ಮೈಸೂರು: ಸಹಜ ಸಮೃದ್ಧ ಮತ್ತು ಅಕ್ಷಯಕಲ್ಪ ಆರ್ಗಾನಿಕ್ಸ್ ಆಶ್ರಯದಲ್ಲಿ ನಂಜರಾಜ ಬಹದ್ದೂರ್ ಛತ್ರದಲ್ಲಿ ಮೂರು ದಿನಗಳ ಬಾಳೆ ಮೇಳ ಆರಂಭವಾಗಿದ್ದು, ಈ ಮೇಳದಲ್ಲಿ ಬಗೆ ಬಗೆಯ ಬಾಳೆಹಣ್ಣುಗಳು ಗಮನಸೆಳೆಯುತ್ತಿದ್ದು ಬಾಳೆಹಣ್ಣು ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ. ಬಾಳೆ ತೋಟದಿಂದಲೇ ಬಂದಿರುವ ಹಣ್ಣುಗಳು ರಸಭರಿತಾಗಿದ್ದು ತನ್ನದೇ ಗಾತ್ರ ಮತ್ತು ರುಚಿಯಿಂದ ಆಕರ್ಷಿಸುತ್ತಿದೆ.
ಈ ಬಾಳೆಮೇಳದಲ್ಲಿ 150ಕ್ಕೂ ಹೆಚ್ಚಿನ ಬಾಳೆ ತಳಿಗಳನ್ನು ಪ್ರದರ್ಶನಕ್ಕಿಡಲಾಗಿದ್ದು, ಕೇರಳದ ವಿನೋದ್ ನಾಯರ್ 120 ಬಗೆಯ ಬಾಳೆ ತಳಿಗಳನ್ನು ಪ್ರದರ್ಶನಕ್ಕೆ ತಂದಿದ್ದಾರೆ. ಪೂಜಾ ಕದಳಿ, ಮಟ್ಟಿ, ಬ್ಲೂ ಜಾವ, ಮೊಟ್ಟ ಪೂವನ್, ಸಹಸ್ರ ಪೂವನ್, ಚಮ್ಮಟ್ಟಿ ಮೊದಲಾದ ಅಪರೂಪದ ತಳಿಗಳು ಇವೆ. ಇನ್ನು ಶಿರಸಿಯ ಪ್ರಸಾದ್ ರಾಮ ಹೆಗಡೆ ಅಪರೂಪದ ಬಾಳೆ ಮತ್ತು ಕಂದುಗಳನ್ನು ಮೇಳಕ್ಕೆ ತಂದಿದ್ದಾರೆ.
16 ಅಡಿ ಉದ್ದದ ಸಹಸ್ರ ಬಾಳೆ ನೋಡುಗರ ಗಮನಸೆಳೆಯುತ್ತಿದೆ. ಕರಿ ಬಾಳೆ, ಕಲ್ಲು ಬಾಳೆ, ಊಟದ ಎಲೆಗೆ ಬಳಕೆಯಾಗುವ ಪ್ಲಾಸ್ಟಿಕ್ ಬಾಳೆ ಪ್ರದರ್ಶನಕ್ಕೆ ಬಂದಿದೆ. ಇಡೀ ಗಿಡವೇ ಕೆಂಪಾಗಿರುವ ಬಾಳೆ ತಳಿಯೂ ಪ್ರದರ್ಶನದಲ್ಲಿದೆ. ಬಾಳೆ ಮೇಳದಲ್ಲಿ ಬಾಳೆಯಿಂದ ಮಾಡಿದ ಹತ್ತಾರು ತಿಂಡಿ ತಿನಿಸುಗಳು ಮಾರಾಟಕ್ಕಿವೆ.
ಬಾಳೆ ದಿಂಡು, ಬಾಳೆ ಗೆಡ್ಡೆಯಿಂದ ದೋಸೆ, ಬಾಳೆ ಹಣ್ಣಿನ ಹೋಳಿಗೆ, ಬಾಳೆ ಹೂ ಬಜ್ಜಿ ಮತ್ತು ವಡೆ, ಬಾಳೆ ಹಣ್ಣಿನ ಹಲ್ವ, ಬಾಳೆ ಹಣ್ಣಿನ ಚಿಪ್ಸ್, 12 ಬಗೆಯ ಬಾಳೆ ಬಳಸಿ ಮಾಡಿದ ಪಾಯಸ, ಬಾಳೆ ಹಣ್ಣಿನ ರಸಾಯನ, ಬಾಳೆ ಕೇಕ್, ಬಾಳೆ ದಿಂಡಿನ ಸೂಪ್, ಬಾಳೆ ಹೂವಿನ ತೊಕ್ಕು, ಬಾಳೆ ದಿಂಡಿನ ಜ್ಯೂಸ್, ಬಾಳೆ ದಿಂಡಿನ ಉಪ್ಪಿನಕಾಯಿ ಮಾರಾಟಕ್ಕೆ ಬಂದಿವೆ. ಬಾಳೆ ಮೇಳದಲ್ಲಿ 55 ಮಳಿಗೆಗಳಿದ್ದು ಸಾವಯವ ಉತ್ಪನ್ನ, ಸಿರಿಧಾನ್ಯ, ಬೇಳೆಕಾಳು, ಕರಕುಶಲ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಿವೆ.
ಐಸಿಆರ್-ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಜ್ಞಾನೇಶ್ ಮಾತನಾಡಿ, ಮಜ್ಜಿಗೆ ಇಲ್ಲದೇ ಊಟ ಇಲ್ಲ. ಬಾಳೆ ಇಲ್ಲದೇ ತೋಟ ಇಲ್ಲ ಎಂಬ ಮಾತಿದೆ. ನಶಿಸುತ್ತಿರುವ ಬಾಳೆ ತಳಿಗಳನ್ನು ಸಂರಕ್ಷöಣೆ ಮಾಡುವ ಸವಾಲು ನಮ್ಮ ಮುಂದಿದೆ. ಎಲ್ಲರೂ ನಂಜನಗೂಡು ರಸಬಾಳೆ ಬೆಳೆಯಬೇಕು ಎಂದು ಹೇಳಿದರು.
ಆಹಾರ ತಜ್ಞೆ ಮತ್ತು ಬರಹಗಾರ್ತಿ ರತ್ನಾ ರಾಜಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಳುವರಿಯನ್ನಷ್ಟೇ ಗಮನದಲ್ಲಿಟ್ಟುಕೊಂಡು ಒಂದೇ ತಳಿಯ ಬಾಳೆ ಬೆಳೆಯುವುದು ಅಪಾಯಕಾರಿ. ನಾಳೆ ಯಾವುದಾದರೂ ರೋಗ ಬಂದರೆ ಇಡೀ ಬಾಳೆ ತೋಟಗಳೇ ನಾಶವಾಗುತ್ತವೆ. ಹಾಗಾಗಿ ವೈವಿಧ್ಯಮಯ ಬಾಳೆ ತಳಿಗಳನ್ನು ಸಂರಕ್ಷಿಸಿ, ಮುಂದಿನ ಜನಾಂಗಕ್ಕೆ ಕಾಪಿಡಬೇಕಾಗುತ್ತದೆ ಎಂದರು.
ಚಲನಚಿತ್ರ ನಿರ್ದೇಶಕ ಸುಮನಾ ಕಿತ್ತೂರು ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ಹತ್ತಾರು ಬಗೆಯ ಬಾಳೆ, ಮತ್ತು ವೈವಿಧ್ಯದ ಬೆಳೆಗಳು ನೆಲೆಯಾಗಿದ್ದ ಜಮೀನುಗಳಲ್ಲಿ ಹೊಗೆ ಸೊಪ್ಪು ಮತ್ತು ಮುಸುಕಿನ ಜೋಳದಂಥ ವಾಣಿಜ್ಯ ಬೆಳೆಗಳು ಬಂದಿವೆ. ಅನ್ನದ ಬೆಳೆಗಳು ಕಣ್ಮರೆಯಾಗಿವೆ. ಅವನ್ನು ಮರಳಿ ತರಬೇಕಿದೆ ಎಂದರು.
ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಮಂಜುನಾಥ ಅಂಗಡಿ ಮಾತನಾಡಿ, ಮೈಸೂರು ಜಿಲ್ಲೆಯಲ್ಲಿ 20 ಸಾವಿರ (50 ಸಾವಿರ ಎಕರೆ) ಹೆಕ್ಟೇರ್ ಬಾಳೆ ಬೆಳೆಯುತ್ತಾರೆ. ಮಾರಾಟದಿಂದ 730 ಕೋಟಿ ರೂ. ವಹಿವಾಟು ನಡೆಯುತ್ತದೆ. ಒಟ್ಟು 7.31 ಮೆಟ್ರಿಕ್ ಟನ್ ಉತ್ಪಾದನೆಯಾಗಿ ಬಾಳೆ ಬೆಳೆದ ರೈತರು ಒಳ್ಳೆಯ ಆದಾಯ ಪಡೆದು ಲಾಭ ಗಳಿಸಿ ಪ್ರಗತಿಪರ ರೈತರು ಎನಿಸಿಕೊಂಡಿದ್ದಾರೆ.
ಬಾಳೆ ಬೆಳೆಯುವುದರ ಜತೆಗೆ ಮಾರಾಟದ ವ್ಯವಸ್ಥೆ ಮತ್ತು ಉದ್ಯಮಶೀಲತೆ ಕೌಶಲ್ಯ ವೃದ್ಧಿಸಿಕೊಂಡರೆ ಲಾಭ ಗಳಿಸಬಹುದು ಎಂದು ಹೇಳಿದರು. ಸಹಜ ಸಮೃದ್ಧ ನಿರ್ದೇಶಕ ಜಿ.ಕೃಷ್ಣ ಪ್ರಸಾದ್ ಪ್ರಸ್ತಾವನೆ ಮಾಡಿದರು. ಅಕ್ಷಯಕಲ್ಪ ಆರ್ಗಾನಿಕ್ಸ್ನ ಮಂಜಪ್ಪ ಹೊನ್ನಪ್ಪನವರ್ ಉಪಸ್ಥಿತರಿದ್ದರು.