ಚಾಮರಾಜನಗರ: ಮೂರು ರಾಜ್ಯಗಳ ಅರಣ್ಯದೊಂದಿಗೆ ಗಡಿ ಹಂಚಿಕೊಂಡಿರುವ ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ 2 ನೇ ಬಾರಿಗೆ ‘ಅತ್ಯುತ್ತಮ ವನ್ಯಧಾಮ’ ಪ್ರಶಸ್ತಿ ಬಂದಿದೆ.
ಕೇಂದ್ರ ಸರ್ಕಾರದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ, ವೈಲ್ಡ್ ಲೈಫ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಮಿನಿಸ್ಟ್ರಿ ಆಫ್ ಎನ್ವಾರ್ನಮೆಂಟ್ ಆ್ಯಂಡ್ ಫಾರೆಸ್ಟ್ ಸಂಸ್ಥೆಯವರು ನಡೆಸಿರುವ ಸಮೀಕ್ಷೆಯಲ್ಲಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ, ಮಾನವ ಮತ್ತು ಪ್ರಾಣಿ ಸಂಘರ್ಷ ತಡೆಗೆ ಕೈಗೊಂಡ ಕ್ರಮಗಳು, ಪ್ರವಾಸಿಗರು, ಶುಚಿತ್ವ, ಸಿಬ್ಬಂದಿ ಮುಂತಾದ ಅಂಶಗಳ ಮಾನದಂಡಗಳ ಪರಿಗಣಿಸಿ ಆಯ್ಕೆ ಪ್ರಕ್ರಿಯೆ ನಡೆದಿದ್ದು, ದೇಶದ 54 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಮೀಕ್ಷೆ ಕೈಗೊಳ್ಳಲಾಗಿತ್ತು. ಸಮೀಕ್ಷೆಯಲ್ಲಿ ಬಂಡೀಪುರವು ಎರಡನೇ ಬಾರಿ ಅತ್ಯುತ್ತಮ ವನ್ಯಧಾಮ ಎಂಬ ಪ್ರಶಸ್ತಿ ಯನ್ನು ತನ್ನದಾಗಿಸಿಕೊಂಡಿದೆ.
ಕೇರಳದ ಪೆರಿಯಾರ್ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮೊದಲ ಸ್ಥಾನ, ಬಂಡಿಪುರ ಎರಡನೇ ಸ್ಥಾನ ಹಾಗೂ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶಕ್ಕೆ ಮೂರನೇ ಸ್ಥಾನ ಲಭಿಸಿದೆ. ಅತಿ ಹೆಚ್ಚು ಹುಲಿ ಸಂತತಿ ಹೊಂದುವ ಮೂಲಕ ರಾಜ್ಯವಲ್ಲದೇ ದೇಶ, ವಿದೇಶದ ಪ್ರವಾಸಿಗರನ್ನು ಆಕರ್ಷಿಸುವ ಬಂಡೀಪುರ ರಾಷ್ಟ್ರೀಯ ಉದ್ಯಾನವನವು ಪಶ್ಚಿಮ ಘಟ್ಟಗಳ ದಕ್ಷಿಣ ತುದಿಯಲ್ಲಿದ್ದು, ಹಲವು ಜೀವ ವೈವಿಧ್ಯಗಳನ್ನು ಹೊಂದಿದೆ.
ಅರಣ್ಯ ಇಲಾಖೆ ನೌಕರರ ಪರಿಶ್ರಮ, ಕಾಡಂಚಿನ ಗ್ರಾಮಗಳ ಜನರ ಸಹಕಾರದಿಂದ ಬಂಡೀಪುರ ವನ್ಯದಾಮವು ಅತ್ಯುತ್ತಮ ವನ್ಯಧಾಮ ಪ್ರಶಸ್ತಿಯನ್ನು ಎರಡನೇ ಬಾರಿಗೆ ತನ್ನದಾಗಿಸಿಕೊಂಡಿದೆ. ಪ್ರಶಸ್ತಿ ದೊರೆತಿರುವುದಕ್ಕೆ ವನ್ಯಜೀವಿ ಪ್ರಿಯರು ಮತ್ತು ಪರಿಸರ ತಜ್ಞರು ಸಂತಸ ಹಂಚಿಕೊಂಡಿದ್ದಾರೆ.