ನಂಜನಗೂಡು: ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಮರಳೂರು-ಗೊದ್ದನಪುರ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ನಾಯಕರ ಸಂಘವನ್ನು ಮಾಜಿ ಜಿಪಂ ಸದಸ್ಯ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಸಿ.ಚಿಕ್ಕರಂಗನಾಯಕ ಮತ್ತು ಮಾಜಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಸಿ ಬಸವರಾಜು ಉದ್ಘಾಟಿಸಿದರು.
ಶ್ರೀ ಮಹರ್ಷಿ ವಾಲ್ಮೀಕಿ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಸಂಘದ ನಾಮಫಲಕವನ್ನು ಅನಾವರಣಗೊಳಿಸಿ ಮಾಜಿ ಜಿಪಂ ಸದಸ್ಯ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಸಿ. ಚಿಕ್ಕರಂಗನಾಯಕ ಮಾತನಾಡಿ, ವಾಲ್ಮೀಕಿ ಅವರು ಅರಿವಿನ ಸಂಕೇತವಾಗಿದ್ದಾರೆ. ಕವಿ, ಲೇಖಕ ಮಾತ್ರವಲ್ಲ ಅರಿವಿನ ಬೆಳಕಾಗಿದ್ದಾರೆ. ಅವರ ಬೆಳಕು ಜಗತ್ತಿನಾದ್ಯಂತ ಹಬ್ಬಿದೆ.
ರಾಮಾಯಾಣದಲ್ಲಿ ಬರುವ ಪಾತ್ರಗಳನ್ನು ಜನ ಪೂಜಿಸುತ್ತಾರೆ. ಆದರೆ, ಜಗತ್ತಿಗೆ ರಾಮಾಯಾಣ ನೀಡಿದ ವ್ಯಕ್ತಿಯನ್ನು ಕಡೆಗಣಿಸಲಾಗುತ್ತಿದೆ. ರಾಷ್ಟ್ರ ನಾಯಕರನ್ನು ಒಂದೇ ಸಮುದಾಯಗಳಿಗೆ ಸೀಮಿತ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಬುದ್ಧ, ಬಸವ, ಅಂಬೇಡ್ಕರ್, ಕನಕದಾಸರ ತತ್ವ ಆದರ್ಶಗಳನ್ನು ಯುವಕರು ಮೈಗೂಡಿಸಿಕೊಳ್ಳಬೇಕು. ಯಾವುದೇ ಸಂಘವು ಒಂದು ನಿರ್ದಿಷ್ಟ ಗುರಿ ಹೊಂದಿರಬೇಕು ಮತ್ತು ಸರ್ಕಾರದ ಸೌಲಭ್ಯಗಳನ್ನು ಪಡೆದು ಗ್ರಾಮವನ್ನು ಅಭಿವೃದ್ಧಿ ಪಡಿಸಬೇಕು ಮತ್ತು ಯುವಕರು ಗ್ರಾಮದಲ್ಲಿರುವ ಎಲ್ಲಾ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ನೀಡಿ, ಅಂಬೇಡ್ಕರ್ ಅವರು ಹೇಳಿದಂತೆ ಶಿಕ್ಷಣ ಸಂಘಟನೆ ಹೋರಾಟ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಸಿ ಬಸವರಾಜು, ಬಂಗಾರ ಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ಕರ್ನಾಟಕ ರಾಜ್ಯ ವಾಲ್ಮೀಕಿ ನಾಯಕರ ಸಂಘದ ರಾಜ್ಯಾಧ್ಯಕ್ಷ ದೇವರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀಧರ್, ಉಪಾಧ್ಯಕ್ಷೆ ಮಹದೇವಮ್ಮ, ಸಂಘದ ಅಧ್ಯಕ್ಷ ಶಂಕರ ನಾಯಕ, ಮುಖಂಡರಾದ ಕೃಷ್ಣ, ಸೂರಿ, ಶಂಭು ನಾಯಕ್, ಶಿವಕುಮಾರ್, ಶ್ರೀಕಂಠ ನಾಯಕ, ಬಸವರಾಜು ಸೇರಿದಂತೆ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.