ನಂಜನಗೂಡು: ಚಾಮರಾಜನಗರ ಜಿಲ್ಲೆಯ ಗುಂಡ್ಲಪೇಟೆ ತಾಲ್ಲೂಕಿನ ಹಿರೇಕಾಟಿ ಗೇಟ್ ಬಳಿ ಮಂಗಳವಾರ ತಡರಾತ್ರಿ ಬೈಕ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿ ನವದಂಪತಿ ಹಾಗೂ ತಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಮೂವರ ಕಣ್ಣುಗಳನ್ನು ದಾನ ಮಾಡುವ ಮೂಲಕ 6 ಜನರಿಗೆ ದೃಷ್ಟಿ ನೀಡಿ, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ನಂಜನಗೂಡು ತಾಲ್ಲೂಕಿನ ಕೂಡ್ಲಾಪುರ ಗ್ರಾಮದ ಬೈಕ್ ಸವಾರ ಶಶಿಧರ್ 28 ಪತ್ನಿ ಶಾಲಿನಿ 22 ತಾಯಿ ಭಾಗ್ಯಮ್ಮ ಮೃತರು. ಹೆಚ್. ಡಿ. ಕೋಟೆ ತಾಲ್ಲೂಕಿನ ಚಿಕ್ಕದೇವಮ್ಮನ ಬೆಟ್ಟಕ್ಕೆ ಹೋಗಿ ತಮ್ಮ ಸ್ವಗ್ರಾಮಕ್ಕೆ ಹಿಂತಿರುಗುವಾಗ ಅಪಘಾತ ನಡೆದಿತ್ತು.
9 ತಿಂಗಳ ಹಿಂದೆ ಮದುವೆಯಾಗಿದ್ದ ಶಾಲಿನಿ ಹಾಗೂ ಶಶಿಧರ್ ಹಾಗೂ ಶಶಿಧರ್ ತಾಯಿ ಭಾಗ್ಯಮ್ಮ ಬೈಕ್ನಲ್ಲಿ ಹೋಗುವಾಗ ಕಾರಿಗೆ ಡಿಕ್ಕಿ ಹೊಡೆದು ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರು. ಮೈಸೂರಿನ ಕೆ. ಆರ್. ಆಸ್ಪತ್ರೆಯ ಶವಾಗಾರದಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.
ಕುಟುಂಬದವರು ಮೂವರ ಕಣ್ಣುಗಳನ್ನು ಕೆ. ಆರ್. ಆಸ್ಪತ್ರೆಯ ನೇತ್ರದಾನ ಕೇಂದ್ರಕ್ಕೆ ದಾನ ಮಾಡಿದ್ದು, 6 ಜನರ ಬಾಳಿಗೆ ಬೆಳಕಾಗಿದ್ದಾರೆ. ಇಂದು ಸ್ವಗ್ರಾಮ ಕೂಡ್ಲಾಪುರ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರನ್ನು ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಗ್ರಾಮಸ್ಥರು ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.