ಮೈಸೂರು: ನಮ್ಮ ದೇಶದ ಪಾರಂಪರಿಕ ಕಲೆಗಳನ್ನು ಮುಂದಿನ ಪೀಳಿಗೆಗೆ ದಾಟಿಸಬೇಕಾದರೇ ಅವುಗಳನ್ನು ಉಳಿಸಿ ಬೆಳೆಸಲು ಎಲ್ಲರ ಪ್ರೋತ್ಸಾಹ ಮತ್ತು ಸಹಕಾರ ಅವಶ್ಯ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯ ಪಟ್ಟರು.
ನಗರದ ಅವಧೂತ ದತ್ತ ಪೀಠದ ಸಚ್ಚಿದಾನಂದ ಗಣಪತಿ ಆಶ್ರಮದ ನಾದಮಂಟದಲ್ಲಿ ವಸುಂಧರ ಪ್ರದರ್ಶಕ ಕಲೆಗಳ ಕೇಂದ್ರದ ವತಿಯಿಂದ ಏರ್ಪಡಿಸಲಾಗಿದ್ದ ವಸುಂಧರೋತ್ಸವ-2024ಸಮಾರೋಪ ಸಮಾರಂಭ ಹಾಗೂ ಮೈಸೂರು ಕಲಾ ದಿವಸ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಮೈಸೂರನ್ನು ಸಾಂಸ್ಕೃತಿಕ ನಗರಿ, ಪಾರಂಪರಿಕ ನಗರಿ ಎನ್ನುತ್ತೇವೆ.
ಆದರೆ ಇಡೀ ಭಾರತವೇ ಸಾಂಸ್ಕೃತಿಕ ದೇಶ ಹಾಗೂ ಪಾರಂಪರಿಕ ದೇಶವಾಗಿದೆ. ನಮ್ಮ ದೇಶವು ನಿಂತಿರುವುದೇ ಪರಂಪರಾಗತವಾಗಿ ಬಂದಿರುವ ಸಂಸ್ಕೃತಿಯ ಮೇಲೆ. ಪ್ರಸ್ತುತ ಅಭಿವೃದ್ಧಿ ಮತ್ತು ಬೆಳವಣಿಗೆಯನ್ನು ಕಾಣುತ್ತಿರುವುದು ಕೂಡಾ ಅದರ ಸುಭದ್ರವಾದ ಅಡಿಪಾಯದ ಆಧಾರದ ಮೇಲೆ. ಆದ್ದರಿಂದ ಇಂತಹ ಶ್ರೀಮಂತ ಪರಂಪರೆಯನ್ನು ಉಳಿಸಿ-ಬೆಳೆಸುವುದು ಈಗಿನ ತಲೆಮಾರಿನ ಆದ್ಯ ಕರ್ತವ್ಯವಾಗಿದೆ ಎಂದರು.
ಭಾರತದಲ್ಲಿ ಕಲೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸಿ ಅವುಗಳನ್ನು ಬೆಳೆಸುವಲ್ಲಿ ಪ್ರಾಚೀನಕಾಲದಿಂದಲೂ ಮಠ-ಮಾನ್ಯಗಳು, ಸಂಘ-ಸಂಸ್ಥೆಗಳು ಶ್ರಮಿಸುತ್ತ ಬರುತ್ತಿವೆ. ಈ ನಿಟ್ಟಿನಲ್ಲಿ ಅವುಗಳ ಕಾರ್ಯ ಬಹಳ ಶ್ಲಾಘನೀಯವಾಗಿದೆ. ಅದೇ ರೀತಿ ಈ ಆಧುನಿಕ ಜಗತ್ತಿನಲ್ಲಿ ಕೂಡಾ ನಮ್ಮ ದೇಶದ ಕಲೆ- ಸಂಗೀತ, ನೃತ್ಯ ಪ್ರಾಕಾರಗಳನ್ನು ಆಸಕ್ತರಿಗೆ ಶಾಸ್ತ್ರೀಯವಾಗಿ ಕಲಿಸುವ ಮೂಲಕ ಹಿರಿಮೆ ಮತ್ತು ಗರಿಮೆಯನ್ನು ಎತ್ತಿ ಹಿಡಿಯಬೇಕಾಗಿದೆ ಎಂದರು.
ನಮ್ಮ ದೇಶದ ಕಲೆಯನ್ನು ಕೇವಲ ನಮ್ಮವರೂ ಮಾತ್ರವಲ್ಲದೇ ವಿದೇಶಿಯರು ಕೂಡ ಕಲಿಯಲೂ ಆಸಕ್ತಿ ತೋರುತ್ತಾರೆ. ಬೇರೆ ದೇಶದವರಿಗೂ ಕೂಡಾ ಅಷ್ಟೇ ಆಸ್ಥೆಯಿಂದ ಕಲಿಸುವುದು ನಮ್ಮ ಮಣ್ಣಿನ ಗುಣವಾಗಿದೆ. ಅಲ್ಲದೇ ಅವರನ್ನೂ ಕೂಡಾ ಬಹಳ ಕಾಳಜಿಯಿಂದ ಕಾಣುವಂತಹ ಸಮಾಜ ನಮ್ಮದು. ಇಂತಹ ಅನ್ಯನ್ಯ ಪದ್ಧತಿಯನ್ನು ಹೊಂದಿರುವ ನಮ್ಮ ದೇಶದ ಕಲೆ-ಸಂಸ್ಕೃತಿಯು ನಮ್ಮ ನೆಲಕ್ಕೆ ಮಾತ್ರ ಸೀಮಿತವಾಗದೇ ಇಡೀ ವಿಶ್ವದಾದ್ಯಂತ ಪಸರಿಸಬೇಕು.
ಅದಕ್ಕಾಗಿ ಕಲೆಯನ್ನು ಕಲಿತಿರುವ ವಿದ್ವಾಂಸರು, ಪ್ರಾಜ್ಞರು ಯುವ ಜನಾಂಗಕ್ಕೆ ತಾವು ಕಲಿತಿರುವ ವಿದ್ಯೆಯನ್ನು ಧಾರೆ ಎರೆಯಬೇಕು. ತನ್ಮೂಲಕ ದೇಶದ ಸಂಸ್ಕೃತಿಯನ್ನು ಸಂರಕ್ಷಿಸಬೇಕು ಎಂದರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಅವಧೂತ ದತ್ತ ಪೀಠದ ಕಿರಿಯಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೇಂದ್ರ ಸಂಗಿತ-ನಾಟಕ ಅಕಾಡೆಮಿ ಅಧ್ಯಕ್ಷೆ ಡಾ.ಸಂಧ್ಯಾ ಪುರೇಚಾ ಅಧ್ಯಕ್ಷತೆ ವಹಿಸಿದ್ದರು.