ಮೈಸೂರು: ಕೊಟ್ಟಿಗೆಯಲ್ಲಿ ಹಸುವನ್ನು ಕಟ್ಟಿಹಾಕಿ ಅಲ್ಲಿಯೇ ರೈತ ಮಲಗಿದ್ದ ವೇಳೆ ದಾಳಿ ನಡೆಸಿದ ಹುಲಿ ಹಸುವನ್ನು ಕೊಂದು ಹಾಕಿರುವ ಘಟನೆ ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಅಬ್ಬೂರು ಗ್ರಾಮದಲ್ಲಿ ನಡೆದಿದ್ದು ಅದೃಷ್ಟವಶಾತ್ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಗ್ರಾಮದ ಮಾದೇವಶೆಟ್ಟಿ ಎಂಬುವರೇ ಹಸುವನ್ನು ಕಳೆದುಕೊಂಡು ತಮ್ಮ ಪ್ರಾಣ ಉಳಿಸಿಕೊಂಡ ರೈತರಾಗಿದ್ದಾರೆ. ಇವರು ಎಂದಿನಂತೆ ಗ್ರಾಮದ ಹೊರವಲಯದಲ್ಲಿರುವ ತಮಗೆ ಸೇರಿದ ಕೊಟ್ಟಿಗೆಯಲ್ಲಿ ಹಸುವನ್ನು ಕಟ್ಟಿಹಾಕಿ ಅದೇ ಕೊಟ್ಟಿಗೆಯಲ್ಲಿ ಮಲಗಿದ್ದರು. ನಡುರಾತ್ರಿಯಲ್ಲಿ ಕೊಟ್ಟಿಗೆಗೆ ನುಗ್ಗಿದ ಹುಲಿ ಹಸುವನ್ನು ಕೊಂದು ಹಾಕಿದೆ. ಹಸುವಿನ ಚೀರಾಟ ಕೇಳಿದ ಮಾದೇವಶೆಟ್ಟಿ ಎಚ್ಚರವಾಗಿ ಕಿರುಚಾಡಿದ್ದಾರೆ. ಆದರೆ ಅವರು ಬಾಗಿಲು ಹಾಕಿಕೊಂಡ ಪರಿಣಾಮ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಸಂಬಂಧ ಅರಣ್ಯ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ತಕ್ಷಣವೇ ಅರಣ್ಯ ಸಿಬ್ಬಂದಿ ಮಧ್ಯರಾತ್ರಿಯೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ತೋಟದೊಳಗೆ ಪಟಾಕಿ ಹಾಗೂ ಬೆಚ್ಚುಗುಂಡು ಹಾರಿಸಿ ಹುಲಿಯನ್ನು ಸಮೀಪದ ಅರಣ್ಯಕ್ಕೆ ಓಡಿಸಿದ್ದಾರೆಂದು ಮಾದೇವಶೆಟ್ಟಿ ತಿಳಿಸಿದ್ದಾರೆ. ಕಳೆದೆರಡು ತಿಂಗಳಿಂದ ಶೆಟ್ಟಳ್ಳಿ ಮೀಸಲು ಅರಣ್ಯ ಪ್ರದೇಶದಲ್ಲಿ ಹುಲಿಯೊಂದು ಬೀಡು ಬಿಟ್ಟಿದ್ದು, ಕಾಡಂಚಿನ ಗ್ರಾಮಗಳಲ್ಲಿ ಕಾಣಿಸಿಕೊಳ್ಳತ್ತಿದೆ. ಇದಲ್ಲದೆ ಅಕ್ಕ ಪಕ್ಕದ ಗ್ರಾಮಗಳಲ್ಲಿ ಜಾನುವಾರುಗಳ ಮೇಲೆ ಆಗಿಂದಾಗ್ಗೆ ಹುಲಿ ದಾಳಿ ಮಾಡುತ್ತಾ ಈ ಭಾಗದ ಗ್ರಾಮಸ್ಥರನ್ನು ಭಯ ಭೀತರಾಗಿಸಿದೆ.
ಈ ಘಟನೆಯ ಬಳಿಕ ಗ್ರಾಮಸ್ಥರು ಭಯಗೊಂಡಿದ್ದು, ಜಮೀನಿನಲ್ಲಿ ಕೆಲಸ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಅಷ್ಟೇ ಅಲ್ಲದೆ, ಜಾನುವಾರುಗಳನ್ನು ರಕ್ಷಿಸಿಕೊಳ್ಳುವುದೇ ಕಷ್ಟವಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದು, ಕೂಡಲೇ ಅರಣ್ಯ ಇಲಾಖೆಯವರು ಬೋನಿಟ್ಟು ಹುಲಿಯನ್ನು ಸೆರೆ ಹಿಡಿಯಬೇಕೆಂದು ಗ್ರಾ.ಪಂ.ಅಧ್ಯಕ್ಷೆ ಗೀತಾಸುರೇಶ್ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.