾಗಿಸಿಕೊಂಡು ಆಟವಾಡುತ್ತಿದ್ದನು. ಸುನಿಲ್‌ನಲ್ಲಿದ್ದ ಪ್ರತಿಭೆಯನ್ನು ಹತ್ತಿರದಿಂದ ಕಂಡ ಹಿರಿಯ ಸಹೋದರ ಅಕ್ಕಸಾಲಿಗ ಸುರೇಶ್ ಆಚಾರ್ಯ ತನ್ನ ಕೈಯ್ಯಲ್ಲಾದ ಸಹಾಯ ಮಾಡಿ ಪ್ರೋತ್ಸಾಹಿಸಿದರು.

ಮುಂದೆ ರಾಜ್ಯಮಟ್ಟದ ಮಾಜಿ ಹಾಕಿ ಆಟಗಾರ ಬಿ.ಆರ್. ಮನೋಹರ್, ಮೂರ್ತಿ, ಬೆಳಗಾಂನ ಮರಾಠ ಲಘು ಪದಾತಿದಳದಲ್ಲಿ ಹಿರಿಯ ಆಟಗಾರವಾಗಿ ಸೇವೆಸಲ್ಲಿಸುತ್ತಿದ್ದ  ಜನಾರ್ಧನ್ ಅವರ ಪ್ರೋತ್ಸಾಹ, ಸಹಕಾರ ಸುನೀಲ್‌ನನ್ನು ಅಂತರರಾಷ್ಟ್ರೀಯ ಮಟ್ಟದ ಆಟಗಾರನಾಗುವಂತೆ ಮಾಡಿತು.

ಹಾಗೆನೋಡಿದರೆ ಸುನಿಲ್ ಅದೃಷ್ಟ ನೆಟ್ಟಗಿರಲಿಲ್ಲ ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡಿದ್ದನು. ಮುಂದೆ ತಂದೆ ಅಣ್ಣ ಅಕ್ಕಂದಿರ ಆಸರೆಯಲ್ಲಿ ಬೆಳೆದ ಆತ ಶಾಲಾ ದಿನಗಳಲ್ಲಿ ಹಾಕಿ ಆಟದಲ್ಲಿ ಎಲ್ಲರಿಗಿಂತ ಮುಂದಿದ್ದನು. ಅವತ್ತು ಆಟವಾಡಲು ಬೇಕಾದ ಸ್ಟಿಕ್ ಹಾಗೂ ಶೂ ತೆಗೆಯಲು ಹಣವಿಲ್ಲದಾಗ ಅಣ್ಣ ಸುರೇಶ ಆಚಾರಿ ತನ್ನ ಬಳಿಯಿದ್ದ ಚಿನ್ನದ ಓಲೆಯನ್ನು ಮಾರಿ ಅದರಿಂದ ದೊರೆತ ಹಣದಿಂದ ಸ್ಟಿಕ್ ಮತ್ತು ಶೂ ತೆಗೆದುಕೊಟ್ಟಿದ್ದರು

ಆ ನಂತರ ಇವರ ಮನೆಯ ಪರಿಸ್ಥಿತಿಯನ್ನು ನೋಡಿದ  ಹಿರಿಯ ಹಾಕಿ ಆಟಗಾರ ಹಾಗೂ ಬ್ಲೂಸ್ಟಾರ್ ಹಾಕಿ ಸಂಸ್ಥೆಯ ಅಧ್ಯಕ್ಷ ಎಸ್ ಬಿ. ಯಶವಂತ್ ಹಾಗೂ ಮಾಜಿ ಅಧ್ಯಕ್ಷ ಬಿ.ಎಂ.ಸುರೇಶ್ ಅವರು ಪ್ರೋತ್ಸಾಹ ನೀಡಿದರು.

ಸದಾ  ಹಾಕಿ ಕ್ರೀಡೆಯಲ್ಲಿ ಮಗ್ನನಾಗಿದ್ದ ಸುನಿಲ್‌ಗೆ 1998ರಲ್ಲಿ ಪ್ರಪ್ರಥಮವಾಗಿ ಅವಕಾಶವೊಂದು ಒದಗಿ ಬಂತು.  ಅದು ಹೇಗೆಂದರೆ ಸೋಮವಾರಪೇಟೆಯ ಸರ್ಕಾರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ಬೆಳಗಾಂನ ಮರಾಠ ಲೈಟ್ ಇನ್‌ಫೆಂಟ್ರಿಯವರು ತಮ್ಮ ಪದಾತಿದಳಕ್ಕೆ ’ಕ್ರೀಡೆ ಮತ್ತು ಸೇನೆ’ ಕಾರ್ಯಕ್ರಮದಡಿಯಲ್ಲಿ ಆಯ್ಕೆ ಟ್ರಯಲ್ಸ್‌ಗೆ ಬಂದಿದ್ದರು. ಈ ವಿಷಯ ತಿಳಿದ ಹಲವರು ಸುನಿಲ್‌ಗೆ ಅಲ್ಲಿಗೆ ಹೋಗುವಂತೆ ಹೇಳಿದ್ದರು. ಹಾಗಾಗಿ ಸುನಿಲ್ ತನ್ನ ಅಣ್ಣನೊಂದಿಗೆ ಆಯ್ಕೆ ನಡೆಯುತ್ತಿದ್ದ ಸ್ಥಳಕ್ಕೆ ತೆರಳಿದ್ದನು. ಅಲ್ಲಿ ನಡೆದ ಎಲ್ಲಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿ ಆಯ್ಕೆಯಾಗಿದ್ದನು.

ಆದರೆ ಬೆಳಗಾಂಗೆ ತೆರಳಬೇಕೆನ್ನುವಷ್ಟರಲ್ಲಿ ತಂದೆ ವಿಠಲಾಚಾರ್ ಕ್ಯಾತೆ ತೆಗೆದಿದ್ದರು. ಆ ದಿನಗಳಲ್ಲಿ ಮಗ ದೂರ ಹೋಗಿ ದುಡಿಯೋದು ಅವರಿಗೆ ಇಷ್ಟ ಇರಲಿಲ್ಲ. ಬದಲಿಗೆ ಮಗ ನನ್ನೊಂದಿಗೆ ಮರದ ಕೆಲಸಕ್ಕೆ ಸಹಾಯಕನಾಗಿ ದುಡಿದರೆ ಕುಟುಂಬ ನಿರ್ವಹಣೆಗೆ ಸಹಾಯವಾಗಬಹುದು ಎಂಬುವುದು ಅವರ ಆಲೋಚನೆಯಾಗಿತ್ತು. ಆದರೆ ಇದಕ್ಕೆ ಸೊಪ್ಪು ಹಾಕದ ಅಣ್ಣ ಸುರೇಶ್ ಆಚಾರಿ ದೃಢ ನಿಲುವು ತಳೆದು ಬೆಳಗಾಂಗೆ ಕಳುಹಿಸಿಕೊಡುವಲ್ಲಿ ಯಶಸ್ವಿಯಾದರು.

ಆ ನಂತರ ಸುನಿಲ್ 2000ನೇ  ಇಸವಿಯಲ್ಲಿ  ರಜೆಯಲ್ಲಿ ಊರಿಗೆ ಬಂದಿದ್ದ ಸಂದರ್ಭ ಪಾಲಿಬೆಟ್ಟದಲ್ಲಿ ಜರುಗಿದ ಕ್ರಿಕೆಟ್ ಶಿಬಿರದಲ್ಲಿ ಉದ್ಯೋಗಿಯಾಗಿದ್ದ ಮನೋಹರ್ ಅಂದು ರಾಜ್ಯ ರಣಜಿತಂಡಕ್ಕೆ ಕೋಚ್ ಆಗಿದ್ದ ರಘುನಾಥ್ ರವರಿಂದ ಸುನಿಲ್‌ಗೆ ಸೂಕ್ತ ತರಬೇತಿ ನೀಡಲಾಯಿತು. ಅದು ಆತನ ಬದುಕನ್ನು ಬದಲಾಯಿಸುವಲ್ಲಿ ಕಾರಣವಾಯಿತು.

2007ರಲ್ಲಿ ಪ್ರಪ್ರಥಮವಾಗಿ ಅಂತರರಾಷ್ಟ್ರೀಯ ಮಟ್ಟದ ಹಾಕಿ ಆಟಗಾರನಾಗಿ ಶಿಬಿರಕ್ಕೆ ಆಯ್ಕೆಗೊಂಡ ಸುನಿಲ್‌ಗೆ ಅದರ ಅರಿವೇ ಇರಲಿಲ್ಲ. ಈ ಕುರಿತು ವಿಚಾರಿಸಿದಾಗ ಹಾಕಿ ಸಂಸ್ಥೆಯಲ್ಲಿ ಮತ್ತೋರ್ವ ಸುನಿಲ್ ಆಯ್ಕೆಯಾಗಿರುವುದಾಗಿ ಹೇಳಿದ ಸುನಿಲ್ ಉಡುಪಿಗೆ ನೆಂಟರ ಮನೆಗೆ ತೆರಳಿದ್ದರು. ಈ ಕುರಿತು ಮಾಹಿತಿ ಪಡೆದ ಪತ್ರಕರ್ತರೊಬ್ಬರು ಬ್ಲೂಸ್ಟಾರ್‌ನ ಹಾಕಿ ಆಟಗಾರ ಹಾಗೂ  ಬಿ.ಎಸ್. ರವಿಚಂದ್ರ ಅವರ ಸಹಕಾರದೊಂದಿಗೆ ಭಾರತ ತಂಡಕ್ಕೆ ಆಯ್ಕೆಯಾಗಿರುವುದು ಎಸ್. ವಿ. ಸುನಿಲ್ ಎಂದು ಖಚಿತ ಪಡಿಸಿಕೊಂಡು ನೆಂಟರ ಮನೆಯಿಂದ ಕರೆಯಿಸಿದ್ದರು.

2009ರಲ್ಲಿ ಮಲೇಷಿಯಾದಲ್ಲಿ ಜರುಗಿದ ಅಜ್ಲನ್‌ಶಾ ಕಪ್‌ನಲ್ಲಿ ಪಾಲ್ಗೊಂಡಿದ್ದ ಸುನಿಲ್‌ಗೆ ತಂಡ ಅಂತಿಮ ಹಂತಕ್ಕೆ ಹೋಗುತ್ತಿದ್ದ ಸಂದರ್ಭ ತಂದೆ ವಿಠಲಾಚಾರ್ ಅವರ ಸಾವಿನ ಸುದ್ದಿ ಬರಸಿಡಿಲಿನಂತೆ ಬಡಿಯಿತು. ತಂದೆಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ಅವರಿಗೆ ತಕ್ಷಣ ಏನೂ ಮಾಡಲು ತೋಚಲಿಲ್ಲವಂತೆ, ಆದರೆ ತಾಯಿನಾಡಿಗೆ ಚಿನ್ನಗೆದ್ದು ತರಬೇಕೆಂಬುವುದು ಮೂಲ ಉದ್ದೇಶವಾಗಿದ್ದುರಿಂದ  ಸುನಿಲ್ ಆಟದಲ್ಲಿಯೇ ತನ್ನನ್ನು ತೊಡಗಿಸಿಕೊಂಡರು. ಅವತ್ತು  ಚಿನ್ನದ ಪದಕದೊಂದಿಗೆ ಪ್ರಶಸ್ತಿ ಗೆದ್ದಾಗ ಇಡೀ ತಂಡವೇ ಆತನ ತಂದೆಗೆ ಪ್ರಶಸ್ತಿಯನ್ನು ಸಮರ್ಪಿಸಿತು.

2000ದಲ್ಲಿ ಎ.ಎಸ್.ಸಿ. ತಂಡಕ್ಕೆ ಸೇರ್ಪಡೆ, 2002ಕ್ಕೆ ಸೇನೆಯ ಹಿರಿಯರ ತಂಡಕ್ಕೆ ಆಯ್ಕೆ, 2007ರಲ್ಲಿ ಮೊದಲಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಚಿನ್ನ, 2008ರಲ್ಲಿ ಬೆಲ್ಜಿಯಂ ಟೆಸ್ಟ್‌ನಲ್ಲಿ ಚಿನ್ನ, ಕಿರಿಯರ ಏಷ್ಯಾಕಪ್‌ನಲ್ಲಿ ಚಿನ್ನ, ಆಜ್ಲನ್‌ಷಾದಲ್ಲಿ ಬೆಳ್ಳಿ ಪಡೆದ ಈತ 2010ರ ಇಂಡೋ-ಕೆನಡಾ  ಟೂರ್ನಿಯಲ್ಲಿ ಚಿನ್ನ, 2011ರಲ್ಲಿ ಆಜ್ಲನ್‌ಷಾದಲ್ಲಿ 6ನೇ ಸ್ಥಾನ, ಸೆಪ್ಟಂಬರ್‌ನಲ್ಲಿ ಚೀನಾದಲ್ಲಿ ನಡೆದ ಪ್ರಥಮ ಏಷ್ಯಾ ಕಪ್‌ನಲ್ಲಿ ಚಿನ್ನ ಪಡೆದ ಅವರನ್ನು ಎ.ಎಸ್.ಸಿಯ ಬ್ರಿಗೇಡಿಯರ್ ಸನ್ಮಾನಿಸಿ ಅಧಿಕಾರಿ ಹುದ್ದೆಗೆ ಬಡ್ತಿ ನೀಡಿ ಗೌರವಿಸಲಾಯಿತು.

2018ರಲ್ಲಿ ಮಂಗಳೂರು ಕೊಂಚಾಡಿಯ ತಾರನಾಥ ಆಚಾರ್ಯ ಅವರ ಪುತ್ರಿ ನಿಶಾ ಅವರನ್ನು ವಿವಾಹವಾಗಿ ಸಂಸಾರಿಕ ಜೀವನ ನಡೆಸುತ್ತಿದ್ದಾರೆ.

Swathi MG

Recent Posts

ಅಂಜಲಿ ಅಂಬಿಗೇರ ಕೊಲೆ ಪ್ರಕರಣ: ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ ರಾಜೀವ್ ಅಮಾನತು

ಅಂಜಲಿ ಅಂಬಿಗೇರ ಕೊಲೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ-ಧಾರವಾಡ ಡಿಸಿಪಿ ಪಿ.ರಾಜೀವ್ ಅಮಾನತು ಮಾಡಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ ಹಿನ್ನೆಲೆ  ಅಮಾನತು…

10 mins ago

ಹುಬ್ಬಳ್ಳಿ ಕೊಲೆ ಪ್ರಕರಣ : ಆರೋಪಿ ಎನ್‌ಕೌಂಟರ್‌ಗೆ ಆಗ್ರಹ

ಹುಬ್ಬಳ್ಳಿಯ ವೀರಾಪುರ ಓಣಿ ನಿವಾಸಿ ಅಂಜಲಿ ಅಂಬಿಗೇರ್‌ ಕೊಲೆ ಆರೋಪಿಗೆ ಎನ್‌ಕೌಂಟರ್‌ ಮಾಡಬೇಕೆಂದು ಟೋಕರೆ ಕೋಳಿ ಸಮಾಜ ಸಂಘ ಆಗ್ರಹಿಸಿದೆ.

23 mins ago

ಗತವೈಭವ ಸಾರುವ ಅಪರೂಪದ ಸಂಗೀತ ರುದ್ರೇಶ್ವರ ದೇವಸ್ಥಾನ

ಚಾಲುಕ್ಯರ ಕಾಲದಲ್ಲಿ ಸಂಗೀತ ವಿಶ್ವವಿದ್ಯಾಲಯದ ತಾಣವಾಗಿದ್ದ ಗೋರಟಾ(ಬಿ)ದಲ್ಲಿ ಗತವೈಭವ ಸಾರುವ ಸದುದ್ದೇಶದಿಂದ ಸಂಗೀತ ರುದ್ರೇಶ್ವರರ ವಿಶಿಷ್ಟ ಮತ್ತು ಅಪರೂಪದ ದೇವಸ್ಥಾನ…

36 mins ago

ನ್ಯೂಸ್ ಕರ್ನಾಟಕ ವರದಿಗೆ ಎಚ್ಚೆತ್ತ ತಾಲ್ಲೂಕು ಆಡಳಿತ : ಗ್ರಾಮಕ್ಕೆ ತಹಶೀಲ್ದಾರ್ ಭೇಟಿ

ಸಮಸ್ಯೆ ಬಗೆಹರಿಸಿ ಇಲ್ಲದಿದ್ದರೆ ಒಂದು ತೊಟ್ಟು ವಿಷ ಕೊಡಿ ಎಂದು ಗ್ರಾಮವನ್ನೇ ತೊರೆಯಲು ಮುಂದಾಗಿದ್ದ ಗ್ರಾಮಸ್ಥರಿಗೆ ನಂಜನಗೂಡು ತಹಶೀಲ್ದಾರ್ ಶಿವಕುಮಾರ್…

52 mins ago

ಭಗವಂತ ಖೂಬಾ ಹ್ಯಾಟ್ರಿಕ್‌ ಜಯ ನಿಶ್ಚಿತ : ಶೈಲೇಂದ್ರ

ಮೂರನೇ ಸಲ ಕೇಂದ್ರ ಸಚಿವ ಭಗವಂತ ಖೂಬಾ ಅವರು ಬೀದರ್‌ ಲೋಕಸಭಾ ಕ್ಷೇತ್ರದಿಂದ ಜಯ ಗಳಿಸುವುದು ನಿಶ್ಚಿತ' ಎಂದು ಬಿಜೆಪಿ…

1 hour ago

ಭಾರತೀಯರಿಗೆ ಗುಡ್‌ ನ್ಯೂಸ್‌ : ವೀಸಾ ಇಲ್ಲದೆ ರಷ್ಯಾಕ್ಕೆ ಹೋಗುವ ಅವಕಾಶ

ವಿದೇಶಕ್ಕೆ ಸುತ್ತಬೇಕು ಎನ್ನುವ ಪ್ರವಾಸಿಗರಿಗೆ ಒಂದು ಶುಭ ಸುದ್ದಿ. ಭಾರತೀಯರು ಇನ್ನು ಶೀಘ್ರದಲ್ಲೇ ವೀಸಾ ಇಲ್ಲದೆ ರಷ್ಯಾ ಪ್ರವಾಸ ಮಾಡಬಹುದು.…

1 hour ago