Ad

ಮುಡಾ ಹಗರಣ ಬಯಲು ಮಾಡಿದ ಮೈಸೂರು ಡಿಸಿ ಕೆವಿ ರಾಜೇಂದ್ರ ವರ್ಗಾವಣೆ; ಏನಿದು ಹಗರಣ ?

Dc

ಬೆಂಗಳೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣ ರಾಜ್ಯ ಸರ್ಕಾರಕ್ಕೆ ತಲೆ ನೋವಾಗಿದೆ. ಈ ಮುಡಾ ಹಗರಣದ ಬಗ್ಗೆ ಒಂದು ವರ್ಷದ ಹಿಂದೆಯೇ ಸರ್ಕಾರದ ಗಮನಕ್ಕೆ ತಂದಿದ್ದ ಮೈಸೂರು ಜಿಲ್ಲಾಧಿಕಾರಿ ಕೆ.ವಿ ರಾಜೇಂದ್ರ ಅವರನ್ನು ವರ್ಗಾವಣೆ ಮಾಡಲಾಗಿದೆ.

Ad
300x250 2

ಕೆವಿ ರಾಜೇಂದ್ರ ಸೇರಿದಂತೆ 21 ಐಎಎಸ್ (IAS) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಮೈಸೂರು ಜಿಲ್ಲಾಧಿಕಾರಿ ಕೆ.ವಿ.ರಾಜೇಂದ್ರ ಅವರನ್ನು ಪ್ರವಾಸೋದ್ಯಮ ನಿರ್ದೇಶಕರಾಗಿ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ. ಮೈಸೂರು ಜಿಲ್ಲಾಧಿಕಾರಿಯಾಗಿ ಲಕ್ಷ್ಮೀಕಾಂತ್​ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ. ಲಕ್ಷ್ಮಿಕಾಂತ್ ಅವರು ಈ ಹಿಂದೆ ಮೈಸೂರು ಪಾಲಿಕೆ ಆಯುಕ್ತರಾಗಿದ್ದರು.

ಏನಿದು ಮುಡಾ ಹಗರಣ?
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ( Mysore Urban Development Authority- MUDA) ನಿವೇಶನ ಹಂಚಿಕೆ ವಿಚಾರದಲ್ಲಿ ಭಾರೀ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿದೆ. 50-50 ಅನುಪಾತದಡಿ ಸರಿಯಾಗಿ ಹಂಚಿಕೆ ಮಾಡದೆ ಬೇಕಾಬಿಟ್ಟಿ ಹಂಚಿಕೆ ಮಾಡಲಾಗಿದ್ದು ಅಂದಾಜು 5 ಸಾವಿರ ಕೋಟಿಯಷ್ಟು ಭಾರೀ ಅಕ್ರಮ ನಡೆದಿದೆ ಎಂದು ಹೇಳಲಾಗುತ್ತಿದೆ.

ಈ ವಿಚಾರವಾಗಿ ನಗರಾಭಿವೃದ್ಧಿ ಇಲಾಖೆಗೆಗೆ ಕಳೆದ ಒಂದು ವರ್ಷದಿಂದ 15 ಪತ್ರಗಳನ್ನು ಬರೆದಿದ್ದ ಮೈಸೂರು ಜಿಲ್ಲಾಧಿಕಾರಿ ಕೆ ವಿ ರಾಜೇಂದ್ರ ಅವರು 50- 50 ಅನುಪಾತವನ್ನು ರದ್ದು ಪಡಿಸಿ ಸೂಕ್ತ ಕ್ರ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದರು. ಜೊತೆಗೆ ತನಿಖಾ ಸಮಿತಿ ರಚಿಸಿ ಮುಡಾ ಆಯಕ್ತರ ವಿಚಾರಣೆ ಮಾಡುವ ಅಗತ್ಯವಿದೆ ಎಂದು ಪತ್ರದಲ್ಲಿ ತಿಳಿಸಿದ್ದರು. ಆದರೆ ಸರ್ಕಾರ ಮಾತ್ರ ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಯಾವುದೇ ಒಂದು ಬಡಾವಣೆ ನಿರ್ಮಾಣ ಮಾಡುವಾಗ ನಗರಾಭಿವೃದ್ಧಿ ಪ್ರಾಧಿಕಾರಿಗಳು ರೈತರನ್ನು ಒಪ್ಪಿಸಿ ಭೂಸ್ವಾಧೀನ ಮಾಡಬೇಕಾಗುತ್ತದೆ. ಹೀಗೆ ಮಾಡುವ ಸಂದರ್ಭದಲ್ಲಿ ರೈತರಿಗೆ ಪರಿಹಾರ ರೂಪದಲ್ಲಿ ಭೂಮಿಯ ಮೌಲ್ಯದಷ್ಟೇ ಹಣವನ್ನು ಅಥವಾ ಲೇಔಟ್ ಮಾಡುವಾಗ ಶೇ 50ರಷ್ಟು ನಿವೇಶನಗಳನ್ನು ನೀಡಬೇಕೆಂಬ ಒಪ್ಪಂದವಾಗುತ್ತದೆ. ಇವೆರಡೂ ಅಲ್ಲದಿದ್ದರೆ ವಶಪಡಿಸಿಕೊಂಡ ಭೂಮಿಯ ಮೌಲ್ಯದಷ್ಟೇ ಭೂಮಿಯನ್ನು ಇನ್ನೊಂದು ಕಡೆ ಗುರುತು ಮಾಡಿ ನೀಡುವುದು ಪ್ರಾಧಿಕಾರದ ಹೊಣೆಗಾರಿಕೆಯಾಗಿರುತ್ತದೆ.

ಆದರೆ ಮೈಸೂರಿನಲ್ಲಿ ನಿರ್ಮಿಸಲ್ಪಟ್ಟ ಬಡಾವಣೆಗಳಲ್ಲಿ ಆ ರೀತಿ ಯಾವುದೇ ಮಾನದಂಡವನ್ನು ಅನುಸರಿಸಲಾಗಿಲ್ಲ ಎಂಬುದು ಈಗ ಕೇಳಿ ಬಂದಿರುವ ಆರೋಪವಾಗಿದೆ. ಹಲವಾರು ಪ್ರಕಣದಲ್ಲಿ ಭೂ ಮಾಲೀಕರಿಗೆ ಪರಿಹಾರ ನೀಡಿಲ್ಲ. ಶೇಕಡಾ 50ರಷ್ಟು ನಿವೇಶನಗಳನ್ನೂ ನೀಡಿಲ್ಲ, ಬೇರೆಡೆ ಭೂಮಿಯನ್ನೂ ನಿಗದಿಪಡಿಸಿಲ್ಲ. ಅದಕ್ಕೆ ಬದಲಾಗಿ ಅರ್ಜಿಗಳಲ್ಲಿನ ಹಿರಿತನ ಪರಿಗಣಿಸದೆ ಅಕ್ರಮವಾಗಿ ಸೈಟ್ ಗಳನ್ನು ನೀಡಲಾಗಿದೆ ಎಂಬುದು ಕೇಳಿ ಬಂದಿರುವ ಆರೋಪವಾಗಿದೆ

ಬದಲಿ ನಿವೇಶನ ಮಂಜೂರಾತಿ, ತುಂಡು ಜಾಗ ಹಂಚಿಕೆ, ಭೂ ಪರಿಹಾರವಾಗಿ ಜಾಗಗಳನ್ನ ನೀಡಿರುವ ಬಗ್ಗೆ ವಿವರಣೆ ನೀಡದೆ ಹಲವಾರು ಲೋಪ ಎಸಗಲಾಗಿದೆ ಎಂದು ಜಿಲ್ಲಾದಿಕಾರಿ ರಾಜೇಂದ್ರ ಅವರು 2023 ಫೆಬ್ರವರಿ 8 ರಂದು ಸರ್ಕಾರಕ್ಕೆ ಮೊದಲ ಪತ್ರ ಬರೆದಿದ್ದರು.

ಹಗರಣಕ್ಕೆ ಸಂಬಂಧಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಕೆ ಲತಾ ಅವರು ತನಿಖಾ ತಂಡ ರಚಿಸಿ 15 ದಿನದೊಳಗೆ ವರದಿ ನೀಡವಂತೆ ಆದೇಶ ಹೊರಡಿಸಿದ್ದಾರೆ. ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯದ ಆಯುಕ್ತ ವೆಂಕಟಾಚಲಪತಿ ಸಮತಿಯ ಅಧ್ಯಕ್ಷರಾಗಿದ್ದು ಹೆಚ್ಚುವರಿ ನಿರ್ದೇಶಕ ಎಂ ಸಿ ದಿನೇಶ್, ಶಶಿಕುಮಾರ್, ಜಂಟಿ ನಿರ್ದೇಶಕಿ ಶಾಂತಲಾ, ಉಪ ನಿರ್ದೇಶಕ ಪ್ರಕಾಶ್ ತಂಡದ ಸದಸ್ಯರಾಗಿದ್ದಾರೆ.

ಮುಡಾ ಹಗರಣಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಕಾನೂನು ಬದ್ಧವಾಗಿಯೇ ನಿವೇಶನ ಹಂಚಿಕೆಯಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿರುವ ಅವರು, “ನನ್ನ ಪತ್ನಿಗೆ ತವರು ಮನೆಯಿಂದ ಬಳುವಳಿಯಾಗಿ ಬಂದ ಕೆಸರೆ ಸಮೀಪದ 3 ಎಕರೆ 16 ಗುಂಟೆ ಜಮೀನನ್ನು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು ಸೈಟ್ ಮಾಡಿ ಬೇರೆಯವರಿಗೆ ಹಂಚಿಕೆ ಮಾಡಿತ್ತು. ಅದಕ್ಕೆ ಪರ್ಯಾಯ ಜಮೀನು ನೀಡಿದ್ದು ಕೂಡ ಬಿಜೆಪಿ ಸರ್ಕಾರದ ಕಾಲದಲ್ಲಿ, ನಾನು ಅಧಿಕಾರದಲ್ಲಿ ಇದ್ದಾಗ ಜಮೀನು ತೆಗೆದುಕೊಳ್ಳಲು ಹೋಗಲಿಲ್ಲ. ಹಿಂದಿನ ಬಿಜೆಪಿ ಸರ್ಕಾರವೇ 50:50 ನಿಯಮ ರೂಪಿಸಿ ಕಾನೂನು ಬದ್ಧವಾಗಿ ಪರ್ಯಾಯ ನಿವೇಶನ ನೀಡಿದೆ. ಇದರಲ್ಲಿ ತಪ್ಪೇನಿದೆ?’’ ಎಂದು ಪ್ರಶ್ನಿಸಿದ್ದಾರೆ.

 

Ad
Ad
Nk Channel Final 21 09 2023
Ad