ನಂಜನಗೂಡು: ದಕ್ಷಿಣ ಕಾಶಿ ನಂಜನಗೂಡು ನಗರದ ತಾಲ್ಲೂಕು ಆಡಳಿತ ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಜಯಂತಿಯನ್ನು ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ರವರ ನೇತೃತ್ವದಲ್ಲಿ ಸರಳವಾಗಿ ಆಚರಣೆ ಮಾಡಲಾಯಿತು.
ವಿಶ್ವಕರ್ಮ ಅಮರ ಶಿಲ್ಪಿ ಜಕಣಾಚಾರಿ ಅವರ ಭಾವಚಿತ್ರಕ್ಕೆ ತಹಶೀಲ್ದಾರ್ ಶಿವಕುಮಾರ್ ಕಾಸ್ನೂರು ದೀಪಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಮರ ಶಿಲ್ಪಿ ಜಕಣಾಚಾರಿಅವರು ರೂಪಿಸಿದ ಅದ್ಭುತ ಕಲಾಕೃತಿಗಳು ಇಂದಿಗೂ ನಮ್ಮನ್ನು ಬೆರಗುಗೊಳಿಸುತ್ತವೆ. ಇಂತಹ ಕಲೆ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಜಗತ್ತಿನ ಅದ್ಭುತ ಶಿಲ್ಪಗಳ ಸಾಲಿನಲ್ಲಿ ನಿಲ್ಲುವ ಜಕಣಾಚಾರಿ ಅವರು ಬೇಲೂರು ಮತ್ತು ಹಳೆಬೀಡು ಸೇರಿದಂತೆ ಇತರೆ ಸ್ಥಳಗಳಲ್ಲಿ ಕಲ್ಲಿನಲ್ಲಿ ಕೆತ್ತಿದ ಕಲಾಕೃತಿಗಳನ್ನು ನೋಡುವುದೇ ಒಂದು ಸೌಭಾಗ್ಯ. ಮಾಡುವ ಕೆಲಸದ ಬಗ್ಗೆ ತಿಳಿವಳಿಕೆ, ಶ್ರದ್ಧೆ, ನಿಷ್ಠೆ ಮತ್ತು ಪ್ರಾಮಾಣಿಕತೆ ಇದ್ದಲ್ಲಿ ಯಶಸ್ಸು ಲಭಿಸುತ್ತದೆ. ನಮ್ಮೊಳಗಿನ ಕಲೆಯನ್ನು ನಾವು ಗುರುತಿಸಿದರೆ ಮಾತ್ರ ಸಮಾಜ ನಮ್ಮನ್ನು ಗುರುತಿಸುತ್ತದೆ. ಸಾಧಕರನ್ನು ಸ್ಮರಣೆ ಮಾಡಿದರಷ್ಟೇ ಸಾಲದು. ಅವರ ಗುಣ ಮತ್ತು ಬೆಳೆದು ಬಂದ ಪರಿಶ್ರಮದ ಘಟನೆಗಳನ್ನು ತಿಳಿದು ಜೀವನದಲ್ಲಿ ಅಳವಡಿಸಿಕೊಳ್ಳುದು ಅತೀ ಮುಖ್ಯ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್, ವಿಶ್ವಕರ್ಮ ಸಮಾಜದ ಅಧ್ಯಕ್ಷ ಚಂದ್ರು, ವನ್ಯಜೀವಿ ಸಂರಕ್ಷಕ ಗೋಳೂರು ಸ್ನೇಕ್ ಬಸವರಾಜು, ಸೇರಿದಂತೆ ವಿಶ್ವಕರ್ಮ ಸಮಾಜದ ಮುಖಂಡರು, ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.