News Karnataka Kannada
Thursday, May 02 2024
ಮಡಿಕೇರಿ

ತಲಕಾವೇರಿ – ಭಾಗಮಂಡಲ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯಿಂದ ಕೊಡವರನ್ನು ದೂರ ಇಡಲು ಷಡ್ಯಂತ್ರ

Kodava
Photo Credit :

ಕೊಡವರ ಹಕ್ಕು ಕಸಿಯಲು ಶಾಸಕ ಬೋಪಯ್ಯ ಪ್ರಯತ್ನ- ಕೊಡವ ಜನಾಂಗದ ಪ್ರಮುಖರ ಅಸಮಾಧಾನ

ಕೊಡವ ಜನಾಂಗದ ಕುಲಮಾತೆ ಕಾವೇರಿಯ ಉಗಮ ಸ್ಥಾನ, ತಲಕಾವೇರಿ-ಭಾಗಮಂಡಲ ಕ್ಷೇತ್ರದ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ 9 ಸದಸ್ಯರಲ್ಲಿ ಕೇವಲ ಇಬ್ಬರು ಕೊಡವರಿಗೆ ಮಾತ್ರ ಅವಕಾಶ ನೀಡಲಾಗಿದ್ದು, ಕ್ಷೇತ್ರದಿಂದ ಕೊಡವರನ್ನು ವ್ಯವಸ್ಥಿತವಾಗಿ ದೂರ ಇಡಲು ಸಂಚು ನಡೆಸಲಾಗುತ್ತಿದೆ ಎಂದು ಕೊಡವ ಜನಾಂಗದ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದ್ದು, ಪ್ರಸ್ತುತ ಶಾಸಕ ಕೆ.ಜಿ.ಬೋಪಯ್ಯರವರ ಶಿಫಾರಸ್ಸು ಪತ್ರದಂತೆ ಸಮಿತಿ ರಚನೆಯಾಗಿದ್ದು, ಸಮಿತಿಯಲ್ಲಿ ಶೇಕಡ 50ರಷ್ಟು ಕೊಡವರಿಗೆ ಪ್ರಾತಿನಿಧ್ಯತೆ ನೀಡಬೇಕು. ಉಳಿದಂತೆ ಕ್ಷೇತ್ರದ ಮೂಲ ಅರ್ಚಕರಾದ ಅಮ್ಮಕೊಡವ ಜನಾಂಗಕ್ಕೆ ಸಮಿತಿಯಲ್ಲಿ ಸ್ಥಾನ ನೀಡುವುದರೊಂದಿಗೆ ಕೊಡಗಿನ ಎಲ್ಲಾ ಭಾಗದಿಂದ ಸಮಿತಿಗೆ ಸದಸ್ಯರನ್ನು ಆಯ್ಕೆ ಮಾಡಬೇಕೆಂದು ಅವರುಗಳು ಒತ್ತಾಯಿಸಿದ್ದಾರೆ.

ಪೊನ್ನಂಪೇಟೆಯಲ್ಲಿ ಈ ಬಗ್ಗೆ ಕೊಡವ ಜನಾಂಗದ ಪ್ರಮುಖರು ನಡೆಸಿದ ತುರ್ತು ಸಭೆಯಲ್ಲಿ ದೀರ್ಘ ಚರ್ಚೆ ನಡೆದು, ದೇವಸ್ಥಾನ ಸಮಿತಿಗೆ ತಾ.30-07-2021ರಿಂದ ಅರ್ಜಿಸ್ವೀಕರಿಸಲು ಪ್ರಾರಂಭಿಸಲಾಗಿದೆ. ಆದರೆ ಶಾಸಕ ಕೆ.ಜಿ.ಬೋಪಯ್ಯರವರು ಅದಕ್ಕೆ ಮುಂಚಿತವಾಗಿ ಅಂದರೆ ತಾ.02-06-2021 ರಂದು ಆಗಿನ ಮುಖ್ಯಮಂತ್ರಿಯವರಿಗೆ ಸಮಿತಿಗೆ 9 ಸದಸ್ಯರ ಹೆಸರನ್ನು ಪತ್ರ ಬರೆದು ಶಿಫಾರಸ್ಸು ಮಾಡಿದ್ದಾರೆ. ಶಾಸಕರು ಸಮಿತಿಗೆ ಶಿಫಾರಸ್ಸು ಮಾಡಿದವರ ಹೆಸರನ್ನು ಆಗಿನ ಮುಖ್ಯಮಂತ್ರಿರವರು ತಾ.16.-06-2021 ರಂದು ಅಂತಿಮಗೊಳಿಸಿ ಅಂಗೀಕಾರ ಮಾಡಿರುತ್ತಾರೆ.

ಸಮಿತಿಗೆ ಅರ್ಜಿ ಸಲ್ಲಿಸುವ ಮೊದಲೇ ಸಮಿತಿ ರಚನೆ ಮಾಡಲಾಗಿದ್ದು,ಶಾಸಕರು ಶಿಫಾರಸ್ಸು ಮಾಡಿದ 9 ಜನರನ್ನೇ ಇದೀಗ ಸಮಿತಿಗೆ ನೇಮಿಸಿಕೊಳ್ಳಲಾಗಿದೆ, ಇದೊಂದು ಕೊಡವ ಜನಾಂಗದವರನ್ನು ಕತ್ತಲೆಯಲಿಟ್ಟು ನಡೆಸಿದ ಷಡ್ಯಂತ್ರವೆಂದು ಸಾಬೀತಾಗಿದ್ದು, ಇದಕ್ಕೆ ಶಾಸಕ ಕೆ.ಜಿ.ಬೋಪಯ್ಯರವರು ನೇರ ಹೊಣೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಸಮಿತಿ ರಚನೆಗೆ ಮೊದಲು ರಾಜಕೀಯ ರಹಿತವಾಗಿ ಕೊಡಗಿನ ಎಲ್ಲಾ ಭಾಗಕ್ಕೆ ಪ್ರಾತಿನಿಧ್ಯ ನೀಡಬೇಕೆಂದು ಮನವಿ ಮಾಡಲಾಗಿತ್ತು. ಆದರೆ ಭಾಗಮಂಡಲ ವ್ಯಾಪ್ತಿಗೆ ಸೀಮಿತವಾಗಿ ಸಮಿತಿ ರಚನೆ ಮಾಡಲಾಗಿದೆ. ಸಮಿತಿಗೆ 70 ಸದಸ್ಯರು ಅರ್ಜಿ ಸಲ್ಲಿಸಿದ್ದು, ಕಂದಾಯ ಮತ್ತು ಪೊಲೀಸ್ ಇಲಾಖೆಯಲ್ಲಿ ಅರ್ಜಿಗಳ ಪರಿಶೀಲನೆಗೆ ಅಲೆದಾಡಿಸಲಾಯಿತು. ಅರ್ಜಿ ಸಲ್ಲಿಸುವ ಮೊದಲೇ ಒಳಗೊಳಗೆ ಶಾಸಕರ ಶಿಫಾರಸ್ಸು ಪತ್ರದಂತೆ ಸಮಿತಿ ರಚಿಸಿಕೊಳ್ಳುವುದಾದರೆ ನಂತರದಲ್ಲಿ ಆರ್ಜಿ ಸಲ್ಲಿಸಿದ ಮತ್ತು ಅದರ ಪರಿಶೀಲನೆ ಎಂಬ ನಿಯಮ ಬಾಹಿರವಾದ ನಡೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲಾಯಿತು.

ತಲಕಾವೇರಿ ಭಾಗಮಂಡಲ ಕ್ಷೇತ್ರದ ಧಾರ್ಮಿಕ ಪಾವಿತ್ರ್ಯತೆ ಕಾಪಾಡಲು ಟೆಂಪಲ್ ಟೌನ್ ಮಾಡುವ ಬೇಡಿಕೆಗೆ ವಿರೋಧ ಮಾಡಿದವರು, ಸಾಂಪ್ರದಾಯಿಕ ಕೊಡವ ಉಡುಪಾದ ಕುಪ್ಯ-ಚೇಲೆ ತೊಟ್ಟು ಕ್ಷೇತ್ರಕ್ಕೆ ಕೊಡವರು ಬರಬಾರದೆಂದು ಫರ್ಮಾನು ಹೊರಡಿಸಿದವರು, ಕ್ಷೇತ್ರದ ತೀರ್ಥೋತ್ಭವದ ದಿವಸ ಸಾಂಪ್ರದಾಯಿಕ ತಳಿಯತಕ್ಕಿಬೊಳಕ್, ದುಡಿಕೊಟ್ಟ್ ಪಾಟ್‌ನೊಂದಿಗೆ ಬರುವ ಭಕ್ತಾದಿಗಳಿಗೆ ವಿರೋಧಮಾಡಿದವರು, 2020ರಲ್ಲಿ ಭಕ್ತಾದಿಗಳನ್ನು ತೀರ್ಥೋತ್ಭವದ ದಿನ ಮಧ್ಯರಾತ್ರಿ ತಡೆದು ನೀರು ಹಾಗೂ ಬೆಳಕು ವ್ಯವಸ್ಥೆಯನ್ನು ಕೊಡದೆ ಕಗ್ಗತ್ತಲಿನಲ್ಲಿ ಮಹಿಳೆಯರು ಸೇರಿದಂತೆ ಭಕ್ತಾದಿಗಳನ್ನು ಭಾಗಮಂಡಲದಿಂದ ತಲಕಾವೇರಿಯವರೆಗೆ ಕಾಲ್ನಡಿಗೆಯಲ್ಲಿ ನಡೆಸಿದವರು.

ಈ ದೇವಸ್ಥಾನದ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡವರನ್ನು ಸಮಿತಿಗೆ ಶಾಸಕ ಕೆ.ಜಿ.ಬೋಪಯ್ಯರವರು ಶಿಫಾರಸ್ಸು ಮಾಡಿದ್ದು, ಈ ಎಲ್ಲಾ ಕೃತ್ಯಗಳಲ್ಲಿ ಶಾಮೀಲಾಗಿರುವವರನ್ನೇ ಸಮಿತಿಯಲ್ಲಿ ಸೇರ್ಪಡೆಗೊಳಿಸುವುದಾದರೆ, ಇವೆಲ್ಲ ಬೆಳೆವಣಿಗೆ ಹಿಂದೆ ಶಾಸಕರ ನೇರ ಪಾತ್ರವಿದೆಯೆಂದು ಆರೋಪಿಸಿದರು.

ದೇವಸ್ಥಾನದ 800 ಏಕರೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡವರು ಸಮಿತಿಯಲ್ಲಿದ್ದರೆ ದೇವಸ್ಥಾನಕ್ಕೆ ಸದರಿ ಜಾಗವನ್ನು ವಾಪಾಸು ನೀಡುವ ಪ್ರಕ್ರಿಯೆಗೆ ತಡೆ ಮಾಡಬಹುದೆಂಬ ದುರುದ್ದೇಶದಿಂದ ಇವರನ್ನು ಸಮಿತಿಗೆ ನೇಮಿಸಿಕೊಳ್ಳಲಾಗಿದೆ ಎಂಬುದು ಸ್ಪಷ್ಟವಾಗಿದೆ. ಅನಾದಿ ಕಾಲದಿಂದಲೂ ತಳಿಯತಕ್ಕಿ ಬೊಳ್‌ಕ್, ದುಡಿಕೊಟ್ಟ್ ಪಾಟ್ ಸಹಿತ ಸಾಂಪ್ರದಾಯಿಕ ಕುಪ್ಯ-ಚೇಲೆಯಲ್ಲಿ ಬರುವವರನ್ನು ವಿರೋಧಿಸುವ ವಿಕೃತ ಮನಸ್ಥಿತಿ ಇರುವವರು ಸಮಿತಿಯಲ್ಲಿದ್ದರೆ ಕ್ಷೇತ್ರದಲ್ಲಿ ಧಾರ್ಮಿಕ ಭಾವನೆ, ಆಚರಣೆ ಹಾಗೂ ಜನಾಂಗಗಳ ನಡುವೆ ಸಾಮರಸ್ಯ ಸಾಧಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು ಇಂತವರನ್ನು ಸಮಿತಿಗೆ ಸೇರಿಸಿಕೊಂಡು ಜನಾಂಗಗಳ ನಡುವೆ ಬೆಂಕಿ ಹಚ್ಚಲು ಶಾಸಕರು ಪ್ರಯತ್ನಿಸುತ್ತಿದ್ದಾರೆಯೇ ಎಂಬ ಅನುಮಾನ ಬಲವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

2021 ರಲ್ಲಿ ತೀರ್ಥೋತ್ಭವದ ಪೂರ್ವಭಾವಿ ಸಭೆಗೆ ಕೊಡವ ಜನಾಂಗದವರನ್ನು ಕರೆಯದೆ ಶಾಸಕ ಕೆ.ಜಿ.ಬೋಪಯ್ಯರವರ ಅಧ್ಯಕ್ಷತೆಯಲ್ಲಿ ಭಾಗಮಂಡಲದಲ್ಲಿ ಸಭೆ ನಡೆಸಲಾಯಿತು ಎಂದು ಕಿಡಿಕಾರಿದ ಅವರು, ಅಪ್ಪಚ್ಚೀರ ಕುಟುಂಬವು ಈ ಕ್ಷೇತ್ರದ ದೇವರಿಗೆ ನೈವೇದ್ಯ ಹಾಗೂ ಅನ್ನದಾನ ಮಾಡಲು 400 ಭಟ್ಟಿ ಭೂಮಿಯನ್ನು ದಾನಮಾಡಿದ್ದು, ಈ ಭೂಮಿಯಿಂದ ಭತ್ತ ಬೆಳೆದು ದೇವರಿಗೆ ನೈವೇದ್ಯ ಮಾಡಬೇಕಾಗಿದ್ದು, ಈ ಆಚರಣೆ ನಡೆಯುತ್ತಿದೆಯೇ? ಹಾಗೂ ಈ ಭೂಮಿ ಯಾರ ಸ್ವಾಧೀನದಲ್ಲಿದೆ ಎಂದು ಪ್ರಶ್ನಿಸಿದ ಅವರು ಅಪ್ಪಚ್ಚೀರ ಕುಟುಂಬ ಭೂಮಿ ದಾನ ನೀಡಿದ ಬಗ್ಗೆ ಕಲ್ಲಿನಲ್ಲಿ ಹೆಸರು ಕೆತ್ತಲ್ಪಟ್ಟಿದ್ದು, ಈ ಕಲ್ಲನ್ನು ಕೆಡವಲಾಗಿದೆ. ಮತ್ತು ಅಪ್ಪಚ್ಚೀರ ಕುಟುಂಬಕ್ಕೆ ಭಾಗಮಂಡಲದಲ್ಲಿ ತಂಗಲು ಒಂದು ವಿಶೇಷ ಕೊಠಡಿ ನೀಡಲಾಗಿತ್ತು. ಅದನ್ನು ಕಣ್ಮರೆ ಮಾಡಲಾಗಿದೆ. ಇದರ ಬಗ್ಗೆ ಶಾಸಕರು ಸ್ಪಷ್ಟ ಪಡಿಸುವಂತೆ ಒತ್ತಾಯಿಸಿದರು.

ಈ ಸಂದರ್ಭ ಶಾಸಕ ಕೆ.ಜಿ.ಬೋಪಯ್ಯ ಅವರು ದೇವಸ್ಥಾನ ಸಮಿತಿಗೆ 9 ಜನರನ್ನು ನಾಮ ನಿರ್ದೇಶನ ಮಾಡುವಂತೆ ಆಗಿನ ಮುಖ್ಯಮಂತ್ರಿ ಅವರಿಗೆ ಬರೆದ ಪತ್ರವನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿದರು.

ಸಭೆಯಲ್ಲಿ ಬಿ.ಜೆ.ಪಿ ಯುವಮೋರ್ಚಾ ಮಾಜಿ ಜಿಲ್ಲಾಧ್ಯಕ್ಷ ಚೊಟ್ಟೇಕ್‌ಮಾಡ ರಾಜೀವ್‌ಬೋಪಯ್ಯ, ವಿರಾಜಪೇಟೆ ನಗರ ಬಿ.ಜೆ.ಪಿ. ಯುವಮೋರ್ಚಾ ಮಾಜಿ ಆದ್ಯಕ್ಷ ಅಪ್ಪಂಡೇರಂಡ ಯಶ್ವಂತ್‌ಕಾಳಪ್ಪ, ಜಬ್ಬೂಮಿ ಸಂಘಟನೆಯ ಪ್ರಮುಖರಾದ ಮಚ್ಚಮಾಡ ಅನೀಶ್‌ಮಾದಪ್ಪ, ಪಾಲೇಂಗಡ ಅಮಿತ್, ಕಾವೇರಿ ಭಕ್ತ ಸಂಘದ ಅಪ್ಪಚ್ಚೀರ ಕಮಲಮುತ್ತಣ್ಣ, ಜಮ್ಮಡ ಮೋಹನ್‌ಮಾದಪ್ಪ ಹಾಜರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1620
Coovercolly Indresh

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು