News Karnataka Kannada
Monday, April 29 2024
ಮಡಿಕೇರಿ

ಕೊಡವ ಸಮುದಾಯದವರಿಗೆ ಪ್ರತ್ಯೇಕವಾಗಿ ‘ಕೊಡವ ಜನಾಂಗ ಅಭಿವೃದ್ಧಿ ನಿಗಮ’ ಸ್ಥಾಪಿಸಲು ಮುಖ್ಯಮಂತ್ರಿಗಳ ಬಳಿ ಮನವಿ

Kodavas
Photo Credit :

ಮಡಿಕೇರಿ: ಕೊಡವ ಸಮುದಾಯದವರಿಗೆ ಪ್ರತ್ಯೇಕವಾಗಿ ‘ಕೊಡವ ಜನಾಂಗ ಅಭಿವೃದ್ಧಿ ನಿಗಮ’ ಸ್ಥಾಪಿಸಬೇಕೆಂದು ಯುನೈಟೆಡ್ ಕೊಡವ ಆರ್ಗನೈಝೇಷನ್ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿಕೊಂಡಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘಟನೆಯ ಸಂಚಾಲಕ ಮಂಜು ಚಿಣ್ಣಪ್ಪ, ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭ ವೀರಶೈವ ಲಿಂಗಾಯಿತ, ಒಕ್ಕಲಿಗ ಹಾಗೂ ಮರಾಠ ಸಮುದಾಯಗಳಿಗೆ ನೂತನವಾಗಿ ಅಭಿವೃದ್ಧಿ ನಿಗಮಗಳನ್ನು ಸಾಪಿಸಿರುವುದರ ಮೂಲಕ ರಾಜ್ಯದಲ್ಲಿ ಹಿಂದುಳಿದವರ ಏಳಿಗೆಗಾಗಿ ಸರ್ಕಾರ ಸ್ಪಂದಿಸಿದೆ. ಆ ಮೂಲಕ ಯಡಿಯೂರಪ್ಪ ಅವರ ಸಾಮಾಜಿಕ ಕಳಕಳಿ, ದೂರ ದೃಷ್ಟಿ ಹಾಗೂ ಸರ್ವರಿಗೂ ಸಮಪಾಲು ಸರ್ವರಿಗೂ ಸಮ ಬಾಳು ಎಂಬ ಪರಿಕಲ್ಪನೆಗೆ ಇದು ಸಾಕ್ಷಿಯಾಗಿದೆ ಎಂದು ಮಂಜು ಚಿಣ್ಣಪ್ಪ ಹೇಳಿದ್ದಾರೆ.

ಕೊಡಗು ಜಿಲ್ಲೆಯ ಕೊಡವ ಜನಾಂಗಕ್ಕೂ ಸಹ ಒಂದು ಪ್ರತ್ಯೇಕ ಕೊಡವ ಜನಾಂಗ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವ ಅನಿವಾರ್ಯತೆ ಹಾಗೂ ಅವಶ್ಯಕತೆ ಇದೆ ಎಂದು ಮನವಿಯ ಮೂಲಕ ಮನವರಿಕೆ ಮಾಡಿಕೊಡಲಾಗಿದೆ. ಕರ್ನಾಟಕದ ಹಿರಿಮೆಯಲ್ಲಿ ಕೊಡವ ಜನಾಂಗವೂ ಬಹು ಮುಖ್ಯವಾದ ಪಾತ್ರ ನಿರ್ವಹಿಸುತ್ತಿದೆ. ತಮ್ಮದೇ ಆದ ವಿಶಿಷ್ಟವಾದ ಸಂಸ್ಕೃತಿ, ಸಂಪ್ರದಾಯ, ಪರಂಪರೆಯೊಂದಿಗೆ ವಿಶೇಷವಾದ ನಡೆ ನುಡಿಯನ್ನು ಮೈಗೂಡಿಸಿಕೊಂಡಿರುವ ಕೊಡವರು, 1956ರಲ್ಲಿ ಕರ್ನಾಟಕದೊಂದಿಗೆ ವಿಲೀನವಾದ ಬಳಿಕ ರಾಜ್ಯ ಹಾಗೂ ರಾಷ್ಟ್ರಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ದೇಶದ ರಕ್ಷಣೆಯ ವಿಷಯದಲ್ಲೂ, ಭಾತೀಯ ಸೇನೆಗೆ ಕೊಡವರ ಸೇವೆ ಅಪಾರವಾಗಿದ್ದು, ಕ್ರೀಡಾ ಕ್ಷೇತ್ರದಲ್ಲಿಯೂ ಕೊಡವರು ತಮ್ಮ ಅಪ್ರತಿಮ ಕೊಡುಗೆಯನ್ನು ನೀಡುತ್ತಾ ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ ಹಾಗೂ ದೇಶದ ಗೌರವವನ್ನು ಎತ್ತಿ ಹಿಡಿಯುವಲ್ಲಿಯೂ ಪ್ರಮುಖ ಪಾತ್ರನಿರ್ವಹಿಸಿದ್ದಾರೆ.

ರಾಜ್ಯದ ಆಡಳಿತಾತ್ಮಕ ಸೇವೆ, ವೈದ್ಯಕೀಯ ಕ್ಷೇತ್ರ, ನ್ಯಾಯಾಂಗ ಸೇವೆ, ಕೃಷಿ ಮತ್ತು ವಾಣಿಜ್ಯ ಕ್ಷೇತ್ರ ಹಾಗೂ ಆರ್ಥಿಕತೆಯೂ ಸೇರಿದಂತೆ ಎಲ್ಲಾ ಆಯಾಮಗಳಲ್ಲಿಯೂ ಕೊಡವರು ಗಮನಾರ್ಹ ಸೇವೆ ನೀಡುತ್ತಾ ಬಂದಿದ್ದು, ಇದೀಗ ಜನಾಂಗದ ಸಮಗ್ರ ಅಭಿವೃದ್ದಿಯ ದೃಷ್ಟಿಯಿಂದ ಅಭಿವೃದ್ಧಿ ನಿಗಮ ಸ್ಥಾಪಿಸುವ ಅನಿವಾರ್ಯತೆ ಇದೆ ಎಂದು ಮಂಜು ಚಿಣ್ಣಪ್ಪ ಮನವಿ ಮೂಲಕ ಒತ್ತಾಯಿಸಿದ್ದಾರೆ. ಪ್ರಪಂಚದಾದ್ಯಂತ ನೆಲೆಸಿರುವ ಕೊಡವರ ಸಂಖ್ಯೆ ಕೇವಲ 1.75 ಲಕ್ಷ ಮಾತ್ರವೇ ಆಗಿದ್ದು, ಜನಾಂಗದ ಶೇ.60ಕ್ಕಿಂತಲೂ ಹೆಚ್ಚಿನವರು ಹಿಂದುಳಿದವರಾಗಿದ್ದಾರೆ. ಶೇ.30ಕ್ಕೂ ಹೆಚ್ಚಿನವರು ಬಡತನ ರೇಖೆಯ ಕೆಳಗಿದ್ದಾರೆ. ಮಾತ್ರವಲ್ಲದೆ ಕೊಡವರ ಜನಸಂಖ್ಯೆ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದು, ತಮ್ಮ ನೆಲದಲ್ಲಿಯೇ ಕೊಡವರು ಅತ್ಯಂತ ಅಲ್ಪಸಂಖ್ಯಾತರಾಗಿದ್ದಾರೆ ಎಂಬುದು ವಿಷಾದನೀಯ ಎಂದು ಮಂಜು ಚಿಣ್ಣಪ್ಪ ಮನವಿಯಲ್ಲಿ ವಿವರಿಸಿದ್ದಾರೆ.

ಪ್ರಸ್ತುತ ಮೀಸಲಾತಿ ವ್ಯವಸೆಯಲ್ಲಿ ಕೊಡವರಿಗೆ ಯಾವುದೇ ಹೇಳಿಕೊಳ್ಳುವಂತಹ ಅವಕಾಶಗಳು ದೊರಕುತ್ತಿಲ್ಲ. ಇಂದಿನ ರಾಜಕೀಯ ಸನ್ನಿವೇಶದಲ್ಲೂ ಕೊಡವರು ರಾಜಕೀಯವಾಗಿ ದೇಶದಲ್ಲಿಯೇ ಅತ್ಯಂತ ದುರ್ಬಲ ಅಲ್ಪಸಂಖ್ಯಾತ ಸಮುದಾಯವಾಗಿದೆ. ಸರ್ಕಾರದ ಯಾವುದೇ ಪ್ರಮುಖ ಯೋಜನೆಗಳು ಹಾಗೂ ಅನುದಾನಗಳು ಅರ್ಹ ಕೊಡವರನ್ನು ತಲುಪಲು ಸಾದ್ಯವಾಗುತ್ತಿಲ್ಲ ಎಂದು ಮಂಜು ಚಿಣ್ಣಪ್ಪ ನೋವನ್ನು ತೋಡಿಕೊಂಡಿದ್ದಾರೆ. 2009ರ ಯುನೆಸ್ಕೋ ವರದಿಯಂತೆ ಅಳಿವಿಂಚಿನಲ್ಲಿರುವ ಭಾಷೆಗಳ ಪಟ್ಟಿಯಲ್ಲಿ ಕೊಡವ ಭಾಷೆಯೂ ಗುರುತಿಸಿಕೊಂಡಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಕೊಡವ ಜನ ಸಂಖ್ಯೆ ಕ್ಷೀಣ ಸುತ್ತಿರುವುದನ್ನೂ ಸಹ ಸರ್ಕಾರವು ಗಂಭೀರವಾಗಿ ಪರಿಗಣ ಸಬೇಕು. ಸರ್ಕಾರ ಈಗಾಗಲೇ ರಾಜ್ಯದ ವೀರಶೈವ ಲಿಂಗಾಯಿತ, ಒಕ್ಕಲಿಗ, ಮರಾಠ, ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ ಸಮಾಜ, ಮಡಿವಾಳ, ಅಲೆಮಾರಿ-ಅರೆಅಲೆಮಾರಿ, ಕಾಡುಗೊಲ್ಲ, ಆರ್ಯವೈಶ್ಯ, ಕ್ರಿಶ್ಚಿಯನ್, ಎಸ್ಸಿ-ಎಸ್ಟಿ ನಿಗಮಗಳೂ ಸೇರಿದಂತೆ ಸುಮಾರು 20ಕಿಂತಲೂ ಹೆಚ್ಚಿನ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸುವುದರ ಮೂಲಕ ಹಿಂದುಳಿದ ವರ್ಗಗಳ ಶ್ರೇಯೋಭಿವೃದ್ದಿಗಾಗಿ ಪ್ರತ್ಯೇಕ ಅನುದಾನಗಳನ್ನು ಬಿಡುಗಡೆಮಾಡಿದೆ.

ಅದರಂತೆಯೇ ಕೊಡವರ ಸಮಗ್ರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸರ್ಕಾರ ಸಂವಿಧಾನದ 162ನೇ ವಿಧಿ ಅಡಿಯಲ್ಲಿ ನೂತನವಾಗಿ ಕೊಡವ ಜನಾಂಗಕ್ಕಾಗಿಯೇ ಪ್ರತ್ಯೇಕ ‘ಕೊಡವ ಜನಾಂಗ ಅಭಿವೃದ್ಧಿ ನಿಗಮ’ವನ್ನು ಸ್ಥಾಪಿಸಬೇಕು. ನಿಗಮಕ್ಕೆ ವಾರ್ಷಿಕವಾಗಿ ಸುಮಾರು 1 ಸಾವಿರ ಕೋಟಿ ರೂ. ಅನುದಾನವನ್ನು ಮೀಸಲಿಡುವುದರ ಮೂಲಕ ಕೊಡವ ಜನಾಂಗದ ಸಮಗ್ರ ಅಭಿವೃದ್ಧಿಗಾಗಿ ಕಾರ್ಯಕ್ರಮವನ್ನು ರೂಪಿಸುವಂತೆ ಒತ್ತಾಯಿಸಲಾಗಿದೆ ಎಂದು ಮಂಜು ಚಿಣ್ಣಪ್ಪ ಹೇಳಿದ್ದಾರೆ.
ಈ ಕುರಿತು ಮುಂದಿನ ದಿನಗಳಲ್ಲಿ ಜಿಲ್ಲೆಯ ಶಾಸಕರು, ಸಂಸದರು ಸೇರಿದಂತೆ ಎಲ್ಲರ ಸಹಕಾರದೊಂದಿಗೆ ಸರ್ಕಾರವನ್ನು ಒತ್ತಾಯಿಸಲಾಗುವುದು. ಮುಂದಿನ ಬಜೆಟ್ ಅದಿವೇಶನದಲ್ಲಿ ಕೊಡವ ಜನಾಂಗ ಅಭಿವೃದ್ದಿ ನಿಗಮ ಘೋಷಣೆಯಾಗುವಂತೆ ಮಾಡಲು ಜಿಲ್ಲೆಯ ಜನಪ್ರತಿನಿಧಿಗಳು ಸರ್ಕಾರಕ್ಕೆ ಒತ್ತಡ ಹೇರಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ನಿಟ್ಟಿನಲ್ಲಿ ಯುಕೊ ಸಂಘಟನೆಯು ತಳಮಟ್ಟದಿಂದ ಮನೆಮನೆಗಳಲ್ಲಿ ಜನಜಾಗೃತಿ ಮೂಡಿಸಿ ವಿವಿಧ ಕಾರ್ಯಕ್ರಮಗಳ ಮೂಲಕ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ನಡೆಸಲಿದೆ. ಮುಂದಿನ ಹಂತದಲ್ಲಿ ಕೊಡವ ತಕ್ಕಮುಖ್ಯಸ್ಥರು, ಕೊಡವ ಸಮಾಜಗಳು, ಕೊಡವ ಸಂಘಸAಸ್ಥೆಗಳು ಹಾಗು ಎಲ್ಲಾ ಜನಪ್ರತಿನಿಧಿಗಳನ್ನು ಸಂಘಟಿಸಿ ಹಂತ ಹಂತವಾಗಿ ಹೋರಾಟವನ್ನೂ ಸಹ ರೂಪಿಸಲಾಗುವುದು ಎಂದು ಮಂಜು ಚಿಣ್ಣಪ್ಪ ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು