Bengaluru 22°C
Ad

ಗ್ಯಾರಂಟಿಗಳ ಬದಲು ಉಚಿತ ಶಿಕ್ಷಣ, ಆರೋಗ್ಯ ಸೇವೆ ನೀಡಿ: ಹೆಚ್.ವಿಶ್ವನಾಥ್

ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಆರ್ಥಿಕತೆ ಸಂಪೂರ್ಣ ದಿಕ್ಕು ತಪ್ಪಿದ್ದು, ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.

ಮೈಸೂರು: ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಆರ್ಥಿಕತೆ ಸಂಪೂರ್ಣ ದಿಕ್ಕು ತಪ್ಪಿದ್ದು, ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.

Ad
300x250 2

ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳು ಜಾರಿಯಾಗಿ ವರ್ಷ ಕಳೆದಿದೆ. ಸರ್ಕಾರ ಗ್ಯಾರಂಟಿಗಳನ್ನು ಜಾರಿ ಮಾಡಿದಾಗ ನಾನು ಸ್ವಾಗತಿಸಿದ್ದೆ. ಬಡವರಿಗೆ ಅದರಿಂದ ಅನುಕೂಲವಾಗುತ್ತದೆ ಎಂದು ನಿರೀಕ್ಷಿಸಿದ್ದೆ. ಆದರೆ, ಸರ್ಕಾರ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ಪರದಾಡುತ್ತಿದೆ. ಆರ್ಥಿಕವಾಗಿ ದಿವಾಳಿಯಾಗಿರುವುದರಿಂದ ಹಣ ಹೊಂದಿಸಲು ಪರದಾಡುತ್ತಿದೆ. ಎಂದು ಟೀಕಿಸಿದರು.

ಗ್ಯಾರಂಟಿ ಯೋಜನೆ ಬದಲು ಕುಟುಂಬಗಳ ಕಷ್ಟಗಳನ್ನು ಪತ್ತೆಹಚ್ಚಿ ಬಗೆಹರಿಸಬೇಕಿತ್ತು. ಪ್ರಸ್ತುತ ರಾಜ್ಯದಲ್ಲಿ ಸರ್ಕಾರಿ ಶಾಲೆಗಳು ಮುಚ್ಚುತ್ತಿದ್ದು, ಪೋಷಕರು ಖಾಸಗಿ ಶಾಲೆಗಳಿಗೆ ದುಬಾರಿ ಶುಲ್ಕ ಕಟ್ಟಿ ಸುಸ್ತಾಗಿದ್ದಾರೆ. ಹೀಗಾಗಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಗಮನ ಹರಿಸಬೇಕಿತ್ತು. 1ರಿಂದ 12ನೇ ತರಗತಿವರೆಗೆ ಉಚಿತ ಶಿಕ್ಷಣ ಘೋಷಣೆ ಮಾಡಿಬೇಕಿತ್ತು. ಆರೋಗ್ಯದ ವಿಷಯದಲ್ಲೂ ತೊಂದರೆಯಿದೆ.

ಜನ ಸಾಲ ಮಾಡಿ ದೊಡ್ಡ ಆಸ್ಪತ್ರೆಗಳಿಗೆ ಸೇರುತ್ತಿದ್ದಾರೆ. ಎರಡು ಮೂರು ದಿನಕ್ಕೆ ಲಕ್ಷಾಂತರ ರೂ ಬಿಲ್ ಪಾವತಿಸಬೇಕಾದ ಸ್ಥಿತಿ ಇದೆ. ಇವೆರಡೂ ಜನರನ್ನು ಸುಸ್ತು ಮಾಡುತ್ತಿವೆ. ನಾನು ಸಚಿವನಾಗಿದ್ದ ಯಶಸ್ವಿನಿ ಯೋಜನೆ ಜಾರಿಗೆ ತಂದಿದ್ದೆ. ಇದರಿಂದ ಜನರಿಗೆ ಅನುಕೂಲ ಆಗಿತ್ತು. ಆದರೆ, ಸಿದ್ದರಾಮಯ್ಯ ಅದನ್ನು ನಿಲ್ಲಿಸಿದರು. ನಾನು ಸಾಮಾಜಿಕ ನ್ಯಾಯದ ಪರ ಇದ್ದೇನೆ ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯ ಯಾವ ಸೀಮೆ ಸಾಮಾಜಿಕ ನಾಯಕ ಎಂದು ಹರಿಹಾಯ್ದರಲ್ಲದೆ, ರಾಜ್ಯದಲ್ಲಿ ಸಾವಿರಕ್ಕೂ ಹೆಚ್ಚು ಬಹುರಾಷ್ಟ್ರೀಯ ಕಂಪನಿಗಳಿಗವೆ. ಅವುಗಳಿಂದ ಹಣ ಪಡೆದು ಅಕ್ಷರ, ಆರೋಗ್ಯವನ್ನು ಉಚಿತವಾಗಿ ನೀಡಲಿ ಎಂದು ಆಗ್ರಹಿಸಿದರು.

ರಾಜ್ಯದಲ್ಲಿ ಆರ್ಥಿಕ ಇಲಾಖೆ ಸಂಪೂರ್ಣವಾಗಿ ದಿಕ್ಕು ತಪ್ಪಿದೆ. ಹೆಚ್ಚು ಬಾರಿ ಬಜೆಟ್ ಮಂಡಿಸಿದರೂ ಸಿದ್ದರಾಮಯ್ಯ ಹಿಂತಿರುಗಿ ನೋಡಿದ್ದಾರಾ? ಯಾವ ಇಲಾಖೆಗೆ ಎಷ್ಟು ಅನುದಾನ ಸಿಕ್ಕಿದೆ, ಆರ್ಥಿಕ ಸ್ಥಿತಿಗತಿ ಹೇಗಿದೆ ಎಂದು ನೋಡಿದ್ದಾರಾ? ಅವರು ಯಾವ ಸೀಮೆಯ ಹಣಕಾಸು ಮಂತ್ರಿ? ಯಾವ ಸಚಿವರಿಗೂ ತಮ್ಮ ಇಲಾಖೆಯ ಹಣಕಾಸು ಸ್ಥಿತಿಗತಿಯ ಬಗ್ಗೆ ಜ್ಞಾನವೇ ಇಲ್ಲ. ಇಲಾಖೆಗಳಲ್ಲಿ ಹಣ ದಿಕ್ಕಾಪಾಲಾಗಿ ಪೋಲಾಗುತ್ತಿದೆ ಎಂದು ದೂರಿದರು.

ಗ್ಯಾರಂಟಿಗಳಿಗೆ 65ಸಾವಿರ ಕೋಟಿ ಖರ್ಚು ಮಾಡಿ ಅದಕ್ಕೊಬ್ಬ ಉಸ್ತುವಾರಿ, ಜಿಲ್ಲೆಗೊಬ್ಬ ಉಸ್ತುವಾರಿ ಕೊಟ್ಟು ಹಣ ದುರುಪಯೋಗ ಮಾಡುತ್ತಿರುವುದು ಸರಿಯಲ್ಲ. ಸಂಬಳ, ಸಾರಿಗೆ, ಅನುದಾನ ಸಾಲದ ಬಡ್ಡಿಗೆ 2.30ಲಕ್ಷ ಕೋಟಿ ಬೇಕು. ಬಜೆಟ್‌ನ ಶೇ.70ರಷ್ಟು ಎಸ್ಟಾಬ್ಲಿಸ್‌ಮೆಂಟ್‌ಗೆ ಬಳಕೆಯಾಗುತ್ತಿದ್ದರೆ, ಶೇ.30ರಷ್ಟು ಮಾತ್ರ ಅಭಿವೃದ್ಧಿ ಕಾರ್ಯಗಳಿಗೆ ಬಳಕೆಯಾಗುತ್ತಿದೆ.

ಆರ್ಥಿಕ ನೀತಿ ದುರ್ಬಲವಾಗಿ ವಿವೇಚನೆಯಿಲ್ಲದೆ ಅವಿವೇಕದಂದ ಖರ್ಚು ಮಾಡಲಾಗುತ್ತಿದೆ. ನಿವೃತ್ತರಾದವರನ್ನೂ ಮರು ನೇಮಕ ಮಾಡಿಕೊಂಡು ಪಿಂಚಣಿಯೊಂದಿಗೆ ಸಂಬಳವನ್ನೂ ನೀಡಲಾಗುತ್ತಿದೆ. ಸಿಎಂ ಆರ್ಥಿಕ ಸ್ಥಿತಿ ಬಗ್ಗೆ ಚಿಂತಿಸುತ್ತಲೇ ಇಲ್ಲ. ಹೀಗಾದರೆ ತೆರಿಗೆದಾರರಿಗೆ ಯಾವ ರೀತಿ ಉತ್ತರ ಕೊಡುತ್ತೀರಿ? ಯಾರು ಹೇಳುವವರು, ಕೇಳುವರಿಲ್ಲದೆ ರಾಜ್ಯವನ್ನು ದಿವಾಳಿ ಮಾಡಲು ಹೊರಟಿದ್ದಾರೆ ಎಂದು ಕಿಡಿ ಕಾರಿದರು.

ಕೆಎಸ್‌ ಆರ್‌ ಟಿಸಿ ಲಾಭದಲ್ಲಿದೆಯಂತೆ? ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಕಲ್ಪಿಸಿದರೂ ಹೇಗೆ ಲಾಭದಲ್ಲಿದೆ? ಜನರಿಗೆ ಸರ್ಕಾರ ಟೋಪಿ ಹಾಕುತ್ತಿದೆ. ಇದರ ಬದಲು ವಿವೇಚನಾಯುಕ್ತವಾಗಿ ಚರ್ಚಿಸಿ ಸಮಾಜಕ್ಕೆ ಅಗತ್ಯವಿರುವ ಕಾರ್ಯಕ್ರಮ ರೂಪಿಸಲಿ ಎಂದು ಹೇಳಿದರು.

Ad
Ad
Nk Channel Final 21 09 2023
Ad