ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಗಲ್ಲಿಗಳಲ್ಲಿ ಗಾಂಜಾ ಸರಬರಾಜಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದ್ದ ಬೆನ್ನಲ್ಲೇ ನಗರದ ಉದಯಗಿರಿ ಠಾಣೆ ಪೊಲೀಸರು ಭರ್ಜರಿ ಬೇಟೆಯಾಡಿದ್ದು ಸುಮಾರು 38.60 ಲಕ್ಷ ಮೌಲ್ಯದ 154 ಕೆಜಿ 450 ಗ್ರಾಂ ಗಾಂಜಾವನ್ನು ವಶಪಡಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಸೈಯದ್ ವಾಸೀಂ ಹಾಗೂ ಯಾಸ್ಮಿನ್ ತಾಜ್ ಬಂಧಿತ ಆರೋಪಿಗಳು. ಮತ್ತೊಬ್ಬ ಆರೋಪಿ ಅಫ್ರೋಜ್ ಖಾನ್ ತಪ್ಪಿಸಿಕೊಂಡಿದ್ದಾನೆ. ಈ ಪ್ರಕರಣದಲ್ಲಿ ಅಪ್ರೋಜ್ ಖಾನ್ ಪ್ರಮುಖ ಆರೋಪಿಯಾಗಿದ್ದು, ಈತ ಸೈಯದ್ ವಾಸೀಂ ಮತ್ತು ಯಾಸ್ಮಿನ್ ತಾಜ್ ಅವರೊಂದಿಗೆ ಸೇರಿ ಗಾಂಜಾವನ್ನು ಕಲ್ಯಾಣಗಿರಿಯ ಕೆಹೆಚ್ ಬಿ ಕಾಲೋನಿಯ ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದಲ್ಲದೆ, ಇಲ್ಲಿಂದಲೇ ತಮಗೆ ಬೇಕಾದ ಸ್ಥಳಗಳಿಗೆ ಕೊಂಡೊಯ್ದು ಮಾರಾಟ ಮಾಡುವ ದಂಧೆ ನಡೆಸುತ್ತಿದ್ದರು.
ಈಗಾಗಲೇ ನಗರದ ಹಲವಡೆ ಇವರ ಲಿಂಕ್ ಇದ್ದು, ನಗರದಿಂದ ಗ್ರಾಮೀಣ ಪ್ರದೇಶಕ್ಕೂ ಸದ್ದೇ ಇಲ್ಲದಂತೆ ಗಾಂಜಾ ಸರಬರಾಜಾಗುತ್ತಿತ್ತು. ಈ ನಡುವೆ ಮನೆಯಲ್ಲಿ ಸುಮಾರು 154 ಕೆಜಿ ಗೂ ಹೆಚ್ಚಿನ ಗಾಂಜಾವನ್ನು ಸಂಗ್ರಹಿಸಿಟ್ಟಿರುವ ಮಾಹಿತಿ ಉದಯಗಿರಿ ಪೊಲೀಸ್ ಠಾಣೆಗೆ ಹೋಗಿತ್ತು. ಹೀಗಾಗಿ ಖಚಿತ ಮಾಹಿತಿಯನ್ನು ಆದರಿಸಿ ಪೊಲೀಸರು ಕಾರ್ಯಾಚರಣೆಗೆ ಮುಂದಾಗಿದ್ದು, ಅದರಂತೆ ಕಲ್ಯಾಣಗಿರಿಯ ಕೆಹೆಚ್ ಬಿ ಕಾಲೋನಿಯ ಮನೆ ಮೇಲೆ ದಾಳಿ ಮಾಡಿದ್ದರು.
ಈ ವೇಳೆ ಕಿಂಗ್ ಪಿನ್ ಅಪ್ರೋಜ್ ಖಾನ್ ತಪ್ಪಿಸಿಕೊಂಡರೆ, ಸೈಯದ್ ವಾಸೀಂ ಮತ್ತು ಯಾಸ್ಮಿನ್ ತಾಜ್ ಸಿಕ್ಕಿ ಬಿದ್ದಿದ್ದಾರೆ. ಆರೋಪಿಗಳ ಸಂಗ್ರಹಿಸಿಟ್ಟಿದ್ದ ಗಾಂಜಾ ಹಾಗೂ ಆರೋಪಿಗಳಿಂದ ಎರಡು ಮೊಬೈಲ್ ನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತಲೆಮರೆಸಿಕೊಂಡಿರು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.