ಮೈಸೂರು: ಬೇರೆ ಅಂಗಾಂಗಗಳ ಆರೋಗ್ಯಕ್ಕೆ ನೀಡುವಷ್ಟು ಪ್ರಾಮುಖ್ಯತೆಯನ್ನು ಬಾಯಿಯ ಆರೋಗ್ಯಕ್ಕೂ ನೀಡಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಭಾಗೀಯ ಜಂಟಿ ನಿರ್ದೇಶಕರ ಕಚೇರಿಯ ಉಪ ನಿರ್ದೇಶಕಿ ಡಾ.ಬಿ.ಮಲ್ಲಿಕಾ ಸಲಹೆ ನೀಡಿದರು.
ನಗರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಜೆಎಸ್‌ಎಸ್ ದಂತ ಕಾಲೇಜು, ಜೆಎಸ್‌ಎಸ್ ಆಸ್ಪತ್ರೆ ಮಕ್ಕಳ ವಿಭಾಗದ ವತಿಯಿಂದ ಗುರುವಾರ ನಡೆದ ಮಕ್ಕಳ ಬಾಯಿ ಆರೋಗ್ಯ ಅರಿವು ಕ್ಲಿನಿಕ್‌ನ ದಶಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಬಾಯಿಯ ಆರೋಗ್ಯದ ಕಡೆ ಜನರು ಗಮನಹರಿಸುವುದು ತುಂಬಾ ಕಡಿಮೆ.
ತಮ್ಮ ಇತರೆ ಅಂಗಾಂಗಗಳಿಗೆ ತೋರಿಸುವ ಕಾಳಜಿಯಲ್ಲಿ ಅಲ್ಪ ಪ್ರಮಾಣವನ್ನು ಬಾಯಿ ಆರೋಗ್ಯಕ್ಕೆ ಮೀಸಲು ಇಡುವುದಿಲ್ಲ. ತೀವ್ರವಾಗಿ ಹಲ್ಲು ನೋವು ಉಂಟಾದಾಗ ಅಥವಾ ಹಲ್ಲಲ್ಲಿ ಕಪ್ಪು ಕುಳಿ ಬಿದ್ದಾಗ, ಹುಳುಕು ಹಲ್ಲು ಹೆಚ್ಚಾದಾಗ ಮಾತ್ರ ವೈದ್ಯರ ಬಳಿ ಬರುತ್ತಾರೆ ಹೊರತು ಮುಂಜಾಗ್ರತವಾಗಿ ಅದರ ಬಗ್ಗೆ ಅರಿವು ಮೂಡಿಸಿಕೊಳ್ಳುವ ಆಸಕ್ತಿಯೇ ಇರುವುದಿಲ್ಲ ಎಂದರು.
ಮಕ್ಕಳಿಗೆ ಚಿಕ್ಕಂದಿನಿಂದಲೇ ಬಾಯಿಯ ಆರೋಗ್ಯದ ಬಗ್ಗೆ ಪೋಷಕರು ತಿಳಿಸಬೇಕು. ಕ್ರಮವಾಗಿ ಹಲ್ಲು ಉಜ್ಜುವ ಕೆಲಸ, ಬಾಯಿಯಲ್ಲಿ ನೀರು ಮುಕ್ಕಳಿಸುವ ಕಾರ್ಯ ಇಂತಹವುಗಳನ್ನು ಸಮರ್ಪಕವಾಗಿ ತಿಳಿಸಿಕೊಡಬೇಕು. ಚಿಕ್ಕವಯಸ್ಸಿನ ಮಕ್ಕಳಿಗೆ ಚಾಕೋಲೆಟ್ ಮತ್ತಿತರ ಸಿಹಿಭರಿತ ಅಂಟಿನ ಪದಾರ್ಥಗಳು ಇಷ್ಟ ಎಂದು ಅವರು ಕೇಳಿದಷ್ಟು ತೆಗೆದುಕೊಡುವುದರಿಂದ ಪದಾರ್ಥಗಳ ಅಂಟು ಹಲ್ಲಿಗೆ ಅಂಟಿಕೊಳ್ಳುವ ಪರಿಣಾಮ ಹುಳುಕಾಗುತ್ತದೆ.
ಚಿಕ್ಕ ಮಕ್ಕಳು ತಾನೇ, ಹಾಲು ಹಲ್ಲು ಬಿದ್ದು ಹೋಗುತ್ತದೆ ಏನು ತೊಂದರೆ ಇಲ್ಲ ಎಂದು ಪೋಷಕರು ತಾವೇ ತೀರ್ಮಾನಕ್ಕೆ ಬರುವುದು ಬಹಳ ತಪ್ಪು. ಏಕೆಂದರೆ ಹಾಲು ಹಲ್ಲು ಬಿದ್ದು ಹೋದರು, ಹುಳುಕು ದಂತದ ಬೇರಿಗೆ ವಿಸ್ತರಣೆಯಾಗಿರುತ್ತದೆ. ಇದರಿಂದ ಮುಂದೆ ಹುಟ್ಟುವ ಹಲ್ಲುಗಳು ಕೂಡ ಹುಳುಕಾಗಿರುತ್ತವೆ. ಆದ್ದರಿಂದ ಪೋಷಕರು ಗಮನ ನೀಡಬೇಕಾದ ಅಗತ್ಯವಿದೆ ಎಂದರು.
ಬಾಟಲ್ ಹಾಲನ್ನು ಯೆಥೇಚ್ಛವಾಗಿ ಶಿಶುಗಳಿಗೆ ಕುಡಿಸುವುದರಿಂದಲೂ ಬಾಯಿಯ ಆರೋಗ್ಯದ ಮೇಲೆ ಪರಿಣಾಮ ಉಂಟಾಗುತ್ತದೆ. ಹಲ್ಲು ಸಮರ್ಪಕವಾಗಿ ಬೆಳವಣಿಗೆಯಾಗುವುದಿಲ್ಲ. ದೃಢವಾಗಿ ಇರುವುದಿಲ್ಲ. ಆದ್ದರಿಂದ ಆದಷ್ಟು ತಾಯಿಯ ಎದೆ ಹಾಲನ್ನು ನೀಡಬೇಕು. ಇದರಿಂದ ಶಿಶುವಿಗೆ ಉತ್ತಮ ಆರೋಗ್ಯ ಲಭಿಸುತ್ತದೆ ಎಂದರು.
ಜೆಎಸ್‌ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಪ್ರಭಾರ ಕುಲಪತಿ ಡಾ.ಎಚ್.ಬಸವನಗೌಡಪ್ಪ, ಭಾರತೀಯ ಶಿಶು ಅಕಾಡೆಮಿ ಅಧ್ಯಕ್ಷ ಡಾ.ಎಸ್.ಎನ್.ಮೋತಿ, ದಂತ ಕಾಲೇಜಿನ ಪ್ರಾಂಶುಪಾಲೆ ಡಾ.ಎಂ.ಆರ್.ದಾಕ್ಷಾಯಿಣಿ, ಡಾ.ನಂದಲಾಲ್ ಭೋಜರಾಜ್, ಡಾ.ಎಸ್.ಎನ್.ಪ್ರಶಾಂತ್, ಡಾ.ಎಸ್.ರಾಘವೇಂದ್ರ, ಡಾ.ಎಂ.ಡಿ.ಇಂದಿರಾ ಇದ್ದರು.