ಮೈಸೂರು: ಗ್ರಾಮೀಣ ಜನತೆ ಮನೆ ಹಂತದಲ್ಲಿ ತ್ಯಾಜ್ಯವನ್ನು ವಿಂಗಡಿಸಿ ಸ್ವಚ್ಛ ವಾಹಿನಿಗೆ ಕಸ ನೀಡುವ ಪ್ರಕ್ರಿಯೆಯನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಬೇಕಾಗಿದೆ ಎಂದು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆ.ಎಂ.ಗಾಯಿತ್ರಿ ಹೇಳಿದರು.
ಜಿಲ್ಲಾ ಪಂಚಾಯಿತಿಯ ಅರಸು ಸಭಾಂಗಣದಲ್ಲಿ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ತ್ಯಾಜ್ಯ ಲೆಕ್ಕ ಪರಿಶೋಧನೆಯ ಮೂಲಕ ತ್ಯಾಜ್ಯ ಪ್ರಮಾಣೀಕರಣ ನಡೆಸುವ ಕುರಿತು ಆಯ್ದ 12 ಗ್ರಾಮ ಪಂಚಾಯಿತಿಗಳಿಗೆ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ತ್ಯಾಜ್ಯ ನಿರ್ವಹಣೆ ಕುರಿತು ಹೆಚ್ಚು ಒತ್ತು ನೀಡಬೇಕು. ಗ್ರಾಮ ಪಂಚಾಯಿತಿಗಳು ಕಸ ಸಂಗ್ರಹಣೆ ಮಾಡುವ ಜತೆಗೆ ವೈಜ್ಞಾನಿಕವಾಗಿ ಕಸವನ್ನು ವಿಂಗಡಿಸುವ ಕೆಲಸ ಮಾಡಬೇಕು. ಆಗ ಮಾತ್ರವೇ ಗ್ರಾಮೀಣ ಪ್ರದೇಶದಲ್ಲಿ ವ್ಯವಸ್ಥಿತವಾಗಿ ಘನ ತ್ಯಾಜ್ಯ ನಿರ್ವಹಣೆಯಾಗುತ್ತದೆ ಎಂದರು.
ಗ್ರಾಮೀಣ ಜನತೆ ಮನೆ ಹಂತದಲ್ಲಿ ತ್ಯಾಜ್ಯವನ್ನು ವಿಂಗಡಿಸಿ ಸ್ವಚ್ಛ ವಾಹಿನಿಗೆ ಕಸ ನೀಡುವ ಪ್ರಕ್ರಿಯೆಯನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಬೇಕಾಗಿದೆ. ಇಂದು, ಕಸವು ಕೇವಲ ತ್ಯಾಜ್ಯವಲ್ಲ. ಅದು ಆರ್ಥಿಕ ಸುಧಾರಣೆಗೆ ಅನೇಕ ಅವಕಾಶಗಳನ್ನು ಒದಗಿಸುವ ಒಂದು ಅಮೂಲ್ಯ ಸಂಪನ್ಮೂಲವಾಗಿದೆ. ನಾವು ಕಸವನ್ನು ವೈಜ್ಞಾನಿಕವಾಗಿ ವಿಂಗಡಿಸಿ ಮಾರಾಟ ಮಾಡುವುದರಿಂದ ಆರ್ಥಿಕವಾಗಿ ಕೂಡ ಲಾಭ ಹೊಂದಬಹುದು. ಈ ನಿಟ್ಟಿನಲ್ಲಿ ತ್ಯಾಜ್ಯ ಲೆಕ್ಕ ಪರಿಶೋಧನೆ ಉಪಯುಕ್ತವಾಗಲಿದೆ ಎಂದರು.
ತ್ಯಾಜ್ಯ ಲೆಕ್ಕ ಪರಿಶೋಧನೆಯ ಮೂಲಕ ತ್ಯಾಜ್ಯ ಪ್ರಮಾಣೀಕರಣ ಮಾಡುವುದರಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮನೆಗಳಿಂದ, ವಾಣಿಜ್ಯ ಮಳಗೆಗಳಿಂದ ಎಷ್ಟು ಕಸ ಸಂಗ್ರಹಣೆಯಾಗುತ್ತಿದೆ ಎಂಬ ಸಂಪೂರ್ಣ ಚಿತ್ರಣ ದೊರೆಯುತ್ತದೆ. ಈ ಲೆಕ್ಕ ಪರಿಶೋಧನೆ ಮುಂದಿನ ದಿನಗಳಲ್ಲಿ ಎಲ್ಲಾ ಗ್ರಾಮ ಪಂಚಾಯಿತಿಗಳು ಘನ ತ್ಯಾಜ್ಯ ನಿರ್ವಹಣೆಯನ್ನು ವ್ಯಾಪಾರ ಮಾದರಿಯಲ್ಲಿ ಮುಂದುವರಿಸಿಕೊಂಡು ಹೋಗಲು ರೂಪುರೇಷೆ ನೀಡಲಿದೆ ಎಂದು ಉಪಕಾರ್ಯದರ್ಶಿ (ಅಭಿವದ್ದಿ), ಡಾ.ಎಂ.ಕೃಷ್ಣರಾಜು ತಿಳಿಸಿದರು.
ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಮಾತನಾಡಿ, ಗ್ರಾಮ ಪಂಚಾಯಿತಿಗಳು ತ್ಯಾಜ್ಯ ಲೆಕ್ಕಪರಿಶೋಧನೆಯ ಮೂಲಕ ತ್ಯಾಜ್ಯ ಪ್ರಮಾಣೀಕರಣ ನಡೆಸುವುದರಿಂದ ಆಗುವ ಪ್ರಯೋಜಗಳು ಹಾಗೂ ತ್ಯಾಜ್ಯ ಪ್ರಮಾಣೀಕರಣವನ್ನು ನಡೆಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು. ಸಾಹಸ್ ಸಂಸ್ಥೆಯ ಹಿರಿಯ ಮೇಲ್ವಿಚಾರಕ ಆನಂದ್ ಹಸಿ ಕಸ ಮತ್ತು ಒಣ ಕಸ ಉತ್ಪತ್ತಿ ವಿಧಾನಗಳು ಹಾಗೂ ಅಂಕಿ ಅಂಶಗಳನ್ನು ಭರ್ತಿ ಮಾಡುವ ಕುರಿತು ತರಬೇತಿ ನಡೆಸಿಕೊಟ್ಟರು.
ಈ ವೇಳೆ ಆಯ್ದ 12 ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು, ಘನತ್ಯಾಜ್ಯ ನಿರ್ವಹಣಾ ಘಟಕದ ಮೇಲ್ವಿಚಾರಕರು, ಸ್ವಚ್ಛ ವಾಹಿನಿಯ ಮಹಿಳಾ ಚಾಲಕಿಯರು ಹಾಗೂ ಎನ್‌ಆರ್‌ಎಲ್‌ಎಂ ಹಾಗೂ ಎಸ್‌ಬಿಎಂ ಸಮಾಲೋಚಕರು ಉಪಸ್ಥಿತರಿದ್ದರು.