ಮೈಸೂರು: ಕನ್ನಡ ಉಳಿಸಿ-ಕನ್ನಡ ಬೆಳೆಸಿ ಎನ್ನುವುದನ್ನು ನಿಲ್ಲಿಸಿ ಕನ್ನಡವನ್ನು ಬಳಸಿ ಬೆಳೆಸುವ ಕೆಲಸವಾಗಬೇಕಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ.ಮಾನಸ ಹೇಳಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಭಾನುವಾರ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸವಾರಂಭ ಉದ್ಘಾಟಿಸಿ ಮಾತನಾಡಿದ ಅವರು, ನಾವು ಕನ್ನಡಿಗರೆಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ.
ಹೆತ್ತ ತಾಯಿಯಷ್ಟೇ ಪವಿತ್ರವಾದ ಮಾತೃಭಾಷೆಗೆ ಗೌರವ ನೀಡುವುದು ಈ ನೆಲದಲ್ಲಿ ಹುಟ್ಟಿದ ಪ್ರತಿಯೊಬ್ಬರ ಕರ್ತವ್ಯ. ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಪ್ರಥಮ ಆದ್ಯತೆ ನೀಡಬೇಕು. ಕನ್ನಡದಲ್ಲಿಯೇ ನಿತ್ಯದ ವ್ಯವಹಾರ ನಡೆಸಬೇಕು. ನಾವು ನವೆಂಬರ್ ಕನ್ನಡಿಗರಾಗದೆ, ಜೀವ ಇರುವವರೆಗೂ ನಾಡು ನುಡಿ ಮರೆಯದಿರೋಣ ಎಂದರು.
ಕರ್ನಾಟಕದಲ್ಲಿರುವ ಅನ್ಯಭಾಷಿಕರ ಜತೆ ನಾವು ಕನ್ನಡದಲ್ಲಿ ಮಾತನಾಡುವುದಿಲ್ಲ. ಅವರ ಭಾಷೆಯಲ್ಲೇ ಮಾತನಾಡುತ್ತೇವೆ. ಇದರಿಂದ ಅವರು ಕನ್ನಡ ಕಲಿಯತ್ತಿಲ್ಲ. ಹೀಗಾಗಿ, ನಾವು ಅನ್ಯಭಾಷಿಕರ ಜತೆ ಕನ್ನಡದಲ್ಲೇ ಮಾತನಾಡಬೇಕು. ಇದರಿಂದ ಅವರು ಕನ್ನಡ ಕಲಿಯುತ್ತಾರೆ ಎಂದರು.
ಪ್ರಶಸ್ತಿ ಪ್ರದಾನ: ಸಮಾರಂಭದಲ್ಲಿ ಡಾ.ಎನ್.ಶಶಿಶೇಖರ ದೀಕ್ಷಿತ್, ಗಜಾನನ ಈಶ್ವರ ಹೆಗಡೆ, ವಾಣಿ ಸುಬ್ಬಯ್ಯ, ಬೆಳವಾಡಿ ಅಶ್ವತ್ಥನಾರಾಯಣ, ಡಾ.ಎಸ್.ಸುಧಾ, ಕೆ.ಬಿ.ಲಿಂಗರಾಜು, ಡಾ.ಅಕ್ಕಿ ಸುಜಾತ, ಡಾ.ಎನ್.ಎಸ್.ರಂಗರಾಜು, ಸುಮತಿ ಸುಬ್ರಹ್ಮಣ್ಯ, ಎನ್.ಎಸ್.ಗೋಪಿನಾಥ್, ಅನ್ನಪೂರ್ಣ ನಾಗೇಂದ್ರ, ಜಿ.ಸುಬ್ಬನರಸಿಂಹ, ಎಂ.ಎಸ್.ಕೌಶಲ್ಯ, ಕೃ.ಪಾ.ಮಂಜುನಾಥ್, ಆರ್.ಕೃಷ್ಣ, ಹೇಮಲತಾ ಕುಮಾರಸ್ವಾಮಿ,
ಡಾ.ಎಸ್.ರವಿಶಂಕರ್, ಡಾ.ಕಾವೇರಿ ಪ್ರಕಾಶ್, ಆನಂದ್, ಪುಷ್ಪಲತಾ ನಾರಾಯಣ್, ವೈ.ಕೆ.ಮಂಜುನಾಥ್, ಗೌರವ ಸುಧಾ ಮುರಳಿ, ಎಸ್.ರವಿನಂದನ್, ಆರ್.ವಾಸುದೇವ್, ಎಸ್.ಯೋಗೀಶ್ ಉಪ್ಪಾರ, ಮಿಲ್ ನಾಗರಾಜು, ಎಂ.ಡಿ.ನಾಗೇಂದ್ರ, ಷೇಕ್ ಮಕ್ಸೂದುಲ್ ಹುಸೇನ್ ಸೇರಿದಂತೆ ವಿವಿಧ ಕ್ಷೇತ್ರದ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು.