ಬಿಜೆಪಿ ಸರ್ಕಾರ ಜನರ ತೆರಿಗೆ ಹಣ ಲೂಟಿಯಲ್ಲಿ ವಿಶ್ವಪ್ರಸಿದ್ಧ: ಪ್ರಿಯಾಂಕಾ ವಾಗ್ದಾಳಿ

ಮಂಡ್ಯ: ಸಕ್ಕರೆ ನಗರ ಮಂಡ್ಯಕ್ಕೆ ಬಂದಿರುವುದು ನನಗೆ ಬಹಳ ಸಂತೋಷವಾಗಿದೆ. ಇಲ್ಲಿನ ರೈತರು ಪರಿಶ್ರಮದಿಂದ ಕೃಷಿ ಮಾಡುತ್ತೀರಿ ಎಂದು ದೇಶಕ್ಕೆ ಗೊತ್ತಿದೆ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದರು.

ಮಂಡ್ಯದಲ್ಲಿ ಕಾಂಗ್ರೆಸ್‌ ಚುನಾವಣಾ ಸಮಾವೇಶದಲ್ಲಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ಬಸವಣ್ಣ, ನಾರಾಯಣ ಗುರುಗಳ ಸಂಸ್ಕೃತಿ, ಮಾರ್ಗದರಶನದಲ್ಲಿ ಎಲ್ಲರೂ ಶಿಕ್ಷಿತರಾಗಿದ್ದು, ಇಡೀ ದೇಶದಲ್ಲಿ ಕರ್ನಾಟಕ ಹೆಸರುವಾಸಿಯಾಗಿದೆ. ಕರ್ನಾಟಕದಲ್ಲಿ ತನ್ನದೇ ಆದ ಪುರಾತನ ಸಂಸ್ಕೃತಿ, ಪರಂಪರೆ, ಮಹಾನ್ ನಾಯಕರು, ಪ್ರಕೃತಿ ವರದಾನ, ಪ್ರಾಕೃತಿಕ ಸಂಪತ್ತು ಎಲ್ಲವೂ ಇವೆ. ಈ ಭಾಗದ ಯುವಕರು ಶಿಕ್ಷಿತರಾಗಿದ್ದು, ಭವಿಷ್ಯದ ಭಾಗಿದಾರರಾಗುವ ಸಾಮರ್ಥ್ಯ ನಿಮಗೆ ಇದೆ.

ಆದರೆ ರಾಜ್ಯದಲ್ಲಿ ಈಗ ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಗಳು ಹೆಚ್ಚಾಗಿದ್ದು, ಈ ಸಮಸ್ಯೆಗಳಿಂದ ರಾಜ್ಯದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸರ್ಕಾರ 40% ಕಮಿಷನ್ ಸರ್ಕಾರ ಎಂದು ದೇಶಾದ್ಯಂತ ಕುಖ್ಯಾತಿ ಪಡೆದಿದೆ. ಅದರರ್ಥ ಈ ಸರ್ಕಾರ ರಾಜ್ಯವನ್ನು ಲೂಟಿ ಮಾಡುತ್ತಿದೆ ಎಂದರ್ಥ. ಜನರು ಆರಿಸಿದ ಸರ್ಕಾರವನ್ನು ಶಾಸಕರ ಖರೀದಿ ಮೂಲಕ ಬೀಳಿಸಿ ಸರ್ಕಾರ ರಚಿಸಿದ್ದಾರೆ. ಇಂತಹ ಸರ್ಕಾರದ ನಿಯತ್ತು ಆರಂಭದಲ್ಲೇ ಹಾಳಾಗಿತ್ತು. ಇದರಿಂದ ಆಡಳಿತ ಕುಸಿಯಿತು. ಇಬ್ಬರು ಮುಖ್ಯಮಂತ್ರಿಗಳು ಬಂದರು. ಪರಿಣಾಮ ಅಭಿವೃದ್ಧಿ ಸ್ಥಗಿತವಾಗಿತ್ತು. ಈ ಸರ್ಕಾರ ಎಲ್ಲ ಹಂತದಲ್ಲಿ ರಾಜ್ಯವನ್ನು ಲೂಟಿ ಮಾಡಿದೆ.

ಸರ್ಕಾರ ಲೂಟಿ, ದುರಾಸೆಯಿಂದ ರಚಿತವಾದರೆ ಅದು ಉತ್ತಮ ಆಡಳಿತ ನಡೆಸಲು ಹೇಗೆ ಸಾಧ್ಯ? ಈ ಸರ್ಕಾರ ಎಲ್ಲ ಹಂತದಲ್ಲೂ ಭ್ರಷ್ಟಾಚಾರ ಮಾಡುತ್ತಿದೆ. ನೇಮಕಾತಿ, ಕೋವಿಡ್, ಗುತ್ತಿಗೆಯಲ್ಲಿ, ಮಕ್ಕಳಿಗೆ ನೀಡುವ ಮೊಟ್ಟೆಯಲ್ಲಿ ಹಗರಣ ಮಾಡಿದ್ದಾರೆ. ಭ್ರಷ್ಟಾಚಾರದಿಂದ ಗುತ್ತಿಗೆದಾರರು ಸತ್ತರೂ ಪ್ರಧಾನಮಂತ್ರಿಗಳಿಂದ ಉತ್ತರ ಇಲ್ಲ. ಈ ಭ್ರಷ್ಟ ಸರ್ಕಾರ ಮುಂದಿನ ಐದು ವರ್ಷಗಳ ಕಾಲ ಆಡಳಿತ ಮಾಡಿದರೆ ನಿಮ್ಮ ಭವಿಷ್ಯದ ಗತಿ ಏನು? ಬಿಜೆಪಿ ಶಾಸಕನ ಮನೆಯಲ್ಲಿ 8 ಕೋಟಿ ಅಕ್ರಮ ಹಣ ಸಿಗುತ್ತದೆ. ಆತನ ವಿರುದ್ದ ಯಾವುದೇ ಕ್ರಮವಿಲ್ಲ. ರೈತ ಬೆಲೆ ಏರಿಕೆಯಿಂದ ನರಳುತ್ತಿದ್ದರೂ ಸರ್ಕಾರ ಏನೂ ಮಾಡುತ್ತಿಲ್ಲ. ಇಂತಹ ಸರ್ಕಾರ ಬೇಕೇ? ಬದಲಾವಣೆ ಬೇಕೇ ಎಂದು ನೀವೇ ಆಲೋಚಿಸಬೇಕು.

ಬಿಜೆಪಿ ಸರ್ಕಾರ 1.50 ಲಕ್ಷ ಕೋಟಿ ಲೂಟಿ ಮಾಡಿದೆ. ಇದು ಭ್ರಷ್ಟ ಹಾಗೂ ಸುಳ್ಳಿನ ಸರ್ಕಾರ. ಈ ಹಣದಲ್ಲಿ ನೂರಾರು ಏಮ್ಸ್, ಸಾವಿರಾರು ಎಕ್ಸ್ ಪ್ರೆಸ್ ವೇ, 186 ಇಎಸ್ಐ ಆಸ್ಪತ್ರೆ, 30 ಸಾವಿರ ಸ್ಮಾರ್ಟ್ ತರಗತಿ ನಿರ್ಮಾಣ, 30 ಲಕ್ಷ ಮನೆಗಳು ಮಾಡಬಹುದಿತ್ತು.

ನೀವು ಪರಿಶ್ರಮದಿಂದ ಹಣಸಂಪಾದಿಸಿ ನಿಮಗೆ ಬೇಕಾದನ್ನು ಖರೀದಿ ಮಾಡಲು ಹೋದಾಗ ಅದರ ಬೆಲೆ ಹೆಚ್ಚು ಎಂದು ಭಾವಿಸಿ ಖರೀದಿ ಮಾಡಲು ಆಗದಿದ್ದರೆ, ನಾನು ಯಾಕೆ ಇಷ್ಟೋಂದು ಪರಿಶ್ರಮ ಪಡಬೆಕು ಎಂಬ ಭಾವನೆ ಮೂಡುವುದಿಲ್ಲವೇ? ಬೆಲೆ ನಿಯಂತ್ರಿಸುವುದು ಸರ್ಕಾರದ ಕೆಲಸವಾಗಿದ್ದು, ಸರ್ಕಾರ ಇದನ್ನು ಯಾಕೆ ಮಾಡುತ್ತಿಲ್ಲ ಎಂದು ನಿಮಗೆ ಅನಿಸಿಲ್ಲವೇ?

ಇಲ್ಲಿರುವ ಯುವಕರಿಗೆ ಸರ್ಕಾರ ಉದ್ಯೋಗ ನೀಡಿಲ್ಲ. ಸರ್ಕಾರದ ವಿವಿಧ ಇಲಾಖೆಗಳಲ್ಲಿ 2.50 ಲಕ್ಷ ಹುದ್ದೆಗಳು ಖಾಲಿ ಇವೆ. ಆದರೂ ಯಾವುದನ್ನು ಸರ್ಕಾರ ತುಂಬಿಲ್ಲ. ಎಲ್ಲಾ ನೇಮಕಾತಿಯಲ್ಲಿ ಅಕ್ರಮ ಮಾಡಿ ಯುವಕರ ಭವಿಷ್ಯ ನಾಶ ಮಾಡಲಾಗಿದೆ. ಪಿಎಸ್ಐ, ಜೆಇಇ, ಸಹಾಯಕ ಪ್ರಾಧ್ಯಾಪಕ ನೇಮಕಾತಿ ಎಲ್ಲದರಲ್ಲೂ ಅಕ್ರಮ ಮಾಡಲಾಗಿದೆ. ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಅನ್ಯಾಯ ಮಾಡಲಾಗುತ್ತಿದೆ.

ಕರ್ನಾಟಕ ರೈತರ ನಾಡು ಈ ನಾಡಿನಲ್ಲಿ ರೈತರ ಪರಿಸ್ಥಿತಿಯನ್ನು ಯಾವ ಹಂತಕ್ಕೆ ತಂದು ನಿಲ್ಲಿಸಿದ್ದಾರೆ? ಪ್ರತಿ ಎಕರೆಗೆ 25 ಸಾವಿರ ತೆರಿಗೆ ಕಟ್ಟಬೇಕು. 5% ರಷ್ಟು ಜಿಎಸ್ಟಿ ಕಟ್ಟಬೇಕು. ಟ್ರ್ಯಾಕ್ಟರ್ ಖರೀದಿಸಿದರೆ 12%, ರಸಗೊಬ್ಬರದ ಮೇಲೆ 18% ಜಿಎಸ್ಟಿ ಹಾಕಲಾಗಿದೆ. ಡಿಎಪಿ ಬೆಲೆ 1300 ಆಗಿದೆ. ಅಷ್ಟೇ ಅಲ್ಲ ಈ ಹಿಂದೆ 50 ಕೆ.ಜಿ ಯುರಿಯಾ ಈಗ ಕಡಿಮೆ ಆಗಿದೆ.

ಬೆಂಬಲ ಬೆಲೆ ನೀಡಿ ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು. ಆದರೆ ಕೇವಲ ಸರ್ಕಾರದ ಮಂತ್ರಿಗಲು ಹಾಗೂ ಬಿಜೆಪಿ ಶಆಸಕರ ಆಸ್ತಿ ಮೊತ್ತ ಮಾತ್ರ ಹೆಚ್ಚಾಗುತ್ತಾ ಸಾಗಿದೆ. ಬೇರೆ ರಾಜ್ಯಗಳಲ್ಲಿ 3500 ರಿಂದ 4000 ಇರುವ ಬೆಂಬಲ ಬೆಲೆ ರಾಜ್ಯದಲ್ಲಿ ಕೇವಲ 2500 ಮಾತ್ರ ಇದೆ. ಇಲ್ಲಿನ ಸಕ್ಕರೆ ಕಾರ್ಖಾನೆ ಖಾಸಗಿಯವರಿಗೆ ಮಾರಲು ಮುಂದಾಗಿದ್ದಾರೆ. ಕಾಂಗ್ರೆಸ್ ಇದಕ್ಕೆ ಅವಕಾಶ ನೀಡುವುದಿಲ್ಲ. ಈ ಸರ್ಕಾರ ನಿಮಗೆ ದ್ರೋಹ ಮಾಡಲು ಕಾಂಗ್ರೆಸ್ ಬಿಡುವುದಿಲ್ಲ.

ಕರ್ನಾಟಕ ರಾಜ್ಯ ಮಾದರಿ ರಾಜ್ಯವಾಗಿತ್ತು. ಐಟಿಯಲ್ಲಿ, ಉದ್ಯೋಗ ಸೃಷ್ಟಿಯಲ್ಲಿ, ನವೋದ್ಯಮಗಳಲ್ಲಿ, ಹೊರಗಡೆಯಿಂದ ಕಂಪನಿಗಳ ಆಗಮನದಲ್ಲಿ, ಶಿಕ್ಷಣ, ತಂತ್ರಜ್ಞಾನದಲ್ಲಿ ರಾಜ್ಯ ನೂಬರ್ 1 ಸ್ಥಾನದಲ್ಲಿತ್ತು. ಆದರೆ ಭ್ರಷ್ಟ ಸರ್ಕಾರ ನಿಮ್ಮನ್ನು ಲೂಟಿ ಮಾಡಿದ್ದು, ರಾಜ್ಯ ಕುಸಿತ ಕಾಣುವಂತೆ ಮಾಡಿದೆ. ಒಂದರ್ಥದಲ್ಲಿ ಹೇಳುವುದಾದರೆ ಎಲ್ಲಾ ಕೆಲಸ ನಿಂತಿದ್ದು, ನಿರುದ್ಯೋಗ ಹೆಚ್ಚಾಗಿ ಯುವಕರ ಭವಿಷ್ಯ ನಶಿಸುತ್ತಿದೆ. ಓಲಾ, ಫಾಕ್ಸ್ ಕಾನ್, ಪೆಗಟ್ರಾನ್, ಮೋಟರೋಲಾ, ನೋಕಿಯಾ, ಸ್ಯಾಮ್ಸಾಂಗ್ ಎಲ್ಲವೂ ರಾಜ್ಯವನ್ನು ತೊರೆದಿವೆ. ಇಂತಹ ಪರಿಸ್ಥಿತಿಯಲ್ಲಿ ಉದ್ಯೋಗ ಸಿಗುವುದಾದರೂ ಹೇಗೆ? ಲಕ್ಷಾಂತರ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಬಂದ್ ಆಗಿವೆ.

ದೊಡ್ಡ ಸಾರ್ವಜನಿಕ ಉದ್ದಿಮೆಗಳನ್ನು ಪ್ರಧಾನಮಂತ್ರಿಗಳ ಸ್ನೇಹಿತ ಉದ್ಯಮಿಗಳಿಗೆ ಮಾರಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ 2.50 ಲಕ್ಷ ಉದ್ಯೋಗಗಳು ಖಾಲಿ ಇದ್ದು, ನೇಮಕಾತಿ ಮಾಡಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಉದ್ಯೋಗ ಹೇಗೆ ಸಿಗುತ್ತದೆ. ಅಭಿವೃದ್ಧಿ ಹೇಗೆ ಆಗುತ್ತದೆ. ನೀವು ನಿಮ್ಮ ಮಕ್ಕಳ ಭವಿಷ್ಯಕ್ಕಾಗಿ ಪರಿಶ್ರಮ ಹಾಕುತ್ತಿದ್ದು, ಎಲ್ಲವೂ ವ್ಯರ್ಥವಾಗುತ್ತಿವೆ. ನೀವು ನಿಮ್ಮ ಪರಿಶ್ರಮದಿಂದ ನಂದಿನಿ ಸ್ಥಾಪಿಸಿದ್ದೀರಿ. ನಾಲ್ಕು ವರ್ಷಗಳ ಹಿಂದೆ ರಾಜ್ಯದಲ್ಲಿ ಹಾಲು ಉತ್ಪಾದನೆ ಹೆಚ್ಚಾಗಿ ಕ್ಷೀರ ಧಾರೆ ಯೋಜನೆ ಮಾಡಲಾಗಿತ್ತು. ಆದರೆ ಇಂದು ರಾಜ್ಯದಲ್ಲಿ ಹಾಲು ಉತ್ಪಾದನೆ ಕುಸಿತವಾಗಿದೆ. ಶಾಲಾ ಮಕ್ಕಳಿಗೆ ಹಾಲು ಕೊಡಲಾಗಿತ್ತು, ಹಾಲು ಉತ್ಪಾದಕರಿಗೆ 5 ರೂ. ಪ್ರೋತ್ಸಾಹಧನ ನೀಡಲಾಗಿತ್ತು. ನಿಮ್ಮ ನಂದಿನಿಯನ್ನು ಗುಜರಾತಿನ ಅಮೂಲ ಜತೆ ವಿಲೀನ ಮಾಡಲು ಮುಂದಾಗಿದ್ದಾರೆ. ಉದ್ದೇಶಪೂರ್ವಕವಾಗಿ ಅಮೂಲ್ ಉತ್ಪನ್ನಗಳನ್ನು ರಾಜ್ಯಕ್ಕೆ ಕರೆತರುತ್ತಿದ್ದಾರೆ. ಇದರಿಂದ ಹೇಗೆ ರಾಜ್ಯ ಉದ್ಧಾರವಾಗುತ್ತದೆ. ನಿಮ್ಮ ಭವಿಷ್ಯದ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು.

ಕಾಂಗ್ರೆಸ್ ಸರ್ಕಾರ ಇದ್ದಾಗ ಅನ್ನಭಾಗ್ಯ, ಕೃಷಿ ಭಾಗ್ಯ, ಕ್ಷೀರ ಭಾಗ್ಯ, ವಿದ್ಯಾಸಿರಿ, ಇಂದಿರಾ ಕ್ಯಾಂಟೀನ್ ಯೋಜನೆ ನೀಡಿತ್ತು. ಕಾಂಗ್ರೆಸ್ ಮುಂದೆ ಸರ್ಕಾರ ರಚಿಸಿದರೆ ಜನರಿಗಾಗಿ ಐದು ಗ್ಯಾರಂಟಿ ಯೋಜನೆ ಘೋಷಿಸಿದೆ. ಈಗಲೂ ನಾವು 100% ಅಭಿವೃದ್ಧಿಯ ಬದ್ಧತೆಯೊಂದಿಗೆ ನಿಮ್ಮ ಮುಂದೆ ಬಂದಿದ್ದೇವೆ.

ಸರ್ಕಾರದ ಇಲಾಖೆಗಳಲ್ಲಿರುವ 2.50 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ನೀಡಲಾಗುವುದು. ಆಮೂಲಕ ಪ್ರತಿ ಮನೆಗೆ ಸುಮಾರು 1500 ರೂ. ಉಳಿತಾಯವಾಗಲಿದೆ. ನಾನು ಇಂಧನ ಸಚಿವನಾಗಿದ್ದೆ. ಈ ಭಾಗದಲ್ಲಿ 200 ಕುಟುಂಬ ಹೊರತಾಗಿ ಉಳಿದವರು ಯಾರೂ ಕರೆಂಟ್ ಬಿಲ್ ಕಟ್ಟುವಂತಿಲ್ಲ. ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ. ಇನ್ನು ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬಗಳ ಪ್ರತಿ ಸದಸ್ಯನಿಗೆ ತಿಂಗಳಿಗೆ ತಲಾ 10 ಕೆ.ಜಿ ಅಕ್ಕಿ ಉಚಿತವಾಗಿ ನೀಡಲಾಗುವುದು. ಇನ್ನು ನಿರುದ್ಯೋಗ ಯುವಕರಿಗಾಗಿ ಪದವೀಧರರಿಗೆ ಪ್ರತಿ ತಿಂಗಳು 3000 ಹಾಗೂ ಡಿಪ್ಲೋಮಾ ಪದವೀಧರರಿಗೆ 1500 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು. ಇನ್ನು ಸಾರ್ವಜನಿಕ ಬಸ್ ಗಳಲ್ಲಿ ರಾಜ್ಯದ ಮಹಿಳೆಯರಿಗೆ ಉಚಿತ ಪ್ರಯಾಣ ನೀಡುವ ಯೋಜನೆಗಳನ್ನು ಪ್ರಕಟಿಸಲಾಗಿದೆ.

ನಂದಿನಿ ಸಂಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗುತ್ತದೆ. ಅಂಗನವಾಡಿ ಕಾರ್ಯಕರ್ತೆಯರ ವೇತನ 15 ಸಾವಿರ ಮಾಡಲಾಗುವುದು, ಅಂಗನವಾಡಿ ಸಹಾಯಕಿಯರಿಗೆ 10 ಸಾವಿರ ಗೌರವಧನ ನೀಡಲಾಗುವುದು. ಆಶಾಕಾರ್ಯಕರ್ತರಿಗೆ 8 ಸಾವಿರ ಗೌರವ ಧನ, ಅಂಗನವಾಡಿ ಕಾರ್ಯಕರ್ತೆಯರಿಗೆ ನಿವೃತ್ತಿ ವೇಳೆ 3 ಲಕ್ಷ ಸಹಾಯಕಿಯರಿಗೆ 2 ಲಕ್ಷ ನೀಡಲಾಗುವುದು. ಈ ಎಲ್ಲಾ ಯೋಜನೆ ಸೇರಿಸಿದರೆ, ಪ್ರತಿ ತಿಂಗಳು ಪ್ರತಿ ತಿಂಗಳು 8500 ರೂ ನೀಡಿದಂತಾಗುತ್ತದೆ.

ಈ ಸರ್ಕಾರ ನಿಮ್ಮಿಂದ 1.50 ಲಕ್ಷ ಕೋಟಿ ಲೂಟಿ ಮಾಡಿದ್ದು, ನಾವು ಈ ಹಣವನ್ನು ಕೃಷಿ ಕ್ಷೇತ್ರದ ಅಭಿವೃದ್ಧಿಗೆ ವಿನಿಯೋಗಿಸುತ್ತೇವೆ. ಸಬ್ಸಿಡಿ, ಸಾಲ, ವಿಮೆ ಯೋಜನೆಗಳಿಗೆ ಬಳಸುತ್ತೇವೆ. ರೈತರಿಗಾಗಿ ಸಹಕಾರಿ ಸಂಘ ಮಾಡಿ 500 ಕೋಟಿ ಹಣ ಮೀಸಲಿಡಲಾಗುವುದು. ಮೇಕೆದಾಟು, ಮಹದಾಯಿ, ಕೃಷ್ಣ ಮೇಲ್ದಂಡೆ, ಭದ್ರಾ ಮೇಲ್ದಂಡೆ, ಎತ್ತಿನಹೊಳೆ, ವರಾಹಿ ಯೋಜನೆಗಳಿಗೆ ಆದ್ಯತೆ ನೀಡಿ ಈ ಹಣವನ್ನು ಬಳಸುತ್ತೇವೆ. ಹಾಲು ಉತ್ಪಾದಕರಿಗೆ 7 ರೂ. ಪ್ರೋತ್ಸಾಹ ಧನ, ಹಾಲು ಉತ್ಪಾದಕರಿಗೆ 50 ಸಾವಿರ ಸಾಲ ಸೌಲಭ್ಯ. ಮೀನುಗಾರರಿಗೆ 6 ಸಾವಿರ ಪ್ರತಿತಿಂಗಳು, ಪಂಚಾಯ್ತಿಗಳಲ್ಲಿ ಸೋಲಾರ್ ದೀಪ ಅಳವಡಿಸಲು ಶೇ.100ರಷ್ಟು ಸಬ್ಸಿಡಿ ನೀಡಲಾಗುವುದು.

Umesha HS

Recent Posts

ಗುಂಡ್ಲುಪೇಟೆಯಲ್ಲಿ ಮಳೆಗೆ ನೆಲಕ್ಕುರುಳಿದ ಮರಗಳು

ತಾಲೂಕಿನ ವಿವಿಧೆಡೆ ಭಾರೀ ಮಳೆಯಾಗಿದ್ದು, ಮಳೆ ಗಾಳಿಗೆ ಬಾಳೆ ಸೇರಿದಂತೆ ಗಿಡ ಮರಗಳು ನೆಲಕ್ಕುರುಳಿವೆ. ಸುಮಾರು ಒಂದು ಗಂಟೆಗಳ ಕಾಲ…

9 mins ago

ಮತದಾರರ ಪಟ್ಟಿಗೆ ಹೆಸರು ನೋಂದಣಿಗೆ ಪದವೀಧರರಿಗೆ ಅವಕಾಶ

ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆಗೆ ಜೂ. 03 ರಂದು ಮತದಾನ ನಡೆಯಲಿದ್ದು, ಅರ್ಹ ಪದವೀಧರರು ಮತದಾರರ…

24 mins ago

ಹಿಂದೂ ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿದ ಅನ್ಯ ಕೋಮಿನ ಯುವಕನ ಬಂಧನ

ಅಪ್ರಾಪ್ತ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿ ಮಾಡಿ ಎಸ್ಕೇಪ್ ಆಗಿದ್ದ ಮುಸ್ಲಿಂ ಯುವಕನನ್ನು ಪೊಲೀಸರು ಬಂಧಿಸಿದ ಘಟನೆ ಹುಬ್ಬಳ್ಳಿಯ ನವನಗರ…

47 mins ago

ಮೈಸೂರಿಗೆ ತಂಪೆರೆದ ವರುಣ, ಸೃಷ್ಟಿಸಿದ್ದು ಹತ್ತಾರು ಅವಾಂತರ!

ಬಿರು ಬಿಸಿಲಿನಿಂದ ಬಸವಳಿದಿದ್ದ ಸಾಂಸ್ಕೃತಿಕ ನಗರಿ ಜನರಿಗೆ ಶುಕ್ರವಾರ ಸಂಜೆ ಸುರಿದ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ನಗರಕ್ಕೆ ತಂಪೆರೆಯಿತಾದರೂ…

1 hour ago

ತಂಗಿಯ ಅಪ್ರಾಪ್ತ ಮಗಳ ಮೇಲೆ ರೌಡಿ ಶೀಟರ್ ನಿಂದ ಅತ್ಯಾಚಾರ: ಪೋಕ್ಸೋ ಪ್ರಕರಣ ದಾಖಲು

ಟ್ಯೂಷನ್ ಗೆ ಬಿಡುವ ನೆಪದಲ್ಲಿ ಸ್ವಂತ ತಂಗಿಯ ಅಪ್ರಾಪ್ತ ಮಗಳನ್ನ ಕರೆದೊಯ್ದ ಕಾಮುಕ ಸೋದರಮಾವ ಅತ್ಯಾಚಾರವೆಸಗಿ ಪರಾರಿಯಾದ ಘಟನೆ ನಂಜನಗೂಡಿನಲ್ಲಿ…

1 hour ago

ಪ್ರಜ್ವಲ್‌ ರೇವಣ್ಣ ಪ್ರಧಾನಿ ಮೋದಿಯವರ ನಿಜವಾದ ಪರಿವಾರ: ಜಿಗ್ನೇಶ್‌ ಮೇವಾನಿ

'ಸುಮಾರು ಮೂರು ಸಾವಿರ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಎದುರಿಸುತ್ತಿರುವ ಹಾಸನದ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಪ್ರಜ್ವಲ್‌…

2 hours ago