ಮೈಸೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕ ಮತ್ತು ಜಿಲ್ಲಾ ಚಟುಕು ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಲೇಖಕಿ ರಜಿನಿ ಅವರ ಭಾವಗಳ ಗುಚ್ಛ ಪುಸ್ತಕ ಬಿಡುಗಡೆಗೊಳಿಸಲಾಯಿತು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿ, ಭಾವಗಳ ಗುಚ್ಛ ಕವನ ಸಂಕಲನದ ಮೂಲಕ ಲೇಖಕಿ ರಜಿನಿ ಭಾವನೆಗಳ ಪರಕಾಯ ಪ್ರವೇಶ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಹಿತ್ಯಗಳು ಪರಕಾಯ ಪ್ರವೇಶ ಮಾಡಬೇಕು. ಪರಕಾಯ ಪ್ರವೇಶ ಮಾಡುವ ಸಾಹಿತ್ಯಗಳು ಮನಸ್ಸಿನ ಮೇಲೆ ಪರಿಣಾಮ ಬೀರಲಿವೆ. ಲೇಖಕರು ಹೆಣ್ಣಾಗಿ ಗಂಡಿನಿಂದ ದೃಷ್ಟಿಯಲ್ಲಿ ಬರೆದ ಕವನಗಳು ಪರಕಾಯ ಪ್ರವೇಶ ಮಾಡಿವೆ ಎಂದು ಹೇಳಿದರು.
ಕಾವ್ಯ ಎಂದಿಗೂ ಅಳಿಸಬಾರದು ನಗಿಸಬೇಕು. ಎಲ್ಲರನ್ನು ಹೊಂದಾಗಿಸುವ ಗುಣ ಇರಬೇಕು. ಲೇಖಕಿ ರಜಿನಿಯ ಅವರ ಭಾವನೆಗಳ ಗುಚ್ಛ ಕವನ ಸಂಕಲನವೂ ಈ ಕೆಲಸವನ್ನು ಮಾಡಿದೆ. ಕವಿತೆಗಳು ಸಮೃದ್ಧವಾದ ವೈವಿಧ್ಯವ ಇದೆ. ಪ್ರೀತಿ ಮತ್ತು ಕರುಣೆ ಕಟ್ಟುಕೊಡಲಾಗಿದೆ. ಪರಿಪೂರ್ಣತೆ ಅಂಶಗಳು ಇವೆ. ಹಿರಿಯ ಸಾಹಿತಿ ಡಿವಿಜಿ ಅವರನ್ನು ಅನುಕರಿಸಿದ್ದಾರೆ ಎಂದು ಹೇಳಿದರು.
ಕವನ ಸಂಕಲನಕ್ಕೆ ಭಾವನೆಗಳ ಗುಚ್ಛ ಶೀರ್ಷಿಕೆ ನನಗೆ ತೃಪ್ತಿಕರವಾಗಿ ಕಾಣಸಲಿಲ್ಲ. ಕಾವ್ಯ ಎಂದರೆ ಬೆಳಕು ರಂಜಿನಿ ಎಂದರೆ ರಾತ್ರಿ. ಹೀಗಾಗಿ ರಾತ್ರಿ ಕಳೆದ ಹಗಲು ಹೆಸರಿನಿಂದ ಇಡಬೇಕಿತ್ತು ಎಂದು ಹಾಸ್ಯ ಚಟಕಿ ಹಾರಿಸಿದರು.
ಮಾಜಿ ಸಚಿವ ಕೋಟೆ ಎಂ.ಶಿವಣ್ಣ ಮಾತನಾಡಿ, ಮೊಬೈಲ್ ಗೀಳಿನಿಂದ ಸಾಹಿತ್ಯ ಓದುವವರ ಸಂಖ್ಯೆ ಕಡಿಮೆ ಆಗುತ್ತಿದೆ. ಇಡೀ ಪ್ರಪಂಚವೇ ನಮ್ಮ ಐದು ಬೆರಳುಗಳಲ್ಲಿ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಹೌದು ಇದು ನಿಜ. ಆದರೆ, ಮಿತಿ ಮೀರಿ ಮೊಬೈಲ್ ಬಳಕೆ ಮಾಡಲಾಗುತ್ತಿದೆ. ಇದರಿಂದ ಮೌಲ್ಯಗಳು ನಶಿಸಿ ಹೋಗುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಇಂಜಿನಿಯರಿಂಗ್ ಪದವೀಧರರಾಗಿರುವ ರಜಿನಿ ಕವನ ಸಂಕಲನ ಬರೆದಿರುವುದು ಪ್ರಶಂಸನೀಯ ಕೆಲಸ. ಹೃದಯಕ್ಕೆ ಹತ್ತಿರವಾಗುವ ಕವನಗಳು ಪುಸ್ತಕದಲ್ಲಿವೆ. ಸೋತವರಿಗೆ ಧೈರ್ಯ ತುಂಬುವ ಕೆಲಸವನ್ನು ಕವನಗಳು ಮಾಡಲಿವೆ ಎಂದ ಅವರು ನಾನು ಚಾಮರಾಜನಗರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಾಗ, ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಕರೆ ಮಾಡಿ ಸ್ವಾಂತನ ಹೇಳಿದ್ದರು. ಇಂದಿನ ಸೋಲೆ ಗೆಲುವಿಗೆ ದಾರಿ ಆಗಲಿದೆ ಎಂಬ ಸ್ಪೂರ್ತಿದಾಯಕ ಮಾತುಗಳನ್ನಾಡಿ ಧೈರ್ಯ ತುಂಬಿದ್ದರು ಎಂದು ನೆನಪಿಸಿಕೊಂಡರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್, ವೈದ್ಯ ವಾರ್ತಾ ಪ್ರಕಾಶನದ ಜೆ.ಪಿ.ಅರಸ್, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಡಾ.ರತ್ನ ಹಾಲಪ್ಪ ಗೌಡ, ಕೃತಿ ಕರ್ತೃ ಬಿ.ಎಂ.ರಜನಿ ಬಣವೆ, ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್ ಟ್ರಸ್ಟ್‌ನ ಕಾರ್ಯದರ್ಶಿ ಡಾ.ಎಂ.ಜಿ.ಆರ್.ಅರಸ್ ಇನ್ನಿತರು ಹಾಜರಿದ್ದರು.