ಮೈಸೂರು: ಕಲಿಕೆ ಯಶಸ್ವಿಯಾಗಲು ಹಲವು ಪ್ರಯತ್ನಗಳಲ್ಲಿ ವಿಫಲರಾಗುವುದು ಮುಖ್ಯ ಎಂದು ವಿದ್ಯಾವರ್ಧಕ ಕಾಲೇಜಿನ ಅಪ್ಲೈಡ್ ಮೆಟೀರಿಯಲ್ಸ್ ಇಂಡಿಯಾದ ಸ್‌ಟಾವೇರ್ ಡೆವಲಪ್‌ಮೆಂಟ್‌ನ ಉಪ ನಿರ್ದೇಶಕ ಅನುಜ್ ಪ್ರತಾಪ್ ಸಿಂಗ್ ತಿಳಿಸಿದರು.
ಶಿಕ್ಷಣ ಸಚಿವಾಲಯದ ಇನ್ನೋವೇಶನ್ ಸೆಲ್, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಸಹಯೋಗದೊಂದಿಗೆ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು ಸಹಯೋಗದಲ್ಲಿ ವಿವಿಯ ಕೆಂಪೇಗೌಡ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ಆಯೋಜಿಸಿದ್ದ ಸ್ಮಾರ್ಟ್ ಇಂಡಿಯಾ ಹ್ಯಾಕಥಾನ್-2024ರ ಗ್ರ್ಯಾಂಡ್ ಫಿನಾಲೆ ಉದ್ಘಾಟಿಸಿ ಮಾತನಾಡಿದರು.
ಪರಿಶ್ರಮ ಮತ್ತು ವೈಲ್ಯದಿಂದ ಕಲಿಯುವ ಮಹತ್ವವನ್ನು ತಿಳಿಸಿದ ಅವರು, ಆರಂಭದಲ್ಲಿ ಆಟವಾಡುವಾಗ ಹಿನ್ನಡೆ ಕಾಣುವ ಆಟಗಾರರು ಕ್ರಮೇಣ ಲಯ ಕಂಡುಕೊಂಡು ಆಟದಲ್ಲಿ ಯಶಸ್ವಿಯಾಗುತ್ತಾರೆ. ಈ ರೀತಿಯ ವೈಫಲ್ಯ ಕ್ರೀಡೆಯಂತೆ ವೃತ್ತಿಪರ ಬೆಳವಣಿಗೆಗೂ ಮುಖ್ಯವಾಗಿದೆ ಎಂದರು.
ವಿವಿಸಿಇ ಪ್ರಾಂಶುಪಾಲ ಬಿ.ಸದಾಶಿವ ಗೌಡ ಮಾತನಾಡಿ, ಹ್ಯಾಕಥಾನ್ ಕೇವಲ ಸ್ಪರ್ಧೆಯಾಗಿರದೇ ಇದು ನೈಜ-ಪ್ರಪಂಚದ ಸವಾಲುಗಳನ್ನು ಎದುರಿಸಲು ಮತ್ತು ಜ್ಞಾನದ ಗಡಿಗಳನ್ನು ಮೀರಲು ಮುಖ್ಯವಾದ ವೇದಿಕೆಯಾಗಿದೆ. ಇಲ್ಲಿ ಕಂಡುಕೊಳ್ಳುವ ಪರಿಹಾರಗಳು ಭಾರತವನ್ನು ನಾವೀನ್ಯತೆಯ ಕೇಂದ್ರವಾಗಿ ಮುನ್ನಡೆಸುವ ಸಾಮರ್ಥ್ಯ ಹೊಂದಿವೆ ಎಂದು ಹೇಳಿದರು.
ಎಸ್‌ಐಎಚ್ ಸಾಫ್ಟ್‌ವೇರ್ ಆವೃತ್ತಿಗೆ ಅನುಕೂಲವಾಗುವಂತೆ 2023ರಲ್ಲಿ ವಿವಿಸಿಇ ಯನ್ನು ನೋಡಲ್ ಕೇಂದ್ರವಾಗಿ ಆಯ್ಕೆ ಮಾಡಲಾಯಿತು. ಕಳೆದ ವರ್ಷದ ಕಾರ್ಯಕ್ರಮದ ಯಶಸ್ಸಿನ ನಂತರ, ರಾಷ್ಟ್ರವ್ಯಾಪಿ 51 ನೋಡಲ್ ಕೇಂದ್ರಗಳಲ್ಲಿ ಒಂದಾದ ಎಸ್‌ಐಎಚ್-೨2024 ರ 7ನೇ ಆವೃತ್ತಿಯನ್ನು ಆಯೋಜಿಸಲು ವಿದ್ಯಾವರ್ಧಕ ಎಂಜಿನಿಯರ್ ಮತ್ತೆ ಆಯ್ಕೆಯಾಗಿದೆ.
ಹ್ಯಾಕಥಾನ್ ಸ್ಪರ್ಧೆಯಲ್ಲಿ 24 ತಂಡ ಭಾಗವಹಿಸಿದ್ದು ದೇಶಾದ್ಯಂತದ ಪ್ರತಿಷ್ಠಿತ ಸಂಸ್ಥೆಗಳಿಂದ ಸುಮಾರು 200ಸ್ಪರ್ಧಿಗಳು ಭಾಗವಹಿಸಲಿದ್ದು, ಅವರು ಎಐಸಿಟಿಇ ಮತ್ತು ಆಟೋಡೆಸ್ಕ್ ಇಂಕ್ ಎದುರಿಸುತ್ತಿರುವ ವಿವಿಧ ಸವಾಲುಗಳಿಗೆ ನವೀನ ಪರಿಹಾರಗಳ ಬಗ್ಗೆ ಕೆಲಸ ಮಾಡಲಿದ್ದಾರೆ. ಇದು ಈ ಸಾಲಿನ ಎಸ್‌ಐಎಚ್ ನಾವೀನ್ಯತೆಯತ್ತ ಭಾರತದ ಪ್ರಯಾಣದಲ್ಲಿ ಒಂದು ಮೈಲಿಗಲ್ಲು ಎಂದು ತಿಳಿಸಿದರು.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಕಾರ್ಯದರ್ಶಿ ಪಿ.ವಿಶ್ವನಾಥ್, ಖಜಾಂಚಿ ಶ್ರೀಶೈಲಾ ರಾಮಣ್ಣವರ್, ಉತ್ಪಾದನಾ ವಿಭಾಗದ ಮುಖ್ಯಸ್ಥರಾದ ಪಾರಿಶ್ ರಾವ್ ಹಾಗೂ ಇತರರು ಇದ್ದರು.